ಲಘು ಬರೆಹ
- ಆಲೋಚನೆ
- Jul 25, 2021
- 2 min read
ಪತಿಗೆ ಹೊಡೆಯುವ ಪತ್ನಿಯರು:
ಭಾರತಕ್ಕೆ ಮೂರನೇ ಸ್ಥಾನ!
*********
ಈಗಷ್ಟೇ ಒಂದು ಸುದ್ದಿ ಓದಿದೆ. ( ಹಿಂದಿ ರಾಜಸ್ಥಾನ ಟೈಮ್ಸ್). ಜಗತ್ತಿನಲ್ಲಿ ಪತಿಯನ್ನು ಹೊಡೆಯುವ ಪತ್ನಿಯರ ಪ್ರಮಾಣದ ವಿಷಯದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆಯಂತೆ. ಇದು ಯು. ಎನ್. ದ ಒಂದು ಸಮೀಕ್ಷೆ. ವೃಥಾ ನನ್ನ ಮೇಲೆ ಯಾರೂ ಗೂಬೆ ಕೂರಿಸದಿರಲಿ.
ಈ ಸಮೀಕ್ಷೆ ಪ್ರಕಾರ ಇಜಿಪ್ಟ್ ಮೊದಲ ಸ್ಥಾನದಲ್ಲಿದ್ದು ಯುಕೆ ಎರಡನೇ ಸ್ಥಾನದಲ್ಲಿದೆ. ಭಾರತದ ಪತ್ನಿಯರು ಇನ್ನು ಮುಂದೆ ಮೊದಲ ಸ್ಥಾನಕ್ಕೆ ಬರಲು ಪ್ರಯತ್ನಿಸುವದಕ್ಕೆ ಪ್ರೇರಣೆ ದೊರಕಲಿ ಎನ್ನುವ ಕಾರಣಕ್ಕೆ ನಾನು ಈ ಸುದ್ದಿ ಹಾಕುತ್ತಿದ್ದೇನೆ ಹೊರತು ಹೆಂಗಳೆಯರ ಮೇಲೆ ಆರೋಪ ಹೊರಿಸುವದಕ್ಕಂತೂ ಅಲ್ಲ ಎಂದು ಎಲ್ಲಿ ಬೇಕಾದಲ್ಲಿ ನಿಂತು ಆಣೆ ಮಾಡಬಲ್ಲೆ.
ನನಗೆ ಬೇಸರದ ಸಂಗತಿಯೆಂದರೆ ಭಾರತ ಈ ವಿಷಯದಲ್ಲಿ ಮೂರನೇ ಸ್ಥಾನ ಅಂದರೆ ಕಂಚಿನ ಪದಕ ಪಡೆದದ್ದು. ಎಟ್ ಲೀಸ್ಟ್ ಬೆಳ್ಳಿಪದಕವನ್ನಾದರೂ ಪಡೆಯಬೇಕಿತ್ತಲ್ಕವೆ? ಹೋಗಲಿ, "ಟ್ರಾಯ್ ಎಗೇನ್, ಬೆಸ್ಟ್ ಆಫ ಲಕ್" ಅನ್ನೋಣ.
ಯು.ಎನ್. ದವರು ಯಾವ ಆಧಾರದ ಮೇಲೆ ಈ ಸಮೀಕ್ಷೆ ನಡೆಸಿದರೋ ಗೊತ್ತಿಲ್ಲ, ಮತ್ತು ಅವರ ಸಮೀಕ್ಷೆ ತಪ್ಪಾಗಿರಲೂ ಸಾಧ್ಯವಿರುವದರಿಂದ ಮರು ಸಮೀಕ್ಷೆ ನಡೆಸುವಂತೆ ಅವರನ್ನು ಒತ್ತಾಯಿಸಲೂ ಅವಕಾಶವಿದೆಯೋ ಕೇಳಬೇಕು. ಏಕೆಂದರೆ ಕೆಲವೊಮ್ಮೆ ಪರೀಕ್ಷೆಯಲ್ಲಿ ಫೇಲಾದವರು ಸಹ ಮರು ಪರೀಕ್ಷೆಯಲ್ಲಿ ಪಾಸಾದ ಉದಾಹರಣೆಗಳಿರುವದರಿಂದ ಮರು ಸಮೀಕ್ಷೆಯಲ್ಲಿ ಭಾರತದ ಪತ್ನಿಯರು ಎರಡು ಅಥವಾ ಒಂದನೇ ಸ್ಥಾನಕ್ಕೆ ಏರಲೂಬಹುದು. ಹೋಪ್ ಫಾರ್ ದಿ ಬೆಸ್ಟ್!
ಇನ್ನು ಭಾರತೀಯ ಮಹಿಳೆಯರು ಅಥವಾ ಪತ್ನಿಯರು ಪತಿಯನ್ನು ಹೊಡೆಯುವಲ್ಲಿ ಯಾವ ಯಾವ ರೀತಿಯ ಸಾಧನಗಳನ್ನು ಬಳಸುತ್ತಾರೆ, ಯಾವ ಯಾವ ರೀತಿಯಲ್ಲಿ ತಮ್ಮ ಅಸ್ತ್ರವನ್ನು ಪ್ರಯೋಗಿಸುತ್ತಾರೆ ಇತ್ಯಾದಿ ಅಂಶಗಳ ಕುರಿತು ತಿಳಿದುಕೊಳ್ಳುವ ಕುತೂಹಲ ನನಗೆ/ ನನ್ನಂಥವರಿಗೆ ಇರುವದರಿಂದ ಆ ಸಮೀಕ್ಷೆ ನಡೆಸಿದವರು ಅದರ ವಿವರಗಳನ್ನು ಸಹ ತಿಳಿಸಿದರೆ ಅನುಕೂಲ. ಅಲ್ಲದೆ ಮೊದಲ ಎರಡು ಸ್ಥಾನಗಳನ್ನು ಪಡೆದ ಆ ದೇಶದವರು ಅದು ಹೇಗೆ ಆ ಸಾಧನೆ ಮಾಡಿದರು, ಅಲ್ಲಿನ ಪತ್ನಿಯರ ವಿಶಿಷ್ಟ ಸಾಧನೆಯ ಹಿನ್ನೆಲೆ ಏನು ಎನ್ನುವದು ನಮ್ಮ ದೇಶದ ಪತ್ನಿಯರೂ ತಿಳಿದುಕೊಂಡರೆ ಮುಂದಿನ ಸಲದ ಸ್ಪರ್ಧೆಯಲ್ಲಿ ಭಾರತ ಮೊದಲ ಸ್ಥಾನ ಪಡೆಯುವದಕ್ಕೆ ಅನುಕೂಲವಾದೀತೆಂಬುದು ನನ್ನ ನಂಬಿಕೆ. ಅದರಂತೆಯೇ ಭಾರತದ ಹೆಂಗಳೆಯರು ಸಹ ಪತಿಗೆ ಹೊಡೆಯುವ ವಿಷಯದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಬಹುದಾಗಿದೆ. ಹಳೆಯ ಕೆಲ ವಿಧಾನಗಳನ್ನು ಬಿಟ್ಟು ಹೊಸ ದಾರಿ ಕಂಡುಕೊಳ್ಳಬಹುದು. ಅಂದರೆ ಅದೇ ಅಡಿಗೆ ಮನೆಯ ಸಟ್ಟುಗ, ಚಪಾತಿ ಮಾಡುವ ಕೋಲು ಇತ್ಯಾದಿ ಸಣ್ಣ ಪುಟ್ಟ ವಸ್ತುಗಳ ಬದಲು ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾದ ಹೊಡೆತ ಹಾಕಲು ಪ್ರಯತ್ನಿಸಿದರೆ ಮತ್ತು ಪತಿಗೆ ಹೊಡೆಯುವ ಪತ್ನಿಯರ ಸಂಖ್ಯೆ ಇನ್ನಷ್ಟು ಹೆಚ್ಚಾಗುವಂತೆ ಮಾಡಿದರೆ ಖಂಡಿತವಾಗಿಯೂ ಮುಂದಿನ ಸಲ ಭಾರತ ಪ್ರಥಮ ಸ್ಥಾನಕ್ಕೆ ಬರಲಿದೆ ಎನ್ನುವದರಲ್ಲಿ ಸಂದೇಹವಿಲ್ಲ.
ಈರೀತಿ ನಾನು ಮಹಿಳೆಯರಿಗೆ ಸಲಹೆ ಕೊಡುತ್ತಿರುವದಕ್ಕಾಗಿ ಪತ್ನೀಪೀಡಿತ ಪುರುಷರೆಲ್ಲ ಒಟ್ಟಾಗಿ ನನ್ನ ಮೇಲೆ ದಾಳಿ ಮಾಡುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲವಾದ್ದರಿಂದ ನಾನು ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಪೋಲೀಸ್ ಪ್ರೊಟೆಕ್ಷನ್ ಸಲುವಾಗಿ ಮನವಿ ಸಲ್ಲಿಸಿದ್ದು, ಖಾಯಮ್ ಆಗಿ ತಲೆಗೆ ಹೆಲ್ಮೆಟ್ ಹಾಕಿಯೇ ಮನೆಯಿಂದ ಹೊರಗೆ ಹೋಗುವ ವಿಚಾರ ಮಾಡಿದ್ದೇನೆ. ಸದ್ಯ ಮನೆಯ ಒಳಗಡೆ ನನಗೆ ಏಟು ಬೀಳಲಿಕ್ಕಿಲ್ಲವೆಂಬ ಭರವಸೆ ಇರುವದರಿಂದ ಆ ಬಗ್ಗೆ ಸಮಸ್ಯೆಯೇನಿಲ್ಲ ಮತ್ತು ಪತ್ನಿಯರ ಏಟು ತಿನ್ನುವ ಗಂಡಂದಿರ ಸಾಲಿನಲ್ಲಿ ನಾನು ಇಲ್ಲದ್ದರಿಂದ ಬೇರೆಯವರ ತಲೆಯ ಬಗ್ಗೆಯೇ ನನಗೆ ಹೆಚ್ಚಿನ ಕಾಳಜಿ ಇದೆ.
ಅದೇನೇ ಇರಲಿ, ಈ ಪತ್ನೀಪೀಡಿತ ಪುರುಚಮಷರು ಇನ್ನಷ್ಟು ಎಚ್ಚರಿಕೆಯಿಂದ ಇರುವದು ಒಳಿತು ಎನ್ನುವ ಸಲಹೆಯನ್ನು ಮಾತ್ರ ಕೊಡಲೇಬೇಕಾಗುತ್ತದೆ. ಏಕೆಂದರೆ ಭಾರತ ಈ ಕ್ಷೇತ್ರದಲ್ಲಿ ಮೊದಲ ಸ್ಥಾನ ಪಡೆಯಲೆಂಬ ಕಾರಣಕ್ಕೆ ಗಂಡಂದಿರಿಗೆ ಹೊಡೆಯುವವರ ಸಂಖ್ಯೆ ಹೆಚ್ಚಾಗುವ ಅಪಾಯದ ಮುನ್ಸೂಚನೆಗಳೂ ಇವೆ.
" ಬೀ ಕೇರ್ ಫುಲ್ ಗಂಡಸರೇ, ನಿಮ್ಮ ತಲೆಯ ಬಗ್ಗೆ ಕಾಳಜಿಯಿರಲಿ. ನಿಮಗೆ ಶುಭ ಕೋರುತ್ತೇನೆ"
- ಎಲ್. ಎಸ್. ಶಾಸ್ತ್ರಿ
Comments