top of page

ರಾಮಾಯಣದ ಕಾಲಘಟ್ಟ

ರಾಮಾಯಣದ ಕಾಲಘಟ್ಟವು ಕೃಷ್ಣಾವತಾರಕ್ಕೆ ಹದಗೊಂಡಿತೆಂಬ ಸೃಜನಶೀಲ ಚಿಂತನೆಯುಳ್ಳ 'ಗ್ಲಾನಿ' ನಾಟಕ ಓದುವ ಕೃತಿಯಾಗಿಯೂ ಮುದನೀಡುತ್ತದೆ. ವೈಯಕ್ತಿಕ ಗ್ಲಾನಿಯು ನಿಧಾನವಾಗಿ ಹೊಸಬೆಳಕಿಗೆ ಹೊರಳುವಂತೆ ಸಾಮೂಹಿಕ ಗ್ಲಾನಿಯೂ ಪಥಪ್ರವರ್ತಕನ ಉದಯಕ್ಕೆ ಕಾರಣವಾಗುತ್ತದೆ ಎಂಬ ತರ್ಕದಿಂದ ಇಲ್ಲಿಯ ವಸ್ತು ಸೃಷ್ಟಿಯಾಗಿದೆ. ಶ್ರೀರಾಮಾವತಾರದ ಪರಿಸಮಾಪ್ತಿಯ ಬಳಿಕ ಯುಗಕ್ಷಯದ ಲಕ್ಷಣಗಳು ನಿಧಾನವಾಗಿ ಗೋಚರಿಸುತ್ತಾ ಬಂದು ಕೃಷ್ಣಾವತಾರಕ್ಕೆ ನಾಂದಿಯಾಗುವ ಕಲ್ಪಕತೆ ಮೆಚ್ಚುವಂತಹುದು. ಭಗವದ್ಗೀತೆಯ 'ಯದಾ ಯದಾಹಿ ಧರ್ಮಸ್ಯ' ಶ್ಲೋಕಾರ್ಥವನ್ನು ಇದಕ್ಕೆ ಆಧಾರವಾಗಿರಿಸಿಕೊಂಡಿದ್ದು ಸ್ಪಷ್ಟ.


ಯಕ್ಷಗಾನದ ರಾಮನಿರ್ಯಾಣದ ಪರಿವೇಶಕ್ಕೂ ಇಲ್ಲಿಯ ಪರಿವೇಶಕ್ಕೂ ವ್ಯತ್ಯಾಸವಿದೆ. ಲಕ್ಷ್ಮಣ, ಊರ್ಮಿಳೆಯರ ಪಾತ್ರಗಳು ಇಲ್ಲಿಲ್ಲ ಎಂಬುದು ಗಮನಾರ್ಹ. ಒಂದರ ಪಡಿಯಚ್ಚಿನಂತೆ ಇನ್ನೊಂದು ಇರಬೇಕಾಗಿಲ್ಲ; ಇರಬಾರದು ಕೂಡ. ಆದರೂ ನಾಟಕದಲ್ಲಿ ಯಕ್ಷಗಾನದ ಹಿಮ್ಮೇಳತಂತ್ರವಿದ್ದು, ಗಣಪತಿ-ಭಾಗವತರ ಮಾತುಗಳು ಪರಿಣಾಮಕಾರಿಯಾಗಿವೆ. ನಾರದನ ಪಾತ್ರವಂತೂ ಎರಡು ಅವತಾರಗಳ ನಡುವಣ ಸೇತುವಂತಿದೆ. ಸಂವಾದಗಳಲ್ಲಿ ಮಿಂಚುವ ಧ್ವನಿಪೂರ್ಣ ಮಾತು, ವರ್ತಮಾನದ ವಿಡಂಬನೆ, ಸೂಕ್ತ ಹಾಡುಗಳು ಮನಸೂರೆಗೊಳ್ಳುತ್ತವೆ.


ಹಿಂದಿನ ಅವತಾರಕ್ಕಿಂತ ಅನಂತರದ ಅವತಾರ ಪ್ರಬುದ್ಧವಾಗಿರುತ್ತದೆ ಎಂಬ ವಿಕಾಸವಾದವೂ ನಾಟಕದ ಮಧ್ಯೆ ಕಣ್ಣುಮಿಟುಕಿಸುತ್ತದೆ! ಶ್ರೀರಾಮನ ವ್ಯಕ್ತಿತ್ವದಲ್ಲಿ ಅಡಗಿದ ಕಿಂಚಿದೂನಗಳನ್ನು ಕಾಲಪುರುಷ ಎತ್ತಿಹಿಡಿಯುವುದು ಹಾಗೂ ಅವುಗಳಿಗೆ ಕಾಲವೇ ಉತ್ತರಿಸುತ್ತದೆ ಎನ್ನುವುದು ಶ್ರೀಕೃಷ್ಣಾವತಾರವು ಪೂರ್ಣಾವತಾರ ಎನ್ನುವುದರ ಸಮರ್ಥನೆಯಂತಿದೆ. "ರಾಮಕೃಷ್ಣರು ಮನೆಗೆ ಬಂದರು...... ಕಾಮಧೇನು ಬಂದಂತಾಯ್ತು" ಎಂಬ ಮಂಗಳಪದ್ಯವಂತೂ ಕಾಲಮೀಮಾಂಸೆಗೆ ಕನ್ನಡಿಯಾಗಿದೆ. ನಾಟಕ ಓದಿದ ಮೇಲೆ ಅದೇ ಗುಂಗಿನಲ್ಲಿರುವ ನಮ್ಮೊಳಗೆ ಕಲಿಯುಗದ ನೆಲದಲ್ಲಿ ಹೊಸ ಅವತಾರವಾಗಬೇಕೆಂಬ ಕಾಂಕ್ಷೆ ಪ್ರಬಲವಾಗುತ್ತದೆ. ಒಳ್ಳೆಯ ಕೃತಿಗೆ ಬೇರೆ ಪ್ರಶಸ್ತಿ ಬೇರೇನು ಬೇಕು?


- ಡಾ.ಕಬ್ಬಿನಾಲೆ ವಸಂತ ಭಾರದ್ವಾಜ

13 views0 comments

Comments


bottom of page