top of page

ರಿಮೋಟ್ ಕಂಟ್ರೋಲ್ ನಿಮ್ಮ ಕೈಯಲಿ

ಅಂಕೆಗೂ ಲಂಕೆಗೂ ಸಿಗದ ಮನಸನು ಹಿಡಿದು ಕುಳ್ಳಿಸುವುದು ಅಷ್ಟು ಸುಲಭವೇ. ಹಿಡಿತದ ಕೈ ಜಾರಿ ಹಾರಿ ಹೋಗುವ ವಿಸ್ಮಯವ ಬಂಧಿಸಲಾದಿತೇ ನೀವೇ ಹೇಳಿ? ಭೂಮಿಯ ಚರಾಚರ ವಸ್ತುವಿನಲ್ಲಿ ಜೀವಿಗಳ ಮಿಡಿತಕ್ಕೊಂದು ಭಾವವಿದೆ. ಅದು ದ್ವೇಷದ ದಳ್ಳುರಿಯಲಿ, ಕಾಣದ ಹಗೆಯು ಹೊಗೆಯಾಡುವುದನು ಬಲ್ಲ ಮನವು ಹೇಳ ಹೆಸರಿಲ್ಲದೇ, ತನಗೇನು ಗೊತ್ತೆಯಿಲ್ಲವೆಂಬಂತೆ ದೇಹ ದಂಡನೆಗೆ ಗುರಿ ಮಾಡಿದಾಗ ಅನುಭವಿಸುವ ವೇದನೆ ಹೇಳತೀರದು ಹೇ ಭಗವಂತಾ...ನನಗೇಕೆ ಇಂಥ ಶಿಕ್ಷೆ? ನಾನೊಬ್ಬನೇ ಈ ಜಗತ್ತಿ ನಲ್ಲಿ ಅಪರಾಧಿಯೋ. ಎಂಬಂತೆ ಎಲ್ಲ ಸಂಕಷ್ಟಗಳು ನನಗೆ ಒಂದರ ಮೇಲೊಂದರಂತೆ ಒಕ್ಕರಿಸಿದರೆ ತಡೆದುಕೊಳ್ಳುವ ಮನಸ್ಸು ಇರಬೇಕಲ್ಲ ನೊಂದುಕೊಳ್ಳುತ್ತ, ಖಿನ್ನತೆಗೆ ಜಾರುವ ಸ್ಥಿತಿ ಬಂದ ಮೇಲಂತೂ ಉದ್ವಿನ್ನ ಗೊಳ್ಳದೆ ಬೇರೆ ದಾರಿ ಇಲ್ಲವೆಂಬುದು ಸತ್ಯ. ಅವೆಲ್ಲದರ ನಡುವೆ ನಾನು ಹೀರೋ ಆಗಬೇಕೆಂದು ಕಂಡ ಕನಸುಗಳು, ಮೆರೆದ ಗಳಿಗೆಗಳು, ಕಳೆದುಕೊಂಡ ಅಮೂಲ್ಯ ಸಂಬಂಧಗಳು ಪುನಃ ಚಿಗುರಿಸಲಾಗದೆ ಮರಗಟ್ಟಿ ಸಾಯುಲು ಈ ಹಾಳಾದ ಮನವೇ ಕಾರಣ.


ನಾನು ನನ್ನದಲ್ಲವೆಂದು ಸಾವಿರ ವೇದ ಪುರಾಣಗಳ ಪುಟ ತಿರುವಿದರೂ, ಸಮಾಧಾನ ಕಂಡುಕೊಳ್ಳದ ಮನಸ್ಸು. ಕಾರಣ ಚಂಚಲತೆಗೆ ಹಾಗೂ ಆತುರತರಗೆ ಒಳಪಟ್ಟು ಗಡಿ ದಾಟಿದ ಮೇಲೆ ಸುಮ್ಮನಾದಿತೇ? ಹಕ್ಕಿಯಂತೆ ಸ್ವಚ್ಛಂದವಾಗಿ ಬಾನಲಿ ಹಾರುತ್ತಿರಬೇಕೆಂಬ ಹೆಬ್ಬಯಕೆ. ಯುಗಗಳು ಉರುಳಿದರೂ ಮನದ ಓಟದ ಮೆರವಣಿಗೆಗೆ ಕೊನೆಯೆಂಬುದಿಲ್ಲ. ಜಗಜ್ಯೋತಿ ಬಸವಣ್ಣ ಬಿತ್ತಿರುವ ಕ್ರಾಂತಿಯ ಬೀಜ‌ ಬೆಳೆದು ಹೆಮ್ಮರವಾಗಲೂ ಬಿಡದೆ ಶತಮಾನಗಳಿಂದ ಚಿಗುರೊಡೆದ ಟೊಂಗೆಗಳು ನೆಲಕುರುಳಿ ಕೊನೆಯುಸಿರೆಳೆಯುತ್ತಿವೆ. ಮನದ ಮರ್ಮವ ಬಲ್ಲವನು ಅಂಧನಾದರೆ  ಕೊನೆಯನರಿತವನು ಜ್ಞಾನಿಯಾಗದಿದ್ದರೆ ಮನದ ಮಾತು  ಮರೆ ಮಾಚಿ ನಡೆವವನ ಮನವ ಅರಿಯಲಿ ಹೇಗೆ ?


ಮಳೆ ಗಾಳಿಗೆ ಸಿಲುಕದಂತೆ ಮೋಡದ ಹೆಗಲೇರಿ ಊರೂರು ಸುತ್ತುತ್ತಿದೆ. ಜಾತ್ರೆ, ತೇರುಗಳು ಹಾದು ಹೋದಂತೆಯೇ. ಬಡವ,ಶ್ರೀಮಂತರೆನ್ನುತ ಅವರವರ ತನುವುನಲ್ಲಿ ನೆಲೆಸಿ ಮನಬಂದಂತೆ ನಟಿಸುವ ಮನವೆಂಬ ಮರ್ಕಟ. ಹೊತ್ತು ಗೊತ್ತಿಲ್ಲದೆ, ಗೊತ್ತು ಗುರಿಯಿಲ್ಲದೆ ಸಿಕ್ಕಲ್ಲೆಲ್ಲ ನಿಂತು ಕೊಳಚೆ ಗೆಟ್ಟು ಡೆಂಗ್ಯೂ, ಮಲೇರಿಯಾ ಹರಡುವ ಎಜನ್ಸಿಯಾಗಿ ನಮಗರಿವಿಲ್ಲದೇ ವ್ಯಾಪಿಸುತ. ಹಿಡಿತಕ್ಕೂ ಮೀರಿ ಓಡುವ ಮನವ ನಿಗ್ರಹಿಸಿವುದು ಅಷ್ಟು ಸುಲಭವಾ? ಅನಾಹುತಕ್ಕೆ ಹೊಣೆಯಾರು? ಕೆಟ್ಟ ಮೇಲೆ ಬುದ್ದಿ ಬಂತು ಎಂದು ಕೈ ಮಸೆಯುವುದರಲ್ಲಿ, ಇನ್ನೊಂದು ಮನವು ಬರಗೆಟ್ಟಂತೆ ಆದ ಅನಾಹುತಕ್ಕೆ ನೀನೆ ಕಾರಣವೆಂದಾಗಲೆಲ್ಲ ಹಂಗಿಸುವುದು ಅನಿವಾರ್ಯವಾಗಿ ಬಿಟ್ಟಿದೆ.


ಮಾತು ಮಾತಿಗೂ ದ್ವಂದ್ವಗಳ ಸೃಷ್ಟಿಸಿ ಏಕತೆಗೆ ಸಮರ ಸಾರಲು ಹೊಂಚು ಹಾಕುತ್ತಿದೆ. ಸರಿಯೆಂದು ಹೆಜ್ಹೆಯಿಡುವಾಗಲೂ ಅಳುಕು. ನಂಬಿಕೆ, ದೃಢತೆಗೆ ಕೊಂಚ ಸಂಶಯ ಬಂದಂತೆ. ದ್ವಂದ್ವತೆಗಳ ನಡುವೆ ಗೊಂದಲದ ಗೂಡು ಬಿರುಕು ಬಿಟ್ಟುಂತೆ. ಅಸ್ಮೀತೆಯು ವಿನಾಕಾರಣ ವಿಘ್ನಕ್ಕೆ ಮೂಲ. ಇಂಥಹ ಮನವ ಬಂಧಿಸುವುದು ದೊಡ್ಡ ಕೆಲಸ ನಮ್ಮೊಳಗಿನ ವಿಷಮ ಭಾವಗಳು ಕೊಲ್ಲುವ ಮುನ್ನ ಎಚ್ಚರಗೊಳ್ಳಬೇಕಿದೆಯೆಂದು ಗಂಟಾನಾದ ಮೊಳಗಿದರು ಅರಿಯದೇ ಕೈ ಚಲ್ಲುವುದು ಸರಿಯೇ? ಸ್ವಾಮಿ ವಿವೇಕಾ ನಂದರು ಸದುದ್ದೇಶಗಳಿಗೆ ಸದಾ ಮನವು ಜಾಗೃತವಾಗಿರ ಬೇಕು. ದೇಹದ ಸಪ್ತಮಂಡಲಗಳು ಕಾರ್ಯೋನ್ಮುಖವಾ ಗಿರಬೇಕು. ಕರ್ಮದಲ್ಲಿ ನಂಬಿಕೆ. ದುಷ್ಟ ಬುದ್ದಿಗಳಿಗೆ ದೃಢ ಸಂಕಲ್ಪದ ಮನಸ್ಸು ಅನಿವಾರ್ಯ. ಇದು ದುರ್ಬಲ ಮನಸ್ಸುಳ್ಳವರಿಗೆ ಸಾಧ್ಯವಿಲ್ಲ. ಎನ್ನುವಾಗಲೆಲ್ಲ, ದುರ್ಬಲಗೊಳಿ ಸುವ ಇನ್ನೊಂದು ಮನವು ಕೇ ಕೇ ಹಾಕಿ ನಕ್ಕಿದ್ದುಂಟು.


ಮಣ್ಣಲ್ಲಿ ಮಣ್ಣಾಗುವ ಈ ದೇಹ ಬಿಟ್ಟು ಹೋಗುವುದು ಕೋಟಿ ಆಸ್ತಿಯನ್ನಲ್ಲ. ಬದುಕಿ ಬಾಳಿದ ರೀತಿಯ ಎಂದು ಅರಿವಾಗುವುದು ಕಳೆದು ಹೋದ ಮೇಲೆ. ಅದು ಅರೆಕ್ಷಣ ತಿಥಿ ಮುಗಿದ ಮೇಲಂತೂ ಶೂನ್ಯ. ನಿನ್ನ ನೋಯಿಸಿ,ನಿನ್ನ ಕೊಂದು ಬಾಚಿಕೊಂಡ ಅಂತಸ್ತನ್ನೆಲ್ಲ ಇನ್ನಾರದೋ ಮಡಿ ಲಿಗೆ ಹಾಕುವಾಗ ನಾನಿರದಿರುವುದು ದುರಂತವಲ್ಲವೇ? ಜೀವಜಂತುಗಳ ರಕ್ತ ಒಂದಾದರೂ ಬದುಕುವ ಹಂತಗಳು ಭಿನ್ನ. ದೃಷ್ಟಿಕೋನ ವಿಭಿನ್ನವಾದರೂ ಸಾವು ಎಲ್ಲರಿಗೂ ಸಮ. ಸಾವಲ್ಲೂ ಖುಷಿ ಪಡುವ ಮನಗಳು,ತಾವು ಶಾಶ್ವತ ವೆಂಬಂತೆ. ಕಂಗಳ ಕಾಂತಿ ಕಳೆಗುಂದುತ್ತಿದ್ದರೂ. ನನ್ನಲ್ಲಿ, ನಿನ್ನಲ್ಲಿ ಅಡಗಿರುವ ನಕಾರಾತ್ಮಕತೆಯ ಬಿತ್ತಿ ಹಳ್ಳ ತೊಡುವ ಕಹಿ ಮನವನು. ಮುಂದಾಗುವ ಅನಾಹುತವ ತಡೆಯುವ ನಿರ್ಧಾರ ಮಂಗ ತಕ್ಕಡಿಯಲ್ಲಿ ಬೆಣ್ಣೆ ತೂಗಿದಾಂಗೆ.


ಒಳಿತು ಮಾಡ ಮನಸಾ.

ನೀ ಇರೋದು ಮೂರು ದಿವಸಾ

ಉಸಿರು ನಿಂತಮ್ಯಾಲೆ ನಿನ ಹೆಸರು ಹೇಳುತಾರಾ

ಹೆಣ ಅನ್ನುತಾರ,ಮಣ್ಣಾಗ ಹೂಳುತಾರ

ಚೆಟ್ಟಕಟ್ಟುತಾರ,ನೀನ ಸುಟ್ಟು ಹಾಕುತಾರ...


ಈ ಹಾಡು ಕೇಳಿದಾಗೊಮ್ಮೆ....ಕಣ್ಣೀರು ಮೌನವಾಗಿ ಹರಿದು ಹೋಗುತ್ತದೆ. ಎನು ಪ್ರಯೋಜನ. ಹಾಡು ಮುಗಿದ ಮೇಲೆ ಪುನಃ ಮನಸ್ಸು ಅದೇ ಕಾಯಕದತ್ತವಾಲುವುದು ನಮ್ಮ ದೌರ್ಬಲ್ಯವೆನ್ನದೇ ಇರಲು ಸಾಧ್ಯವಿಲ್ಲ. ಮೋಹದಿ ಗಡಿದಾಟಿ ಬಳಕೆಗೆ ಬಾರದ ಕಳೆಗಳಾಗಿ ಬದಲಾ ಗುತ್ತಿರುವುದು ದಿಟವಲ್ಲವೇ ಮನಸೆಂಬ ಮಾಯೇಯ ಬಲ್ಲವರಾರು? 


ಗಡಿಯಲಿ ವೀರಮರಣ ಅಪ್ಪಿದವರ ಶ್ರದ್ಧಾಂಜಲಿ ಅರ್ಪಿಸುವಾಗಿನ ಹುರುಪು. ಗಡಿಕಾಯಲು ಸಿದ್ದವಾಗದ ಮನಸ್ಸು ನಮ್ಮದಲ್ಲವೇ. ದೇಶಾಭಿಮಾನದ ನಶೆ ಥಟ್ಟನೇ ಇಳಿಯು ವಂತೆ ಮಾಡುವ ದಿವ್ಯೌಷಧಿ ಮಾರುಕಟ್ಟೆ ತುಂಬ ಸದ್ದು ಮಾಡಿದ್ದಂತೂ ಮನ ಅಳೆದು ತೂಗಿಬಿಟ್ಟಿದೆ. ಕೇವಲ ಗಡಿಯೊಂದೆ ರಕ್ಷಣೆಗೆ ಆಯ್ಕೆಯಲ್ಲ. ದೇಶದೊಳಗಿನ ಶತ್ರುಪಡೆಯ ನಿಭಾಯಿಸುವ ಯುವ ಮನಸುಗಳು ಬೇಕಲ್ಲವೆ.ಹಿಂಸೆಗಳಿಗೆ ಕಿಚ್ಚು ಹಚ್ಚಿ, ಇನ್ನೊಬ್ಬರ ಸಂಕಟ ದಲ್ಲಿ ಸುಖ,ಚಳಿಕಾಯಿಸುವ ಮನಗಳಿಗೇನು ಕಮ್ಮಿಯಿಲ್ಲ.  ಮನೆಯ ಮಾನ ಹರಾಜಾದರೂ, ತನ್ನನ್ನು ತಾನು ಮಾರಿ ಕೊಂಡರೂ ನಾಚಿಕೆ ಪಡದ ವಿಕೃತ ಮನಗಳ ಬಂಧಿಸಲು ಸಾಧ್ಯವಾ? ಅಂದ ಮೇಲೆ ಎನು ಲಾಭ ಈ ಮನದಿಂದ ? ದುಷ್ಟರಿಂದ ಒಳಿತಂತೂ ಆಗಿಲ್ಲ. ಮಂಗನಿಂದ ಮಾನವ ತಾನೆ.! ಎಂಬ ಉಡಾಫೆ ಮಾತಿಗೇನು ಕಡಿಮೆಯಿಲ್ಲ.


ನಾವುಗಳು ಮನಬಿಚ್ಚಿ ಅನಿಸಿದ್ದನ್ನು ಮಾಡಲು ಆಗದ ಹಿಂಬಾಲಕರು ನಿಂದನೆಗೆ ಹೆದರಿ ಹಿಂಬಾಗಿಲ ಸೇರಿದ ಹಿಂ‌ಜರಿಕೆಯ ಮನಗಳುಳ್ಳವರು. ಈ ಪುಟ್ಟ ಹೃದಯ ಮಿಡಿದ ನೂ ರು ಭಾವಗಳಿಗೆ, ಪುಟ್ಟ ಮೆದಳು ಸ್ಪಂಧಿಸಿ ಮಾಡುವ ಕಾರ್ಯ ಕ್ಷಮತೆ ಯಾರಿಂದಲೂ ಸಾಧ್ಯವಿಲ್ಲ. ದೇಹದ ರಕ್ತ ಮಾಂಸಗಳ ವರ್ಚಸ್ಸು,ಚರ್ಮದ ಹೊದಿಕೆ,ಇಂದ್ರಿಯಗಳ ಚಾಣಾಕ್ಷತೆ. ಸ್ನಾಯುಗಳ ಸೆಳೆತ ವಿಲವಿಲ ಒದ್ದಾಡುವ ಮಾಯದಂತ ಮನಸ್ಸ ಹಿಡಿದಿಡುವುದು ಕಷ್ಟವಾದರೂ ಹಿಡಿತ ಸಾಧಿಸಿದ ಮೇಲೆ ಸಿಗುವ ಸ್ಥಾನ ಸಾಮಾನ್ಯದಾ... ?


ದೇವ ಮಾನವರಾದವರ ಗುಟ್ಟೇನು? ದೇವರಾಗಿ ನೆಲೆಸಿರು ವವರ ರಹಸ್ಯ ಬೇಧಿಸುವ ಸಾಹಸ ಮಾಡಿದವರು ಕ್ಷುದ್ರ ಗ್ರಹಗಳಾದ ಕಥೆಯ ಬಲ್ಲೆವು. ದೇವನೊಲಿಸಿಕೊಂಡು ಅಜ ರಾಮರರಾದ ಪುಣ್ಯವಂತರನು ಬಲ್ಲೆವು. ಆಯ್ಕೆ ನಮ್ಮ ಕೈ ಯಲಿ ಅಲ್ಲ ನಮ್ಮ ಮನಸಲಿ ಕಾರಣವಿಷ್ಟೇ ನಾಲಿಗೆ ಮಾ  ತಾಡಿದ್ದನ್ನು ಒಳದ್ವಂದ್ವಗಳು ಒಪ್ಪಬೇಕಲ್ಲ. ಪರಾಮರ್ಶೆಗೆ ಒಳಪಡಿಸಿ ಸತ್ಯ ಸುಳ್ಳೆಂದು, ಸುಳ್ಳು ಸತ್ಯವೆಂದು ಸಾಬೀತು ಪಡಿಸಲು ಪೈಪೋಟಿ ನಡೆಸಿದಂತೆ. ಒಮ್ಮತಕ್ಕೆ ಬರದೇ ಇದ್ದಲ್ಲೆ ಮೌನವಾದಂತೆ.


ಮನದ ಮೂಲೆಯಲಿ ನಾವು ಸಾಕುವ ಎರಡು ಗಿಳಿಗಳು ನಮ್ಮ ವ್ಯಕ್ತಿತ್ವದ ಮೂಲ ಸ್ವರೂಪಗಳು. ಮನಸ್ಸು ಬೀಸುವ ಛಾಟಿಯೇಟಿಗೆ ಜಗತ್ತೆ ತಲ್ಲಣಿಸುತ್ತಿದೆ. ಶೀತಲ ಸಮರ ಬೂದಿ ಮುಚ್ಚಿದ ಕೆಂಡದಂತೆ ಮನವೆಂದು ಕಂಪಿಸುವುದೋ ಧರೆ ಕಡಲ ಪಾಲಾಗುವುದು. ನೀರ ಮೇಲಿನ ಗುಳ್ಳೆಯಂತೆ ನಮ್ಮ ಬದುಕಾದರೂ ಸ್ವಾರ್ಥದ ಹೋರಾಟಕ್ಕಿಂತ, ನಿಸ್ವಾರ್ಥದ ಹೋರಾಟ ಮಾಡಿದರೆ ವಿಚಲಿತ ಮನಸ್ಸು ಹೊರಬಂದಿತೆಂಬ ಆಶಯ. ತನುವಿನ ವ್ಯಾಮೋಹ ಕಳಚಿದಷ್ಟು ಮನವು ನಿರ್ಲಿಪ್ತವಾಗಿದಷ್ಟು. ಸುಪ್ತ ಶಕ್ತಿಯನ್ನು ಭವದೋಳು ಓಝೋನ್ ಪದರದಂತೆ ಆವರಿಸಲು ಮನಸೆಂಬ ರಿಮೋಟ್ ಕಂಟ್ರೋಲ್ ನಿಮ್ಮ ಕೈಯಲ್ಲಿದೆ..






ಶಿವಲೀಲಾ ಹುಣಸಗಿ

157 views4 comments

4 Comments


yashoda bhat
yashoda bhat
Sep 05, 2020

ತುಂಬಾ ಚೆನ್ನಾಗಿದೆ

Like

Sneha Nayak
Sneha Nayak
Sep 02, 2020

Mansina kuriutu sundhar agi mudibandide super

Like

shivaleelahunasgi
shivaleelahunasgi
Sep 02, 2020

ಥಾಂಕ್ಯೂ ಮೇಡಂ...

Like

shubhaniranjan69
shubhaniranjan69
Aug 31, 2020

ಹೌದು ಮೆಡಮ್ ನಿಸ್ವಾರ್ಥ ದ ಹೋರಾಟ ಅನಿವಾರ್ಯ ವಾಗಿದೆ , ನಮ್ಮ ಮನಸಿನ ರಿಮೋಟ್ ಕಂಟ್ರೋಲ್ ನಮ್ಮ ಕೈಲಿದೆ , ವಾಸ್ತವ ಚಿತ್ರಣದ ಬರಹ ಚೆನ್ನಾಗಿದೆ.

Like
bottom of page