top of page

ರುದ್ರಾಕ್ಷಿ, ಬಾಳೆ ಮತ್ತು ಮನುಷ್ಯ

ನಮ್ಮ ಧಾರ್ಮಿಕ ಮತ್ತು ಆಧ್ಯಾತ್ಮಿಕ ಜೀವನದಲ್ಲಿ ರುದ್ರಾಕ್ಷಿಗೆ ಉನ್ನತ ಸ್ಥಾನವಿದೆ. ರುದ್ರಾಕ್ಷಿಯು ಸಾಮಾನ್ಯವಾಗಿ ಮೂರು ಕಣ್ಣುಗಳಿರುವ ಕಾಯಿಯಾಗಿರುವುದರಿಂದ ಶಿವನ ಹಣೆಗೆ ಅದನ್ನು ಹೋಲಿಸಿ ರುದ್ರಾಕ್ಷಿ ಎಂದು ಕರೆಯಲಾಗಿದೆ. ರುದ್ರಾಕ್ಷಿಗಿಡದಲ್ಲಿ ಆಗುವ ಈ ಕಾಯಿಯಲ್ಲಿ ಮೂರಲ್ಲದೆ, ಅಪರೂಪವಾಗಿ ಒಂದರಿಂದ ನೂರು ಕಣ್ಣುಗಳ ವರೆಗೆ ಕಂಡು ಬರುವುದುಂಟು ಮತ್ತು ಅದು ಶಿವನ ಅನುಗ್ರಹವಿಶೇಷವೆಂದು ಭಾವಿಸಲಾಗಿದೆ. ಕೋಟ್ಯಂತರ ಇತರ ಕಾಯಿಗಳು/ಬೀಜಗಳು ಈ ಸೃಷ್ಟಿಯಲ್ಲಿವೆ. ರುದ್ರಾಕ್ಷಿಗೆ ಮಾತ್ರ ಯಾಕೆ ಅಷ್ಟೊಂದು ಪ್ರಾಮುಖ್ಯ?

ಕಾಯಿ ಅಥವಾ ಬೀಜ ಇರುವುದು ಮರುಸೃಷ್ಟಿಗೆ. ಬೀಜ/ಕಾಯಿ ನೆಲಕ್ಕೆ ಬಿದ್ದು ಮಳೆಗೆ ಮೈ ತೆರೆದೊಡನೆ ಗಿಡ ಹುಟ್ಟುತ್ತದೆ. ವಿಶೇಷವೆಂದರೆ ರುದ್ರಾಕ್ಷಿ ಕಾಯಿ ಸುಲಭವಾಗಿ ಹುಟ್ಟುವುದಿಲ್ಲ. ಇಡೀ ಸೃಷ್ಟಿಯಲ್ಲಿ ತೀರಾ ಅಪರೂಪವಾಗಿ ಹುಟ್ಟುವ ಒಂದು ಬೀಜವೆಂದರೆ ಅದು ರುದ್ರಾಕ್ಷಿ. ರುದ್ರನ ಕಣ್ಣಿನಂತೆ ಇರುವ ರುದ್ರಾಕ್ಷಿಗೆ ಮಾತ್ರ (ಮರುಹುಟ್ಟು ಇರದೆ) ಜೀವನ್ಮುಕ್ತವಾಗುವ ಮಹಾನ್ ಅವಕಾಶ ಇದೆ.

ಜೀವನ್ಮುಕ್ತ ಆಗುವುದು ಎಂದರೆ ಏನು? ಜೀವಿತಚಕ್ರದಿಂದ ಮುಕ್ತವಾಗಿ (ತಪ್ಪಿಸಿಕೊಂಡು) ಮೋಕ್ಷ ಸಿಕ್ಕುವುದೇ ಜೀವನ್ಮುಕ್ತ ಸ್ಥಿತಿ. ಪಂಚಭೂತಗಳ ನಡುವೆ ಇದ್ದೂ – ಕಷ್ಟನಷ್ಟ ಸಂಕಟಗಳ ಗೂಡಾದ ಈ ಜೀವಿತಚಕ್ರದಿಂದ ತಪ್ಪಿಸಿಕೊಳ್ಳುವುದು ಅಥವಾ ಮರುಹುಟ್ಟಿನಿಂದ ನುಣುಚಿಕೊಳ್ಳುವುದು. ಅಬ್ಬ! ಅದೆಂತಹ ಒಂದು ಯೋಗ ಅಲ್ಲವೇ? ಈ ಸ್ಥಿತಿ ಸೃಷ್ಟಿಯ ವಿಶೇಷವಾದೊಂದು ವರದಾನ.

ಈ ಅಪರೂಪದ ಅವಕಾಶ ಇರುವುದು ಅಚರವಾಗಿರುವ ಸಸ್ಯಗಳಲ್ಲಿ ಎರಡಕ್ಕೆ - ಅಂದರೆ ಬೀಜಗಳಲ್ಲಿ ರುದ್ರಾಕ್ಷಿಗೆ; ಸಸ್ಯಗಳಲ್ಲಿ ಬಾಳೆಗೆ ಮತ್ತು ಪ್ರಾಣಿವರ್ಗಗಳಲ್ಲಿ (ಚರ) ಮನುಷ್ಯನಿಗೆ ಮಾತ್ರ!

ಇದೇನು ವಿಚಿತ್ರ ಅನ್ನಿಸಬಹುದು. ಆದರೆ ಈ ಮಾತು ನಿಜ! ಪಂಚಭೂತಗಳ ಸಂಲಗ್ನದಿಂದ – ಅಂದರೆ ನೆಲ, ಜಲ, ಅಗ್ನಿ, ವಾಯು, ಆಕಾಶ ಎಂಬ ತತ್ತ್ವಗಳಿಂದ – ಆರಂಭಗೊಳ್ಳುವ ಮತ್ತು ವಿಕಾಸಗೊಳ್ಳುವ ಸೃಷ್ಟಿಚಕ್ರದಲ್ಲಿ ಜೀವಿಗಳಿಗೆ ಒಂದು ಆರಂಭ ಮತ್ತು ಅಂತ್ಯ ಎಂಬುದು ಇರುವುದಿಲ್ಲ. ಸೃಷ್ಟಿ ಅನ್ನುವುದೊಂದು ನಿರಂತರವಾದ ಕ್ರಿಯೆ ಅಥವಾ ಇದೊಂದು ಚಕ್ರ. ಅಮೀಬಾದಂತಹ ಏಕಾಣುಜೀವಿ, ಹಾವಸೆಯಂತಹ ಜಲಸಸ್ಯದಿಂದ ಇದು ಆರಂಭಗೊಂಡು ಅನಂತರ ವಿಕಾಸವಾಗುತ್ತ ಹೋಗುತ್ತದೆ. ಈ ಚಕ್ರದಿಂದ ನುಣುಚಿಕೊಳ್ಳುವುದು – ಅಂದರೆ ಕ್ಯೂ ತಪ್ಪಿಸಿ ನೇರವಾಗಿ ಕೌಂಟರ್ ಗೆ ಹೋದ ಹಾಗೆ – ವಿಶೇಷವಾದೊಂದು ಪ್ರಯತ್ನದಿಂದ ಮನುಷ್ಯನಿಗೆ ಸಾಧ್ಯ.

ಬೀಜಗಳಲ್ಲಿ ರುದ್ರಾಕ್ಷಿಗೆ ಮರುಹುಟ್ಟು ಇಲ್ಲದೇ ಇರುವುದರಿಂದ ಅದು ಸಹಜ ಸ್ವಭಾವಿಕವಾಗಿ ಜೀವನ್ಮುಕ್ತವಾಗುತ್ತದೆ. ಅಂದರೆ ಬೀಜದಿಂದ ಗಿಡವಾಗಿ, ಮತ್ತೆ ಬೀಜವಾಗಿ, ಮತ್ತೆ ಗಿಡವಾಗಿ... ಈ ಚಕ್ರಾರ ಸ್ಥಿತಿ ರುದ್ರಾಕ್ಷಿಗೆ ಇರುವುದಿಲ್ಲ. ಹಾಗಾಗಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ರಂಗದಲ್ಲಿ ರುದ್ರಾಕ್ಷಿಗೆ ವಿಶೇಷವಾದ ಸ್ಥಾನಮಾನ ಪ್ರಾಪ್ತವಾಗಿದೆ. ರುದ್ರಾಕ್ಷಿಯಲ್ಲಿ ಮೂರು ಕಣ್ಣುಗಳ ರುದ್ರಾಕ್ಷಿ ಬೇಕಾದಷ್ಟು ಇದೆ. ಒಂದು, ಎರಡು, ಐದು ಮತ್ತು ಅಧಿಕ ಮುಖಗಳಿರುವ ರುದ್ರಾಕ್ಷಿಗಳು ಅಪರೂಪಕ್ಕೆ ಲಭ್ಯವಾಗುತ್ತವೆ. ನೂರು ಮುಖಗಳಿರುವ ರುದ್ರಾಕ್ಷಿಯಂತೂ ತೀರಾ ಅಪೂರ್ವವೆಂದು ಪರಿಗಣಿತವಾಗಿದೆ. ಅವುಗಳ ಮುಖ ಹೆಚ್ಚಾದಷ್ಟು ಮಹತ್ವ ಮತ್ತು ವಿಶೇಷತೆ ಹೆಚ್ಚಾಗುತ್ತ ಹೋಗುತ್ತದೆ.

ಸಸ್ಯಗಳಲ್ಲಿ ಜೀವನ್ಮುಕ್ತವಾಗುವ ಅವಕಾಶ ಇರುವುದು ಬಾಳೆಗೆ. ಬಾಳೆಹಣ್ಣಿನಿಂದ (ಅಂದರೆ ಅದರ ಬೀಜದಿಂದ) ಗಿಡ ಹುಟ್ಟುವುದಿಲ್ಲ. ಬಾಳೆಯ ಪ್ರತಿ ಜನ್ಮವೂ ಜೀವನ್ಮುಕ್ತವೇ; ಮೋಕ್ಷವೇ. ಬಾಳೆಯ ಹಿಂಡಲಿನಿಂದ ಹುಟ್ಟಿ ಬರುವ ಹಿಳ್ಳಿನಿಂದ ಹೊಸದೇ ಗಿಡ ಹುಟ್ಟುತ್ತದೆ ಮತ್ತು ಆ ಗಿಡವೂ ಗೊನೆ ಹಾಕಿ ಜೀವನ್ಮುಕ್ತವಾಗುತ್ತದೆ! ಹಾಗಾಗಿಯೇ ಕದಳಿ ಬಾಳೆಹಣ್ಣು ನೈವೇದ್ಯಕ್ಕೆ ವಿಶೇಷವೆಂದು ಪರಿಗಣಿಸಲ್ಪಟ್ಟಿರುವುದು. ಒಂದು ಜನಾಂಗದ ಕಣ್ಣು ತೆರೆಸಿದ ಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಎಂ. ಗೋಪಾಲಕೃಷ್ಣ ಅಡಿಗರು ತಮ್ಮ ಒಂದು ಕವಿತೆಯಲ್ಲಿ ಹೇಳುತ್ತಾರೆ; ’ಬಾಳೆ ಜೀವನ್ಮುಕ್ತ ಹಿಳ್ಳುಹಿಳ್ಳುಗಳಲ್ಲಿ ಪ್ರಾಣವೂರಿ’ ಎಂದು.

ಪ್ರಾಣಿವರ್ಗದಲ್ಲಿ (ಚರವರ್ಗದಲ್ಲಿ) ಮನುಷ್ಯ ಜನ್ಮವೇ ಮೇಲ್ಮಟ್ಟದ್ದು, ಉಚ್ಚತರದ್ದು ಮತ್ತು ಅಂತಿಮವಾದದ್ದು. ಮನುಷ್ಯನಿಂದ ಆಚೆಗೆ ಇನ್ನೊಂದು ಶ್ರೇಷ್ಠವಾದ ಜೀವಿ ಇಲ್ಲ. ’ದುರ್ಲಭಮ್ ಮಾನುಷ ಜನ್ಮಮ್’ ಎಂದು ಹೇಳಲಾಗಿದೆ. ಮಾತು ಬಾರದ, ಭಾವನೆಗಳಿರದ ಕೋಟ್ಯಂತರ ಕೀಟ, ಉರಗ, ಪಕ್ಷಿ, ಪ್ರಾಣಿ ವರ್ಗಗಳಿವೆ. ಈ ಎಲ್ಲ ಚರ ವರ್ಗದಲ್ಲಿ ಜೀವಶ್ರೇಷ್ಠವಾದ ಮನುಷ್ಯನಿಗೆ ಮಾತ್ರ ಜೀವನ್ಮುಕ್ತವಾಗುವ ಅವಕಾಶವಿದೆ; ಆದರೆ ಒಂದು ಷರತ್ತು. ಆಧ್ಯಾತ್ಮಿಕ ಹಾದಿಯಲ್ಲಿ ಸಾಗಿ ಸಾಧನೆ ಮಾಡಿದರೆ ಮಾತ್ರ ಸಾಧ್ಯ! ಅತಿಯಾದ ಆಸೆಯಿಂದ ಐಹಿಕಕ್ಕೆ ಅಂಟುವ ಸ್ವಭಾವದ ಮನುಷ್ಯ ’ಕ್ಯೂ’ವಿನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ!

ಅದಕ್ಕೆ ಅರಿಷಡ್ವೈರಿಗಳಿಂದ (ಕಾಮ ಕ್ರೋಧ ಮೋಹ ಲೋಭ ಮದ ಮಾತ್ಸರ್ಯ) ಮುಕ್ತನಾಗುವುದು ಮೊದಲ ಆವಶ್ಯಕತೆ. ಇದನ್ನು ಗೆಲ್ಲಲು ಮನುಷ್ಯ ಸಾವಿರಾರು ವರ್ಷಗಳಿಂದ ಪ್ರಯತ್ನಿಸುತ್ತಾ ಇದ್ದಾನೆ. ಧರ್ಮ ಸತ್ಯ ನ್ಯಾಯ ನೀತಿ ಇರುವುದು ಆ ಹಾದಿಯನ್ನು ಸುಗಮಗೊಳಿಸುವುದಕ್ಕೆ. ಮನುಷ್ಯ ಪ್ರಯತ್ನಿಸುತ್ತಾ ಇದ್ದಾನೆ; ಆದರೆ ಸಾಮಾನ್ಯ ಮನುಷ್ಯನಿಗೆ ಸಾಧ್ಯವಾಗುತ್ತಾ ಇಲ್ಲ. ಸಾಧಿಸಿದವರು ಈ ಹಿಂದೆ ಸಾವಿರಾರು ಮಂದಿ ಆಗಿ ಹೋಗಿದ್ದಾರೆ. ಸಾದಿಸುವ ಹಾದಿಯಂತೂ ಇದೆ. ವೈಯಕ್ತಿಕವಾಗಿ ಪ್ರತಿ ಮನುಷ್ಯನೂ ಪ್ರತ್ಯೇಕವಾಗಿಯೇ ಪ್ರಯತ್ನಶೀಲನಾಗಬೇಕು.

ಆಕಾಶ ನೋಡಲು ನೂಕುನುಗ್ಗಲೇ? ಅವರವರ ಭಾವ, ಅವರವರ ಭಕುತಿ, ಅವರವರ ಶಕುತಿ!

-ಡಾ. ವಸಂತಕುಮಾರ ಪೆರ್ಲ.

14 views0 comments

Comments


bottom of page