ಬೇಲಿ ಕಾವಲಂತೆ ತೋಟಕ್ಕೆ
ಕಾಯುವ ಕಾಯಕ
ಬಂದಾಗಲೆಲ್ಲ ಬಗ್ಗಿ
ಮಲಗಿಬಿಡುತ್ತದೆ
ದಾಳಿ ದಾಟಿ ಹೋಗುವವರೆಗೂ
ಮಣ್ಣಲ್ಲಿ ಮೈಹೂತು
ಬೆಳೆದ ಕಾಳನ್ನೆಲ್ಲ ಇಂಚಿಂಚೇ
ಮೇಯುವ ಕಳ್ಳರು
ಬೇಲಿಯ ಕೋಲಿಗೆ ಕಣ್ಣೆಲ್ಲಿ?
ಅದರ ಕಾಲೂ ಮಣ್ಣೊಳಗೆ
ತುತ್ತು ಕೈಗೆ ಬಾರದ ರೈತ
ಅಳುತ್ತಾನೆ ಕೆರಳುತ್ತಾನೆ
ಯಾರಿಗೆ ಕೇಳಬೇಕು ಸಾಕ್ಷಿ?
ಕಾದೆನೆಂದ ಬೇಲಿಗೋ
ಹಾದುಹೋದ ಗಾಳಿಗೋ
ಕೊನೆಗೆ ನೇಣಿಗೆ ಕುಣಿಕೆ
ಬಿಗಿದ ಮರವೂ ಹೇಳುವುದಿಲ್ಲ ಸತ್ಯ...
ತಿಂದು ಹೋದ ಬೆಳೆ
ನೊಂದು ಹೋದ ನೆಲ
ಬೆಂದು ಹೋದ ಒಡೆಯ
ಅದೇ ಮಣ್ಣಿನೊಳಗೆ ಮುಚ್ವಿ
ಹೋಗುತ್ತಾರೆ
ಮತ್ತೆ ಚಿಗುರೊಡೆಯುತ್ತದೆ
ಬೇಲಿ
ಸಂಧ್ಯಾ ವಿ. ನಾಯ್ಕ ಅಘನಾಶಿನಿ