ಬಾರಪ್ಪ ಮಳೆರಾಯ
ಯಾಕಿಷ್ಟು ಮುನಿಸು
ಬಂದುಬಿಡು ಬೇಗ ನೀನು
ಈಡೇರಿಸು ನಮ್ಮ ಕನಸು
ಕಾದಿರುವಳು ಭೂತಾಯಿ
ನಿನಗಾಗಿ ಹಗಲಿರುಳು
ಅರಿವಿಲ್ಲವೆ ನಿನಗೆ
ರೈತರ ನಿತ್ಯದ ಗೋಳು
ಬಿಸಿಲೆಷ್ಟು ದಿನವೆಲ್ಲ
ತಾಳಿಕೊಳ್ಳುವುದೆಂತು
ಸುರಿದುಬಿಡು ಸಾಕಷ್ಟು
ಕುಣಿಯುವೆವು ನಾವು ಮೈಮರೆತು
ಹಸಿರೆಲ್ಲ ಒಣಗಿ
ಭೂಮಿ ಬಾಯ್ಬಿಟ್ಟಿದೆ
ಕೆರೆ,ಬಾವಿ,ಹಳ್ಳ,ಹೊಳೆ
ಖಾಲಿ ಖಾಲಿ ನೀರಿಲ್ಲದೆ
ಬರುವಾಗ ಬಂದರೇನೇ
ಎಲ್ಲರಿಗೂ ಉಪಯೋಗ
ಯಾಕಿಷ್ಟು ತಡ?
ಧರೆಗಿಳಿದು ಬಿಡು ಬೇಗ ಬೇಗ
ಕಾಲ ಬದಲಾಗಿದೆ ಈಗ
ಅನುಭವಿಸಿ ಎನ್ನುವೆಯಾ
ತಪ್ಪಾಗಿದೆ ನಮ್ಮದು
ಕ್ಷಮಿಸು ಮಹಾರಾಯಾ
ಪ್ರೊ.ವೆಂಕಟೇಶ ಹುಣಶೀಕಟ್ಟಿ
Comments