top of page

ಯಶವಂತ ಚಿತ್ತಾಲ





ಕಾದಂಬರೀಕ್ಷೇತ್ರದ ಪುರುಷೋತ್ತಮ

ಯಶವಂತ ಚಿತ್ತಾಲ


ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಹತ್ತಿರವಿರುವ ಪುಟ್ಟ ಗ್ರಾಮ ಹನೇಹಳ್ಳಿ ಕನ್ನಡ ಸಾಹಿತ್ಯ ಲೋಕಕ್ಕೆ ಎರಡು ಮಹಾನ್ ಪ್ರತಿಭೆಗಳನ್ನು ನೀಡಿದೆ. ಒಬ್ಬರು ಶ್ರೇಷ್ಠ ಕವಿ ಗಂಗಾಧರ ಚಿತ್ತಾಲ , ಇನ್ನೊಬ್ಬರು ಶ್ರೇಷ್ಠ ಕಾದಂಬರಿಕಾರ ಯಶವಂತ ಚಿತ್ತಾಲ. ಅವರು ಅಣ್ಣತಮ್ಮಂದಿರು.

ಯಶವಂತ ವಿಠೋಬಾ ಚಿತ್ತಾಲರು ೧೯೨೮ ಅಗಸ್ಟ್ ಮೂರರಂದು ಜನಿಸಿ ಕುಮಟಾ, ಧಾರವಾಡ, ಮುಂಬಯಿಗಳಲ್ಲಿ ಶಿಕ್ಷಣ ಪಡೆದು ಮುಂಬಯಿಯಲ್ಲಿಯೇ ರಸಾಯನ ವಿಜ್ಞಾನದ ಪಾಲಿಮಾರ್ ತಂತ್ರಜ್ಞಾನ ದಲ್ಲಿ ಪರಿಣತರಾಗಿ ಅಲ್ಲಿಯೇ ಉದ್ಯೋಗಿಗಳಾಗಿ ನೆಲೆಸಿ ೧೯೮೫ ರಲ್ಲಿ ನಿವೃತರಾದರು.

ಬಾಲ್ಯದಲ್ಲೇ ಹಲವು ಕೌಟುಂಬಿಕ ಆಘಾತಗಳನ್ನೆದುರಿಸಿದರು. ಜಲವರ್ಣ ಚಿತ್ರರಚನೆಯಲ್ಲಿ ಆಸಕ್ತಿ ಹೊಂದಿದ್ದ ಅವರು ಅದರಲ್ಲೇ ಹೆಚ್ಚಿನ ತರಬೇತಿ ಪಡೆಯಲೆಂದು ಮುಂಬಯಿಗೆ ಹೋಗಿ ಕಲಾನಿಕೇತನ ಸಂಜೆ ವರ್ಗದಲ್ಲಿ ಹೆಸರು ಹಚ್ಚಿಸಿದವರು. ಮುಂದೆ ಎಂ. ಎನ್. ರಾಯ್ ಅವರ ಪ್ರಭಾವಕ್ಕೊಳಗಾಗಿ ಅವರ ಪಕ್ಷ ಸೇರಿದರು. ಅಧ್ಯಯನಶೀಲರಾಗಿದ್ದ ಚಿತ್ತಾಲರು ಡಾರ್ವಿನ್, ಐನಸ್ಟೈನ್, ಟಾಲಸ್ಟಾಯ್, ಮೊಪಾಸಾ, ಮಾರ್ಕಸ್, ಮಾಸ್ತಿ, ಕುವೆಂಪು ಮೊದಲಾದವರ ಸಾಹಿತ್ಯಾಭ್ಯಾಸದಿಂದ ಪ್ರೇರಿತರಾಗಿ ತಾವೂ ಸಾಹಿತ್ಯರಚನೆಗೆ ತೊಡಗಿದರು.

ಕಾರವಾರದ ಬಾಡದಲ್ಲಿ ಕೆಲಕಾಲ ಶಿಕ್ಷಕರೂ ಆಗಿದ್ದ ಅವರ ಜೀವನದ ಬಹುಭಾಗ ಮುಂಬಯಿಯಲ್ಲಿಯೇ ಕಳೆಯಿತು. ಆದರೆ ಅವರ ಕತೆಕಾದಂಬರಿಗಳು ಹೆಚ್ಚಾಗಿ ಅವರ ಹುಟ್ಟೂರಾದ ಹನೇಹಳ್ಳ ಕೇಂದ್ರಿತವೇ ಆಗಿವೆ. " ಬೊಮ್ಮಿಯ ಹುಲ್ಲು ಹೊರೆ" ಅವರು ಬರೆದ ಮೊದಲ ಕತೆ. " ಆಕಸ್ಮಿಕ" ಅವರ ಮೊದಲ ಕಥಾಸಂಕಲನ. ಅವರನ್ನು ಓದುಗರು ಗುರುತಿಸಿದ್ದು " ಕತೆಯಾದಳು ಹುಡುಗಿ" ಎಂಬ ಸಣ್ಣಕತೆಯಿಂದ. ಶಿಕಾರಿ, ಮೂರು ದಾರಿಗಳು, ಛೇದ, ಪುರುಷೋತ್ತಮ, ಕೇಂದ್ರದ ವೃತ್ತಾಂತ ಮೊದಲಾದ ಕಾದಂಬರಿಗಳ ಮೂಲಕ ಯಶವಂತರು ಯಶೋವಂತರಾದರು. ಕನ್ನಡ ಕಾದಂಬರಿ ಪ್ರಪಂಚದಲ್ಲಿ ಅವರ ಹೆಸರು ಚಿರಸ್ಥಾಯಿಯಾಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಮೊದಲಾದ ಗೌರವಗಳಿಗೆ ಪಾತ್ರರಾದರು. "ಮೂರು ದಾರಿಗಳು" ಕಾದಂಬರಿ ಗಿರೀಶ ಕಾಸರವಳ್ಳಿಯವರ ನಿರ್ದೇಶನದಲ್ಲಿ ಸಿನಿಮಾ ಆಯಿತು. ಆಟ, ಕುಮಟೆಗೆ ಬಂದ ಕಿಂದರಿಜೋಗಿ, ಓಡಿಹೋದ ಮುಟ್ಟಿ ಬಂದ ಮೊದಲಾದವು ಅವರ ಕಥಾ ಸಂಕಲನಗಳು. ಅವರ ಶಿಕಾರಿ ಕಾದಂಬರಿಯನ್ನು ಹಿರಿಯ ವಿಮರ್ಶಕ ಅಮೂರರು ""ಕನ್ನಡದ ಗತ್ತು " ಎಂದು ಬಣ್ಣಿಸಿದ್ದುಂಟು.


- ಎಲ್. ಎಸ್. ಶಾಸ್ತ್ರಿ





48 views0 comments

コメント


bottom of page