ಮುಷ್ಟಿ ಗಾಳಿ
- ಆಲೋಚನೆ
- Mar 30, 2021
- 1 min read
ಬಯಸುತ್ತಿದ್ದೇನೆ ನಾನೊಂದು ಮುಷ್ಟಿ ಗಾಳಿ
ಅದು ಶುದ್ಧವಾಗಿರಬೇಕೆಂಬುದಷ್ಟೇ
ನನ್ನ ಕಳಕಳಿ
ಗೊತ್ತೆನಗೆ ನನ್ನ ಸುತ್ತಮುತ್ತೆಲ್ಲ
ಹರಡಿದೆ ಅದು
ಆದರದು ಪರಿಶುದ್ಧವಲ್ಲ
ಬೆರೆತಿದೆ ಅದರಲ್ಲಿ
ಕೊಳೆತು ನಾರುತಿಹ ರಾಜಕೀಯದ
ಹೊಲಸು ವಾಸನೆ
ಜಾತಿ-ಜಾತಿಗಳ ಕಮಟು
ಉಚ್ಚ ನೀಚ ಮೇಲು ಕೀಳುಗಳ ಘಮಲು
ಅಧಿಕಾರ ದಾಹದ ಹಪಾಹಪಿಯ ನಾತ
ಉಳ್ಳವರ ದೌಲತ್ತಿನ ದರ್ಪ
ರಟ್ಟೆಯಲಿ ಬಲ ಇಲ್ಲದವರ ನಿಟ್ಟುಸಿರ ಶಾಪ
ಇನ್ನೂ ಏನೇನೋ ಅಧಿಕ......
ಊರೂರು ಅಲೆದಿದ್ದೇನೆ ನಾನು
ಸ್ವಚ್ಛ ಗಾಳಿಗಾಗಿ
ಹೋದಲ್ಲೆಲ್ಲ ಇಂಥದ್ದೇ ಹಸಿಹಸಿ ನಾತ
ನನ್ನ ಮೂಗಿಗೆ ಬಡಿಯುತ್ತದೆ
ಇದ್ದರೂ ಇರಬಹುದೇನೋ ಇದು
ನನ್ನ ಮೂಗಿನದೇ ದೋಷ
ಎಂಬ ಅನುಮಾನ ಈಗೀಗ ನನಗೆ
ನನ್ನಜ್ಜ ಉಸಿರಾಡಿದ್ದನಂತೆ
ಶುದ್ಧ ಗಾಳಿಯ
ಅಂತೆಯೇ ನನ್ನಪ್ಪನೂ
ಅಪ್ಪ ಹೇಳುತ್ತಿದ್ದನಾಗ
ನಾ ಚಿಕ್ಕವನಿರುವಾಗ
ಮಗಾ ಮುಂದೆ ನೀರು ಕೆಡಬಹುದು
ಗಾಳಿಯೂ ಕೆಡಬಹುದು ಹುಷಾರು ಎಂದು
ಅಪ್ಪನ ಮಾತು ನಿಜವಾಗಿದೆ ಇಂದು
ಈಗ ವಿಧಿಯಿಲ್ಲ ಇದೇ ಗಾಳಿಯ
ಉಸಿರಾಡಬೇಕು ನಾವು
ಗಾಳಿಯ ಮಲಿನತೆಯ ತೆಗೆಯುವ
ಯಾರಾದರೂ ಹುಟ್ಟಿ ಬರುವವರೆಗೆ ಕಾಯಬೇಕು
ಅಲ್ಲಿಯವರೆಗೆ ಇದೇ ಗಾಳಿಯ ಉಸಿರಾಡಿ ಸಾಯಬೇಕು
ವೆಂಕಟೇಶ ಬೈಲೂರು
ಕುಮಟಾ
Comments