ಅದರ ಎಷ್ಟೋ ವಸಂತ ಕಾಲಗಳನ್ನು ನೋಡಿದ ನನಗೆ ಈ ದಿನ ಅಲ್ಲಲ್ಲಿ ಬಿದ್ದಿರುವ ಅದರ ರೆಂಬೆ ಕೊಂಬೆಗಳನ್ನು, ಈಗಾಗಲೇ ಸಾಗಹಾಕಿರುವ ದಿಮ್ಮಿಯನ್ನು ಮತ್ತು ಬೋಳಾಗಿ ಎಂದಿಗಿಂತ ಮೌನವಾಗಿರುವ ಬುಡವನ್ನು ನೋಡಿ ಸಂಕಟ ಉಕ್ಕಿ ಬಂತು. ಈ ಮಾವಿನ ಮರವನ್ನು ಕುರಿತ ಎರಡು ಮಾತು..
ಈ ಮಾವಿನ ಮರ ನನ್ನ ಅಜ್ಜಿಯವರದ್ದು. ಅಂದರೆ ನನ್ನ ತಾಯಿಯ ತಾಯಿಯವರದ್ದು. ನಾವೆಲ್ಲ ಅಜ್ಜಿಯನ್ನು 'ಅವ್ವಾ' ಎಂದೇ ಕರೆಯುತ್ತಿದ್ದೆವು. ಅವ್ವನ ಊರು, ಅವ್ವನ ಕೈಯ್ಯಂಚಿನ ಮನೆ, ಅವ್ವನ ಸಂಕಟ, ಸಂತೆಯಲ್ಲಿ ತಂದ ಹಸು, ಮೊದಮೊದಲು ಕುಡಿದು ಅವ್ವನನ್ನು ಬಡಿದ ಅಯ್ಯ ಕಾಲಾನಂತರ ಕೊನೆಯ ಐದು ವರ್ಷಕ್ಕೆ ಸಜ್ಜನನಾಗಿದ್ದು, ಅಸಲಿಗೆ ಕಟ್ಟಿದ ಬಡ್ಡಿ, ರಾತ್ರಿ ಮಲಗಿದ ನಂತರದ ಅವರ ಮಾತು, ಕೈಯ್ಯಂಚನ್ನು ಹಾದುಬರುವ ತಿಂಗಳು ಬೆಳಕಿನ ಕೋಲು, ಇವೆಲ್ಲ ನನಗೆ ಸಿಕ್ಕಂತಹ ಅಪರೂಪದ ಸುಖಗಳು. ಇಂತಹ ಹಳ್ಳಿ ಜೀವನದ ಮಾಮೂಲಿ 'ಗಲಾಟೆ'ಗಳ ಜತೆಗೆ ಊರಲ್ಲಿ ಅಲರಾಮಿನಂತೆ ಸರಿಯಾದ ಸಮಯಕ್ಕೆ ಹಾಜರಾಗುವ ಟ್ರೇನು ಮತ್ತು ಪ್ರತೀ ವಸಂತಕ್ಕೆ ಚಿಗುರಿ ರುಚಿಯಾದ ದಪ್ಪ ಹಣ್ಣುಗಳನ್ನು ಕೊಟ್ಟ ಮಾವಿನ ಮರ ತುಸು ವಿಶೇಷ.
ಹುಟ್ಟಿದ ಐದು ತಿಂಗಳಿಂದ ಐದು ವರ್ಷದ ವರೆಗೆ ನಾ ಬೆಳೆದದ್ದು ಅವ್ವನೂರಿನಲ್ಲಿಯೆ. ಏನೊ ಅನಾರೋಗ್ಯದ ಕಾರಣ ಸರಿಯಾಗಿ ಆಹಾರ ಸೇವಿಸದ ನನ್ನನ್ನು ಅವ್ವ ನಾನು ಸಲಹುತ್ತೇನೆ ಎಂದು ಕರೆತಂದು ಅಚ್ಚುಕಟ್ಟಾಗಿ ಸಾಕಿಯೇ ಬಿಟ್ಟಳು. ಆಗೆಲ್ಲ ಮಾವಿನ ಮರ ದನ ಕಟ್ಟಿ ಬಂದ ಅವ್ವನ ತಂಗುದಾಣವಾಗಿತ್ತು. ಅಲ್ಲಿ ಕೂತು ಕಥೆ ಹೇಳಿದಳು. ಆಗಾಗ ನಿದಿರೆ ಮಾಡಿದಳು. ಒಟ್ಟಿನಲ್ಲಿ ಮಾವಿನ ಮರಕ್ಕೆ ಕಾಲುಗಳಿದ್ದಿದ್ದರೆ ಅದು ಹೊಲದಲ್ಲಿ ಖಂಡಿತಾ ಉಳಿಯುತ್ತಿರಲಿಲ್ಲ. ಸೀದಾ ನನ್ನಂತೆಯೇ ಅವ್ವನ ಕೈ ಹಿಡಿದು ಊರ ಗಲ್ಲಿಗಳನ್ನು ಆಸಿ ಕೈಯ್ಯಂಚಿನ ಮನೆಗೇ ಬಂದುಬಿಡುತ್ತಿತ್ತು.
ಐದು ವರ್ಷದ ನಂತರ ಅಪ್ಪ ಸ್ಕೂಲಿಗೆ ಸೇರಿಸುವ ಕಾರಣ ನನ್ನನ್ನು ಕರೆತಂದರೂ ಮುಂದೆ ಬೇಸಿಗೆ ರಜೆ ಮತ್ತು ಮಾರ್ಲಾಮಿ ಹಬ್ಬಗಳಿಗೆ ಅವ್ವನೂರನ್ನು ಅಪ್ಪಿಬಿಡುತ್ತಿದ್ದೆವು.
ಹೀಗೆ ಅವ್ವನೂರಿಗೆ ಹೋದ ತಕ್ಷಣ ಹೊಲಕ್ಕೆ ಓಡುವುದು ನಮ್ಮ ಸಂಸ್ಕೃತಿ. ಅಲ್ಲಿ ನಿಂತು 'ರೈಲು ರಸ್ತೆ' ನೋಡುವುದು, ಟ್ರೇನು ಬಂದರೆ ಅದರ ಬೋಗಿಗಳನ್ನು ಲೆಕ್ಕ ಹಾಕುವುದು, ಹಲಸಿನ ಮರದ ಮಗ್ಗುಲನ್ನು ಸುತ್ತುವುದು, ಹಿತ್ತಲಿನ ಸೀತಾಫಲ, ಹೊಂಗೆಮರ, ಮಲ್ಲಿಗೆ ಗಿಡ- ಇವುಗಳೊಡನೆಯೇ ಬೆಳೆದ ನಮಗೆ ಈಗ ಉರುಳಿಬಿದ್ದ ಮಾವಿನ ಮರದ ಅಳು ಚನ್ನಾಗಿ ಕೇಳಿಸುತ್ತಿದೆ.
ನಾಲ್ಕು ಅಥವಾ ಐದನೇ ತಗರತಿಯಲ್ಲಿರುವಾಗ ಒಮ್ಮೆ ಈ ಮಾವಿನ ಮರದ ದೆಸೆಯಿಂದ ನನಗಾದ ಪ್ರಚಂಡ ಅವಮಾನದ ಬಗ್ಗೆ ಸಣ್ಣದಾಗಿ ಹೇಳಿಬಿಡುತ್ತೇನೆ. ಮಾವಿನ ಹಣ್ಣು ಕೀಳಲು ಅಯ್ಯ ಮರ ಹತ್ತುವಂತೆ ಆಜ್ಞಾಪಿಸಿದರು. ನಾನು ಹೇಗೊ ಏನೊ ಮಾಡಿ ಅನಾವಶ್ಯಕ ಅನಿಸುವಷ್ಟು ಬಿಗಿಯಾಗಿ ತಬ್ಬಿ ಮೈ ತರಚಿಕೊಂಡು ಮರ ಹತ್ತಿದೆ. ಅವರು ಹೇಳುತ್ತಿರುವ ಹಣ್ಣು ಕೊಂಬೆಯ ತುದಿಯಲ್ಲಿತ್ತು. ನನಗೆ ಮರದ ರೆಂಬೆಯ ಮೇಲೆ ಆಗ ಸಲೀಸಾಗಿ ಓಡಾಡುವುದೆಂದರೆ ತುಂಬಾ ಭಯ. ಆ ಹಣ್ಣನ್ನು ಬಹಳ ಶಪಿಸುತ್ತಾ ಒಂದೊಂದೆ ಗೇಣು ಮುಂದೆ ಸಾಗುತ್ತಾ ಹೋದೆ. ಯಾಕೊ ಇಡೀ ಮರ ವಾಲಿದ ಅನುಭವವಾಯ್ತು. ನನ್ನ ಪ್ರಯಾಣ ಸ್ಥಗಿತಗೊಂಡಿತು. ಬಡಿದುಕೊಳ್ಳುತ್ತಿದ್ದ ಸ್ಪೀಡಿಗೆ ಹೃದಯ ಪಂಚರ್ ಆಗುತ್ತಿದೆಯೇನೋ ಅನಿಸಿತು. ಕೆಳಗೆ ನನ್ನನ್ನೇ ತಿನ್ನಲು ಹವಣಿಸುತ್ತಿರುವ ಮೊಸಳೆಯಂತೆ ಅಯ್ಯ ಅವ್ವ ಮತ್ತು ತಂಗಿ ಚೈತ್ರ ನಿಂತು ದುರುದುರು ನೋಡುತ್ತಿದ್ದರು. ನಾನು ಮತ್ತೆ ಮತ್ತೆ ಧೈರ್ಯ ಮಾಡಿ ನೋಡಿದೆ. ಆಗಲಿಲ್ಲ. ತುದಿಗೆ ತಲುಪುವುದಿರಲಿ, ಪ್ರಾರಂಭದಲ್ಲಿಯೇ ಕಾಲು ನಡುಗುತ್ತಿದ್ದವು. ಈ ಒದ್ದಾಟವನ್ನು ಲೋಕಾಭಿರಾಮವಾಗಿ ನೋಡುತ್ತಾ ನಿಂತಿದ್ದ ಅವರು ಯಾಕೊ ಗುಸುಗುಸು ನಗುತ್ತಿರುವುದು ಕೇಳಿಸಿತು. ಅವಮಾನ ಎಂದರೇನು ಅನ್ನುವ ಪ್ರಶ್ನೆಗೆ ಮಾವಿನ ಮರದ ಮೇಲೆ ಉತ್ತರ ಸಿಕ್ಕಿತ್ತು. ಆದರೂ ಪ್ರಯತ್ನ ಮಾತ್ರ ಮಾಡುತ್ತಲೇ ಇದ್ದೆ. ಅಷ್ಟೊತ್ತಿಗೆ ಮೈಯ್ಯಲ್ಲ ಬೆವತು ಅರಳೆಣ್ಣೆ ಸವರಿಕೊಂಡವನಂತೆ ಇದ್ದಲ್ಲಿಂದ ಜಾರುವಂತೆ ಭಾಸವಾಗುತ್ತಿತ್ತು.
ತಂಗಿ ಚೈತ್ರ ಆವತ್ತು ನನ್ನ ಮರ್ಯಾದೆಯನ್ನು ಇನ್ನಷ್ಟು ಪಾತಾಳ ಹಿಡಿಸಿಬಿಟ್ಟಳು. ಸುಮ್ಮನೆ ಅವಳು ನಿಂತಿದ್ದರೆ ನಾನು ಒಂದೊಳ್ಳೆ ಸಮಯ ನೋಡಿ ಅವ್ವ ಅಯ್ಯ ಆಕಡೆ ಹೋದಾಕ್ಷಣ ಇಳಿದು ಅವರಿಗೆ ಕಾಣದಂತೆ ಮನೆಕಡೆ ಓಡುವ ಐಡಿಯಾ ಮಾಡಿದ್ದೆ. ಈ ಐಡಿಯಾ ಸಿದ್ದವಾಗುವಾಗಲೆ ಚೈತ್ರ ಸರಸರ ಮರ ಏರಿದಳು. ಅವ್ವ ಅಯ್ಯ ನನಗೆ ಹೀಗೆ ಹೋಗು ಆ ಕೊಂಬೆ ಹಿಡಿ ಅನ್ನುತ್ತಿದ್ದವರು ಚೈತ್ರಳಿಗೆ 'ಉಷಾರು ಮಗಳೆ' ಅಂದರು. ಆ ಕೊಂಬೆ ಮುರಿಯುವಂತೆ ವಾಲಿದರು ಅವಳು ಸುತಾರಾಂ ಹೆದರುವುದಿರಲಿ ಸಣ್ಣಗೆ ಕಂಪಿಸಲೂ ಇಲ್ಲ. ಸಲೀಸು ಹಣ್ಣಿಗೆ ಕೈ ಹಾಕಿ ಕಿತ್ತು ಅವ್ವ ಅಯ್ಯ ಹಿಡಿದಿದ್ದ ಚೀಲಕ್ಕೆ ಕ್ರಿಕೇಟ್ ಬಾಲ್ ಎಸೆದಂತೆ ಎಸೆದುಬಿಟ್ಟಳು. ನನ್ನನ್ನು 'ಕ್ಯಾರೆ ಬೈಯ್ಯಾ' ಅಂತಲೂ ಅನ್ನದೆ ಅಯ್ಯ ಹೇಳಿದ ಎಲ್ಲಾ ದಿಕ್ಕಿನ ಹಣ್ಣುಗಳನ್ನು ಕೇರೆ ಹಾವು ನುಗ್ಗುವಂತೆ ನುಗ್ಗಿ ಮರ ಪೂರ್ತಿ ಜಾಲಾಡಿಬಿಟ್ಟಳು. ನಾನು ಮೊದಲು ಹೋಗಿ ಕುಳಿತಿದ್ದ ಕೊಂಬೆಯ ಸಂದಿಯಲ್ಲಿಯೇ ಕೊನೆವರೆಗೂ ಕುಳಿತಿದ್ದೆ. ಅವಳು ಒಂದೊಂದು ಹಣ್ಣು ಕಿತ್ತಾಗಲೂ ಚಪ್ಪಾಳೆ ಹೊಡೆಯೋಣ ಅನ್ನಿಸುತ್ತಿತ್ತು. ಈಗಾಗಲೆ ಸಿಕ್ಕಿರುವ ಸನ್ಮಾನಗಳು ಶಬ್ಧಮಾಡಲು ಬಿಡಲಿಲ್ಲ. ಹಣ್ಣು ಕಿತ್ತಾದ ಮೇಲೆ ನಾ ಕುಳಿತಿದ್ದ ರೆಂಬೆಯಾದಿಯಾಗಿ ಅವಳು ಇಳಿದಳು. ಇಳಿಯುವಾಗ ನನ್ನ ನೋಡಿ ಚಿಕ್ಕದಾಗ ನಗುತ್ತಿದ್ದಳು. ನಾನು ಬಹಪರಾಕ್ ಹಾಕುವ ಸ್ಥಾನದಲ್ಲಿ ನಿಂತಿದ್ದರು ಗುರುವಿನಂತೆ 'ಏನೆ ಹಿಂಗ್ ಮರ ಅತ್ತೀಯಲ್ಲೆ' ಅಂದೆ. ಅವಳು ಈ ಮಾತಿಗೂ ಪ್ರತಿಕ್ರಿಯಿಸಲಿಲ್ಲ. ನಾನು ಅವಳು ಇಳಿದ ಬಗೆಯಲ್ಲಿಯೇ ಅವಳಿಗಿಂತ ಜೋಪಾನವಾಗಿ ಇಳಿದೆ. ಆಮೇಲೆ ಅಯ್ಯ ಅವ್ವ ಹಣ್ಣುಗಳ ಸಿಕ್ಕ ಖುಷಿಗೊ ಏನೊ ನನ್ನ ಸಾಧನೆಯ ಬಗ್ಗೆ ಮಾತೇ ಆಡಲಿಲ್ಲ. ನಾನು ಅವರ ಗಮನಕ್ಕೆ ಬರದಂತೆ ಬೇರೆ ಏನೊ ಮಾತನಾಡುತ್ತಾ ಮನೆ ಕಡೆ ಪರಾರಿಯಾಗಿಬಿಟ್ಟೆ.
ಹೀಗೆ ಮಾವಿನ ಮರ ಚಡ್ಡಿ ಹಾಕುತ್ತಿದ್ದ ನಮ್ಮನ್ನು ಮತ್ತು ಈವತ್ತಿನ ನಮ್ಮನ್ನು ಒಂದೇ ಬಗೆಯಾಗಿ ನೋಡಿತ್ತು. ಅದೇ ನೆರಳು. ಅದೇ ಹಣ್ಣು. ಅಲ್ಲಿ ನಿಂತರೆ ಅದೆ 'ರೈಲು ರಸ್ತೆ'.
ಟ್ರೇನಿನಲ್ಲಿ ಮಾರಿದ ಹಣ್ಣುಗಳು ಸಂತೆಯಲ್ಲಿ ದಿನಸೀ ತರುತ್ತಿದ್ದವು. ತವರಿಗೆ ಬಂದ ಮಗಳಿಗೆ 'ಇಟ್ಟುಕೊ' ಎಂದು ಅವ್ವ ಕೊಡುತ್ತಿದ್ದ ಕಾಸು ಮಾವಿನ ಹಣ್ಣಿನದ್ದೆ. ಪ್ರತೀ ವರ್ಷ ಮಳೆಗೆ ಮನೆ ಸೋರದಂತೆ ಕೈಯ್ಯಂಚುಗಳನ್ನು ಕೈಯ್ಯಾಡಿಸಲು ಕೂಲಿಯೂ ಮಾವಿನ ಹಣ್ಣಿನದ್ದೆ. ಹೀಗೆ ನಮ್ಮ ಬದುಕಲ್ಲಿ ವಿಲೀನಗೊಂಡಿದ್ದ ಕಷ್ಟಸುಖಗಳನ್ನು ನೋಡಿದ್ದ ಮರ ಈವತ್ತು ಉರುಳಿಬಿದ್ದಿದೆ.
ಈ ಹಿಂದೆ ಮರದ ನೆರಳಲ್ಲಿ ಕೂತು ಅವ್ವ ಅದೆಷ್ಟು ಸಲ ಅತ್ತಿದ್ದಳೋ ರಾಮರಾಮ. ಅಯ್ಯ ಹೋದಮೇಲೆ ಅವ್ವನಿಗೆ ಸವಾಲುಗಳು ಅತಿಯಾಗಿದ್ದವು. ಹೊಲದ ಹಾದಿಗೆ, ಮನೆಯ ಹಾದಿಗೆ, ಬೇಸಾಯಕ್ಕೆ, ಸಂತೆಯ ಖರ್ಚಿಗೆ, ಆಸ್ಪತ್ರೆಯ ಹಾರೈಕೆಗೆ, ಬಂದು ಹೋಗೊ ನೆಂಟರಿಗೆ, ಮಾರ್ಲಾಮಿಯ ಮೂಳೆ ರಸಕ್ಕೆ ಬಹಳ ಪೇಚಾಡಿದ್ದಳು. ಆಗೆಲ್ಲ ಅವಳನ್ನು 'ಇಲ್ಲಿ ಬಾ ಕೂತುಕೊ' ಅಂದದ್ದು ಇದೇ ಮಾವಿನ ಮರ.
ಹೋದ ವಾರ ನಾನು ಅಲ್ಲಿಗೆ ಹೋಗಿದ್ದೆ. ಹೊಲವನ್ನು ಸುತ್ತುವಾಗ ಮಾವಿನ ಮರವನ್ನೂ ನೋಡಿದ್ದೆ. ಅಲ್ಲಿಂದ ಹುಣಸೂರಿಗೆ ಹೋದೆ. ಅಲ್ಲೆನೇನೊ ಕೆಲಸ ಮುಗಿಸಿ ಮತ್ತೆ ಅವ್ವನೂರಿಗೆ ವಾಪಸ್ಸು ಬಂದು ಮೈಸೂರಿಗೆ ಹೊರಡೋದು ನನ್ನ ಮಾಮೂಲಿ ಅಭ್ಯಾಸ. ಆದರೆ ಮೊನ್ನೆ ಅಲ್ಲಿಗೆ ಹೋದಾಗ ಈ ಮರದ ಜಾಗ ಖಾಲಿಯಾಗಿತ್ತು. 'ಇದೇನವ್ವಾ' ಅಂದೆ. ಕೇವಲ ಹತ್ತು ಸಾವಿರಕ್ಕೆ ಒಂದು ದೊಡ್ಡ ಆಲದ ಮರ, ಈ ಮಾವಿನ ಮರ, ಇನ್ಯಾವುದೊ ಜಾತಿಯ ನಾಲ್ಕು ಮರಗಳನ್ನು ನಮ್ಮ ಮಾವ ಕೊಟ್ಟುಬಿಟ್ಟಿದ್ದರು. ಏಳು ಟ್ರಾಕ್ಟರಿನಷ್ಟು ಲೋಡು ತುಂಬಿಕೊಂಡು ಮರಗಳನ್ನು ಕೊಂಡಿದ್ದವ ಅಲ್ಲಿಂದ ಹೊರಟು ಹೋಗಿದ್ದ. ನನಗೆ ಇನ್ನು ಮಾತನಾಡಿ ಪ್ರಯೋಜನವಿಲ್ಲ ಅನಿಸಿತು. ಆದರೂ ನನಗೊಂದು ಮಾತು ತಿಳಿಸಿದ್ದರೆ..
- ಚಂದ್ರು ಎಂ ಹುಣಸೂರು
Commenti