ಹಳದಿ ಕುಂಕುಮಗಳು ಮೇಳೈಸುತಲಿ
ಮುತ್ತೈದೆಯ ಹಣೆಯ ಅಲಂಕರಿಸಲಿ
ನಾಡ ದೇವಿಯ ಚರಣ ಕಮಲದಿ
ಹೊನ್ನ ಬೇಡಲಿಲ್ಲ,ಕನ್ನ ಹಾಕಲಿಲ್ಲ
ರಕ್ತದೊಕುಳಿಯಾಡುವ ಮೊದಲು
ಕನ್ನಡದ ಡಂಗುರವ ಬಾರಿಸುತಲಿ
ಕನ್ನಡಿಗರ ನರನಾಡಿಗಳಲಿ ಸಂಚಲಿಸಿ
ಹೃದಯ ವೀಣೆಯ ಮೀಟಬೇಕಿದೆ
ಕನ್ನಡ ಕಸ್ತೂರಿಯ ಸೊಗಡಿನ ಕಂಪನು
ಮರೆತವರ ಎದೆಯಲಿ ತುಂಬಬೇಕಿದೆ
ನಾಡು ನುಡಿಗಾಗಿ ಪ್ರಾಣ ತೆತ್ತವರೆಷ್ಟೋ
ಅದರ ಬೆಲೆಯ ಮರೆತವರೆಷ್ಟೋ
ಎಂಬುದನು ಗುಣಿಸಿ ಭಾಗಿಸಬೇಕಿದೆ
ಕುಡಿವ ನೀರ ಕಾವೇರಿಯಾದರೂ
ಮೆಟ್ಟುವ ನೆಲ ಕರುನಾಡಾದರೂ
ನುಡಿಯಲಿಲ್ಲ ಮನವು ಕನ್ನಡವ
ಬರೆಯಲೊಪ್ಪಲಿಲ್ಲ ಕನ್ನಡಾಕ್ಷರವ
ಎದೆಗಪ್ಪಿಕೊಳ್ಳಲಿಲ್ಲ ತಾಯ್ನಾಡ ಗರಿಮೆ
ಕಾಟಾಚಾರಕ್ಕೆ ಕನ್ನಡದ ಮಹಿಮೆ
ಸರಕಾರಿ ಶಾಲೆಗಳ ಬರಿದು ಮಾಡಿ
ಕಂಗ್ಲೀಷ ಬೆನ್ನುಹತ್ತಿದವರ ಮಂಥನ
ಕರುನಾಡಲ್ಲಿ ಕನ್ನಡಿಗರಿಗಿಲ್ಲ ಸ್ಥಾನ
ಮಾತೃಭಾಷೆಯ ಬಿಟ್ಟು ಎಲ್ಲವೂ ಲಭ್ಯ
ಇಂದಿನ ಕ್ಷಣಕೆ ಕನ್ನಡದ ಮಾರ್ದನಿ ಸಭ್ಯ
ಹಾರತೂರಾಯಿಗಳ ಶೃಂಗಾರದಲಿ
ಮಿಂಚುತಿಹುದು ಮೂಕವೇದನೆಯಲಿ
ತಾಯ್ ಭುವನೇಶ್ವರಿಯ ಭೂಪಟವು
ಮೊಳಗಬೇಕಿದೆ ಕನ್ನಡದ ಕಹಳೆಯು
ಕನ್ನಡದ ಉಳಿವಿಗೆ ಶ್ರಮಿಸುವೆ ಎಂದು
ಆಣೆ,ಪ್ರಮಾಣಗಳ ಸುರಿಮಳೆಗೈವವರು
ಕಿಕ್ಕಿರಿದ ಜನರ ಮುಂದೆ ಚಪ್ಪಾಳೆ ಗಿಟ್ಟಿಸಿದ್ದು
ವಿಚಿತ್ರವಾದರೂ ಸತ್ಯದ ಪ್ರತಿಬಿಂಬವದು
ಕನ್ನಡದ ತೇರು ಬೀದಿಗಳಲಿ ವಿಜೃಂಭಿಸುತ
ಮೌನದ ಮೆರವಣಿಗೆಯಲಿ ಸಾಗುತಿದೆ 'ಕನ್ನಡ'
ಗತವೈಭವಗಳ ಸರಮಾಲೆಯ ಮೆಲುಕು ಹಾಕುತ
ಸುವರ್ಣಾಕ್ಷರದ ಪಂಜರದಿ ಬಂಧಿತವಾಗುತ.
-ಶಿವಲೀಲಾ ಹುಣಸಗಿ ಯಲ್ಲಾಪುರ.
Super kànnadati kavàna
ನಿಜ ಗೆಳತಿ ಕನ್ನಡದ ಕಹಳೆ ಕನ್ನಡ ರಾಜ್ಯೋತ್ಸವ ದಿನ ಮಾತ್ರ ನೀನು ಹೇಳಿದಂತೆ ಮೌನ ಮೆರವಣಿಗೆ ಎಲಿಯವರೆಗೆ ಕನ್ನಡಾಭಿಮಾನ ಬರುವುದಿಲ್ಲವೋ ಅಲಿಯವರೆಗೆ ಕನ್ನಡ ಭಾಷೆಯ ಉಳಿವು ಬಳಕೆ ಅಸಾಧ್ಯ ತುಂಬಾ ಅರ್ಥಪೂರ್ಣವಾದ ಜಾಗೃತಿ ಮೂಡಿಸುವ ಉತ್ತಮ ಸಂದೇಶ ಅಭಿನಂದನೆಗಳು ಗೆಳತಿ ನಿನ್ನ ಪಯಣ ಹೀಗೆ ಸಾಗಲಿ ಎಂದು ಹಾರೈಸುತೇನೆ
Kanndigarau navu ennuva hemme super .....kavite