top of page

ಮೂರನೇ ಕಿಟಕಿ

ಇಳಿ ಸಂಜೆಯ

ಕೆಂಪು ಮಣ್ಣಿನ ರಸ್ತೆ...

ಎಳೆಯ ಹುಡುಗ ಹುಡುಗಿಯರು

ಕೈ ಕೈ ಹಿಡಿದು ಮೆಲು ನಗುತ್ತ

ಸುಳಿದಾಡುತ್ತಿರುವಾಗ

ಒಡೆದ ಹಿಮ್ಮಡಿಯ ಸಿಪ್ಪೆ ಕೀಳುತ್ತ ನಾನು

ಮೊದಲ ಕರುಮಾಡದ

ಮೂರನೇ ಕಿಟಕಿಯ

ಎರಡನೇ ಗೂಟದ ಹತ್ತಿರ ಕಣ್ಣಿಟ್ಟು

ಬಗ್ಗಿ ಅವರನ್ನು ನೋಡುತ್ತಿದ್ದೇನೆ

ಹಳೆಯ ಇಟ್ಟಂಗಿಯ ಕಟ್ಟಡವದು

ಹಿಕ್ಕೆಯಿಂದ ಹುಟ್ಟಿದ ಆಲದ ಸಸಿಯೊಂದು

ಹೆಮ್ಮರವಾಗಿ

ಕಚ್ಚಿಹಿಡಿದಿದೆ ಮೂರೂ ದಿಕ್ಕಿನಿಂದ ಗೋಡೆಯನ್ನು

ಸದಾ ಸದ್ದಿನಲ್ಲಿರುತ್ತವೆ

ಸಾವಿರಾರು ಹಕ್ಕಿಗಳು, ಅಳಿಲುಗಳು

ಒಮ್ಮೊಮ್ಮೆ ಮಂಗಗಳು..

ಬಿಳಲುಗಳಿಗೆ ಜೋತುಬಿದ್ದು

ಕಿಲಕಿಲ ನಗುವ ಪುಟ್ಟ ಹುಡುಗರು

ಆಗಾಗ

ಒಂದೆರಡು ಪ್ರೇಮಿಗಳು ಆರಂಭದವರು

ಏನನ್ನೂ ಹೇಳದೆಯೇ ಅವನ ಎದೆಗೊರಗುವ

ಅವಳು..

ಏನನ್ನೂ ಕೇಳದೆಯೇ

ಅವಳನ್ನಪ್ಪಿಕೊಂಡು ಹಣೆಗೆ ಮುದ್ದಿಟ್ಟು

ಕೂದಲಲ್ಲಿ ಬೆರಳಾಡಿಸುವ ಅವನು..

ಇದಕ್ಕೂ ಮುಂದೆ ಏನೂ ಇರಬಾರದಿತ್ತು

ಎಲ್ಲವೂ ಇಲ್ಲಿಗೇ ಮುಗಿದುಹೋದರೆ

ಅದೆಷ್ಟು ಚಂದವಿತ್ತು

ಅನ್ನಿಸುವ ಹಾಗೆ ಅವರಿಬ್ಬರು

ಪಾವಟಿಗೆಗಳ ಮೇಲೆ ಸದ್ದಾಯಿತೇ..?

ಇಲ್ಲ.. ಯಾರೂ ಹತ್ತಿಬರುತ್ತಿಲ್ಲ

ಬರಬಾರದು ಕೂಡ ಇಲ್ಲಿಗೆ

ಒಂಟಿ ಗೂಬೆ ನಾನು

ಇನ್ನೂ ಘೂಕ್ ಘೂಕ್ ಎಂಬುದನ್ನು

ಕಲಿಯದ ಬೇಶಿಸ್ತು ಮೌನಿ

ಕೆಂಪುಮೆಣಸಿನ ತೊಟ್ಟು ತೆಗೆದು

ಮೀನು ಕತ್ತರಿಸಿ

ಸಾರು ಮಾಡಿಟ್ಟು ಬಿಡುವ ಕೆಲಸ ಕಳೆದ ಶತಮಾನದಲ್ಲೆಲ್ಲೋ ಮುಗಿದೇ ಹೋಗಿದೆ

ಆದರೂ ನಿನ್ನೆ ಮೊನ್ನೆಯಂತಿದೆ

ಎರಡು ಚಮಚ ಎಳನೀರು

ಒಂದು ಬಟ್ಟಲು ರವೆಗಂಜಿಯ ಸಮಯದಲ್ಲಿ

ತುರಿಮಣೆಯನ್ನೋ ಮೀನುಪೇಟೆಯನ್ನೋ

ಧ್ಯಾನಿಸುತ್ತಿರುತ್ತೇನೆ ಮುಂಜಾನೆ ಎದ್ದು

ಅರೆಮಳ್ಳಿ ನಾನು

ಯಾರ ಮೇಲೆಯೋ ಸೇಡು

ಇದ್ದಿರಬಹುದೆ ನನಗೆ..?

ಸ್ನಾನ ಮಾಡದೇ ಬಟ್ಟೆ ಬದಲಾಯಿಸದೇ

ಕೂದಲು ಬಾಚದೆಯೂ

ಇದ್ದು ಬಿಡುತ್ತೇನೆ ವಾರಗಟ್ಟಲೆ

ಒಳಗೋ ಹೊರಗೋ ಎಂಬ ಪರಿವೆಯಿಲ್ಲದೆ

ಕ್ಯಾಕರಿಸಿ ಉಗಿದುಬಿಡುತ್ತೇನೆ

ಪಕ್ಕದಲ್ಲೇ

ದಯಾಮಯನಾದ ತಂದೆಯೇ..!

"ನಿನಗೂ ನಿನ್ನ ಕವಿತೆಗೂ ಎಷ್ಟೊಂದು ಅಂತರ"

ಎಂಬ ಅವನು ದೂರದಲ್ಲಿದ್ದಾನೆ

ಇಂದಿನ ಸಂಜೆಯೂ ಬೇಸರದಲ್ಲಿದ್ದಾನೆಯೇ...?

ಅವನೆಂದರೆ ಸಾಯುವ ಗೆಳತಿಯರು

ಹೇಲುಚ್ಚೆಯ ಸಮಯದಲ್ಲಿ

ಕಾಣೆಯಾದ ಮೇಲಿಂದ

ವೈರಾಗ್ಯ ಅವನಿಗೆ

ನನ್ನೊಬ್ಬಳನ್ನು ಬಿಟ್ಟು ಯಾರಲ್ಲೂ

ಅಳುವ ಮನಸ್ಸಿಲ್ಲ

ಹುಚ್ಚನಿರಬಹುದೆ ಅವನೂ..?

ಅವನಿಗಾಗಿ ನಾನು ಇದುವರೆಗೆ

ಏನನ್ನೂ ಮಾಡಿದ್ದಿಲ್ಲ

ಹೀಗೆಷ್ಟು ಸಂಜೆಗಳು ಕಳೆದವೋ

ಒರಗಿ ಒರಗಿ ಒರಲೆಯೂ ತಿಂದು

ಕಿಟಕಿಗಳು ಮುಗಿದೇ ಹೋದವೋ

ಗಾರೆ ಇಟ್ಟಂಗಿಗಳು ನೆಲಸಮವಾಗಿ ಹೋದವೋ

ಹತ್ತದೆಯೂ ಇಳಿಯದೆಯೂ

ಪಾವಟಿಗೆಗಳು ಕಳಚಿ ಬಿದ್ದುಹೋದವೋ

ಎಂದೆಲ್ಲ ಲೆಕ್ಕ ಮಾಡಿಕೊಂಡು

ದಿನ ಎಣಿಸುವ ಹೊತ್ತಿನಲ್ಲಿ

ವಟವೃಕ್ಷವಿದು ಹೀಗೆ

ಹಸನಾಗಿ ಹರಡಿ ಆಪಾದಮಸ್ತಕ

ಹಣ್ಣುಬಿಟ್ಟು ಕಿಟಕಿಯೊಳಗೆ ಕೈ ತೂರಿದೆ

ಬಿಡಿಸಿ ಒಂದೆರಡು ತಿನ್ನು ಎಂಬಂತೆ

ಉಗುಳಿದ ಬೀಜ ಹುಟ್ಟಿ

ಇರುವೆಂಭತ್ತು ಕೋಟಿ ಜೀವಜಂತುಗಳ

ಹಗಲು ಹನ್ನೆರಡು ತಾಸು ಹದಪ್ರೇಮಿಗಳ

ತಾವಾದ ಹಾಗೆ

ಬೆಳಗುಜಾವಕ್ಕೊಂದು ಕನಸು

ಎದ್ದು ನೋಡಿದರೆ

ಅದೇ ಮಂಗೋಲಿಯದ ಒಬ್ಬ ರಾಜ

ನಿದ್ದನಂತಲ್ಲ ಹಕ್ಕಿಯ ಹಾಡು ತನಗೆ ಬೇಕೇ

ಬೇಕು ಎಂದು ಹಕ್ಕಿ,ಗೂಡು,ಕೊಂಬೆ,ಮರ,ಮಣ್ಣು

ಊರು ಎಲ್ಲವನ್ನು ವಶಪಡಿಸಿಕೊಂಡು

ಮನೆಗೇ ಹೋಗಲಿಕ್ಕಾಗದೇ ಅಲೆಯುತ್ತಿದ್ದವನು..

ಅವನು ನಿಂತಿದ್ದ

ಹಾಡು ನಿಲ್ಲಿಸಿದ್ದ ಹಕ್ಕಿಗೊಂದು

ಊರೂ ಮಣ್ಣೂ ಮರವೂ ಕೊಂಬೆಯೂ ಗೂಡೂ ಬೇಕಾಗಿ ಹೋಗಿ

ಉಗುಳುವ ಬೀಜಕ್ಕೆ ಹಿಡಿಮಣ್ಣು

ಹಿಡಿದುಕೊಂಡು ಅದೇ ಕಿಟಕಿಯ ಕೆಳಗೆ ಕಾದಿದ್ದ.

-ರೇಣುಕಾ ರಮಾನಂದ


ವೃತ್ತಿಯಲ್ಲಿ ಶಿಕ್ಷಕಿಯಾದ ರೇಣುಕಾ ರಮಾನಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶೆಟಗೇರಿಯವರು. ಅವರ ಮೊದಲ ಕವಿತಾ ಸಂಕಲನ 'ಮೀನುಪೇಟೆಯ ತಿರುವು' ಇದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಮುಂಬೈನ ಶ್ರೀಮತಿ ಸುಶೀಲಾ ಶೆಟ್ಟಿ ಕಾವ್ಯ ಹಸ್ತಪ್ರತಿ ಪ್ರಶಸ್ತಿ, ಗುಲ್ಬರ್ಗಾ ಸೇಡಂನ ಮಾತೋಶ್ರೀ 'ಅಮ್ಮ' ಪ್ರಶಸ್ತಿ, ಹಾಸನದ ಮಾಣಿಕ್ಯ ಪ್ರಕಾಶನದ ಕಾವ್ಯಮಾಣಿಕ್ಯ ರಾಜ್ಯಪ್ರಶಸ್ತಿ, ಹರಿಹರದ ಸಾಹಿತ್ಯ ಸಂಗಮದ ಹರಿಹರಶ್ರೀ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಕೆ ವಿ ರತ್ನಮ್ಮ ದತ್ತಿ ಪ್ರಶಸ್ತಿಗಳು ದೊರೆತಿವೆ. ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘದಿಂದ೨೦೧೪ ಮತ್ತು ೨೦೧೫ ನೇ ಸಾಲಿನಲ್ಲಿ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಪ್ರಶಸ್ತಿ, ೨೦೧೪ ರ ಸಂಕ್ರಮಣ ಕಾವ್ಯ ಬಹುಮಾನ, ತುಷಾರ ಮಾಸಪತ್ರಿಕೆಯ ೨೦೧೯ ಸಾಹಿತ್ಯಾಂಜಲಿ ಕ್ಯಾಲಿಫೋರ್ನಿಯಾ ಕಥಾಸ್ಪರ್ಧೆ ಬಹುಮಾನ ಹಾಗೂ ಮುಂಬೈ ಗೋಕುಲವಾಣಿ ಪತ್ರಿಕೆ ಏರ್ಪಡಿಸಿದ ೨೦೨೦ ರ ಕಥಾಸ್ಪರ್ಧೆಯ ದ್ವಿತೀಯ ಬಹುಮಾನವನ್ನು ರೇಣುಕಾ ರಮಾನಂದರು ಪಡೆದಿದ್ದಾರೆ. ಹಿಗೆ ಕನ್ನಡದ ಭರವಸೆಯ ಬರಹಗಾರ್ತಿಯಾಗಿ ರೂಪುಗೊಂಡಿದ್ದಾರೆ - ಸಂಪಾದಕ

161 views2 comments
bottom of page