top of page

ಮ್ಯಾಜಿಕ್ ಬಾಬಾನಿಗೆ ಮುತ್ತು



ಮ್ಯಾಜಿಕ್ ಲೋಕಕೆ ಹೇಗೊ ಏನೊ

ಮ್ಯಾಜಿಕ್ ಆಗಿಯೇ ಬಿದ್ದೆ

ಮ್ಯಾಜಿಕ್ ಬಾಬಾನ ಜೋಳಿಗೆ ಒಳಗೆ

ನಿದ್ದೆ ಮಾಡಿ ಎದ್ದೆ

ಮ್ಯಾಜಿಕ್ ಅಂದರೆ ಮ್ಯಾಜಿಕಪ್ಪ

ಎಷ್ಟು ಸಣ್ಣ ನಾನು

ಮ್ಯಾಜಿಕ್ ಬಾಬನ ಗೊಂಬೆ ಹಾಗೆ

ಆದೆನು ಒಂದು ಗೇಣು

ಮ್ಯಾಜಿಕ್ ಬಾಬಾ ಹೊರಟಿದ್ದೆಲ್ಲಿಗೆ

ಗಡ್ಡ ನೀವುತ ಈಗ

ರಸ್ತೆ ಬದಿಯಲಿ ಕುಳಿತೇ ಬಿಟ್ಟ

ಅಲ್ಲೇ ಅವನ ಜಾಗ

ಕಣ್ಣ ತಿರುಗಿಸಿ ಝುಂಮಂ ಎಂದು

ಕಾಗೆಯ ಕರೆದೇ ಬಿಟ್ಟ

ಕಾಗೆಯ ಹಿಡಿದು ಕಣ್ಣನು ಮುಚ್ಚಿ

ಮೇಲಕೆ ನನ್ನನು ಇಟ್ಟ

ಕಾಗೆಯ ರೆಕ್ಕೆ ಬೆಳೆಯಿತು ಹೇಗೆ

ಉದ್ದ ಉದ್ದ ಉದ್ದ

ರೆಕ್ಕೆಯ ಮೇಲೆ ನಾಕುಳಿತಿದ್ದೆ

ಮಾಡದೆ ಏನೂ ಸದ್ದ

ಮೋಡವ ಚದುರಿಸಿ ಕಾಗೆಯ ರೆಕ್ಕೆ

ಚಂದಕೆ ಹಾರುತಲಿತ್ತು

ಎಲ್ಲೆಡೆ ಮೋಡ ರಾಶಿ ರಾಶಿ

ತುಂಬಾ ದಿಗಿಲಾಗಿತ್ತು

ಸೂರ್ಯ ಚಂದ್ರ ತಲುಪಿಸ ಬೇಕಾ

ಹಿಡಿಯೋಣವೆ ನಕ್ಷತ್ರ

ಎನ್ನುತ ಕಾಗೆ ಹೊರಟಿತು ದೂರ

ಬಾನಿನ ತುಂಬಾ ಚಿತ್ರ

ಎಲ್ಲೋ ಸುತ್ತಿ ಎಲ್ಲೋ ಸಾಗಿ

ಬಂದಿತು ತೋಟಕೆ ಕಾಗೆ

ಮರದಲ್ಲೆಲ್ಲಾ ಹಣ್ಣೇ ಹಣ್ಣು

ಮಕ್ಕಳೇ ಇಲ್ಲದ ಜಾಗೆ

ಕೊಯ್ಯುವರಿಲ್ಲ ತಿನ್ನುವರಿಲ್ಲ

ಕೊಳೆತಿದೆ ಹಣ್ಣಿನ ರಾಶಿ

ಒಬ್ಬನೆ ಒಬ್ಬನು ಗೆಳೆಯನು ಇದ್ದರು

ಆಗುವುದೆಷ್ಟು ಖುಶಿ

ಬುಟ್ಟಿಯ ತುಂಬಾ ಹಣ್ಣನು ತುಂಬಿ

ಹಾರಲು ಹೊರಟಿತು ಕಾಗೆ

ಅಯ್ಯೋ ನನ್ನ ಬಿಡಬೇಡಪ್ಪ

ಗೆಳೆಯರೇ ಇಲ್ಲದ ಜಾಗೆ

ಬುಟ್ಟಿಯ ಒಳಗೇ ಹಾಕಿತು ನನ್ನ

ಬಂದಿತು ಬಾಬನ ಬಳಿಗೆ

ಗಾಳಿಯ ಹೊಡೆತಕೆ ಸಿಕ್ಕಿದ ನಾನು

ನಡುಗುತಲಿದ್ದೆ ಚಳಿಗೆ

ಮತ್ತೆ ಹೊರಟಿತು ಝುಂಮಂ ಮಂತ್ರ

ಕಪ್ಪಲಿ ಚಹವನು ಕುಡಿದ

ತಿರುಗಿಸಿ ತಿರುಗಿಸಿ ಏನೋಮಾಡಿದ

ಬಿಸಿ ಬಿಸಿ ಹಾಲನು ಹಿಡಿದ

ಹಾಲನು ಕುಡಿದು ಅಮ್ಮನ ನೆನಪಲಿ

ಮನೆಕಡೆ ಹೊರಟೆನು ಆಗ

ಕೈಯನು ಚಾಚಿ ಪಟ್ಟನೆ ಹಿಡಿದ

ಸೇರಿದೆ ಜೋಳಿಗೆ ಈಗ

ಜೋಳಿಗೆ ಸಂದಲಿ ಇಣುಕಿದೆ ನಾನು

ಮನೆಕಡೆ ಹೋಗುವ ಆಸೆ

ಮೇಲಕೆ ನೋಡಲು ಹಾವಿನ ಹಾಗೇ

ಕಾಣುತಲಿತ್ತು ಮೀಸೆ

ಜೋಳಿಗೆ ಸರಿಸಿ ಪಕ್ಕನೆ ಜಿಗಿದು

ತಪ್ಪಿಸಿ ಕೊಳ್ಳುವ ಚಿಂತೆ

ಹ್ಹ... ಹ್ಹ... ಎಂದು ನಕ್ಕನು ಬಾಬಾ

ಹೆದರಿ ನಡುಗಿ ಕುಂತೆ

ಬಾಯನು ತೆರೆದು ಮೂಗನು ಅರಳಿಸಿ

ಬಾಬಾ ಬಗ್ಗಿದ ಕೆಳಗೆ

ಅಯ್ಯೋ ಈಗ ಸತ್ತೆನು ನಾನು

ಎನ್ನುತ ಹೆದರಿದೆ ಒಳಗೆ

ಕೈಯಲಿ ಹಿಡಿದು ಮೇಲಕೆ ಎತ್ತಿದ

ಕಣ್ಣದು ಫಳಗುಡುತಿತ್ತು

ಏನೇ ಆಗಲಿ ಎನ್ನುತ ನಾನು

ಕೊಟ್ಟೆನು ಅವನಿಗೆ ಮುತ್ತು

ಮೀಸೆ ಮೂಗು ಎಲ್ಲಾ ನಕ್ಕಿತು

ನೆತ್ತಿಯ ಸವರಿ ಇಟ್ಟ

ಮೊದಲಿನ ಹಾಗೇ ಮಾಡಿದ ನನ್ನ

ಮನೆಗೆ ಹೋಗಲು ಬಿಟ್ಟ.

-ತಮ್ಮಣ್ಣ ಬೀಗಾರ.

61 views0 comments

Comentários


bottom of page