top of page

ಮಾಮಲೇದಾರರ ಮೀಸೆ ಮತ್ತು ಪ್ರಜಾಪ್ರಭುತ್ವ

ಪ್ರಜಾಫ್ರಭುತ್ವದಲ್ಲಿ ಪ್ರಭುಗಳೇ ದಣಿಗಳು; ಪ್ರಜೆಗಳಿಂದ ಚುನಾಯಿತರಾದ ಪ್ರತಿನಿಧಿಗಳು ಅವರ ಸೇವಕರು; ಸರಕಾರಿ ಖುರ್ಚಿಯ ಮೇಲೆ ಕುಳಿತು, ಅಧಿಕಾರ ಚಲಾಯಿಸುವ ನೌಕರರು ಪ್ರಜಾಕಿಂಕರರು – ಈ ಮಾತು ಇಂದು ಕೇವಲ ಭಾಷಣದ ಆದರ್ಶವಾಗಿ ಜೀವ ಹಿಡಿದು ನಿಂತಿದೆ.


ಹೀಗಿದ್ದಾಗಲೂ ಈ ಮಾತನ್ನು ಗಟ್ಟಿಯಾಗಿ ನಂಬಿ ತಮ್ಮ ಬದುಕಿನಲ್ಲಿ ಅದನ್ನು ಸಾಧ್ಯವಾಗಿಸುವ ಛಲ ಜೊತೆಗೆ ತಾಕತ್ತು ನಮ್ಮೂರ ಪಟೇಲರಾದ ಸುಬ್ರಾಯ ಭಟ್ಟರಿಗೆತ್ತೆಂದರೆ ನಿಮಗೆ ಅವರ ಪರಿಚಯ ಕಿರಿದಾಗಿಯಾದರೂ ಚುರುಕಾಗಿ ಆದೀತೆಂಬುದು ನನ್ನ ಭಾವನೆ.


ಆಜಾನುಬಾಹು ವ್ಯಕ್ತಿತ್ವ, ಗೌರವವರ್ಣ, ದುಂಡನೆಯ ಉಬ್ಬಿದ ಮುಖ, ತಲೆಯ ಮೇಲೆ ಕೂದಲಿದೆಯೋ ಇಲ್ಲವೋ ನೀವು ಹೇಳಲಾರಿರಿ. ಯಾಕೆಂದರೆ ಸದಾ ತಲೆಯ ಮೆಲೆ ವಿರಾಜಿಸುವ ರುಮಾಲು- ನಮ್ಮ ಕಡೆಯ ಭಾಷೆಯಲ್ಲಿ ಹೇಳುವದಾದರೆ ‘ಚಂಡಿ’ - ಸುತ್ತಿಕೊಳ್ಳುತ್ತಿದ್ದರು. ಆರು ಮೊಳದ ಬಿಳೆ ಪಂಜೆ, ನೆಹರು ಜುಬ್ಬ- ಇವಿಷ್ಟು ಧರಿಸಿದ ವ್ಯಕ್ತಿ ನಮ್ಮೂರ ರಸ್ತೆಯಲ್ಲಿ ಹೋಗುತ್ತಿದ್ದರೆ ಇವರೇ ನಮ್ಮೂರ ಪಟೇಲರೆಂದು ನೀವು ಧಾರಾಳವಾಗಿ ಹೇಳಬಹುದು.


ಇದು ಪಟೇಲರ ಬಾಹ್ಯ ವ್ಯಕ್ತಿತ್ವವಾದರೆ ಇದಕ್ಕೂ ಭಿನ್ನವಾದದ್ದು ಅವರ ಆಂತರಿಕ ವ್ಯಕ್ತಿತ್ವ. ಭಟ್ಟರದು ಅತ್ಯಂತ ಹಾಸ್ಯ ಪ್ರವೃತ್ತಿ. ಅವರು ಆಡುವ ಮಾತುಗಳು, ನಡೆಸುವ ಪ್ರಾಯೋಗಿಕ ಹಾಸ್ಯಗಳು ಅವರನ್ನು ಅತ್ಯಂತ ಜನಪ್ರಿಯ ವ್ಯಕ್ತಿಯನ್ನಾಗಿ ರೂಪಿಸಿತ್ತು ಒಮ್ಮೆ ಅವರನ್ನು ನೀವು ಸಂದರ್ಶಸಿದರೆ ಸಾಕು, ನಿಮ್ಮ ಹೃದಯದಲ್ಲಿ ಅವರು ನಿಮಗೆ ಗೊತ್ತಿಲ್ಲದೆಯೆ ಪ್ರತಿಷ್ಠಾಪಿಸಿಯೇ ಬಿಡುತ್ತಾರೆ. ಹಾಸ್ಯ ಅವರ ಕೈಯಲ್ಲಿ ತನ್ನಿಂದ ತಾನೆ ಹೊಸ ಅರ್ಥ, ಆಯಾಮಗಳನ್ನು ಹೊಂದುತ್ತಿತ್ತು ಎಂದರೆ ಕಡಿಮೆ ಹೇಳಿದಂತೆಯೇ ಸರಿ.


ಸುಭ್ರಾಯ ಭಟ್ಟರು ಕೇವಲ ಊರಿನಲ್ಲಷ್ಟೇ ದೊಡ್ಡ ಜನವಲ್ಲ. ಪಕ್ಕದ ಊರುಗಳಷ್ಟೇ ಅಲ್ಲ ಇಡೀ ಹೊನ್ನಾವರ ತಾಲೂಕಿಗೆ ಚಿರಪರಿಚಿತವಾದ ವ್ಯಕ್ತಿತ್ವ ಅವರದಾಗಿತ್ತು. ಪಟೇಲ ಭಟ್ಟರೆಂದರೆ ಸಾಕು, ತಾಲೂಕ ಕಚೇರಿಯ ಜವಾನನಿಂದ ಹಿಡಿದು ಮಾಮಲೇದಾರರವರೆಗೆ ಎಲ್ಲರೂ ‘ನಮ್ಮ ಪಟೇಲಭಟ್ಟರಲ್ಲವಾ ?’ ಎಂದು ಹೇಳುತ್ತಾರೆ. ಭಟ್ಟರು ತಾಲೂಕು ಕಚೇರಿಗೆ ಬಂದರೆಂದರೆ ಸಾಕು ”ಬನ್ನಿ ಪಟೇಲ ಭಟ್ಟರೆ” ಎಂದು ಕಾರಕೂನರು ಎದುರಿಗಿನ ಖುರ್ಚಿ ತೋರಿಸುತ್ತಾರೆ. ಹಾಗೆಯೇ ಪಟೇಲರ ಕವಳದ ಬೊಕ್ಕಸದಿಂದ ಕವಳ ಪಡೆದು ಜಗಿಯುತ್ತ ಅವರು ಮಾಡುವ ಜೋಕುಗಳಿಗೆಲ್ಲ ಬಿದ್ದು ಬಿದ್ದು ನಗುತ್ತಾರೆ. ಅದೇ ರೀತಿ ಮಾಮಲೇದಾರರೂ ಸಹ ಪಟೇಲರನ್ನು ಮುಂದೆ ಕೂರಿಸಿಕೊಂಡು ಅದು ಇದು ಮಾತನಾಡುತ್ತಾ ಕವಳ ಜಗಿಯುತ್ತಾ ಪಟೇಲರ ರಂಜನೆಯ ಮಾತುಗಳಲ್ಲಿ ಹೊತ್ತು ಹೋದುದೇ ಮರೆಯುತ್ತಾರೆ. ತಾಲೂಕು ಕಚೇರಿಗೆ ಬಂದ ಯಾವುದೇ ಮಾಮಲೇದಾರರಿರಲಿ ಪಟೇಲ ಭಟ್ಟರಿಗೆ ಮರ್ಯಾದೆ ನೀಡಿ ನಡೆದುಕೊಳ್ಳುತ್ತಿದ್ದರು.


ಆದರೆ ಒಮ್ಮೆ ತಾಲೂಕ ಕಚೇರಿಗೆ ಹೊಸ ಮಾಮಲೇದಾರರು ವರ್ಗವಾಗಿ ಬಂದಿದ್ದರು. ಅವರು ಅತ್ಯಂತ ಗರ್ವಿಷ್ಠರೆಂದು ಊರಿನ ಮಂದಿ ಹೇಳುತ್ತಿದ್ದುದು ಸುಭ್ರಾಯ ಭಟ್ಟರ ಕಿವಿಯ ಮೇಲೂ ಬಿದ್ದಿತ್ತು. ಹೊಸ ಮಾಮಲೇದಾರರು ಯಾವಾಗಲೂ ತಮ್ಮ ಪೈಲ್ವಾನ ಜಾತಿಯ ಮೀಸೆಯನ್ನು ತಿರುವುತ್ತಾ ತಮ್ಮನ್ನು ಕಾಣಲು ಬಂದ ಹಳ್ಳಿಯವರನ್ನು ನಿಕೃಷ್ಠವಾಗಿ ಕಾಣುತ್ತಿದ್ದರೆಂದು ಜನ ಪುಕಾರು ತರುತ್ತಿದ್ದರು. ನಮ್ಮ ಸುಭ್ರಾಯ ಭಟ್ಟರಿಗೆ ಹೊಸ ಮಾಮಲೇದಾರರ ಭೆಟ್ಟಿ ಆಗಿರಲಿಲ್ಲ. ಯಾಕೆಂದರೆ ಅವರಿಗೆ ತಾಲೂಕು ಕಚೇರಿಯತ್ತ ಹೋಗಲು ಪುರುಸೊತ್ತೇ ಆಗಿರಲಿಲ್ಲ.


ಆದರೆ ಒಂದು ದಿವಸ ಪಟೇಲರು ಹೊನ್ನಾವರಕ್ಕೆ ಯಾವುದೋ ಕೆಲಸದ ನಿಮಿತ್ತ ಹೋದವರು ತಾಲೂಕು ಕಚೇರಿಗೂ ಹೋದರು. ಕಚೇರಿಯ ಕಾರುಕೂನರನ್ನೆಲ್ಲ ಮಾತನಾಡಿಸಿ ಹಾಗೆಯೇ ಮಾಮಲೇದಾರರ ಕೊಠಡಿಗೆ ಬಂದರು. ಮೀಸೆಯನ್ನು ತಿರುವುತ್ತಾ ಏನೋ ಓದುತ್ತಿದ್ದ ಮಾಮಲೇದಾರರು ಭಟ್ಟರು ಬಂದುದನ್ನು ಕಂಡು “ಯಾರು ?” ಎಂದು ದುರುಗುಟ್ಟಿ ಪ್ರಶ್ನಿಸಿದರು. ಪಕ್ಕದ್ದಲ್ಲೇ ಇದ್ದ ಜವಾನನೊಬ್ಬ “ ಸಾಲಕೋಡಿನ ಪಟೇಲರು, ಸಾರ್ ಇವರು” ಎಂದು ಪರಿಚಯಿಸಿದ. ಮಾಮಲೇದಾರರು ಒಮ್ಮೆ ಪಟೇಲರನ್ನು ಆಪಾದಮಸ್ತಕವಾಗಿ ನೋಡಿ, ಹಾಗೆಯೇ ಊರಿನ ಬಗ್ಗೆ ಏನೇನೋ ಕೇಳಿದರು. ಆದರೆ ಕುರ್ಚಿಯಲ್ಲಿ ಕೂಡಿರೆಂದು ತಪ್ಪಿಯೂ ಮಾತ್ರ ಹೇಳಲಿಲ್ಲ. ತಮ್ಮ ಮೀಸೆಯ ಮೇಲೆ ಕೈಯಾಡಿಸುತ್ತ ಅತ್ಯಂತ ಸೊಕ್ಕಿನ ಧ್ವನಿಯಲ್ಲಿ ಮಾತನಾಡುತ್ತಿದ್ದ ಮಾಮಲೇದಾರರನ್ನು ಕಂಡ ಪಟೇಲರಿಗೆ ಎಲ್ಲಿಲ್ಲದ ಸಿಟ್ಟು ಬಂತು. ಆದರೆ ಅದನ್ನು ಹತ್ತಿಕ್ಕಿಕೊಂಡು ಹಾಗೆಯೇ ಮಾತು ಮುಗಿಸಿ ಬಾಗಿಲಿನಿಂದ ಹೊರಬರುವಾಗ “ ಈತನಿಗೆ ಮೀಸೆಯೊಂದು ಬೇರೆ ಕೇಡು. ಇವನ ಸೊಕ್ಕಿನ ಮೀಸೆಯನ್ನು ಬೋಳಿಸಿಯೇ ತೀರುತ್ತೇನೆ.” ಎಂದು ಭೀಷ್ಮ ಪ್ರತಿಜ್ಞೆಯನ್ನು ಮನದಲ್ಲಿಯೇ ಗೈದರು.


ಕೆಲವು ದಿನಗಳ ತರುವಾಯ ಭಟ್ಟರ ಮನೆಗೆ ಬಂದ ಶಾನುಭೋಗರು ನಾಲ್ಕೈದು ದಿವಸಗಳಲ್ಲಿ ಮಾಮಲೇದಾರರು ಊರಿಗೆ ಬಿಜಯಂಗೈಸುತ್ತಾರೆಂದು ಹೇಳಿದಾಗ ಭಟ್ಟರು, “ ಹಾಗಿದ್ದರೆ ಅವರನ್ನು ನಮ್ಮ ಮನೆಗೆ ಕರೆದುಕೊಂಡು ಬನ್ನಿ, ಯೋಗ್ಯ ವ್ಯವಸ್ಥೆ ಮಾಡಿಸುತ್ತೇನೆ” ಎಂದು ಸಣ್ಣದಾಗಿ ನಕ್ಕು ನುಡಿದರು. ಶಾನುಭೋಗರಿಗೆ ಏನು ಅರ್ಥವಾಯಿತೋ ಅವರು ಸಣ್ಣದಾಗಿ ನಕ್ಕರು.


ಅಂದೇ ಭಟ್ಟರು ಮನೆಯ ಆಳು ತಿಮ್ಮಪ್ಪ ನಾಯ್ಕನನ್ನು ಕರೆದು ಮೆಲಿನ ತೋಟದ ಮೂಲೆಯಲ್ಲಿದ್ದ ಹಲಸಿನ ಮರದಿಂದ ನಾಲ್ಕಾರು ಹಲಸಿನ ಕಾಯಿಗಳನ್ನು ಕೊಯ್ಯಿಸಿ ಕೊಟ್ಟಿಗೆಯ ಹುಲ್ಲು ಅಟ್ಟದ ಮೇಲೆ ಹಣ್ಣು ಹಾಕಿಸಿದರು. ಅತ್ಯಂತ ಮೇಣವುಳ್ಳ ಮತ್ತು ಕಡಿಮೆ ತೊಳೆಯಿರುವ ಆ ಹಲಸಿನ ಕಾಯಿಯನ್ನು ಕೊಯ್ಸಿ ಹಣ್ಣು ಹಾಕಿಸಿದ್ದು ಮಾತ್ರ ಮನೆಯ ಆಳಿಗೆ ಆಶ್ಚರ್ಯವುಂಟುಮಾಡಿತು.


ಅಂದು ಮಾಮಲೆದಾರರನ್ನು ಕರೆದುಕೊಂಡು ಶಾನುಭೋಗರು ಪಟೇಲರ ಮನೆಗೆ ಬಂದಾಗ ಪಟೇಲರು ಮನೆಯಲ್ಲೆ ಇದ್ದರು. ಬಂದ ಅತಿಥಿಗಳನ್ನು ಸ್ವಾಗತಿಸಿ ಯೋಗ್ಯವಾಗಿ ಚಹಾ - ತಿಂಡಿ ಕೊಟ್ಟು ಸತ್ಕರಿಸಿದರು. ಪಕ್ಕದ್ದಲ್ಲೇ ಇದ್ದ ಕೊಟ್ಟಿಗೆಯ ಅಟ್ಟದ ಮೆಲೆ ಇಟ್ಟಿದ್ದ ಹಲಸಿನ ಕಾಯಿಗಳು ಚೆನ್ನಾಗಿ ಹಣ್ಣಾಗಿದ್ದವು. ಅದರ ವಾಸನೆ ದಶದಿಕ್ಕುಗಳಿಗೆ ಹಬ್ಬುವಂತೆ ಇತ್ತು. ಜಗುಲಿಯ ಮೆಲೆ ಕುಳಿತ ಮಾಮಲೇದಾರರ ಮೂಗಿಗೆ ಹಣ್ಣಿನ ವಾಸನೆ ಏಕಪ್ರಕಾರವಾಗಿ ಬಡಿಯುತ್ತಿತ್ತು. ಕುತೂಹಲ ತಡೆಯಲಾರದೆ ಮಾಮಲೇದಾರರು ಪಟೇಲರನ್ನು ಕರೆದು ವಾಸನೆ ಏನೆಂದು ವಿಚಾರಿಸಿದರು. ಪಟೇಲರು ಅದು ಹಲಸಿನ ಹಣ್ಣಿನದೆಂದು ಹೇಳಿ ಮನೆಯ ಅಳನ್ನು ಕರೆಯಿಸಿ, ಹಲಸಿನ ಹಣ್ಣನ್ನು ತರಿಸಿ, ಅದನ್ನು ಕಡಿ ಕಡಿಯಾಗಿ ಕೊಯ್ಯಿಸಿ ಮಾಮಲೇದಾರ ಸಾಹೇಬರ ಎದರು ಇಡಿಸಿಯೇ ಬಿಟ್ಟರು. ಬಯಲು ಸೀಮೆಯವರಾದ ಸಾಹೇಬರು ಹಲಸಿನ ಹಣ್ಣನ್ನು ನೋಡುತ್ತಿದ್ದುದು ಇದು ಮೊದಲನೇಯ ಸಲವಾಗಿತ್ತು. ಹಲಸಿನ ಹಣ್ಣಿನ ಕಡಿ ನೋಡಿ ಅದನ್ನು ತಿನ್ನುವದು ಹೇಗೆಂದು ತಿಳಿಯದೆ ಶ್ಯಾನಭೋಗರನ್ನು ವಿಚಾರಿಸಿದರು. ಆಗ ಮಧ್ಯಪ್ರವೇಶಿಸಿದ ಪಟೇಲರು. “ ಸಾಹೇಬರೇ, ಅದನ್ನು ತಿನ್ನುವದು ಬಹು ಸುಲುಭ. ಹಲಸಿನ ಹಣ್ಣಿನ ಕಡಿಯನ್ನು ಬಾಯಿಗೆ ಹಚ್ಚಿ ಹಲ್ಲಿನಿಂದ ತೊಳೆಯನ್ನು ಕಚ್ಚಿ ಹರಿದು ತಿನ್ನ ಬೇಕು.” ಎಂದಾಗ ಹತ್ತಿರದಲ್ಲೇ ಇದ್ದ ಶಾನುಬೋಗರು ಸಣ್ಣಗೆ ನಕ್ಕಿದ್ದು ಮಾಮಲೇದಾರರಿಗೆ ಕಾಣಿಸಲಿಲ್ಲ. ಪಟೇಲರು ಹೇಳಿದಂತೆ ಮಾಮಲೇದಾರರು ಹಣ್ಣನ್ನು ತಿನ್ನಲು ಪ್ರಯತ್ನಿಸಿದಾಗ ಹಲಸಿನ ಮೇಣ ಅವರ ಹುಲುಸಾಗಿ ಬೆಳೆದ ಪೈಲ್ವಾನ್ ಮೀಸೆಗೆ ದಪ್ಪಗೆ ಅಂಟಿಕೊಂಡಿತು. ಒಂದು ಕಡಿ ಹಲಸಿನ ಹಣ್ಣು ತಿನ್ನುವದರೊಳಗೆ ಮಾಮಲೇದಾರರು ಸುಸ್ತೋ ಸುಸ್ತು. ನಾಚಿಕೆಯಾಗಿ ತನಗೆ ಸಾಕೆಂದು ಹೇಳಿ ಅಭ್ಯಾಸ ಬಲದಿಂದ ಮೀಸೆಯ ಮೇಲೆ ಕೈಯಾಡಿಸಿದಾಗ ಮೀಸೆ ಪೂರ್ತಿ ಹಲಸಿನ ಮೇಣ ಮೆತ್ತಿಕೊಂಡಿರುವದು ಗಮನಕ್ಕೆ ಬಂತು. ತಟ್ಟನೆ ಎದ್ದು ಪಟೇಲರ ಮನೆಯ ಹೊಳ್ಳಿಯ ಮೇಲೆ ನೇತು ಹಾಕಿದ್ದ ಕನ್ನಡಿಯಲ್ಲಿ ತಮ್ಮ ಮುಖವನ್ನು


ಸಾಹೇಬರು ನೋಡಿಕೊಂಡರು. ದಪ್ಪನೆಯ ಕಪ್ಪು ಮೀಸೆಯ ಮೇಲೆ ಕೂತ ಬಿಳೆ ಹಲಸಿನ ಮೇಣ ದೂರದಿಂದ ಮೀಸೆ ಅಲ್ಲಲ್ಲಿ ಹಣ್ಣು ಹಣ್ಣಾದಂತೆ ಕಾಣುತ್ತಿತ್ತು. ಮಾಮಲೇದಾರರು ಚಂಗನೆ ಜಗಲಿ ಇಳಿದು ಅಂಗಳದಲ್ಲಿರುವ ಬಕೇಟಿನಿಂದ ಒಂದು ಚೆಂಬು ನೀರು ತೆಗೆದುಕೊಂಡು ಮೀಸೆ ತೊಳೆದುಕೊಳ್ಳುವದಕ್ಕೆ ಪ್ರಯತ್ನಿಸಿದರು. ಆದರೆ ಮೇಣ ಮಾತ್ರ ಜಾಗ ಖಾಲಿ ಮಾಡುವ ಬದಲು ಇನ್ನೂ ಬಲವಾಗಿ ಅಂಟಿಕೊಂಡಿತು. ಪೇಚಿಗೆ ಸಿಕ್ಕಿದ ಮಾಮಲೇದಾರರ ಮುಖ ಒಂದೇ ಬಾರಿಗೆ ಕಳಾಹೀನವಾಯಿತು. ಸಿಂಹಾಸನದಿಂದ ಕೆಳಕ್ಕೆ ಉರುಳಿ ಕೃಷ್ಣನ ಪದತಲದಲ್ಲಿ ಹೊರಳಾಡಿದ ಮಹಾರಾಜ ಕೌರವನಂತಾದ ಮಾಮಲೇದಾರರು ಪಟೇಲರ ಮುಖವನ್ನು ಸಹಾಯಕ್ಕಾಗಿ ಯಾಚಿಸುವಂತೆ ನಿಂತಿದ್ದರು. ಆಗ ಪಟೇಲರು “ ಸಾಹೇಬರೇ, ಛೇ!.. ಮೀಸೆಗೆಲ್ಲ ಮೇಣ ಬಳಕೊಂಡಬಿಟ್ರಾ! ಅಯ್ಯೋ! ಎಂಥಾ ಕೆಲಸ ಆಗಬಿಡ್ತು ! ಸಾಹೇಬರೇ, ಈ ಮೇಣ ಏನೂ ಮಾಡಿದರೂ ಹೋಗುವದಿಲ್ಲ.” ಎಂದಾಗ ಮಾಮಲೇದಾರರಿಗೆ ಒಮ್ಮೆಲೆ ಜಂಘಾಬಲವೇ ಉಡಗಿದಂತಾಯಿತು. ಅಷ್ಟಕ್ಕೇ ನಿಲ್ಲದೇ ಪಟೇಲರು “ ಸಾಹೇಬರೇ, ತಡೀರಿ, ಒಂದು ಕೆಲಸ ಮಾಡಿಸುತ್ತೇನೆ.” ಎಂದು ಹೇಳಿ ತಕ್ಷಣ ಆಳನ್ನು ಕಳುಹಿಸಿ ಊರಿನ ನಾಪಿಕನನ್ನು ಕರೆಯಿಸಿದರು. ಅಂಗಳದಲ್ಲಿ ಖುರ್ಚಿ ಹಾಕಿಸಿ ತಾನು ಅವರನ್ನು ಕಾಣಲು ಹೋದಾಗ ಖುರ್ಚಿಯ ಮೇಲೆ ಕೂಡಿ ಎಂದು ಹೇಳುವ ಸೌಜನ್ಯವನ್ನೂ ತೋರದ ಮಾಮಲೇದಾರರಿಗೆ ಅದರ ಮೇಲೆ ಕೂಡ್ರುವಂತೆ ಹೇಳಿ, ನಾಪಿಕನಿಗೆ ಸಾಹೇಬರ ಮೀಸೆ ಬೋಳಿಸುವಂತೆ ಆಜ್ಞಾಪಿಸಿದರು. ಬಹಳ ವರ್ಷದಿಂದ ಪೊಗದಸ್ತಾಗಿ ಬೆಳೆಸಿದ ಮೀಸೆ ಕ್ಷಣಾರ್ಧದಲ್ಲಿ ಚೌರಿಕನ ಕತ್ತಿಗೆ ಬಲಿಯಾಗುತ್ತದಲ್ಲ ಎಂಬ ಅತಿಯಾದ ನೋವು ಮನವನ್ನು ಆವರಿಸಿದರೂ ಮೇಣದ ಹಿಡಿತಕ್ಕೆ ಸಿಕ್ಕ ಮಾಮಲೇದಾರರಿಗೆ ಒಟ್ಟಾರೆ ಅದರಿಂದ ಪಾರಾದರೇ ಸಾಕೆನಿಸಿತ್ತು. ತಮ್ಮ ಪೌರುಷದ ಪತಾಕೆಯಂತಿದ್ದ ಮೀಸೆ ಚೌರಿಕನ ನಿಷ್ಕರುಣೆಯ ಕತ್ತಿಗೆ ಬಲಿಯಾಗಿ ತಮ್ಮ ಕಾಲಕೆಳಗೆ ಉರುಳುತ್ತಿರುವದನ್ನು ಕಂಡ ಸಾಹೇಬರ ಕಣ್ಣು ತೇವವಾಗಿತ್ತು. ಊರ ಜನರೆದರು ಸಾಹೇಬರ ಗರ್ವ ಭಂಗ ತನ್ನಿಂದ ತಾನೇ ನಡೆದು ಹೋಯಿತು.


ಇದನ್ನೆಲ್ಲ ನೋಡುತ್ತಿದ್ದ ಪಟೇಲರ ಮುಖದಲ್ಲಿ ಕೊನೆಗೆ ಗೆದ್ದದ್ದು ಪ್ರಜಾಪ್ರಭುತ್ವವೆಂಬ ಮಂದಹಾಸವಿತ್ತು. ಅವರು ಇಲ್ಲಿಯವರೆಗೆ ಆಡಿದ ಪ್ರಾಯೋಗಿಕ ಜೋಕು ಶಾನುಭೋಗರಿಗೆ ಈಗ ಅರ್ಥವಾಯಿತು. ಆದರೆ ಸಾಹೇಬರ ಎದುರಿಗೆ ನಗಲೂ ಆಗದೆ ನಗದಿರಲೂ ಆಗದೆ ಇನ್ನೊಂದು ಕ್ಷಣಕ್ಕೆ ಬೋಳು ಬೋಳಾಗುವ ಮಾಮಲೇದಾರರ ಮುಖವನ್ನು ನೋಡಲೋ ಬೇಡವೋ ಎನ್ನುವಂತೆ ಶ್ಯಾನಭೋಗರು ನಿಂತಿದ್ದರು.


- ಶ್ರೀಪಾದ ಹೆಗಡೆ, ಸಾಲಕೋಡ


ಕರ್ನಾಟಕ ವಿದ್ಯುತ್ ನಿಗಮದಲ್ಲಿ ಅಧಿಕಾರಿಯಾಗಿ ನಿವೃತ್ತಿಯಾದ ಶ್ರೀಪಾದ ಹೆಗಡೆ, ಸಾಲಕೊಡ ಇವರುತಮ್ಮ ಬಾಲ್ಯದ ದಿನಗಳಿಂದಲೂ ಸಾಹಿತ್ಯಾಸಕ್ತಿಯನ್ನು ಹೊಂದಿದವರು. ಕತೆ, ಹರಟೆ,ಲಲಿತ ಪ್ರಬಂಧ, ಕಾವ್ಯ, ನಾಟಕ,ವಿಮರ್ಶೆ ಮುಂತಾದಸಾಹಿತ್ಯ ಪ್ರಭೇಧಗಳಲ್ಲಿ ಬರವಣಿಗೆಯ ಮೂಲಕ ಕಳೆದ ನಾಲ್ಕು ದಶಕಗಳಿಂದ ತೊಡಗಿಕೊಂಡ ಇವರ ಕತೆ, ಪ್ರಬಂಧ, ಕವಿತೆಗಳು ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವರ ಕತೆಗಳಿಗೆ ಬಹುಮಾನಗಳು ಸಂದಿವೆ. ‘ಬೆಕ್ಕಿನ ಮೀಸೆ’ ಎಂಬ ಅವರ ಕಥಾ ಸಂಕಲನ ಪ್ರಕಟವಾಗಿದೆ. ಹಾಸ್ಯವನ್ನು ಸ್ಥಾಯಿಭಾವವಾಗಿ ತಮ್ಮ ಬರೆಹಗಳಲ್ಲಿ ನೆಲೆಗೊಳಿಸಿ ಮಾನವೀಯ ವಿಚಾರಗಳನ್ನುಪ್ರಸ್ತುತಿ ಪಡಿಸುವದು ಅವರ ಬರೆಹದ ವೈಶಿಷ್ಟ್ಯ. - ಸಂಪಾದಕ


39 views0 comments

Commentaires


bottom of page