ಮುಂಬೆಳಗಿಗೆ ಬಾನಿಂದ ಹಕ್ಕಿಗಳ ಹಾಡು
ಚಿಲಿಪಿಲಿಯಲೂ ಕೂಗಿದೆ ಮರಿಗಳ ಗೂಡು
ನೂರು ರಾಗ ನೂರು ಭಾವ ಎಲ್ಲಾ ದನಿಗಳಲ್ಲಿ
ತುಂಬಿದಂತ ಹೊನ್ನ ಬಣ್ಣ ಮೇಲೆ ಗಗನದಲ್ಲಿ.
ಬುವಿಯಲ್ಲಿ ಹಕ್ಕಿಗಾನ ಸುಪ್ರಭಾತವು
ಪ್ರಕೃತಿಯ ಮಡಿಲಿಗೊಂದು ಐಕ್ಯಗಾನವು
ಬೇಸರ ಗಡಿಗಳಿಲ್ಲ ಹಕ್ಕಿ ಹಾಡಿಗೆ
ಇಳೆಯೆಂಬ ಉಸಿರಿನ ಹಸಿರ ನಾಡಿಗೆ
ಎಲ್ಲೆಡೆಯೂ ಸುಮಗಳ ಹೂ ನಗುವಿದೆ
ಮಣ್ಣಿನ ಕಣಕಣದಿ ಇಬ್ಬನಿಯ ನಂಟಿದೆ
ಪ್ರೀತಿ ಸ್ನೇಹ ಎಲ್ಲೆಡೆಯೂ ಹರಡಿ ನಿಂತಿದೆ
ಹೃದಯದ ಮಾತನು ಹಕ್ಕಿ ಸಾರಿದೆ...
ಎಲ್ಲೆಲ್ಲೂ ಹಕ್ಕಿಗೊಂದು ಪುಟ್ಟ ಗೂಡಿದೆ
ಗೂಡಿನಲ್ಲಿ ಒಲವ ಸವಿ ಮಾತಿದೆ
ನೆಲೆಗೊಂದು ಹಕ್ಕಿಹಾಡು ಸತ್ಕಾರವು
ಪ್ರೀತಿ ಒಲುಮೆಗೊಂದು ಸಾಕಾರವು......
ನಾಗರಾಜ ಬಿ.ನಾಯ್ಕ ಬಾಡ ಕುಮಟಾ
ವೃತ್ತಿಯಲ್ಲಿ ಶಿಕ್ಷಕರು,ಪ್ರವೃತ್ತಿಯಲ್ಲಿ ಪರಿಸರ ಪ್ರೇಮಿ,ಪೋಟೊಗ್ರಾಫರ್ ಹಾಗು ಕವಿಯಾಗಿರುವ ನಾಗರಾಜ ಬಿ.ನಾಯ್ಕ ಹುಬ್ಬಣಗೇರಿ ಬಾಡ ಕುಮಟಾ ಇವರ " 'ಮುಂಬೆಳಗಿಗೆ ' ಕವಿತೆ ನಿಮ್ಮ ಓದಿಗಾಗಿ. ಸಂಪಾದಕ
❤️