ಏಕಾಂಗಿಯಾಗಿ ರೋದಿಸುತ್ತಿತ್ತು
ದನಿ ಹೊರಡಿಸಲಾಗದೇ
ಪುಟ್ಟ ಹಕ್ಕಿಯೊಂದು
ಕಾಡಿನಾ ಗೂಡಿನಲಿ ಕುಳಿತು
ಹಾಡದೆ ಕಾಲ ಅದೆಷ್ಟಾಯಿತೋ
ಲೆಕ್ಕ ಇಟ್ಟವರಾರು?
ಕತ್ತು ಹೊರಳಿಸಿ, ಹೊರಳಿಸಿ
ನೋಡಿತೊಮ್ಮೆ ಗೂಡಿನಾಚೆ
ಮೇಲೆ ನೀಲಾಕಾಶ
ಸರಿದಾಡುವ ಮೋಡಗಳು
ಗಿಡ, ಮರ, ಬಳ್ಳಿಗಳು
ತೂಗಾಡಿವೆ ಹೂ ಹಣ್ಣುಗಳು
ಅಲಲ್ಲಿ ನೀರ್ಝರಿಗಳು, ಸರೋವರಗಳು
ಹಸಿರ ನುಕ್ಕಿಸುವ ವನದೇವಿ
ಸೊಬಗಿನ ನೆಲೆವೀಡು
ಕಣ್ಣರಳಿಸಿ ನೋಡೇ ನೋಡಿತು
ರೆಕ್ಕೆ ಜಾಡಿಸಿತೊಮ್ಮೆ ಹೊರಬಂದು
ಪುರ್ರನೆ ಹಾರಿತು ನೆಗೆ ನೆಗೆದು
ನಭದತ್ತ ಮೊಗಮಾಡಿ
ಮರದಿಂದ ಮರಕ್ಕೆ ಹಾರಿ ಹಾರಿ
ಕುಣಿದೇ ಕುಣಿಯಿತು ನಲಿನಲಿದು
ನಿರ್ಭಿಡೆಯಿಂದ ತೇಲಾಡಿತು
ಕಾಡಿನಾ ಉದ್ದಗಲದಲಿ ಸಂಚರಿಸಿ
ಅರೇ! ಅಲೆ ಅಲೆಯಾಗಿ ತೇಲಿಬಂತು
ಹೊರಟಿತದೋ ದನಿ
ಕಾಡನಾವರಿಸಿ, ಅನುರಣಿಸಿ
ಮೌನ ಮುರಿಯಿತು ಹಕ್ಕಿ
ಮೂಕವಾಯಿತು ತೊನೆವ ಕಾಡು.
=000=
