top of page

ಮಾಧ್ಯಮಗಳು ತುಸು ಎಚ್ಚರ ವಹಿಸಬೇಕು [ಚಿಂತನ]

- ಡಾ. ವಸಂತಕುಮಾರ ಪೆರ್ಲ.


ನಮ್ಮ ಮಾಧ್ಯಮಗಳಲ್ಲಿ ರಾಜಕೀಯಕ್ಕೆ ಮಾತ್ರ ಯಾಕೆ ಹೆಚ್ಚು ಜಾಗ ಮತ್ತು ಅತಿಯಾದ ಮಹತ್ವ ಪ್ರಾಪ್ತಿಯಾಗುತ್ತಿದೆ? ಸಾಮಾಜಿಕ ಆಗುಹೋಗುಗಳಿಗೆ, ಶೈಕ್ಷಣಿಕ ಸಂಗತಿಗಳಿಗೆ, ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳಿಗೆ ಯಾಕೆ ಮಹತ್ವ ಸಿಗುತ್ತಿಲ್ಲ? ವಿಜ್ಞಾನ, ಸಂಶೋಧನೆ, ನವನವೀನ ಆವಿಷ್ಕಾರಗಳು, ಕೃಷಿ ಮೊದಲಾದ ಕ್ಷೇತ್ರಗಳತ್ತ ಯಾಕೆ ಮಾಧ್ಯಮಗಳು ಕಡಿಮೆ ಗಮನ ನೀಡುತ್ತಿವೆ?


ಪ್ರಜಾಪ್ರಭುತ್ವ ದೇಶವೊಂದರಲ್ಲಿ ಸಮುದಾಯದ ಕಲ್ಯಾಣ ಮುಖ್ಯವಾಗಬೇಕು. ಎಲ್ಲರ ಕಲ್ಯಾಣ (ಅಭ್ಯುದಯ) ಆದರೆ ಮಾತ್ರ ದೇಶ ಸುಸಂಘಟಿತವಾಗಿ ಎದ್ದು ನಿಲ್ಲಲು ಸಾಧ್ಯ. ಹಾಗಾಗಬೇಕಾದರೆ ಮಾಧ್ಯಮಗಳು ಜನರ ಪರವಾಗಿ ನಿಲ್ಲಬೇಕು. ರಾಜಕೀಯವೇ ಇರಲಿ, ಇನ್ನೇನೇ ಇರಲಿ, ಅಂತಿಮ ಫಲಾನುಭವಿಗಳು ಜನರು (ಅಥವಾ ಪ್ರಜೆಗಳು). ರಾಜಕೀಯ ಪಕ್ಷಗಳು ಕೆಲವೊಂದು ಸಮುದಾಯಗಳತ್ತ ಮಾತ್ರ ಗಮನ ಕೇಂದ್ರೀಕರಿಸಿ ಉಳಿದವರನ್ನು ಕಡೆಗಣಿಸಿದರೆ ಅದು ಪ್ರಜಾಪ್ರಭುತ್ವ ಆಗುವುದು ಹೇಗೆ?


ಅಧಿಕಾರಕ್ಕೆ ಬರುವ ವರೆಗೆ ಮಾತ್ರ ಪಕ್ಷ ರಾಜಕೀಯ ಎಂಬುದು ಮುನ್ನೆಲೆಯಲ್ಲಿ ಇರಬೇಕು. ಒಮ್ಮೆ ಅಧಿಕಾರಕ್ಕೆ ಬಂದ ಮೇಲೆ ಪಕ್ಷೀಯ ಚಟುವಟಿಕೆಗಳು ಹಿಂದೆ ಸರಿದು, ಆಡಳಿತಾತ್ಮಕವಾಗಿ ಇಡೀ ಸಮಾಜ ಒಂದು ಘಟಕ ಎಂಬ ಮನೋಭಾವ ರಾಜಕೀಯ ಪಕ್ಷಗಳಿಗೆ ಬಾರದೇ ಹೋದರೆ ಅವು ಒಂದು ’ರಾಜಕೀಯ ಪಕ್ಷ’ ಆಗುವುದು ಹೇಗೆ ಸಾಧ್ಯ? ಅಂತಹ ಪಕ್ಷಗಳನ್ನು ಒಂದು ಜಾತಿಯ ಅಥವಾ ಕೆಲವು ಸಮುದಾಯದ ಪ್ರತಿನಿಧಿಗಳು ಮಾತ್ರ ಎಂದು ಹೇಳಬಹುದು, ಅಷ್ಟೆ. ಸಮಾಜದ ಎಲ್ಲ ಪ್ರಜೆಗಳನ್ನೂ ಏಕಪ್ರಕಾರವಾಗಿ ನೋಡಿ ಆಡಳಿತ ನಡೆಸಬೇಕು. ಅದು ಬಿಟ್ಟು ಬೇರೆ ಬೇರೆ ಘಟಕಗಳನ್ನಾಗಿ ನೋಡಿ ಸಮಾಜವನ್ನು ವಿಭಜಿಸುವ ಪಕ್ಷಗಳನ್ನು ಜನ ತಿರಸ್ಕರಿಸಬೇಕು.


ಮಾಧ್ಯಮಗಳು ಇಂಥವುಗಳನ್ನು ಎಚ್ಚರದಿಂದ ನೋಡಬೇಕು. ವಿಶಾಲ ಮನೋಭಾವದ ಪಕ್ಷಗಳು ಮತ್ತು ಅಭಿವೃದ್ಧಿಪರ ಆಡಳಿತದ ಕಡೆಗೆ ಮಾಧ್ಯಮ ಸದಾ ಲಕ್ಷ್ಯ ಹರಿಸಿ, ಜನಪರವಾಗಿ ನಿಲ್ಲಬೇಕು. ಇನ್ನು, ಮಾಧ್ಯಮಗಳು ನಗರ ಪ್ರದೇಶಗಳಿಗೆ ನೀಡುತ್ತಿರುವ ಅತಿಯಾದ ಪ್ರಾಶಸ್ತ್ಯವೂ ಪ್ರಶ್ನಾರ್ಹವೇ. ಇದರಿಂದಾಗಿ ಅಭಿವೃದ್ಧಿಗಳು ಮತ್ತು ಸೌಲಭ್ಯಗಳು ನಗರಗಳಲ್ಲಿ ಕೇಂದ್ರೀಕೃತ ಆಗುತ್ತ, ಹಳ್ಳಿಗಳು ಅನಾದರಕ್ಕೆ ತುತ್ತಾಗಿವೆ. ಹಳ್ಳಿಯವರು ನಗರ ಪ್ರದೇಶಗಳಿಗೆ ವಲಸೆ ಹೋಗುವಂತಾಗಿದೆ. ಇದರಿಂದಾಗಿ ನಗರಗಳ ಮೇಲೆ ಅತಿಯಾದ ಒತ್ತಡ ಬೀಳುತ್ತದೆ. ಹಳ್ಳಿಗಳು ಬೀಳು ಹೊಡೆಯುತ್ತಿವೆ. ಈ ಅಸಮತೆ ನಾಳೆ ದಿನ ಗಂಡಾಂತರವನ್ನು ತಂದೊಡ್ಡಬಲ್ಲದು.


ಮಾಧ್ಯಮಗಳು ನಗರಗಳಿಗೆ ಮತ್ತು ವ್ಯಾಪಾರ ವಾಣಿಜ್ಯ ಉದ್ಯಮಗಳಿಗೆ ಅತಿಯಾದ ಪ್ರಾಶಸ್ತ್ಯ ನೀಡುವುದರಿಂದ ಅವನ್ನು ನಗರಗಳ ಪ್ರತಿನಿಧಿಗಳೆಂದು ಕರೆಯೋಣವೇ? ನಗರದ ಜನರ ಪರವಾಗಿ ಮಾತಾಡುವ ಮಾಧ್ಯಮಗಳು ಹಳ್ಳಿಗರ ಧ್ವನಿಯಾಗುವುದು ಕಾಣಿಸುತ್ತಲಿಲ್ಲ. ಆಹಾರ ಪದಾರ್ಥ ಹಾಲು ಹಣ್ಣು ಮುಂತಾದ ಎಲ್ಲ ಜೀವನಾವಶ್ಯಕ ವಸ್ತುಗಳು ಹಳ್ಳಿಯಿಂದಲೇ ನಗರಕ್ಕೆ ಪೂರೈಕೆಯಾಗುತ್ತದೆ. ಬದಲಾಗಿ ಹಳ್ಳಿಗರಿಗೆ ಸಿಗುತ್ತಿರುವುದು ನಗರದ ವಿಷಯಗಳಾದ ವ್ಯಾಪಾರೀ ಮನೋಧರ್ಮ, ಫ್ಯಾಶನ್ ಹೆಸರಿನ ಕಲಬೆರಕೆ ಸಂಗತಿಗಳು ಮತ್ತು ನಗರಗಳನ್ನು ಅನುಕರಿಸಲು ಬೇಕಾದ ಎಲ್ಲ ಪ್ರಭಾವಗಳು.


ಅತಿಭಾವುಕತೆಯಿಂದ ನರಳುತ್ತಿರುವ ದೃಶ್ಯ ಮಾಧ್ಯಮಗಳಂತೂ ಹಗಲುಗನಸುಗಳನ್ನು ಬಿತ್ತುತ್ತ ಸೆನ್ಸೇಶನ್ ಹಿಂದೆ ಬಿದ್ದಿವೆ. ಅವುಗಳಿಂದ ದೊಡ್ಡದಾದುದನ್ನು ಏನೂ ನಿರೀಕ್ಷಿಸಲಾಗದು. ಮುದ್ರಣ ಮಾಧ್ಯಮವಾದರೂ ಅಭಿವೃದ್ಧಿಯ ಕಡೆಗೆ ಮತ್ತು ನಮ್ಮ ಹಳ್ಳಿಗಳ ಕಡೆಗೆ ಲಕ್ಷ್ಯ ಹರಿಸಿ ಈ ವಿಚಾರಗಳ ಪರವಾಗಿ ಮಾತಾಡುವ ಅಗತ್ಯವಿದೆ. ಆಗ ನಗರ ಮತ್ತು ಹಳ್ಳಿಗಳ ನಡುವೆ ಅಭಿವೃದ್ಧಿ ಕಾರ್ಯಗಳು ಸಮಭಾರಗೊಂಡು ಅಸಮತೆ ದೂರವಾದೀತು.


ಇನ್ನು, ನಮ್ಮ ಮಾಧ್ಯಮಗಳು ನಡೆದ ಘಟನೆಗಳನ್ನು ವರದಿ ಮಾಡುವಷ್ಟಕ್ಕೆ ಸೀಮಿತ ಆಗಿವೆ. ವರದಿ ಮಾಡುವುದು ಮಾಧ್ಯಮದ ಜವಾಬ್ದಾರಿಯ ಒಂದು ಭಾಗ ಮಾತ್ರ. ಆಡಳಿತ ಎಲ್ಲಿ ಸೋತಿದೆ, ಸಮಾಜಕ್ಕೆ ಎಲ್ಲಿ ಏನು ಆಗಬೇಕಾಗಿದೆ, ಎಲ್ಲಿ ಹಿಂದೆ ಬಿದ್ದಿದ್ದೇವೆ ಎಂಬಿತ್ಯಾದಿ ವಿಷಯಗಳನ್ನು ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಅಧ್ಯಯನ ಮಾಡಿ, ವಿಶ್ಲೇಷಿಸಿ ಬರೆಯುವ/ ಹೇಳುವ/ ತೋರಿಸುವ ಮಾಧ್ಯಮ ಚಟುವಟಿಕೆ ಇವತ್ತು ಕಡಿಮೆಯಾಗಿದೆ.


ದೈನಂದಿನ ರಾಜಕೀಯದ ಆಗುಹೋಗುಗಳಿಗೆ (political games) ಅತಿಯಾದ ಪ್ರಾಮುಖ್ಯ ನೀಡಲಾಗುತ್ತಿದೆ. ಆದರೆ ರಾಜಕೀಯರಂಗದವರು ಮಾಡಬೇಕಾಗಿರುವ ಅವರ ಆದ್ಯ ಕರ್ತವ್ಯವಾದ ’ಆಡಳಿತ’ದ ಕಡೆಗೆ ಯಾಕೆ ಮಾಧ್ಯಮ ಗಮನ ಕೇಂದ್ರೀಕರಿಸುವುದಿಲ್ಲ? ಉದಾಹರಣೆಗೆ ಶಿಕ್ಷಣರಂಗ: ಎಷ್ಟು ಶಾಲೆ ಕಾಲೇಜುಗಳಿವೆ, ಅಲ್ಲಿ ಎಷ್ಟು ಅಧ್ಯಾಪಕ/ಅಧ್ಯಾಪಕೇತರ ಸಿಬ್ಬಂದಿ ಇದ್ದಾರೆ, ಕಟ್ಟಡ ಪೀಠೋಪಕರಣ ಲ್ಯಾಬ್ ಲೈಬ್ರೆರಿ ಮತ್ತು ಇನ್ನಿತರ ಸೌಲಭ್ಯಗಳು ಸರಿಯಾಗಿವೆಯೇ ಎಂಬೆಲ್ಲ ಅನುಪಾತದ ಅಧ್ಯಯನ ವರದಿಗಳನ್ನು ಕಾಣಲಾರೆವು. ಬದಲಾಗಿ ಆ ಇಲಾಖೆಯ ಮಂತ್ರಿಗಳು ನೀಡುವ ಯಾವುದೋ ರಾಜಕೀಯ ಹೇಳಿಕೆಗೆ ಮಹತ್ವ ಸಿಗುತ್ತದೆ.


ಒಂದು ನಿರ್ದಿಷ್ಟ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸಮಾಜದ ಕಲ್ಯಾಣಕ್ಕಾಗಿ ಅಭಿವೃದ್ಧಿಪರವಾಗಿ ಕೆಲಸ ಮಾಡುವುದರ ಕಡೆಗೆ ಮಾಧ್ಯಮ ಗಮನವನ್ನು ಕೇಂದ್ರೀಕರಿಸಬೇಕು ಮತ್ತು ಅವರು ವಿಫಲರಾದರೆ ಜಾಗೃತಗೊಳಿಸುವ ಕೆಲಸ ಮಾಡಬೇಕು. ಸಿನಿಮಾ ರಂಗಕ್ಕೆ ಮಾತ್ರ ಅತಿಯಾದ ಪ್ರಾಮುಖ್ಯ ನೀಡಿ ಉಳಿದ ಕಲಾ ಪ್ರಕಾರಗಳನ್ನು ಕಡೆಗಣಿಸುವುದಕ್ಕೆ ಕೂಡ ಸ್ಪಷ್ಟ/ನಿರ್ದಿಷ್ಟ ಕಾರಣಗಳಿಲ್ಲ. ನಮ್ಮ ದೃಷ್ಟಿ ಮತ್ತು ಸೃಷ್ಟಿಯಲ್ಲಿ ಸಮಾನತೆಯನ್ನು ಮತ್ತು ಸಮಭಾರವನ್ನು ಕಾಪಾಡಿಕೊಳ್ಳದಿದ್ದರೆ ವಿಶ್ವಾಸಾರ್ಹತೆ ಹೊರಟು ಹೋಗುತ್ತದೆ.

==000==

20 views1 comment

1 Comment


shreepadns
shreepadns
Sep 19, 2020

ಜಾಗ್ರತಿಗೊಳಿಸುವ ಚಿಂತನ ಇದು.ಅತ್ಯಂತ ಪ್ರಸ್ತುತವು ಹೌದು.ಕವಿ,ಚಿಂತಕ,ವಾದಿ,ವಾಗ್ಮಿ ಡಾ.ವಸಂ ಕುಮಾರ ಪೆರ್ಲ ಅವರಿಗೆ ಅನೇಕ ಅಭಿನಂದನೆಗಳು. ಡಾ.ಶ್ರೀಪಾದ ಶೆಟ್ಟಿ.

Like
bottom of page