ಅಪ್ಪಂದಿರ ದಿನವಾದ ಇಂದು ನನ್ನಪ್ಪನ ಬಗ್ಗೆ ಒಂದೆರಡು
ಸಾಲುಗಳನ್ನು ಬರೆಯಬೇಕೆನಿಸಿ ಬರೆಯುತ್ತಿದ್ದೇನೆ: ಲೇಖಕಿ
'ಮಾತೃ ದೇವೋ ಭವ ಪಿತೃ ದೇವೋ ಭವ'
ಆ ದೇವರು ಎಲ್ಲ ಕಡೆ ತಾನಿರಲು ಸಾಧ್ಯವಿಲ್ಲ ಎಂದು ತಾಯಿಯನ್ನು ಸೃಷ್ಟಿಸಿದಂತೆ ಎಲ್ಲರನ್ನೂ ಏಕ ಕಾಲದಲ್ಲಿ ಸಲುಹಲು ಸಾಧ್ಯವಿಲ್ಲ ಎಂದು ತಂದೆಯನ್ನು ಸೃಷ್ಟಿಸಿದನಂತೆ. ಈ ಮಾತು ನನ್ನಪ್ಪನ ವಿಷಯದಲ್ಲಿ ಅಪ್ಪಟ ಸತ್ಯ.
ಮಕ್ಕಳ ಪಾಲನೆ ಪೋಷಣೆಯ ವಿಚಾರದಲ್ಲಿ ಅಮ್ಮನಂತೆ ಅಪ್ಪ ಕೂಡ.
ನಾನು ಚಿಕ್ಕವಳಿದ್ದಾಗ ತಂದೆಯ ಕೆಲಸಗಳನ್ನು ಗಮನಿಸುತ್ತಿದ್ದರೂ ಅವರಿಗೆ ಶ್ರಮವಾಗುತ್ತಿದೆ ಎನ್ನುವ ಅರಿವು ಇರಲಿಲ್ಲ. ಪುಟ್ಟ ಗುಡಿಸಿಲಲ್ಲಿ ಒಂಭತ್ತು ಜನರ ಬಡ ಸಂಸಾರ. ಅವರೆಲ್ಲರ ಹಸಿವಿನ ಚೀಲ ತುಂಬಿಸಲು ಅಪ್ಪ ಹೋರಾಡುತ್ತಿದ್ದಾನೆ ಎಂಬ ಪರಿಕಲ್ಪನೆಯೂ ಇರಲಿಲ್ಲ.
ಈಗಿನ ಐಷಾರಾಮಿ ಜೀವನದಲ್ಲಿ ಒಂದು ಮಗುವನ್ನು ನೋಡಿಕಳ್ಳುವುದಕ್ಕೇ ಪರದಾಡುತ್ತೇವೆ, ಹೀಗಿರುವಾಗ ಅಂದಿನ ಬಡತನದಲ್ಲಿ ತನ್ನ ಆರು ಮಕ್ಕಳನ್ನು ಪ್ರೀತಿಯಿಂದ ಅಚ್ಚುಕಟ್ಟಾಗಿ ಬೆಳೆಸಿದ್ದಾರೆ ನಮ್ಮ ಹೆತ್ತವರು. ಒಬ್ಬ ಶಿಕ್ಷಕನಾಗಿ ತನ್ನ ಮಕ್ಕಳಿಗೆ ವಿದ್ಯೆಯ ಜೊತೆಗೆ ಶಿಸ್ತು ಹಾಗೂ ಉತ್ತಮ ಸಂಸ್ಕಾರಗಳನ್ನು ಬಾಲ್ಯದಲ್ಲಿಯೇ ಕಲಿಸಿಕೊಟ್ಟವರು ಅಪ್ಪ.
ತಾನು ಬಡವನಾದರೂ ಕೂಡ ಬಡತನವಿರುವ ಇತರರಿಗೆ ತನ್ನ ಕೈಲಾದ ಸಹಾಯ ನೀಡಿದ್ದನ್ನು ಇಂದಿಗೂ ಕೂಡ ಜನ ನೆನೆಯುತ್ತಿರುತ್ತಾರೆ.
ತಾನು ಹುಟ್ಟಿ ಎರಡು ವರ್ಷಗಳ ನಂತರ ತನ್ನ ತಂದೆಯನ್ನು ಕಳೆದುಕೊಂಡ ನನ್ನ ಅಪ್ಪ ತನ್ನದೇ ಭೂಮಿಯಲ್ಲಿ ತಾಯಿ ತನಗೆ ಕಲಿಸಿದ ಬೇಸಾಯವನ್ನು ಅಚ್ಚುಕಟ್ಟಾಗಿ ಮಾಡುತ್ತ ಎಂತಹದೇ ಪರಿಸ್ಥಿತಿ ಬಂದರೂ ದುಡಿದು ತಿನ್ನುವ ಸಾಮರ್ಥ್ಯವನ್ನು ತನ್ನ ಮಕ್ಕಳಿಗೂ ಬಾಲ್ಯದಲ್ಲಿಯೇ ಕಲಿಸಿಕೊಟ್ಟ ಕೃಷಿಕ ಗುರು ನನ್ನಪ್ಪ. ಅಪ್ಪನ ಸಮಯ ಪ್ರಜ್ಞೆ, ಪಾಲನೆಯನ್ನು ನೆನೆದು ಮನದಲ್ಲಿಯೇ ಗೌರವಿಸುತ್ತೇನೆ. ಏಕೆಂದರೆ ನನ್ನಿಂದ ಅದು ಅಷ್ಟರ ಮಟ್ಟಿಗೆ ಸಾಧ್ಯವಿಲ್ಲ.
ಶಿಕ್ಷಕನಾದರೂ ನನ್ನಪ್ಪ ನಸುಕಿನಲ್ಲಿಯೇ ಎದ್ದು, ಅಮ್ಮ ಕೊಟ್ಟ ಬಿಸಿ ಚಹಾ ಹೀರಿ ಜೋಡೆತ್ತಿನ ಜೊತೆಗೆ ನೇಗಿಲು ಕುಠಾರಿ ಹಿಡಿದು ಗದ್ದೆಗೆ ನಡೆದು, ಗದ್ದೆ ಕೆಲಸ ಮುಗಿಸಿ, ಮನೆಗೆ ಬಂದು ಕೆಸರಂಟಿದ ಮೈಗೆ ಬಿಸಿನೀರಿನ ಸ್ನಾನ ಮಾಡಿ,
ಮುಂಜಾನೆಯ ಉಪಾಹಾರ ಅವಸರವಾಗಿಯೇ ಸೇವಿಸಿ, ಅಂದಿನ ಸಮಯ ಎಂಟು ಗಂಟೆಯ ಶಾಲಾ ಪ್ರಾರಂಭದ ಮುನ್ನವೇ ಶಾಲೆಗೆ ಹಾಜರಾಗುತ್ತಿದ್ದ ಕೃಷಿಕನ ಕಾಯಕ ಮುಗಿಸಿ ಬಂದ ಶಾಲಾ ಶಿಕ್ಷಕ ನನ್ನಪ್ಪ. ಶಾಲಾ ಅವಧಿ ಮುಗಿದ ನಂತರ ಮತ್ತದೇ ಗದ್ದೆ ಕೆಲಸ ಕತ್ತಲಾಗುವ ತನಕ. ದಣಿದು ಬಂದರೂ ಆ ಅರಿವೇ ಇಲ್ಲದೆ, ಚಿಮಣಿ ದೀಪದ ಸುತ್ತ ಪುಸ್ತಕ ಹಿಡಿದು ಕುಳಿತ ತನ್ನ ಮಕ್ಕಳಿಗೆ ಅಭ್ಯಾಸ ಹೇಳಿಕೊಡುತ್ತಿದ್ದರು. ಯಂತ್ರದಂತೆ ಸದಾ ದೈಹಿಕ ಶ್ರಮದಲ್ಲಿಯೇ ಬದುಕು ಸಾಗಿಸುತ್ತಿರುವ ಎಂಬತ್ತೇಳು ವರ್ಷ ವಯಸ್ಸಿನ ನನ್ನಪ್ಪನ ಮುಂದೆ ಮನೆಯೊಳಗಿನ ಕೆಲಸದಲ್ಲೇ ಸುಸ್ತಾಗಿಬಿಟ್ಟೆ ಎನ್ನುವ ನಾವುಗಳು ಅದ್ಯಾವ ಲೆಕ್ಕ? ಅನಿಸುತ್ತಿದೆ. ಯಾವಾಗಲೂ ಅಪ್ಪ ಹೇಳುತ್ತಿದ್ದ ಮಾತು" ಜನಬಲ ಧನಬಲ ಅಂತಾ ನಂಬಿರ್ಬೇಡಿ, ರಟ್ಟೆಬಲವೊಂದನ್ನು ನಂಬಿ ನಡೆದರೆ ಮಾತ್ರ ಜೀವನದಲ್ಲಿ ಉದ್ಧಾರ ಆಗ್ತೀರಿ" ಅಂತಾ.
ಚಿಕ್ಕಂದಿನಿಂದಲೂ ತುಂಬಾ ಸ್ವಾಭಿಮಾನಿಯಾದ ನನ್ನಪ್ಪ ಇಂದಿಗೂ ಯಾವುದೇ ಕಾರಣಕ್ಕೂ ಯಾರೊಂದಿಗೂ ಕೈಯೊಡ್ಡಿದವನಲ್ಲ. ನೇರ ದಿಟ್ಟ ಮಾತಿನ ಅಪ್ಪ, ಶತ್ರುಗಳೇ ಮನೆಗೆ ಬಂದರೂ ಆದರಿಸುವ ಅಪ್ಪ, ಪ್ರಾಥಮಿಕ ಶಾಲೆಯಲ್ಲಿ ವಿದ್ಯೆ ಕಲಿಸಿದ ಗುರು ನನ್ನಪ್ಪ, ತಂಬು ಕುಟುಂಬದಲ್ಲಿ ಕೋಳ್ಗಂಬವಾಗಿ ರಕ್ಷಣೆ ನೀಡಿದ ಅಪ್ಪ, ಎಲ್ಲ ಮಕ್ಕಳಿಗೂ ಮದುವೆ ಮಾಡಿ ತನ್ನ ಜವಾಬ್ದಾರಿ ಮುಗಿಸಿದರೂ ತುರ್ತು ಸಂದರ್ಭದಲ್ಲಿ ತನ್ನ ಈ ಇಳಿ ವಯಸ್ಸಿನಲ್ಲಿಯೂ ನಮಗೆ ಧೈರ್ಯ ತುಂಬುತ್ತಾ ಇನ್ನೂ ಕೋಳ್ಗಂಬವಾಗಿಯೇ ನಿಂತು ರಕ್ಷಣೆ ನೀಡುತ್ತ ಬಂದಿದ್ದಾರೆ. ನಾನು ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆಂದರೆ ಅದಕ್ಕೆ ಕಾರಣ ಅಪ್ಪ. ಅವರ ಮಗಳು ನಾನೆಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಎನಿಸುತ್ತದೆ.
ಇವರು ಯಕ್ಷಗಾನ ಕಲಾವಿದರಾಗಿ, ಕೃಷಿಕರಾಗಿ, ಶಿಕ್ಷಕರಾಗಿ ನಿವೃತ್ತರಾದರೂ ಪ್ರವೃತರಾಗಿಯೇ ಬದುಕು ಸಾಗಿಸುತ್ತಿದ್ದಾರೆ. ನನ್ನ ಅಪ್ಪನಿಗೆ ಭಗವಂತ ಆಯುರಾರೋಗ್ಯ ದಯಪಾಲಿಸಲೆಂದು ಪ್ರಾರ್ಥಿಸುವೆ.🙏🙏🙂
ಸಾವಿತ್ರಿ ಮಾಸ್ಕೇರಿ.
ಚರ:೯೫೯೧೦೫೧೪೩೭
Comentarios