ಪ್ರಾದೇಶಿಕ ವೈಶಿಷ್ಟ್ಯದ ತುಳುವಿನ ‘ಮಂದಾರ ರಾಮಾಯಣ’
ಭಾರತದೇಶದಲ್ಲಿ ಎಷ್ಟು ಭಾಷೆಗಳಿವೆಯೋ ಅಷ್ಟು ರಾಮಾಯಣಗಳಿವೆ ಮತ್ತು ಆಯಾ ಭಾಷೆಗಳಲ್ಲಿ ಎಷ್ಟು ತಲೆಮಾರುಗಳು ಆಗಿಹೋಗಿವೆಯೋ ಅಷ್ಟು ರಾಮಾಯಣದ ರಚನೆಗಳಿವೆ ಹಾಗೂ ಎಷ್ಟು ಪ್ರಮುಖ ಕವಿಗಳಿದ್ದಾರೋ ಅಷ್ಟು ರಾಮಾಯಣ ಕಥೆಗಳ ಅಭಿವ್ಯಕ್ತಿಗಳಿವೆ. ಈ ಹೇಳಿಕೆ ಕ್ಲೀಷೆಯದೇನೂ ಅಲ್ಲ, ಕುಮಾರವ್ಯಾಸನೇ ಹೇಳಿದ್ದಾನೆ: ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ಎಂದು. ಭಾರತದಲ್ಲಿ ನೂರಾರು ರಾಮಾಯಣಗಳು ರಚನೆಯಾಗಿದ್ದರೂ ಕಥೆಯ ಮೂಲಧಾರೆಯಲ್ಲಿ ವ್ಯತ್ಯಾಸವೇನೂ ಆಗಿಲ್ಲ. ಆಯಾ ಪ್ರದೇಶಕ್ಕೆ ಅನುಸರಿಸಿ ಮತ್ತು ಸ್ಥಳೀಯ ಸಂಸ್ಕೃತಿ ಹಾಗೂ ಅಭಿವ್ಯಕ್ತಿ ಕ್ರಮಗಳಿಗೆ ಸಂಬಂಧಿಸಿ ಸಣ್ಣಪುಟ್ಟ ವ್ಯತ್ಯಾಸಗಳನ್ನು ಮಾಡಿಕೊಂಡಿರಬಹುದು. ಆದರೆ ಅವೆಲ್ಲವೂ ಕಥನವೈವಿಧ್ಯ ಎಂಬುದನ್ನು ಪರಿಗಣಿಸಿದರೆ ಸಾವಿರಾರು ವರ್ಷಗಳಿಂದಲೂ ರಾಮಾಯಣ ಮಹಾಕಾವ್ಯ ಭಾರತೀಯರ ಬದುಕನ್ನು ರೂಪಿಸಿಕೊಂಡು ಬಂದುದರ ಮಹತ್ವ ಗೊತ್ತಾಗುತ್ತದೆ. ಇಂತಹ ವಿಶಿಷ್ಟ ಅಭಿವ್ಯಕ್ತಿಗಳ ಸಾಲಿನಲ್ಲಿ ಮಂದಾರ ಕೇಶವಭಟ್ಟರ ತುಳು ‘ಮಂದಾರ ರಾಮಾಯಾಣ’ವನ್ನು ಗಮನಿಸಬೇಕಾಗುತ್ತದೆ.
ಮಂದಾರ ಕೇಶವ ಭಟ್ಟರು (ಜ.: 1919 – ಮ.: 1997) ತುಳುವಿನಲ್ಲಿ ಸರಳ ರಗಳೆಯಲ್ಲಿ ಬರೆದ ರಾಮಾಯಣದ ಕಥೆಯೇ ‘ಮಂದಾರ ರಾಮಾಯಣ’. ಇದು ಆಧುನಿಕ ತುಳುವಿನ ಮೊದಲ ಮಹಾಕಾವ್ಯವಾಗಿ ಪ್ರಸಿದ್ಧವಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕನ್ನಡಕ್ಕೂ ಅನುವಾದವಾಗಿದೆ.
ಮಂದಾರ ಎಂಬುದು ಮಂಗಳೂರು ನಗರದ ಕುಡುಪು ಗ್ರಾಮದ ಒಂದು ಊರಿನ ಹೆಸರು. ಕೇಶವ ಭಟ್ಟರು ಮಂದಾರದ ನಿವಾಸಿಯಾದ್ದರಿಂದ ಮಂದಾರ ಕೇಶವ ಭಟ್ ಎಂದು ಹೆಸರಾದರು. ಶಾಲಾ ಶಿಕ್ಷಣದ ಬಳಿಕ ಆರಂಭದಲ್ಲಿ ಮಂಗಳೂರು ಸುತ್ತಮುತ್ತ ಬೇರೆ ಬೇರೆ ಶಾಲೆಗಳಲ್ಲಿ ಅಧ್ಯಾಪಕರಾಗಿ ದುಡಿದು ಕೊನೆಗೆ ಮಂಗಳೂರಿನ ಕೂಳೂರು ಚರ್ಚ್ ಶಾಲೆಯಲ್ಲಿ ಕನ್ನಡ ಪಂಡಿತರಾಗಿ 1954 ರಿಂದ 1975 ರ ವರೆಗೆ ದುಡಿದು ನಿವೃತ್ತರಾದರು. ನಿವೃತ್ತಿಯ ಬಳಿಕ ಪೂರ್ಣವಾಗಿ ಕನ್ನಡ ಮತ್ತು ತುಳು ಭಾಷೆಯ ಸಾಹಿತ್ಯ ವ್ಯವಸಾಯದಲ್ಲಿ ತೊಡಗಿಕೊಂಡರು. ಯಕ್ಷಗಾನ ತಾಳಮದ್ದಳೆಯಲ್ಲೂ ಕಲಾವಿದರಾಗಿ ಭಾಗವಹಿಸುತ್ತಿದ್ದರು.
ಮಂದಾರ ರಾಮಾಯಣ ಬರೆದು ಮುಗಿಸಲು ಕೇಶವಭಟ್ಟರಿಗೆ ಸುಮಾರು ಇಪ್ಪತ್ತು ವರ್ಷ ಹಿಡಿಯಿತು. 1967ರಲ್ಲಿ ಬರೆಯಲು ಆರಂಭಿಸಿ 1987ರಲ್ಲಿ ಮುಗಿಸಿದರು. ಅದರ ಕೆಲವು ಅಧ್ಯಾಯಗಳು ಆಯಾ ಕಾಲಕ್ಕೆ ಪ್ರಕಟವಾಯಿತಾದರೂ 1987ರಲ್ಲಿ ಪೂರ್ಣರೂಪದಲ್ಲಿ ಮಹಾಕಾವ್ಯವಾಗಿ ಪ್ರಕಟವಾಯಿತು.
17,890 ಸಾಲುಗಳಲ್ಲಿ ಡೆಮ್ಮಿ ಅಷ್ಟದಳ ಗಾತ್ರದ 422 ಪುಟಗಳಲ್ಲಿ ಮಂದಾರ ರಾಮಾಯಾಣವು ಹರಡಿಕೊಂಡಿದೆ. ಕನ್ನಡದಲ್ಲಿ ಬಂದಿರುವ ವಾಲ್ಮೀಕಿ ರಾಮಾಯಣದ ಪರಂಪರೆಯನ್ನು ಅನುಸರಿಸಿ ತುಳುವಿನ ಪ್ರಾದೇಶಿಕ ವೈಶಿಷ್ಟ್ಯವನ್ನು ಮೆರೆದ ಕೃತಿ ಮಂದಾರ ರಾಮಾಯಣ. ಮುಖ್ಯವಾಗಿ ಕಥಾಮುಖದಲ್ಲಿ ತೊರವೆ ರಾಮಾಯಣ ಮತ್ತು ನಡೆ-ಲಾಸ್ಯಗಳಲ್ಲಿ ಕುವೆಂಪು ಅವರ ‘ರಾಮಾಯಣ ದರ್ಶನಂ’ ಕಾವ್ಯದ ಪ್ರಭಾವವನ್ನು ಗುರುತಿಸಬಹುದು. ಒಟ್ಟು 22 ಅಧ್ಯಾಯಗಳಲ್ಲಿ ಮಂದಾರರು ರಾಮಾಯಾಣ ಕಥೆಯನ್ನು ಹೇಳಿದ್ದಾರೆ. ಆ ಇಪ್ಪತ್ತೆರಡು ಅಧ್ಯಾಯಗಳು ಹೀಗಿವೆ:
1). ಪುಂಚದ ಬಾಲೆ (ಹುತ್ತದ ಮಗು), 2). ಬಂಗಾರ್ದ ತೊಟ್ಟಿಲ್ (ಬಂಗಾರದ ತೊಟ್ಟಿಲು), 3). ಅಜ್ಜೆರೆ ಸಾಲೆ (ಅಜ್ಜನ ಶಾಲೆ), 4). ಮದಿಮೆದ ದೊಂಪ (ಮದುವೆಯ ಮಂಟಪ), 5). ಸೇಲೆದ ಸೋಲು (ವೈಯಾರದ ಸೋಲು), 6). ಪಟ್ಟೊಗು ಪೆಟ್ಟ್ (ಸಿಂಹಾಸನ ನಷ್ಟ), 7). ತೆಲಿಪುನಡೆ ಬುಲಿಪು (ನಗುವಿನ ಜಾಗದಲ್ಲಿ ಅಳು), 8). ಮೋಕೆದ ಕಡಲ್ (ಮಮತೆಯ ಕಡಲು), 9). ಈರೆತತ ಪುಗೆ (ಎಲೆಯ ಹಗೆ), 10). ಪರಬುನ ವರಸಾರಿ (ಮುದುಕಿಯ ಓಡಾಟ), 11). ದಗೆ ತೋಜಾದ್ ಪಗೆ ಸಾರಿಯಳ್ (ಮೋಸದಿಂದ ಹಗೆ ಸಾಧಿಸಿದಳು), 12). ಬೊಳ್ಪುದ ಗುಡ್ಚಿಲ್ (ಬೆಳಕಿನ ಗುಡಿಸಲು), 13). ಪುಗೆ ತೂಪಿ ಪಗೆ (ಹೊಗೆ ಹಾಕುವ ಹಗೆ), 14). ಮಿತ್ತ ಲೋಕದ ಬಿತ್ತ್ (ಮೇಲಿನ ಲೋಕದ ಬೀಜ), 15). ಬೆಂದಿನೆನ್ ತಿಂದೆ (ಅಟ್ಟುದನ್ನು ಉಂಡ), 16). ನೀಲದುಂಗಿಲ (ನೀಲ ಉಂಗುರ), 17). ಪಚ್ಚೆದುಂಗಿಲ (ಹಸುರು ಉಂಗುರ), 18). ಕಡಲದಂಡೆಗ್ ಕಾಡದಂಡ್ (ಕಡಲದಂಡೆಗೆ ಕಾಡಿನ ಸೈನ್ಯ), 19). ಪೆಟ್ಟ್’ದಟ್ಟಣೆ (ಯುದ್ಧಸಿದ್ಧತೆ), 20). ಮಸಣದ ಕತ್ತಲೆ (ಸ್ಮಶಾನದ ಕತ್ತಲು), 21). ಬದ್’ಕ್’ದ ಬೊಳ್ಪು (ಬದುಕಿನ ಬೆಳಕು), 22). ಪರ ಬೂಡುಗು ಪೊಸ ಬೊಳ್ಪು (ಹಳೆಮನೆಗೆ ಹೊಸಬೆಳಕು) – ಹೀಗೆ ಇಪ್ಪತ್ತೆರಡು ಅಧ್ಯಾಯಗಳಲ್ಲಿ ಮಂದಾರ ರಾಮಾಯಣ ಹರಡಿಕೊಂಡಿದೆ.
ಮಂದಾರ ರಾಮಾಯಣದ ವೈಶಿಷ್ಟ್ಯವೆಂದರೆ ಮಾರ್ಗಕಾವ್ಯದ ಗಂಭೀರ ಭಾಷೆಯ ಓಘದಿಂದ ಬಿಡಿಸಿಕೊಂಡು ತುಳು ಆಡುನುಡಿಯಲ್ಲಿ ರಚನೆಯಾಗಿರುವುದು ಮತ್ತು ಮಹಾಕಾವ್ಯದ ಘನತೆ ಗಾಂಭೀರ್ಯಗಳನ್ನು ಉಳಿಸಿಕೊಂಡು ಆಧುನಿಕ ತುಳು ಮಹಾಕಾವ್ಯವಾಗಿ ಮೂಡಿಬಂದಿರುವುದು. ವಾಲ್ಮೀಕಿ ಪರಂಪರೆಯ ಕನ್ನಡ ರಾಮಾಯಾಣಗಳಿಂದ ವಸ್ತುವಿನ್ಯಾಸವನ್ನು ಪಡೆದುಕೊಂಡು ತುಳುವಿನ ಪ್ರಾದೇಶಿಕ ಬದುಕು ಮತ್ತು ಸಂಸ್ಕೃತಿಯನ್ನು ತುಂಬಿ ಇಡೀ ರಾಮಾಯಣ ಕಥೆ ತುಳುನಾಡಿನಲ್ಲಿ ನಡೆಯಿತು ಎಂಬಂತೆ ಕಥನದ ಆಯಾಮಕ್ಕೆ ಪ್ರಾದೇಶಿಕ ಛಾಯೆಯನ್ನು ತಂದಿರುರುವುದು ಮಂದಾರ ರಾಮಾಯಣದ ವೈಶಿಷ್ಟ್ಯ.
‘ರಾಮಾಯಣದ ಬೀಜವನ್ನು ತುಳುನಾಡಿನ ಮಣ್ಣು, ಗಾಳಿ, ನೀರು, ಬೆಳಕಿನ ಗುಣಗಳಲ್ಲಿ; ಇಲ್ಲಿನ ಸೊಪ್ಪು ಗೊಬ್ಬರದ ಬಲದಲ್ಲಿ ಬೆಳೆ ತೆಗೆಯುವ, ತೆಗೆದ ಬೆಳೆಯ ಗುಣ, ರೀತಿ, ತೂಕ ಹೇಗಿದೆಯೆಂದು ನೋಡಲು ಮಾಡಿದ ಕೆಲಸದ ಫಲವೇ ಮಂದಾರ ರಾಮಾಯಣ’ ಎಂದು ಕೇಶವಭಟ್ಟರು ಮಂದಾರ ರಾಮಾಯಣದ ಮುನ್ನುಡಿಯಲ್ಲಿ ಬರೆದುಕೊಂಡಿದ್ದಾರೆ. ಕವಿಗೆ ರಾಮಾಯಣದ ಕಥೆ ಹೇಳುವಲ್ಲಿ ಎಷ್ಟು ಆಸಕ್ತಿ ಇದೆಯೋ ತುಳುನಾಡಿನ ಭೌತಿಕ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಚಿತ್ರಿಸುವಲ್ಲಿಯೂ ಅಷ್ಟೇ ಕಾಳಜಿ ಇದೆ. ಅದರಿಂದಾಗಿಯೇ ‘ಕಡಲತೀರದ ತುಳುನಾಡಿನ ವರ್ಣಮಯ ಬದುಕನ್ನು ನನ್ನ ಬಗೆಗಣ್ಣಿಗೆ ಕಾಣುವ ಹಾಗೆ ಕಥೆ ಬರೆಯುತ್ತೇನೆ’ ಎಂದಿದ್ದಾರೆ. ಅವರಾಡಿದ ಮಾತು ನಿಜ, ತುಳುನಾಡಿನ ಹಿಂದಿನ ಕಾಲದ ದೇಸೀ ಬದುಕು ಕಾವ್ಯದಲ್ಲಿ ಅನನ್ಯವಾಗಿ ಅನಾವರಣಗೊಂಡಿದೆ.
ತುಳುನಾಡಿನ ಭೂತಾರಾಧನೆಯಲ್ಲಿ ಬಳಕೆಯಾಗುವ ಸಂಧಿ, ಪಾಡ್ದನ, ನುಡಿಗಟ್ಟುಗಳ ಮಾದರಿಯನ್ನು ಇಲ್ಲಿನ ರಚನಾ ವಿನ್ಯಾಸದಲ್ಲಿ ಕಾಣಬಹುದು. ಹಳೆಯ ತುಳು ಶಬ್ದಗಳನ್ನು ಪಾಡ್ದನ ಮತ್ತು ಜನಪದ ಕಥೆಗಳಿಂದ ಪಡೆದುಕೊಳ್ಳಲಾಗಿದೆ. ಲೋಕೋಕ್ತಿ ಮತ್ತು ಗಾದೆ ಮಾತುಗಳನ್ನು ದೈನಂದಿನ ಬದುಕಿನಿಂದ ತೆಗೆದುಕೊಳ್ಳಲಾಗಿದೆ. ಒಟ್ಟಿನಲ್ಲಿ ತುಳು ಮೌಖಿಕ ಸಾಹಿತ್ಯದ ದಟ್ಟ ಪ್ರಭಾವವನ್ನು ಮಂದಾರ ರಾಮಾಯಾಣದಲ್ಲಿ ಗುರುತಿಸಬಹುದು.
ಸ್ಥಳೀಯ ಮರಗಿಡಬಳ್ಳಿ, ಪ್ರಾಣಿ-ಪಕ್ಷಿ-ಸಸ್ಯ ಸಂಪತ್ತು, ಕೃಷಿ-ಗೆಡ್ಡೆಗೆಣಸು, ನೆಲ-ಜಲ-ಕಡಲು ಇತ್ಯಾದಿಗಳ ಹೆಸರು ಮತ್ತು ವರ್ಣನೆಗಳನ್ನು ಓದಿಯೇ ಅನುಭವಿಸಬೇಕು. ಕೇಶವಭಟ್ಟರ ಜಾನಪದ ತಿಳಿವಳಿಕೆಗಾಗಿ ನಾವು ತಲೆದೂಗುವಂತಾಗುತ್ತದೆ. ಕೃಷಿಯ ಪರಿಭಾಷೆಗಳು, ಹಬ್ಬ ಹರಿದಿನ ಆಚರಣೆ ಸಂಪ್ರದಾಯಗಳಿಗೆ ಸಂಬಂಧಿಸಿದ ವರ್ಣನೆ, ಯುದ್ಧದ ರೀತಿ ನೀತಿಗಳು, ಆಯುಧಗಳು ಮುಂತಾದವುಗಳ ಚಿತ್ರಣ ತೀರ ಅಪೂರ್ವವಾದವು. ಕೆಲವು ಕಡೆ ಹಾಡುಗಬ್ಬದಂತೆ ಅತ್ಯಂತ ಕಾವ್ಯಾತ್ಮಕವಾಗಿ ಕಥೆಯ ನಡೆ ಸಾಗುತ್ತದೆ. ಕೊನೆಯಲ್ಲಿ ರಾವಣನ ವಧೆಯ ಬಳಿಕ ಶ್ರೀರಾಮಚಂದ್ರನು ಸೀತೆ, ಲಕ್ಷ್ಮಣ, ಹನುಮಂತ ಮತ್ತು ತನ್ನ ಸಕಲ ಪರಿವಾರದೊಂದಿಗೆ ಆಯೋಧ್ಯೆಗೆ ಮರಳಿ ಸಂತೋಷ ಸಂಭ್ರಮ ಸಡಗರದೊಂದಿಗೆ ರಾಜ್ಯಭಾರ ಮಾಡುತ್ತಿದ್ದನು ಎಂಬಲ್ಲಿಗೆ ಮಂದಾರ ರಾಮಾಯಣ ಮುಗಿಯುತ್ತದೆ.
ತುಳುನಾಡಿನ ಬದುಕಿಗೆ ಹೊಂದಿಕೆಯಾಗುವಂತೆ ಕಥೆಯಲ್ಲಿ ಹಲವು ಕಡೆ ಸಣ್ಣಪುಟ್ಟ ವ್ಯತ್ಯಾಸಗಳನ್ನು ಮಂದಾರರು ಮಾಡಿಕೊಂಡಿದ್ದಾರೆ. ಕೆಲವು ಪಾತ್ರಗಳ ಗುಣಸ್ವಭಾವದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಆದರೆ ಅದರಿಂದ ಕಥೆಯ ಓಟಕ್ಕೆ ಮತ್ತು ಒಟ್ಟಂದಕ್ಕೆ ಯಾವುದೇ ಬಾಧಕ ಉಂಟಾಗಿಲ್ಲ. ತುಳುನಾಡಿನ ಹಿಂದುಳಿದ ಮಲೆಕುಡಿಯ ಪಂಗಡದವರನ್ನು ವಾಲ್ಮೀಕಿಯ ಪೂರ್ವಾಶ್ರಮದವರೆಂದು ಚಿತ್ರಿಸಿರುವುದು ಕುತೂಹಲಕಾರಿಯಾಗಿದೆ. ಮಂಥರೆಯನ್ನು ಕುರೂಪಿಯೆಂದು ಚಿತ್ರಿಸದೆ, ಮೂಲದಲ್ಲಿರುವ ಕೇಕಯ ರಾಜನಿಗೆ ಸಿಗುವ ಮಗುವಿನ ವೃತ್ತಾಂತವನ್ನು ಬಿಟ್ಟು, ಶಬರಿ ಮತ್ತು ಮಂಥರೆಗೆ ತಾಯಿ ಮಗಳ ಸಂಬಂಧವನ್ನು ಕಲ್ಪಿಸಿರುವುದು ವಿನೂತನವಾಗಿದೆ ಮತ್ತು ಆ ಮೂಲಕ ಮಂಥರೆಯ ಪಾತ್ರವನ್ನು ಮಾನವೀಯವಾಗಿ ಚಿತ್ರಿಸಿ ಆಧುನಿಕ ಮನೋಧರ್ಮವನ್ನು ಮೆರೆಯಿಸಿದ್ದಾರೆ. ಅಹಲ್ಯೆ ಕಲ್ಲಾಗದೆ, ಅಂಗಳದಲ್ಲಿ ಅನ್ನ ಆಹಾರ ನಿದ್ರೆ ಬಿಟ್ಟು ಸತ್ಯಾಗ್ರಹ ಹೂಡುವುದು, ರಾಮ ಬಂದಾಗ ತನಗೆ ನ್ಯಾಯ ಒದಗಿಸುವಂತೆ ಬೇಡಿಕೆ ಮಂಡಿಸಿ ಗೌತಮನ ಅನ್ಯಾಯವನ್ನು ಬಯಲಿಗೆಳೆಯುವುದು, ಆಗ ರಾಮ ಗೌತಮನನ್ನು ಕರೆಸಿ ಅವನಿಗೆ ಬುದ್ಧಿವಾದ ಹೇಳಿ ಸಂಸಾರವನ್ನು ಸರಿಪಡಿಸುವುದು ಇತ್ಯಾದಿ ಬದಲಾವಣೆಗಳು ಆಧುನಿಕ ಕಾಲಕ್ಕೆ ಸಂಗತವಾಗುವಂಥದಾಗಿದೆ. ರಾಮನನ್ನು ಅಲೌಕಿಕ ದೇವರು ಎಂಬಂತೆ ಚಿತ್ರಿಸದೆ ಉತ್ತಮ ಗುಣಸ್ವಭಾವದ ಸಾಮಾನ್ಯ ನರಮನುಷ್ಯ ಎಂಬಂತೆ ಚಿತ್ರಿಸಿರುವುದು ಮಂದಾರ ರಾಮಾಯಣದ ವಿಶೇಷತೆ.
ಮಂದಾರರು ತನ್ನ ರಾಮಕಥನದಲ್ಲಿ ಹಳ್ಳಿಯ ಜೀವನ ಚಿತ್ರಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಆ ಮೂಲಕ ದೇಸೀಯತೆಯ ಮಹತ್ವವನ್ನು ಮೆರೆದಿದ್ದಾರೆ. ಒಂದು ಕಡೆ ರಾಮ ಹಳ್ಳಿಯ ಜನರ ಬವಣೆಯ ಬದುಕು ನೋಡಲಾಗದೆ ಇವರನ್ನೆಲ್ಲ ಪಟ್ಟಣಕ್ಕೆ ಸಾಗಿಸುವ ಎಂದು ಹೇಳುತ್ತಾನೆ. ಆಗ ವಿಶ್ವಾಮಿತ್ರರು ಈ ಜನರು ಅದನ್ನು ಒಪ್ಪಲಾರರು ಅಲ್ಲದೆ ಇಲ್ಲಿರುವವರನ್ನು ಪಟ್ಟಣಕ್ಕೆ ಸಾಗಿಸಿದರೆ ಹಳ್ಳಿಗಳೆಲ್ಲ ಹಾಳಾಗಿ ಗದ್ದೆಗಳು ಖಾಲಿ ಬಿದ್ದಾವು, ಕೃಷಿ ಕೈತಪ್ಪಿ ಹೋದೀತು ಎನ್ನುತ್ತಾರೆ.
ಹೀಗೆ ಹೆಜ್ಜೆಹೆಜ್ಜೆಗೂ ಮಂದಾರ ರಾಮಾಯಾಣದಲ್ಲಿ ಸ್ಥಳೀಯ ಬದುಕಿನ ಚಿತ್ರಣ ಕಣ್ಣಿಗೆ ರಾಚುತ್ತದೆ. ಮಂದಾರರು ರಾಮಕಥೆಯನ್ನು ಭಕ್ತಿಯಿಂದ ನಿರವಿಸದೆ ವೈಚಾರಿಕ ಮತ್ತು ಪ್ರಸ್ತುತದ ದೃಷ್ಟಿಯಿಂದ ಹೇಳಿರುವುದು ಮಂದಾರ ರಾಮಾಯಣದ ವೈಶಿಷ್ಟ್ಯಗಳಲ್ಲಿ ಒಂದು. ಕೆಡುಕನ್ನು ಮೆಟ್ಟಿ ಒಳ್ಳೆಯದನ್ನು ವಿಜೃಂಭಿಸುವ ಆಶಯದ ಮೂಲಕಥೆ ರಾಮಾಯಣದ್ದೇ ಆದರೂ ನಮ್ಮ ನಡುವೆ ನಡೆದ ಮಾನುಷ ಸಹಜವಾದ ಒಂದು ನೈಜಕಥನವೆಂಬಂತೆ ಮಂದಾರರು ಚಿತ್ರಿಸಿದ್ದಾರೆ. ಕರಾವಳಿ ಕರ್ನಾಟಕದ, ಅದರಲ್ಲೂ ತುಳುನಾಡಿನ ವೈಶಿಷ್ಟ್ಯಪೂರ್ಣ ಬದುಕಿನ ಪುಟಗಳನ್ನು ರಾಮಕಥೆಯ ನೆಪದಲ್ಲಿ ಅಥವಾ ರಾಮನ ಮೂಲಕ ತುಳುವಿನಲ್ಲಿ ದಾಖಲಿಸಿರುವುದು ಮಂದಾರ ರಾಮಾಯಣದ ಹೆಚ್ಚುಗಾರಿಕೆಯಾಗಿದೆ.
ವಿಳಾಸ:
ಡಾ. ವಸಂತಕುಮಾರ ಪೆರ್ಲ
‘ಭೂಮಿಗೀತ’,
ಕುಂಜತ್ತಬೈಲು, ಮಂಗಳೂರು – 575 015.
9448384391
*ಡಾ. ವಸಂತಕುಮಾರ ಪೆರ್ಲ*
ಸೃಜನಶೀಲತೆಯನ್ನೇ ಬದುಕಾಗಿಸಿಕೊಂಡ ಡಾ.ವಸಂತಕುಮಾರ ಪೆರ್ಲ ಅವರು ನಮ್ಮ ನಡುವಿನ ಅಪಾರವಾದ ಜೀವನಪ್ರೀತಿಯ ಅಕ್ಷರ ತಪಸ್ವಿ. ಅವರ ಮಾತು, ಕ್ರಿಯೆ, ನಡೆ, ನುಡಿಗಳಲ್ಲಿ ಪ್ರೀತಿಯ ಅನಾಹತ ನಾದವು ಹೊರಹೊಮ್ಮುವುದನ್ನು ಅವರ ಒಡನಾಡಿಗಳೆಲ್ಲರೂ ಬಲ್ಲರು.
"ನಾವು ಆಡುವ ಮಾತು ಹೀಗಿರಲಿ ಗೆಳೆಯ ಮೆದು ಮಾತು ಮೂಲೋಕ ಗೆಲ್ಲುವುದು ತಿಳಿಯ" ಎಂಬ ಕವಿ ಚೆನ್ನವೀರ ಕಣವಿಯವರ ಮಾತು - ಕವನದ ಸಾಲು ಡಾ.ವಸಂತಕುಮಾರ ಪೆರ್ಲ ಅವರಿಗೆ ಅಕ್ಷರಶಃ ಅನ್ವಯಿಸುತ್ತದೆ. ವಸಂತ ಎಂದರೆ ಋತುರಾಜ. ಹಾಗೆ ನಮ್ಮ ಕವಿರಾಜ ಡಾ. ವಸಂತಕುಮಾರ ಪೆರ್ಲ ಅವರು ತಮ್ಮ ಬದುಕು ಮತ್ತು ಬರಹಗಳಲ್ಲಿ ಕೌಮಾರ್ಯ ಮತ್ತು ಪ್ರೌಢಿಮೆಯನ್ನು ಬಿಡದೆ ಕಾಪಾಡಿಕೊಂಡು ಬಂದ ಕವಿ. ಮಾನವತಾವಾದಿಯಾದ ಅವರು ಕವಿ,ಕತೆಗಾರ, ಕಾದಂಬರಿಕಾರ, ವಿಮರ್ಶಕ,
ಅಂಕಣಕಾರ, ಪತ್ರಕರ್ತ, ನಟ,
ಕಲಾವಿದ, ಆಕಾಶವಾಣಿಯ ನಿರ್ದೇಶಕ, ಕುಟುಂಬವತ್ಸಲ, ಗೆಳೆತನದ ಹರಿಕಾರ, ಕನ್ನಡ ನುಡಿಯ ಕಿಂಕರ, ಸಂಶೋಧಕ - ಹೀಗೆ ಅವರ ವ್ಯಕ್ತಿತ್ವಕ್ಕೆ ಹತ್ತು ಹಲವು ಆಯಾಮಗಳು. ನಮ್ಮ ಆಲೋಚನೆ.ಕಾಮ್ ಇದರ ಸಂಪನ್ಮೂಲ ವ್ಯಕ್ತಿಯೂ ಹಿತೈಷಿಗಳೂ ಆದ ಡಾ.ವಸಂತಕುಮಾರ ಪೆರ್ಲ ಅವರು ಕನ್ನಡ, ತುಳು, ಇಂಗ್ಲಿಷ್ ಮೂರೂ ಭಾಷೆಗಳಲ್ಲಿ ಬರೆಯುವ ವಿದ್ವಾಂಸ. ರಂಗಭೂಮಿಯ ಬಗ್ಗೆ ಡಾಕ್ಟರೇಟ್ ಪಡೆದಿದ್ದಾರೆ ಮತ್ತು ಈ ಮೂರು ಭಾಷೆಗಳಲ್ಲಿ ಸುಮಾರು ಐವತ್ತೈದರಷ್ಟು ಕೃತಿರಚನೆ ಮಾಡಿದ್ದಾರೆ.
ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
Comments