top of page

ಮುದಜ್ಜಿಗೊಂದು ಪಾಠ

ರಂಗನ‌ ಮನೆಯಲಿ

ತಿಂಗಳ ಕೊನೆಯಲಿ

ಮಂಗಳ ಕಾರ್ಯವು ಜರುಗಿತ್ತು

ರಂಗಿನ ಬಣ್ಣದ

ಶೃಂಗರ ನೋಡಲು

ಕಂಗಳೆ ಮಿಟುಕದೆ ನಿಂತಿತ್ತು//


ಹೆಂಗೆಳೆಯರೆಲ್ಲ

ಅಂಗಳ ಮುಂದಣ

ರಂಗೋಲಿಯ ಬಿಡಿಸಿದರಂದ

ಸಂಗಡಿಗರೆಲ್ಲ

ಸಿಂಗರಿಸಿದ ಮನೆ

ಕಂಗೊಳಿಸಿತು ಬಲು ಸೊಗದಿಂದ//


ನೆಂಟರು ಇಷ್ಟರು

ತುಂಟರ ಬಳಗವು

ಪಂಟರು ನೆರೆದರು ಸಂಭ್ರಮದಿ

ತುಂಟರ ನಾಯಕ

ಪಿಂಟುವು ಸಿದ್ಧನು

ಗಂಟನು ಪಡೆಯುವ ಕಾಯಕದಿ//


ಮುದಿವಯಸಿದ್ದರು

ಕದಿಯುವ ಬುದ್ದಿಯ

ಮುದಜ್ಜಿ ಬಂದಳು ಸಂಭ್ರಮಕೆ

ಅಂದದ ರತ್ನದ

ಸುಂದರ ಪುತ್ಥಳಿ

ಯೊಂದನು ಕದ್ದಳು ಆಮಿಷಕೆ//


ಒಡನೆಯೆ ದೂರದಿ

ನೋಡಿದ ಪಿಂಟುವು

ಪಡೆಯಲು ಪುತ್ಥಳಿ ನಿರ್ಧರಿಸಿ

ತಡವನು ಮಾಡದೆ

ಮಡುಗಿದ ತಿಳಿಯದೆ

ಪಡೆದನು ಮುದಜ್ಜಿ ಮರೆಗೊಳಿಸಿ//


ಪೂಜಾರಿ ಕೇಳೆ

ಪೂಜೆಗೆ ಪುತ್ಥಳಿ

ಗೋಜಾಯಿತೆಲ್ಲು ಕಾಣದಿರೆ

ಮೋಜಲೆ ‌ಪಿಂಟುವು

ರಾಜಾ‌ರೋಷದಿ

ಪೂಜೆಯ ಪುತ್ಥಳಿ ತೋರುತಿರೆ//


ಇಂಗನು ತಿಂದಿಹ

ಮಂಗನ ಹಾಗೆಯೆ

ಪೆಂಗನೆ ನಿಂದಳು ಮುದಜ್ಜಿಯು

ರಂಗನ ಮನೆಯಲಿ

ಮಂಗಳ ಕಾರ್ಯದಿ

ಅಂಗನೆ ಕಲಿತಳು ಸುಬುದ್ಧಿಯ//


ಭವಾನಿ ಗೌಡ(ಭುವಿ)

ವಿಜಯಪುರ

28 views0 comments

Comments


bottom of page