ಮಾತೆಲ್ಲಿದೆ...?
- ಆಲೋಚನೆ
- Nov 29, 2020
- 1 min read
Updated: Nov 30, 2020
ಇಬ್ಬನಿಯ ತಂಪನು
ತಬ್ಬಿದ ಸುಮಗಳಿಗೆ
ಮಾತೆಲ್ಲಿದೆ ?
ಹೊಂಗಿರಣದ ಸ್ಪರ್ಶಕೆ
ಸ್ಪಂದಿಸುವ ಇಳೆಗೆ
ಮಾತೆಲ್ಲಿದೆ ?
ಹಣ್ಣೆಲೆ ಉದುರಿ
ಭುವಿಗೆ ಬೀಳುವಲ್ಲಿ
ಮಾತೆಲ್ಲಿದೆ ?
ಹೊಸ ಚಿಗುರು ಮೊಗ್ಗುಗಳು
ಮೊಳಕೆಯೊಡೆವಲ್ಲಿ
ಮಾತೆಲ್ಲಿದೆ ?
ಒದ್ದೆ ಮರಳಿನ
ಹೆಜ್ಜೆ ಗುರುತಿನ ಕ್ಷಣಗಳಿಗೆ
ಮಾತೆಲ್ಲಿದೆ ?
ಬೊಗಸೆಯ ನೀರ ಹನಿ
ಬೆರಳೆಡೆಯಿಂದ ಜಾರುವಲಿ
ಮಾತೆಲ್ಲಿದೆ ?
ಕಣ್ಣ ಕಂಬನಿ
ಗಲ್ಲದಿಂದುರುಳುವಲಿ
ಮಾತೆಲ್ಲಿದೆ ?
ಬಾನ ಚುಕ್ಕಿಗಳ
ಮಿನುಗು ಮಾಲೆಗಳಿಗೆ
ಮಾತೆಲ್ಲಿದೆ ?
ಮನಸು ಹೃದಯಗಳ
ಮೌನ ಅಭಿವ್ಯಕ್ತಿಗೆ
ಮಾತೆಲ್ಲಿದೆ ?
ಮನೆ ಮನಗಳ
ನಂದಾದೀಪಗಳ ನಗುವಿಗೆ
ಮಾತೆಲ್ಲಿದೆ ?
ಶಾಂತಲಾ ರಾಜಗೋಪಾಲ್
ಬೆಂಗಳೂರು
ಶಾಂತಲಾ ರಾಜಗೋಪಾಲ್ ಅವರು ಮೂಲತಃ ಉತ್ತರ ಕನ್ನಡದವರು.ಬೆಳೆದಿದ್ದು ವಿದ್ಯಾಭ್ಯಾಸ ಪಡೆದಿದ್ದು ದಕ್ಷಿಣ ಕನ್ನಡ ದ ಮೂಡಬಿದ್ರೆ ಮತ್ತು ಮಂಗಳೂರು. ಅವರು B.A. LLB ಪದವಿ ಪಡೆದಿದ್ದಾರೆ.ಓದು, ಬರಹ ಅವರ ಹವ್ಯಾಸ. ತೊಂಬತ್ತರ ದಶಕದಲ್ಲಿ ಹಲವಾರು ಕವನಗಳನ್ನು ರಚಿಸಿದ್ದು ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು . ಪ್ರಸ್ತುತ ಬೆಂಗಳೂರಲ್ಲಿ ನೆಲೆಸಿದ್ದಾರೆ. ಅವರ ಒಂದು ಕವನ ನಿಮ್ಮ ಓದಿಗಾಗಿ. ಸಂಪಾದಕರು

This poem is a good example to say that silence is more eloquent than speech.
Ashok Pujar