ಮಂತ್ರವಾಗಲಿ ಮಾತು
- -ಡಾ. ವಸಂತಕುಮಾರ ಪೆರ್ಲ
- Sep 23, 2020
- 1 min read
ಸಮುದ್ರದ ದಂಡೆಗೆ ಹೋಗಿ ನಿಂತೆ
ಮಾತು ಹೊರಡಲಿಲ್ಲ
ತುಂಬಿ ಹರಿವ ನದೀದಂಡೆಗೆ ಹೋಗಿ ನಿಂತೆ
ಮಾತಾಡಬೇಕೆಂದು ಅನಿಸಲಿಲ್ಲ
ಪರ್ವತದ ಬುಡದಲ್ಲಿ ನಿಂತೆ
ಬಾಯಿ ಕಟ್ಟಿತು ಮಾತು
ಆಕಾಶದತ್ತ ನೋಡುತ್ತ ನಿಂತೆ
ಮೂಕವಾಯಿತು ಮಾತು
ಅರ್ಥವೇ ಅರ್ಥ ಕಳೆದುಕೊಳ್ಳುವ ಇಲ್ಲಿ
ಮಾತಾಡುವುದು ಹೇಗೆ?
ಮಾತು ಕೇವಲ ಶಬ್ದ
ತುಂಬಿದಂತೆ ಅರ್ಥ
ತುಂಬುತ್ತ ತುಂಬುತ್ತ ಮಂತ್ರವಾಗಬೇಕು
ಸಮುದ್ರ ನದಿ ಪರ್ವತ
ಆಕಾಶ ಅವಕಾಶಗಳೆಲ್ಲ ತುಂಬಿ
ಧ್ಯಾನವಾಗಬೇಕು.
-ಡಾ. ವಸಂತಕುಮಾರ ಪೆರ್ಲ.
留言