
ನಾವೇಕೆ ಅಡ್ಡ ರಸ್ತೆ, ಉದ್ದ ರಸ್ತೆಯ
ಈ ಮಹಡಿಮನೆಗೆ ಬಂದುಬಿಟ್ಟಿದ್ದೇವೆ
ಮಾತೇ ಮರೆತವರ ನಡುವೆ?
ನಾನೋ, ನೀರಿಗೋ ತರಕಾರಿಗೋ
ದಡ ದಡ ಅಂತ
ಮೆಟ್ಟಿಲ ಹತ್ತಿಳಿಯುತ್ತೇನೆ
ಒಂದಲ್ಲ, ಹತ್ತಾರು ಬಾರಿ
ಮಾತೇ ಮರೆತವರ ನಡುವೆ
ಇವರೋ, ಹಾಲಿಗೋ ತರಕಾರಿಗೋ,
ಟಿಪ್ಪು ಟಾಪಾಗಿ ಆಫೀಸಿಗೋ
ಹೋಗುತ್ತಾರೆ, ಬರುತ್ತಾರೆ
ಮಾತೇ ಮರೆತವರ ನಡುವೆ.
ಮಗ, ದೀಪು ದೀಪಾ ದೀಪಕ್
ಎಂದು ಕೂಗುತ್ತಾ ಬ್ಯಾಟ್ ಬಾಲ್ ಹಿಡಿದು,
ಬರುವ ಸ್ನೇಹಿತರಿಲ್ಲದೇ
ಟೆರೇಸಿನ ಗೋಡೆಗೇ ಚೆಂಡು ಬಾರಿಸುತ್ತ
ತನ್ನ ಒಂಟಿತನವ ಮರೆಯುತ್ತಾನೆ
ಮಾತೇ ಮರೆತವರ ನಡುವೆ.
ಇನ್ನು, ಅಪರ್ ಕೆಜಿಯ ಪೋರಿ,
ಅಮ್ಮಾ ನಾವೇಕೆ ಬಂದು ಬಿಟ್ಟಿದ್ದೇವೆ
ಈ ದೊಡ್ಡ ಶಹರಕ್ಕೆ
ಎಂಬ ರಾಗವನ್ನೇ ಹಾಡುತ್ತಿರುತ್ತಾಳೆ
ಮಾತೇ ಮರೆತವರ ನಡುವೆ.
ಇಲ್ಲಿಯ ಮಳೆಗಾದರೂ ಏನು ಧಾಡಿ,
ಬೇಶರತ್ತಾಗಿ ಸುರಿಯಲಿಕ್ಕೆ
ಆಗೊಮ್ಮೆ ಈಗೊಮ್ಮೆ ಚೂರು ಪಾರು.
ಅದಕ್ಕೂ ಬೇಸರವೇ
ಈ ಮಾತೇ ಮರೆತವರ ನಡುವೆ?
ಆದರೂ ನಾವು ಬದುಕಿದ್ದೇವೆ
ಅಡ್ಡ ರಸ್ತೆಯ, ಉದ್ದ ರಸ್ತೆಯ
ಈ ಮಹಡಿಮನೆಯಲ್ಲಿ
ಮಾತೇ ಮರೆತವರ ನಡುವೆ.
0=0
