top of page

ಮಂಜುನಾಥ ಯಲ್ವಡಿಕವೂರರವರ ಅಂಜುಬುರುಕಿಯ ರಂಗವಲ್ಲಿ ಕವನ ಸಂಕಲನದ ಕೃತಿ ಪರಿಚಯ

ವೃತ್ತಿಯಲ್ಲಿ ಆರಕ್ಷಕರಾಗಿರುವ ಮಂಜುನಾಥ ಯಲ್ವಡಿಕವೂರ ಪ್ರವೃತ್ತಿಯಲ್ಲಿ ಕವಿ.ಉಡುಪಿ

ಅದಿತಿ ಪ್ರಕಾಶನ ಇವರ ಚೊಚ್ಚಲ ಕವನ ಸಂಕಲನವನ್ನು ಹೊರತಂದಿದೆ.

ಕನ್ನಡದ ಪ್ರೀತಿಯ ಕವಿ ಜಯಂತಕಾಯ್ಕಿಣಿಯವರು ಮುನ್ನುಡಿಯಲ್ಲಿ ಇವರ ಕವನಗಳ ಬಗ್ಗೆ ಬರೆಯುತ್ತ "ವೃತ್ತಿಯಲ್ಲಿ ಪ್ರವೃತ್ತಿಯಲ್ಲಿ ಸಮಾಜವನ್ನು ಒಂದು ದೊಡ್ಡ ಕುಟುಂಬವೆಂದು ಗ್ರಹಿಸುವ ಜೀವಿಯೊಬ್ಬನ ಆತ್ಮಸಾಕ್ಷಿ ರೂಪುಗೊಳ್ಳುವ ಧ್ವನಿ ಸೊಲ್ಲುಗಳು ಇಲ್ಲಿವೆ. ಸಮಾಜದ ಜೀವಪರಿಸರದಲ್ಲಿ ತನ್ನ ಅಸ್ಮಿತೆಯನ್ನು ಬೆರೆಸಿಕೊಂಡಿರುವ ಈ ಕವಿತೆಗಳ ತುಡಿತ ಮಹತ್ವದ್ದಾಗಿದೆ ಎನ್ನುತ್ತಾರೆ."

ಕವಿ ಮಂಜುನಾಥ ನನಗೆ "ಕಾವ್ಯವೆಂದರೆ ಜೀವಂತಿಕೆಯ ನಿಗಿನಿಗಿ ಕೆಂಡ;ಅರ್ಥವಂತಿಕೆಯ ಬೆರಗು; ತಪದ ಮುನಿಯ ತಲ್ಲೀನತೆ; ಚಿಂತನೆಯ ನಾಗಾಲೋಟದಲ್ಲಿ ಸಿಕ್ಕ ಮೈಲಿಗಲ್ಲು ಅಂದುಕೊಳ್ಳುತ್ತಾರೆ. ಮತ್ತು ಇವನೆಲ್ಲಾ ಅಳವಡಿಸಿಕೊಂಡು ಕವಿ ಚಿಂತನಶೀಲನಾಗಿ,ಸಾಮಾಜಿಕ ಕಳಕಳಿಯೊಂದಿಗೆ, ಗಂಭೀರವಾಗಿ, ಅರ್ಥವಂತಿಕೆಯೊಂದಿಗೆ ಬರೆಯುತ್ತಾರೆ.

ಅವರ ಮೊದಲ ಕವನ

'ಕನಸು ಮಾರುವ ಹುಡುಗ'ದಲ್ಲಿ ಕವಿ ಕಾಣುವ ಕನಸು ಪ್ರೀತಿಯದ್ದು. ಮಾನವ ಪ್ರೀತಿಯದ್ದು. ಮೊದಲ ಸಾಲಿನಲ್ಲಿಯೇ

ರಂಜಾನ್ ಪೇಟೆ ಪಕ್ಷಿಕಾಶಿಯ ಕೇಕೆ. ರಂಜಾನ್ ಮುಸ್ಲಿಂ ಹಬ್ಬ. ಆದರೆ ಅಲ್ಲಿ ಕರೀದಿಸುವ ಜನ ಜಂಗುಳಿಯಲ್ಲಿ ಎಲ್ಲಾ ಧರ್ಮದವರೂಇದ್ದಾರೆ. ಅಲ್ಲಿ ಉಕ್ಕುವ ಗೌಜುಗದ್ದಲ ಕವಿ ಕಿವಿಗೆ ಪಕ್ಷಿಗಳ ಕಲರವವಾಗಿ ಕೇಳುತ್ತದೆ. ಕಾರಣಾಂತರಗಳಿಂದ ಜಾತಿ ಧರ್ಮದ ಸಂಬಂಧಗಳಿಗೆ ಸಂಚಕಾರ ಬಂದಿದೆ. ಒಂದಾಗುವ ಯಾವ ಸೂಚನೆಯೂ ಇಲ್ಲಾ. ಒಂದಾಗುವ ಕನಸುಗಳೂ ಇರಲಾರವು. ಈ ಕವಿಯಲ್ಲಿ ಒಂದುಗೂಡಿಸುವ ಮನೋಸಂಕಲ್ಪವಿದೆ. ಅದಕೆ ಕವಿ "ಬೀಗ ಜಡಿದ ಕನಸ ಮನೆಗೆ ಕೀಲಿ ಬೇಕೆ?"ಎಂದು ಮುಗ್ಧ ವಾಗಿ ಪ್ರಶ್ನಿಸುತ್ತಾನೆ.

'ಬೋಧಿವೃಕ್ಷದ ನೆರಳು' ಕವನದಲ್ಲಿ ಸಾಮಾನ್ಯನಿಗೆ ಅಸಾಧ್ಯವಾದ ದಾರಿಯಲ್ಲಿ ಬುದ್ಧ ನಡೆದ ರೀತಿಯನ್ನು ವಿಸ್ಮಯದಿಂದ ನೋಡುವ ಕವಿ

"ನಿನ್ನ ಅಚಲ ನಿರ್ಣಯದ ಮೇಲೆ ಮೋಹದ ಬಲೆ ಬೀಸಿ ಕುಣಿಯಲಿಲ್ಲವೇ ಸಂಬಂಧಗಳ ಮಾಯಾಜಿಂಕೆ?"ಎಂದು ಬುದ್ಧನನ್ನು ಪ್ರಶ್ನಿಸುತ್ತ ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ.

ಬುದ್ಧನ ನಡೆಯನ್ನು ಮಿಥ್ಯದ ಸಮಾಧಿಯಿಂದ ಹೊರಟ ಸತ್ಯದ ಬೆಳಕಿನ ಹಾದಿಗಳು ಅನ್ನುವನು.

ಬಂಧಿಖಾನೆಯೊಳಗೆ ಭಗವಂತ ಈ ಕವನದ ಶೀರ್ಷಿಕೆಯೇ ಎಲ್ಲಾ ದೇವಾಲಯಗಳ

ಗುಟ್ಟುಗಳನ್ನೂ ಬಯಲು ಮಾಡುತ್ತದೆ. ವರ್ತಮಾನದ ಗಂಟೆ ಜಾಗಟೆಗಳ ಒಡಲೊಳಗೆ ಭೂತಕಾಲದ ಇಂಪಿಲ್ಲಾ ಅನ್ನುವಲ್ಲಿ ಕವಿ ಹತಾಶೆಯ ನಿಟ್ಟುಸಿರು ಬಿಡುತ್ತಾನೆ. ದೇವನ ಕೈ ಕಾಲು ಕಣ್ಣು ಕಿವಿ ಶಿರವೆಳೆದು ಮಾಡಿದರು ಚೂರು ಚೂರು

ಬಂಧಿಖಾನೆಯೊಳಗೆ ಬಂಧಿಯ ಮಾಡಿ ಅನ್ನುವನು. ದೇವಾಲಯದ ಮೂಲ ಆಶಯವನ್ನು ಬದಿಗೊತ್ತಿ ಹಕ್ಕಿಗಾಗಿ ಹೋರಾಡಿ ದೇವರನ್ನು ಕಟಕಟೆಗೇರಿಸುವ ಚಿತ್ರವನ್ನು ಬಿಚ್ಚಿಡುತ್ತಾನೆ.

'ಅಮೆರಿಕಾ ಕುದುರೆ 'ಎನ್ನುವ ಕವನದೊಳಗೆ ಅಮೆರಿಕದ ವ್ಯಾಪಾರಿ ಬುದ್ಧಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಸುವ ದುರ್ಬುದ್ಧಿಗಳನ್ನು ಹೇಳುತ್ತ 'ಗಾಂಧಿ ಚರಕ ಪುಡಿಯೆಬ್ಬಿಸಿ

ಚಕ್ರಾಧಿಪತ್ಯದ ಅಹಮ್ಮಿನ ಕುದುರೆ ಅಂತರ್ಜಾಲದ ಬಲೆಮುಂದೆ ಮಾರ್ಜಾಲ ಕುದುರೆ' ಎನ್ನುತ್ತ ಅಮೆರಿಕಾ ಭಾರತದ ಮೇಲೆ ಬೀರಿದ ಪ್ರಭಾವವನ್ನು ಈ ಮೂಲಕ ಬಿಂಬಿಸುತ್ತಾರೆ.

ಚಿಕ್ಕಪುಟ್ಟಊರದಾರಿ

ಜೀರುಂಡೆಗಳ

ನೆತ್ತರು ಹೀರುವ ರಕ್ಕಸಕುದುರೆ

ಕಂದಕಗಳ ಕೊಚ್ಚೆಯಲ್ಲಿ ಹೇಲುಚ್ಚೆ ಹೊಯ್ವ ಅಂಧಕಾರ ಕುದುರೆ ಎಂದು ಅಮೆರಿಕದ ದುರುಳತನದ ಬಗ್ಗೆ ಅತೀ ಕಾರವಾಗಿ ಪ್ರತಿಕ್ರಿಯಿಸುತ್ತಾನೆ ಕವಿ.

'ವಿಷಕಾರುವವರದ್ದೇ ಸದ್ದು' ಕವನದೊಳಗೆ "ಈಗೀಗ ಕೇರಿಯ ಹಾದಿಗಳಲ್ಲಿ ಉರಗಗಳ ಸರದಿ

ವಿಷ ಜೀವಿಗಳು ಹಾವೋ ನಾವೋ ಗೊಂದಲವೋ ಗೊಂದಲ' ಎಂದು ಆರಂಭವಾಗುವ ಕವನದೊಳಗೆ ಊರುಗಳಲ್ಲಿ ತುಂಬಿರುವ ದುರುಳಜನರ ಬಗ್ಗೆ ವ್ಯತಿಸುತ್ತಾ 'ನಮ್ಮ ಕೇರಿಯಲ್ಲೀಗ ವಿಷದ ಉರಗಗಳ ಸದ್ದಿಲ್ಲಾ ವಿಷ ಕಾರುವವರದೇ ಸದ್ದು ಎಂದು ಕವನ ಅಂತ್ಯವಾಗುತ್ತದೆ.

'ಡೊಂಬರಾಟದ ಹುಡುಗಿ' ಯಂಥ ಸಾಮಾಜಿಕ ಸಮಸ್ಯೆಗಳು ಇವರ ಲೇಖನಿಯಿಂದ ಜೀವತಳೆದು ನಿಲ್ಲುತ್ತವೆ. ಅವರ ನುಡಿಯಲ್ಲೇ ಆಲಿಸಿ "ಚಿಂದಿ ಬಟ್ಟೆಯ ಮೇಲೆ ಸಹಿಮಾಡಿದೆ ಬಡತನದ ಪ್ರತಿಬಿಂಬ ಕಣ್ಣಲ್ಲಿ ಕತ್ತಲೋಡಿಸಬೇಕೆಂಬ ಚಂದ್ರಬಿಂಬ". ಕವಿ ಇಲ್ಲಿ ಪರಕಾಯ ಪ್ರವೇಶಮಾಡಿ ಡೊಂಬರ ಹುಡುಗಿಯ ಒಳತೋಟಿಯನ್ನು ಪ್ರಕಟಪಡಿಸುತ್ತಾನೆ.

'ಈ ಶಹರದ ಕಣ್ಣುಗಳಲ್ಲಿ' ಅನ್ನುವ ಕವನದೊಳಗೆ

"ನೆತ್ತರು ಮೆತ್ತಿದ ಶಹರದ ಡಾಂಬರು ರಸ್ತೆಯ ಉನ್ಮಾದದ ತುದಿಗೆ ಹಸಿವ ತೃಷೆಗೆ ಕುಕ್ಕಡಿಸೋ ಗಿಡುಗಕ್ಕೆ

ರಕ್ತ ಬಿಸಿಯಲ್ಲಾ ಸಿಹಿಯ ಮೃಷ್ಟಾನ್ನ ಅನ್ನುತ್ತ ಶಹರದ ಶುಷ್ಕ ಕ್ರೂರ ವಾಸ್ತವ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ರೀತಿ ಸೊಗಸಾಗಿದೆ.

ಅಂಜುಬುರುಕಿಯ ರಂಗವಲ್ಲಿ ಕವನದೊಳಗೆ ಕವಿ ಸುಪ್ಪತ್ತಿಗೆಯವರ ದಾಳದ ಕುರುಡರಿಂದ ಹೀಯಾಳಿಸಲ್ಪಡುವ ಮಾನವೀಯತೆಯ ಸೌಧನ್ನು ನಿರ್ಮಿಸಲು ಹಂಬಲಿಸಿ ಗೋಡೆಗಳನ್ನು ಕೆಡವಲು ಆಶಿಸುವನು."ಬಿರುಕು ಗೋಡೆಗಳಿಗೆ ಮುಚ್ಚಿದ ಊರದಾರಿಗಳಿಗೆ ರಂಗವಲ್ಲಿಯೇ ಬೆಳದಿಂಗಳಾಗಬೇಕೆಂಬ ಕನಸಿನ ಕನವರಿಕೆ" ಕವಿಯಿಲ್ಲಿ ಕಳೆದು ಹೋಗಿರುವ ಸಹೋದರತ್ವವನ್ನು ಮನೆ ಮನದ ಮೌಲ್ಯದ ವಸ್ತುಗಳನ್ನು ಕಳಕೊಂಡವನಂತೆ ವ್ಯತಿತನಾಗಿದ್ದಾನೆ.

ಕವಿಯ ಎದೆಯಲ್ಲಿ ದಹಿಸುತ್ತಿರುವ ವಿಷಯಗಳಿಗೆ ತಾಳ್ಮೆಯಿಂದ ಕಾದು ಕಾವು ನೀಡಿ ವಿಚಾರ ಲಹರಿಯನ್ನು ಹದವಾಗಿ ಹರಿಬಿಟ್ಟಿದ್ದಾನೆ.

"ಭೂಗರ್ಭದಲಿ ಫಲದ ಸೆಲೆ ಅಡಗಿಸಿಟ್ಟ ಶತಮಾನದ ಫಲದ ಈ ನೆಲ ಕಳೆಗುಂದಿದೆ ರಕ್ತದ ಕಲೆಗೆ. ಪಂಚಾಗ ಬರೆಯಲು ಕೊಟ್ಟು ಸೈತಾನಗಳ ಕೈಗೆ ಎಳ್ಳುನೀರು ಬಿಟ್ಟು ನಾಳೆಗಳ ನೆಮ್ಮದಿಗೆ ಕೊತಕೊತಿಸುತ್ತಿದೆ ಕಾಲಾಂತರದ ಅದಲು ಬದಲಿನ ಮಹಾಪರ್ವಕೆ" ಕವಿಯ ಅಂತರಂಗದಲ್ಲಿ ತುಮುಲದ ಅಲೆಯೆದ್ದಿದೆ. ಮಹಾಮಹಿಮರು ನೀಡಿದ ಅಮೂಲ್ಯ ಜ್ಞಾನ ಸಂಪತ್ತನ್ನು ಜನರ ಕುರುಡು ನಂಬಿಗೆಯನ್ನು ಸ್ವಾರ್ಥ ಸ್ವಜನ ಹಿತಾಸಕ್ತಿಗೆ ಬಳಸಿಕೊಂಡು ಹಂಗಿಸುವ ನಗೆಬೀರುವ ಧುರುಳುತನದ ಬಗೆಗೆ ಹತಾಸೆ ಬೆಂಕಿಯಾಗಿ ಸುಡುತ್ತಿದೆ. ಈ ಎಲ್ಲಾ ಅನಿಷ್ಟಗಳನ್ನೂ ದೂರೀಕರಿಸುವ ಮಹಾತ್ಮನಿಗಾಗಿ ಹಂಬಲಿಸುತ್ತಿದೆ ಕವಿಮನ.

'ಕಹಳೆಗಳು' ಇಲ್ಲಿ ಪುರಾಣೇತಿಹಾಸ ಪ್ರಸ್ತುತ ಕಾಲವನ್ನು ಸಮೀಕರಿ ಆಗಾಗ ಅದರಿಂದ ಉಂಟಾದ ಪರಿಣಾಮವನ್ನು ಕವಿ ಪ್ರಸ್ತುತಪಡಿಸುತ್ತಾನೆ.

ಈ ಕಹಳೆ ಯೆಂದರೆ

ಮನದಲ್ಲಿ ಹುಟ್ಟಿದ ಯುದ್ಧ ಮೊದಲು ಹುರುಪು ಹುಟ್ಟಿಸುವುದು ಕಹಳೆಯ ಮೂಲಕ. ಈ ಯಾರೋ ,ಯಾವುದೋ ಉದ್ದೇಶದಿಂದ ಹುಟ್ಟಿಸಿದ ಪ್ರಚೋದನೆ ದುರ್ಯೋಧನನ ತೊಡೆ ಮುರಿಯಿತು. ದ್ರೋಣಾಚಾರ್ಯರ ಪ್ರಾಣ ತೆಗೆಯಿತು.

ಹಾಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರವಹಿಸಿತು. ಆದರೆ ಕವಿಯ ನುಡಿಯಲ್ಲೇ "ಈಗೀಗ ಬೀದಿಸಮಾರಂಭಗಳಲ್ಲಿ,

ಟೀವಿಯ ಪರದೆಗಳಲ್ಲಿ ಯಾವುದೋ ಕಹಳೆಗಳಿಗೆ ಯಾರದೋ ಬೇಳೆ ಬೆಳೆಯುವ ಹುನ್ನಾರ.

ಇಂದು ಪರರ ಮನೆಯ ಮಗುವನ್ನು ಬಾವಿಗೆ ತಳ್ಳಿ ಆಳನೋಡುವ ಹುನ್ನಾರ. ಜನರ ಮೆದುಳಿಗೆ ಪ್ರಚೋದನಕಾರಿ ಮಾತುಗಳ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತಂತ್ರ.ಕವಿ ಈ ಪ್ರಚೋದನೆಯಿಂದ

ಪಾರಾಗಿದ್ದಾನೆ. ನನಗೆ ಬೀದಿ ಹೆಣವಾಗುವುದು ಇಷ್ಟವಿಲ್ಲಾ.ನೀವೂ ಆಗಬೇಡಿ ಎನ್ನುವುದು ಕವಿಯ ಪರೋಕ್ಷ ಸಂದೇಶವಿದೆ ಇಲ್ಲಿ.

'ಅಪ್ಪನ ಬೀಡಿ' ಎನ್ನುವ ಸಾಮಾನ್ಯ ವಸ್ತುವಿಗೆ ಕವಿ ತುಂಬುವ ಜೀವ ಸ್ವಾರಸ್ಯಕರವಾಗಿದೆ."ನಿನ್ನ ಕೊಳಕು ಅಂಗಿಯೊಳಗೆ ಅಡಗಿಸಿಟ್ಟ ಬೀಡಿಗೆ ಅನೂಹ್ಯ ಚೇತನವಿತ್ತು". ಸಾಮಾನ್ಯ ಚಟವಾಗಿ ಕಾಣುವ ಬೀಡಿ ಕವಿಗೆ ಅಪ್ಪನ ಜೀವನ ಪ್ರೀತಿಯಾಗಿ ಕಾಣುತ್ತದೆ. ಅಪ್ಪನ ಕೊನೆಗಾಲದಲ್ಲಿ ಅವನಿಗೆ ಇಷ್ಟವಾದ ಬೀಡಿಕೊಡಲಾರದಷ್ಟು ಬಡವನಾಗಿದ್ದ ಕವಿ, ಕೊನೆಯಲ್ಲಿ 'ಮಹಲಿನಂತೆ ಮನೆಯ ಕಟ್ಟಿ ಅಪ್ಪನ ಇಷ್ಟದ ಬೀಡಿಯ ಕೂಡಿಟ್ಟು ಕಾದಿರುವೆ,

‌ಸೇದಲು ಅಪ್ಪನೇ ಇಲ್ಲಾ". ಈ ಕವನ ಓದುವಾಗ ಓದುಗ ಕಣ್ಣೀರಾಗದೆ ಇರಲಾರ. ಬೀಡಿ ಸಾಂಕೇತಿಕವಾಗಿ ಬಂದರೂ ಬದುಕಿನ ವಿಪರ್ಯಾಸ

ಈ ಕವನದಲ್ಲಡಗಿದೆ.

ಪ್ರತಿಭಾವಂತನೊಬ್ಬ ಸಾಹಿತ್ಯಕ್ಷೇತ್ರದಲ್ಲಿ ತೊಡಗಿಕೊಂಡರೆ ಆಗುವ ಪರಿಣಾಮ ನೋಡುವುದಾದರೆ ಮಂಜುನಾಥ್ ರವರ ಅಂಜುಬುರುಕಿಯ ರಂಗವಲ್ಲಿಯಲ್ಲಿ ನೋಡಬೇಕು. ಇದು ಅವರ ಮೊದಲ ಸಂಕಲನವೆಂದು ಅನಿಸುವುದೇ ಇಲ್ಲಾ. ಪಳಗಿದವನ ಕೈಕುಸುರಿ ಇಲ್ಲಿ ಕೆಲಸಮಾಡಿದೆ. ಕವನದ ವಸ್ತುವಿನ ಆಯ್ಕೆ ವೈವಿಧ್ಯಮಯವಾಗಿದೆ. ಹೆಚ್ಚಿನ ಕವನಗಳು ಸಾಮಾಜಿಕ ಚಿಂತನೆಯ ವಿಷಯಗಳಾಗಿವೆ. ಕೆಲವು ಕವನಗಳು ವೈಯಕ್ತಿಕವಾಗಿವೆ ಎನಿಸಿದರೂ ಅವು ಸಾರ್ವತ್ರಿಕ ಸತ್ಯವನ್ನು ಬಿಂಬಿಸುತ್ತವೆ.ದೃಢ ನಂಬಿಕೆಯೊಂದಿಗೆ ತಮ್ಮ ವಿಚಾರ ಮಂಡಿಸುತ್ತಾನೆ ಕವಿ.

ಗಟ್ಟಿಯಾದ ಕವನಗಳ ಬಂಧ ಮಂಜುನಾಥರವರ ಹಿಡಿತದಲ್ಲೇ ಇದೆ. ಭಾಷೆಯ ಮೇಲಿನ ಪ್ರಭುತ್ವ ಸದೃಢವಾಗಿದೆ.ಆಡಂಬರದ ಶಬ್ದ ಸಾಲುಗಳ ಕೋಟೆಯನ್ನು ಭೇದಿಸಿ ಮುನ್ನುಗ್ಗಿದರೆ ಕವನದ ಅರ್ಥ ಹಿಡಿಯುವುದು ಸುಲಭಸಾಧ್ಯ. ಕಾವ್ಯದ ಒನಪು ವಯ್ಯಾರಗಳೊಂದಿಗೆ ಅರ್ಥವಂತಿಕೆ ಓದುಗನಿಗೆ ಲಭ್ಯವಿದೆ.

ರಾಜಕೀಯ, ಧಾರ್ಮಿಕ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಷಯಗಳು. ಶೋಷಣೆಯ, ಪ್ರಚೋದಿಸವವರ ವಿಷಯಗಳಿದ್ದರೂ ಎಲ್ಲೂ ಸಹನೆ ಮೀರದೆ ಸುಂದರ ಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ. ತನ್ನ ಮನದಿಂಗಿತವನ್ನು ನಿರ್ಭಯವಾಗಿ ಹೇಳುವ ಕಸುಬುಗಾರಿಕೆ ಇವರಿಗೆ ಕರಗತವಾಗಿದೆ. ಓದು,ಬುದ್ದಿ, ಭಾವಗಳು ಇಲ್ಲಿ ಮೇಳೈಸಿವೆ.ತನ್ನ ಕಾವ್ಯ ಕುಸುರಿಯಲ್ಲಿ ನಿರಂತರೆಯನ್ನು ಕಾದುಕೊಂಡರೆ ಸಾಹಿತ್ಯದ ಯಾವುದೇ ಮಜಲುಗಳನ್ನು ಮುಟ್ಟುವ ಸಾಮರ್ಥ್ಯ ಮಂಜುನಾಥ ಯಲ್ವಡಿಕವೂರರವರಲ್ಲಿ ಇದೆ.

ರಾಮಮೂರ್ತಿ ಎಸ್ ನಾಯಕ

ಅಂಕೋಲಾ


52 views0 comments
bottom of page