top of page

ಮೆಕ್ಸಿಕೋದ ಪುರಾತನ " ಮಾಯನ್ ಸಂಸ್ಕೃತಿ"  ( ಪ್ರವಾಸಾನುಭವ)


( ಇದು ಬೆಳಗಾವಿಯ ಆರ್ .ಎನ್. ಕಾನೂನು ಕಾಲೇಜಿನ ನಿವೃತ್ತ ಪ್ರಾಚಾರ್ಯ  ವಿ. ಎನ್. ಜೋಶಿ ಅವರು ಬರೆದದ್ದು. ಅವರು ಮೂಲತಃ ಹೊನ್ನಾವರದವರು. )     ಅಮೆರಿಕೆಯ ಮಯಾಮಿ ಶಹರದ ಕಡಲು ತೀರದಿಂದ ( ೯-೮-೨೦೧೩) ಪ್ರಾರಂಭವಾದ ನಮ್ಮ ನೌಕಾವಿಹಾರ " ಕೆರಿಬಿಯನ್" ದ್ವೀಪಗಳನ್ನು ದಾಟಿ, " ಮೆಕ್ಸಿಕೋ" ದೇಶವನ್ನು ತಲುಪಿದ್ದು ಐದು ದಿವಸಗಳ ನಂತರ. ( ೧೩-೯-೨೦೧೩). ನಮ್ಮ " ಕಾರ್ನಿವಲ್ ಬ್ರೀಝ್" ವಿಹಾರನೌಕೆಯಲ್ಲಿರುವ ಪ್ರವಾಸಿಗಳಿಗೆ ವೀಸಾ ಇಲ್ಲದೆಯೇ ಒಂದು ದಿನದ ಮಟ್ಟಿಗೆ ಮಾತ್ರ ಮೆಕ್ಸಿಕೋ ದೇಶದ ಭೂಭಾಗವನ್ನು ವೀಕ್ಷಿಸುವ ಇರುತ್ತದೆ. ಆದರೆ ರಾತ್ರಿಯ ವಾಸ್ತವ್ಯಕ್ಕೆ ಅನುಮತಿ ಇರುವದಿಲ್ಲ. ಹೀಗಾಗಿ ಮರಳಿ ನೌಕೆಗೆ ಬರಲೇಬೇಕು.          ನಮ್ಮ ನೌಕೆ ದಿ. ೧೩ ರಂದು ಬೆಳಿಗ್ಗೆ ೧೦ ಗಂಟೆಗೆ ಮೆಕ್ಸಿಕೊದ " ಕೋಜುಮಲ್"  ದ್ವೀಪವನ್ನು ತಲುಪಿತು. ಇಲ್ಲಿ  ಇಳಿದು ಸಣ್ಣ ನೌಕೆಯ ಮೂಲಕ  ದೇಶದ ಮುಖ್ಯ ಭೂಭಾಗವನ್ನು ತಲುಪಬಹುದು. ಮೆಕ್ಸಿಕೊ ದೇಶದ ಪ್ರವೇಶ ದ್ವಾರದಂತಿದೆ ಈ ದ್ವೀಪ. ಇಳಿಯುತ್ತಲೇ ನಮ್ಮ ಗುರುತಿನ    ಪತ್ರವಾದ " ಪಾಸಪೋರ್ಟ್" ಮತ್ತು ನೌಕೆಯಲ್ಲಿರುವ ನಮ್ಮ ಕೋಣೆಯ ಕಾರ್ಡಿನಾಕಾರದ ಕೀಲಿಕೈ ತೋರಿಸಿದ ನಂತರವೇ ವೀಸಾ ಇಲ್ಲದಿದ್ದರೂ ಈ ದೇಶವನ್ನು ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ.             ಈ ದ್ವೀಪದ ಮೇಲೆ ಇಳಿಯುತ್ತಲೆ ಪ್ರವಾಸಿಗರನ್ನು ರಂಜಿಸಲು ಚಿತ್ರವಿಚಿತ್ರ ವೇಷಧಾರಿಗಳು ಕಾದಿರುತ್ತಾರೆ. ಕೆಲವರು ಅಸ್ತಿಪಂಜರದ ವೇಷ ಧರಿಸಿದ್ದರೆ ಇನ್ಬು ಕೆಲವರು ಹಡಗುಗಳ್ಳರ ವೇಷದಲ್ಲಿದ್ದರು. ಪ್ರಾಣಿಗಳ ಮುಖವಾಡ ಧರಿಸಿದವರೂ ಇದ್ದರು. ಅವರೊಂದಿಗೆ ನಿಂತು‌ ಫೋಟೋ ತೆಗೆಸಿಕೊಳ್ಳುವ ಹವ್ಯಾಸ ಮಕ್ಕಳಲ್ಲೂ ಪಾಲಕರಲ್ಲೂ ಇತ್ತು. ನಮ್ಮ ನೌಕೆ ನಿಂತಿರುವ ಬಂದರು ದೊಡ್ಡ ಹಡಗುಗಳು ನಿಲ್ಲುವ ತಾಣವಾಗಿತ್ತು. ಅಲ್ಲಿಂದ ಅರ್ಧ ಕಿ. ಮೀ. ದೂರದಸಣ್ಣ ಹಡಗುಗಳ ಬಂದರದತ್ತ ಹೊರಟೆವು. ಈ ದ್ವೀಪದ ದಂಡೆಗುಂಟ ಎತ್ತರೆತ್ತರದ ತಾಳೆಮರಗಳಿದ್ದವು. ದಾರಿಗುಂಟ ಕೇವಲ ಕಟ್ಟಿಗೆಯನ್ನು ಬಳಸಿ ಕಟ್ಟಲಾದ ತ್ರಿಕೋನಾಕಾರದ ಗುಡಿಸಲುಗಳಂತಿರುವ ಅಂಗಡಿಗಳಿದ್ದವು. ಇದರಿಂದಾಗಿ ಇದೊಂದು ಸುಂದರ ಪ್ರವಾಸಿ ತಾಣದಂತಿತ್ತು.           ಸಣ್ಣ ಬಂದರು ತಲುಪುತ್ತಲೆ ಅಲ್ಲಿಯ ನೌಕೆಯನ್ನು ಏರುವ ಮೊದಲು ಅರಿಷಿಣ ಬಣ್ಣದ ಒಂದು ಸ್ಟಿಕ್ಕರನ್ನು ನಮ್ಮ ಅಂಗಿಗೆ ಅಂಟಿಸಲಾಗುತ್ತದೆ. ನಮ್ಮ ಕೌಚೀಲಗಳನ್ನು ಪರೀಕ್ಷಿಸಿ ಕೆಡಬಹುದಾದ ಯಾವುದೇ ಆಹಾರ ಪದಾರ್ಥಗಳು ಇಲ್ಲವೆಂಬುದನ್ನು ಖಚಿತಪಡಿಸಿಸಿಕೊಳ್ಳಲಾಗುತ್ತದೆ.  ಈ ಸಣ್ಣ ಬಂದರದಲ್ಲಿ ನಿಂತಿರುವ ಹಳದಿ ಬಣದಣದ ಸುಂದರ ನೌಕೆ ಪೂರ್ಣ ಹವಾನಿಯಂತ್ರಿತವಾದದ್ದು. ಒಳ ಆವರಣದ ಮೃದು ಆಸನಗಳಲ್ಲಿ ನಾವು ಕುಳಿತುಕೊಂಡೆವು. ಇಲ್ಲಿ ತಿನಿಸುಗಳನ್ನು ಮಾರಲು ಒಂದು ಫುಡ್ ಕೌಂಟರ್ ಇತ್ತು. ನಮ್ಮೊಂದಿಗೆ " ಪಾಪಿ ಚುವಾ " ಎಂಬ ಹೆಸರಿನ ಒಬ್ಬ ಮಾರ್ಗದರ್ಶಕನಿದ್ದ. ಬಿಳಿಯ ಬಣ್ಣದ ಸದೃಢ ಮನುಷ್ಯ.            ಒಂದು ಗಂಟೆ ಕಾಲದ ನೌಕಾಯಾನದ ನಂತರ ನಾವು ಮೆಕ್ಸಿಕೋ ತಲುಪಿದೆವು. ಇಲ್ಲಿಯ ಸಮುದ್ರದ ನೀರು ತಿಳಿನೀಲಿ ವರ್ಣದ್ದಾಗಿದ್ದು ದಂಡೆಯ ಮರಳು ಸಮಶ್ವೇತವರ್ಣದ್ದಾಗಿತ್ತು. ಸ್ವಲ್ಪ ಹೊತ್ತು ತಟದಲ್ಲಿ ಓಡಾಡಿ ನಮಗಾಗಿ ಬಂದ ಬಸ್ಸನ್ನು ಏರಿದೆವು‌. ಇಲ್ಲಿಂದ ೧೦೦ ಕಿ. ಮೀ. ಅಂತರದಲ್ಲಿ ೭೦ ಕಿಮೀ. ವ್ಯಾಪ್ತ ಭಾಗದಲ್ಲಿ " ಕೋಬಾ" coba ಎಂಬ ಹೆಸರಿನ ಪ್ರಸಿದ್ಧ ಇತಿಹಾಸಪೂರ್ವ ಕಾಲದ ಅವಶೇಷಗಳಿದ್ದವು. ಎರಡು ಗಂಟೆ ಕಾಲದ ಬಸ್ ಪ್ರಯಾಣದಲ್ಲಿ ರಸ್ತೆಗುಂಟ ಇರುವ ಜನಜೀವನದ ಅಲ್ಪ ನೋಟ ಲಭಿಸಿತು. ರಸ್ತೆಯ ಉದ್ದಕ್ಕೂ ವಿಭಾಜಕಗಳಿದ್ದವು. ಸುಂದರ ಅಲಂಕಾರಿಕ ಹೂ ಗಿಡಗಳು, , ಹಸಿರು ಹುಲ್ಲು, ಎತ್ತರದ ದೀಪಸ್ತಂಭಗಳು , ಅಲ್ಲಲ್ಲಿ ತೆಂಗು ಅಡಿಕೆ  ಬನಗಳು , ಗುಲ್ ಮೊಹರ್ ಗಿಡಗಳು ಮನಮೋಹಕವಾಗಿ ಕಣ್ಮನ ಸೆಳೆದವು. ರಸ್ತೆ ವಿಭಾಜಕಗಳಲ್ಲಿರುವ ಹುಲ್ಲು ಛಾವಣಿಯ ಗುಡಿಸಲುಗಳನ್ನು ಪೋಲೀಸ್ ಚೆಕ್ ಪೋಸ್ಟ್ ಆಗಿ ಮತ್ತು ಸುಂಕವಸೂಲಿ ಕೇಂದ್ರವಾಗಿ ಬಳಸುತ್ತಿದ್ದರು. ಕೆಲವು ಉಪಾಹಾರಗೃಹಗಳಾಗಿದ್ದರೆ ಕೆಲವೆಡೆ ಬಿದಿರಿನ ಬುಟ್ಟಿ ಮತ್ತಿತರ ಕರಕುಶಲ ವಸ್ತುಗಳ ಮಾರಾಟದ ಅಂಗಡಿಗಳಾಗಿದ್ದವು. ಇಲ್ಲಿಯ ಪರಿಸರ ನಮ್ಮ ಭಾರತ ದೇಶದಂತೆಯೇ ಇತ್ತು.          ಬಸ್ಸಿನಲ್ಲಿ ಮಾಯನ್ ಲಿಪಿಯಲ್ಲಿ ಬರೆದ ನಮ್ಮ ಹೆಸರಿನ ಲಾವಾ ಕಲ್ಲಿನ ನಾಣ್ಯದಂತಹ ವಸ್ತುಗಳನ್ನು, ಮಾಯನ್ ಸ್ಮಾರಕಗಳ ಫೋಟೋ ಅಲ್ಬಮ್ಮನ್ನು ಮಾರಾಟ ಮಾಡುತ್ತಿದ್ದರು. ಮಧ್ಯಾಹ್ನ ೧.೨೦ ಕ್ಕೆ ನಾವು ಕೋಬಾ ಅವಶೇಷಗಳ ಸ್ಥಳಕ್ಕೆ ತಲುಪಿದೆವು. ಇಲ್ಲಿಂದ ಮುಂದೆ ವಾಹನಗಳಿಗೆ ಪ್ರವೇಶವಿಲ್ಲ. ಬಸ್ ಇಳಿದು ನಾವು ನಮಗಾಗಿ ಇಟ್ಟಿದ್ದ  ತ್ರಿಚಕ್ರ ವಾಹನವನ್ನೇರಿದೆವು. ಇದನ್ನು ಟೇಕ್ಸಿ ಎಂದು ಕರೆಯಲಾಗುತ್ತದೆ. ಇದರ ನಂಬರನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇಬ್ಬರು ಅದರ ಮುಂಭಾಗದಲ್ಲಿ ಕುಳಿತುಕೊಂಡರೆ ಅದರ ಚಾಲಕ ಹಿಂಭಾಗದಲ್ಲಿ ಕುಳಿತು ಸೈಕಲ್ಲಿನಂತೆ ಪೆಡಲ್ ಒತ್ತುತ್ತ ಮುಂದೆ ಒಯ್ಯುತ್ತಾನೆ. ಟೇಕ್ಸಿ ದಟ್ಟ ಅರಣ್ಯದ ನಡುವೆ ಸಾಗಿ ಕೋಬಾಕ್ಕೆ ತಲುಪಿತು.              ಈ ಪರಿಸರದಲ್ಲಿ ಯಾವ ಹಳೆಯ ಅವಶೇಷವನ್ನೂ ಮುಟ್ಟದೆ ಮಣ್ಣಿನ ರಸ್ತೆಯನ್ನೇ ಇಡಲಾಗಿದೆ. ಅವಶೇಷಗಳನ್ನು ಮೂಲ ಸ್ವರೂಪದಲ್ಲೇ ಕಾದಿಡಲಾಗಿದೆ. ಇಲ್ಲಿ ವಾಸಿಸುವವರು ಸಹ ಇಂದಿಗೂ ಮಾಯನ್ ಭಾಷೆ, ಸಂಸ್ಕೃತಿ, ಆಹಾರ ಪದ್ಧತಿಗಳನ್ನು ಹಾಗೂ ಕೆಲೆಂಡರುಗಳನ್ನು ರಕ್ಷಿಸಿ ಕೊಂಡಿದ್ದಾರೆ. ನಾವು ಇಲ್ಲಿ‌ ಮೂರು ಮುಖ್ಯ ಸ್ಮಾರಕಗಳನ್ನು ನೋಡಿದೆವು. ೧) ಪಾಲಂ ಕರವಸೂಲಿ ಸ್ಥಳ. ೨) ಚಿನ್ಚಿನ್ ಎಂಬ ಆಟದ ಮೈದಾನ.  ೩) ಬೃಹತ್ ಪಿರಾಮಿಡ್. * ಪಾಲಂ ಕರವಸೂಲಿ ಪಿರಾಮಿಡ್ ಕಟ್ಟಡ ***************"        ಇದು‌ ಮೂರು ಮಜಲಿನ ಪಿರಾಮಿಡ್. ಇದಕ್ಕೊಂದು ಸಣ್ಣ ಪ್ರವೇಶದ್ವಾರ. ದ್ವಾರದೆದುರಿಗೆ ಒಂದು ಹುಲ್ಲಿನ ಛಾವಣಿ ಇತ್ತು. ಅಲ್ಲಿ ಹಣ್ಣುಗಳನ್ನು, ಉದ್ದನೆಯ ಕಲ್ಲಿನ ಟ್ಯಾಬ್ಲೆಟ್ ಗಳನ್ನು ಇಡಲಾಗಿತ್ತು. ಇದರ ಬಳಕೆ ಹಿಂದೆ ನಾಣ್ಯದ ರೂಪದಲ್ಲಿ ಆಗುತ್ತಿತ್ತಂತೆ. ಒಂದು ದೊಡ್ಡ ಚೌಕೋನಾಕಾರದ ಕಲ್ಲಿನ ಮೇಲೆ ಮಾಯನ್ ಕೆಲೆಂಡರ್ ಕೊರೆಯಲಾಗಿತ್ತು. ಇನ್ನೊಂದು ದುಂಡಗಿನ ಕಲ್ಲಿನ ಮೇಲೆ ಪ್ರಾಣಿಯೊಂದು‌ಮಾನವನಾಗಿ ರೂಪಾಂತರ ಹೊಂದುವ ಚಿತ್ರವನ್ನು ಕೊರೆಯಲಾಗಿತ್ತು. ಮಾಯನ್ ಕ್ಯಾಲೆಂಡರಿನಲ್ಲಿ ೪೪೭೬ ವರ್ಷಗಳಿದ್ದು ಡಿಸೆಂಬರ್ ೨೦೧೨ ರಂದು ಕ್ಯಾಲೆಂಡರ್ ಕೊನೆಯಾಗುತ್ತದೆ. ಹೀಗಾಗಿ ೨೦೧೨ ರ ಡಿಸೆಂಬರ್ ನಲ್ಲಿ ಜಗತ್ತಿನ ಅಂತ್ಯವಾಗಲಿದೆ ಎಂಬ ವದಂತಿಯನ್ನು ಎಲ್ಲೆಡೆ ಹರಡಲಾಗಿತ್ತು.            ಹಕ್ಕಿಯ ಗರಿಯನ್ನು ತಲೆಗೆ ಕಟ್ಟಿಕೊಂಡಿರುವ ವ್ಯಕ್ತಿಯನ್ನು ಆಗಿನ ಕಾಕದ ಪುರೋಹಿತನೆಂದೂ, ಸಮಾಜದ ಗಣ್ಯನೆಂದೂ ಗುರುತಿಸಲಾಗುತ್ತಿತ್ತು. ರಾಜನನ್ನು ಯುದ್ಧದಲ್ಲಿ ಸೋತಿರುವ ವೈರಿಗಳ ಶರೀರದ ಮೇಲೆ ನಿಂತಿರುವಂತೆ ಕಲ್ಲುಗಳ ಮೇಲೆ ಕೊರೆಯಲಾಗುತ್ತಿತ್ತೆಂದು ಮಾರ್ಗದರ್ಶಕ ಹೇಳಿದ.  * ಚಿನ್ ಚಿನ್ ಆಟದ ಮೈದಾನ ***************""******"**          ಈ ಮೈದಾನ ಕಡಿಮೆ ಎತ್ತರದ ಎರಡು ಪಿರಾಮಿಡ್ ಗಳ ನಡುವೆ ಇತ್ತು. ಈ ಪಿರಾಮಿಡ್ ಗಳ ಎದುರಿನ ಗೋಡೆಗಳಲ್ಲಿ ಬಾಸ್ಕೆಟ್ ಬಾಲಿನ ಆಕಾರದ  ದೊಡ್ಡ ಕಬ್ಬಿಣದ ವರ್ತುಲಗಳನ್ನು ( ring) ಕೂಡ್ಇಸಲಾಗಿತ್ತು. ಎರಡೂ ತಂಡಗಳ ಆಟಗಾರರು ದೊಡ್ಡ ಚೆಂಡನ್ನು ಆ ವರ್ತುಲದಲ್ಲಿ ಹಾಕಲು ಸೆಣಸುತ್ತಾರೆ. ಇದೊಂದು ಇಲ್ಲಿಯ ಮಹತ್ವಪೂರ್ಣ ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಚರಣೆಯಾಗಿತ್ತು. ಇಲ್ಲಿಯ ಶ್ರೇಷ್ಠ ಆಟಗಾರನನ್ನು ಗೌರವದ ದ್ಯೋತಕವಾಗಿ ಬಲಿ ಕೊಡಲಾಗುತ್ತಿತ್ತಂತೆ. ಆ ಶ್ರೇಷ್ಠ ಆಟಗಾರನೂ ಸಂತೋಷದಿಮದ ಬಲಿಪಶುವಾಗುತ್ತಿದ್ದನಂತೆ.  * ಭವ್ಯ ಪಿರಾಮಿಡ್ *****************         ಪ್ರವಾಸದ ಮುಖ್ಯ ಆಕರ್ಷಣೆ ಇದು. ಮೆಕ್ಸಿಕೋದ ಮಾಯನ್ ಸಂಸ್ಕೃತಿಯ ಅತಿ ದೊಡ್ಡ ಸ್ಮಾರಕ ಇದು. ಬೃಹತ್ ಕಲ್ಲುಗಳಿಂದ ಕಟ್ಟಲಾದ ಅತಿ ಎತ್ತರದ ಈ‌ ಪಿರಾಮಿಡ್ ನ ಮೆಟ್ಟಿಲುಗಳನ್ನೇರಿ ತುದಿಯನ್ನು ತಲುಪಬಹುದು. ತುದಿಯಲ್ಲಿ ಸಮತಟ್ಟಾದ ದೊಡ್ಡ ಟೇಬಲ್ ಆಕಾರದ ಕಲ್ಲು ಇದೆ. ಮೆಟ್ಟಿಲು ಏರಲು ಸಹಾಯಕವಾಗಿ ಹಗ್ಗವನ್ನೂ ಕಟ್ಟಲಾಗಿದೆ. ಮೇಲ್ಭಾಗದಲ್ಲರುವ ಮೊನಚಾದ ಸಿಲಿಂಡರ್ ಆಕಾರದ ಕಲ್ಲಿನ ಮೇಲೆ ಬಲಿ ಕೊಡಲಾಗುವ ಮನುಷ್ಯನನ್ನು ‌ಮಲಗಿಸಿ ಬೆನ್ನು ಹುರಿಯನ್ನು ಸೀಳಲಾಗುತ್ತಿತ್ತು ಮತ್ತು ಅದರ ರಕ್ತ ಹರಿದು ಬಂದು‌ಮಡಮೆಟ್ಟಿಲುಗಳ ಮೇಲೆ ಜಿಡ್ಡುಗಟ್ಟುತ್ತಿತ್ತು‌ ಎಂದು ಮಾರ್ಗದರ್ಶಕ ವಿವರಿಸಿದ.              ಮಾಯನ್ ಸಂಸ್ಕೃತಿಯಲ್ಲಿ ಶೂನ್ಯ ಸಂಖ್ಯೆಯ ಬಳಕೆ ಇದ್ದಿಲ್ಲವಂತೆ. ಇದರಿಂದ ಆಗಿನ ಗಣಿತ ಶಾಸ್ತ್ರದಲ್ಲಿ ಒಂದು ಬಿಂದುವನ್ನು  ಒಂದು ಎಂದು, ಎರಡು ಬಿಂದುಗಳನ್ನು ಎರಡು ಎಂದು ಗ್ರಹಿಸುತ್ತಿದ್ದರು. ಉದಾಹರಣೆಗೆ ೦೦೦೦ ಈ ನಾಲ್ಕು ಬಿಂದುಗಳನ್ನು  ನಾಲ್ಕು ಎಂದು, ಒಂದು ಅಡ್ಡ ಗೆರೆಯನ್ನು' - ' ಐದು ಎಂದು ಪರಿಗಣಿಸುತ್ತಿದ್ದರು.  =  ಈ ರೀತಿಎರಡು ಗೆರೆಗಳಿದ್ದರೆ ಇದನ್ನು ಹತ್ತು ಎಂದು ಲೆಕ್ಕಕ್ಕೆ ಹಿಡಿಯಲಾಗುತ್ತಿತ್ತು. ಒಂದು ಅಡ್ಡ ಗೆರೆ ಹಾಗೂ ಒಂದು ಬಿಂದು (- ೦) ಎಂದರೆ ಆರು ಆಗುತ್ತಿತ್ತು. ಭಾರತದಲ್ಲಿ ಬ್ರಹ್ಮಗುಪ್ತನು ಶೂನ್ಯ ಸಂಖ್ಯೆಯ ಬಳಕೆಯನ್ನು ೬೨೮ ನೇ ಇಸವಿಯಲ್ಲಿ ಮಾಡಿದನೆಂದು ಹೇಳಲಾಗುತ್ತದೆ. ನಮ್ಮ ದೇಶದ ಗಣಿತಜ್ಞನ ಸಂಶೋಧನೆ ಜಗತ್ತಿನಾದ್ಯಂತ ಗಣಿತ ಶಾಸ್ತ್ರದ ಶ್ರೇಷ್ಠ ಸಂಶೋಧನೆಗಳಲ್ಲೊಂದೆನಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಈ ಪ್ರವಾಸದ ಕಾಲಕ್ಕೆ ಇದನ್ನು ನಾನು ಸ್ಮರಿಸಿಕೊಂಡೆ.           ಆದರೆ  ಇಂದು ಪೂರ್ಣ ಮಾಯವಾಗಿರುವ  ಈ            " ಮಾಯನ್ ಸಂಸ್ಖೃತಿ"ಯ ಅವಶೇಷಗಳನ್ನು ನೋಡಿದ ಅಪೂರ್ವ ಅನುಭವ ಮಾತ್ರ ಎಂದೂ ಮರೆಯಲಾಗದಂತಹದು.                 

- ವಿ. ಎನ್. ಜೋಶಿ                   ನಿ. ಪ್ರಾಚಾರ್ಯರು                   ಆರ್. ಎಲ್. ಕಾನೂನು ಕಾಲೇಜು, ಬೆಳಗಾವಿ.17 views0 comments
bottom of page