ಅಬ್ಬಾ! ಏನಿದು ವಿಪರ್ಯಾಸ,ಸರಾಸರಿ ನೂರು ವರ್ಷಗಳು ಉರುಳಿದರೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೀಯ ಸ್ಥಾನವನ್ನು ಮಹಿಳೆಯರು ಅಲಂಕರಿಸಲಿಲ್ಲವೇಕೆ? ಎನ್ನುವುದು ನನಗೆ ಕಾಡುತ್ತಿರುವ ಒಂದು ಬಹುದೊಡ್ಡ ಪ್ರಶ್ನೆ . ಮಹಿಳೆಯರೇ ತಮಗೆ ಆ ಪದವಿ ಬೇಡವೆಂದು ಸುಮ್ಮನುಳಿದಿದ್ದಾರೋ? ಅಥವಾ ಆ ಸ್ಥಾನಕ್ಕೆ ಹೋಗಲು ಅವರಿಗೆ ಅವಕಾಶವನ್ನೇ ನೀಡಲಿಲ್ಲವೋ? ಎನ್ನುವ ಪ್ರಶ್ನೆಗೆ ಉತ್ತರ ಇಷ್ಟೆ:ಇನ್ನೂವರೆಗೆ ಮಹಿಳೆಯರಿಗೆ ಚುನಾವಣೆಗೆ ನಿಲ್ಲಲು ಅವಕಾಶವನ್ನೂ ಕೊಟ್ಟಿಲ್ಲ, ಒಂದಾನುವೇಳೆ ನಿಂತರೂ ಸಹ ಅವರು ಆಯ್ಕೆ ಆಗುವುದು ತುಂಬಾ ಕಷ್ಟದ ಸಂಗತಿ ಯಾಕೆಂದರೆ ಮತ ಹಾಕುವ ಅಜೀವ ಸದಸ್ಯರೆಲ್ಲಾ ಪುರುಷರು ಎನ್ನುವುದೊಂದಾದರೆ ಮಹಿಳೆಯರ ಸದಸ್ಯತ್ವವನ್ನು ಮಾಡಿಲ್ಲ ಎನ್ನುವುದು ಇನ್ನೊಂದು ಬಹುಮುಖ್ಯವಾಗಿ ಗಮನಿಸಬೇಕಾದ ಅಂಶ. ಇದ್ಯಾಕೆ ಹೀಗೆ!! ಪುರುಷನ ಜೀವನದ ಪ್ರತಿಯೊಂದು ಹಂತದಲ್ಲೂ ಹೆಣ್ಣಿನ ಪಾತ್ರ ಬಹುಮುಖ್ಯವಾದುದು. ಜನ್ಮಕೊಟ್ಟು ಸಾಕಿ ಸಲಹುವ ತಾಯಿಯಾಗಿ, ಪ್ರೀತಿಯ ಸಹೋದರಿಯಾಗಿ, ಅತ್ತಾಗ ಸಾಂತ್ವನ ಹೇಳುವ ಗೆಳತಿಯಾಗಿ, ಮನೆಯಲ್ಲಿ ಎಲ್ಲರ ಪ್ರೀತಿಯ ಚಿಲುಮೆಯ ಮುದ್ದಿನ ಮಗಳಾಗಿ ಇಂದು ಮಹಿಳೆ ಸರ್ವ ಕ್ಷೇತ್ರಗಳಲ್ಲೂ ಸಾಧನೆಯ ದಾಪುಕಾಲನ್ನ ಹಾಕುತ್ತಾ ಜಗತ್ತಿನೆಲ್ಲರ ದೃಷ್ಟಿಯನ್ನು ತನ್ನೆಡೆಗೆ ಸೆಳೆಯುವಂತೆ ಮಾಡಿರುವಾಗ, ಕಸಾಪನ ಅಧ್ಯಕ್ಷೀಯ ಪದವಿ ನೂರು ವರ್ಷಗಳಾದರೂ ಪಡೆಯದೇ ಇರುವುದು ತುಂಬಾ ವಿಷಾದನೀಯ ಹಾಗೆಯೇ ಮಹಿಳೆಯರಿಗೆ ಇದೊಂದು ಸವಾಲಿನ ಪ್ರಶ್ನೆಯು ಹೌದು.
ಒಂದು ಕಾಲದಲ್ಲಿ ಅಡಿಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆ ಈಗ ಸಾಹಿತ್ಯ, ರಾಜಕೀಯ, ಸಾಮಾಜಿಕ, ಧಾರ್ಮಿಕ, ವಿಜ್ಞಾನ, ವೈದ್ಯಕೀಯ, ಬಾಹ್ಯಾಕಾಶ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ತನ್ನ ಸಾಧನೆಯ ಛಾಪು ಮೂಡಿಸಿದ್ದಾಳೆ. ನಾನಿಲ್ಲಿ ಕಸಾಪನ ಬಗ್ಗೆ ಹೇಳುತ್ತಿರುವುದರಿಂದ ಕೇವಲ ಸಾಹಿತ್ಯದ ಬಗ್ಗೆಯಷ್ಟೇ ಕೊಂಚ ಗಮನ ಹರಿಸೋಣ.
ಬರಹಗಾರ್ತಿಯರ ಸಂಖ್ಯೆ ತುಂಬಾ ಕಡಿಮೆಯಿದ್ದ ಹಿಂದಿನ ಕಾಲದಲ್ಲಿ, ಪ್ರತಿನಿತ್ಯದ ತಮ್ಮೆಲ್ಲ ಕಷ್ಟ-ಕಾರ್ಪಣ್ಯಗಳನ್ನು ದೂರಮಾಡಿಕೊಳ್ಳುವ ಸಲುವಾಗಿ ಹಾಡುಗಳನ್ನು ತಾವೇ ಕಟ್ಟಿ ರಾಗವಾಗಿ ಹಾಡುತ್ತಿದ್ದರು ಅವೇ ಜಾನಪದ ಸಾಹಿತ್ಯ. ಈ ಜಾನಪದ ಸಾಹಿತ್ಯವನ್ನ ಹಿಂದೆ ಬಹುವಾಗಿ ರಚಿಸಿದವರೆಂದರೆ ಮಹಿಳೆಯರೇ. ಆ ಸೊಗಸಾದ ಸಾಹಿತ್ಯ ಆಕೆಯ ಕುಟುಂಬ,ನೋವು-ನಲಿವು, ಅವಳ ಒಂದಿಷ್ಟು ತಳಮಳಗಳಿಗಷ್ಟೇ ಸೀಮಿತವಾಗಿತ್ತು. ಆದರೆ ಜಾನಪದ ಸಾಹಿತ್ಯದ ಸೊಗಡೇ ಅದ್ಬುತ. ಕವಿ ಮಹಲಿಂಗರಂಗರು ಹೇಳಿರುವಂತೆಯೇ "ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ,ಅಳಿದ ಉಷ್ಣದ ಹಾಲಿನಂದದಿ ಕನ್ನಡ ಸಾಹಿತ್ಯ". ಈ ಜಾನಪದ ಸಾಹಿತ್ಯವೂ ಹಾಗೆಯೇ ಅಷ್ಟೇ ಸುಲಭದ ಮತ್ತು ಓದುವಾಗ ಮನಸ್ಸಿಗೆ ತುಂಬಾ ಮುದ ನೀಡುವಂತದ್ದು. ಜಾನಪದ ಸಾಹಿತ್ಯವನ್ನು ಆಗಲೇ ಗುರುತಿಸಿ ಪ್ರಶಂಸೆಯನ್ನು ನೀಡಿದ್ದೇ ಹೌದಾದರೆ ಮಹಿಳೆ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುತ್ತಿದ್ದಲೋ ಏನೋ?ಯಾರಿಗೆ ಗೊತ್ತು.
ಹಾಗೆಯೇ ಅಲ್ಲಿಂದ ಮಹಿಳಾ ಸಾಹಿತ್ಯದ ಉಲ್ಲೇಖದ ಬಗ್ಗೆ ಯೋಚಿಸುತ್ತಾ ಹೋದರೆ ಸಿಗುವುದು ವೈಭವದ ಸಾಮ್ರಾಜ್ಯವಾದ ವಿಜಯನಗರ ಕಾಲದಲ್ಲಿಯೇ ಗಂಗಾದೇವಿಯ" ವೀರ ಕಂಪಣರಾಯ ಚರಿತ" ಮತ್ತು ತಿರುಮಲಾಂಬ ಅವರು ರಚಿಸಿದಂತ "ವರದಾಂಬಿಕ ಪರಿಣಯಂ".
ವಿಜಯನಗರ ಸಾಮ್ರಾಜ್ಯದ ವೈಭೋಗವನ್ನು ಅದೆಷ್ಟು ಬಾರಿ ಬಣ್ಣಿಸಿದರೂ ಸಾಲದು!! ಆ ಕಾಲದಲ್ಲಿದ್ದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ವೈಭವದಿಂದ ಮೆರೆದ ಹಂಪೆಯಲ್ಲಿನ ಪ್ರತಿಯೊಂದು ಕಲ್ಲುಗಳೂ ಕೂಡ ಹಿಂದಿನ ಗತವೈಭವವನ್ನು ಸಾರಿ ಹೇಳುತ್ತವೆ!! ಅಂದು ಹಂಪಿ ಪಟ್ಟಣವನ್ನು ಕಂಡು ಬೆರಗಾದ ಪೋರ್ಚುಗೀಸ್ ಪ್ರವಾಸಿಗ ದ್ವಾರ್ಟ್ ಬಾರ್ಬೊಸಾ, “ವಜ್ರ, ಮುತ್ತು, ರೇಶ್ಮೆ, ಬೆಲೆಬಾಳುವ ವಸ್ತುಗಳು ಬೀದಿಗಳಲ್ಲೇ ಮಾರಲ್ಪಡುತ್ತದೆ” ಎಂದು ಸಾರಿ ಹೇಳಿದ್ದ!!
ಚೈನಾ ದೇಶದ ಬೌದ್ಧ ಬಿಕ್ಷು ಹೂಯನ್ ತ್ಸಾಂಗ್, “ವಿಜಯನಗರದ ಜನರು ಬಹಳ ಸಂತೋಷದಿಂದಿರುವವರು, ಎಲ್ಲಿ ನೋಡಿದರೂ ಭವ್ಯವಾದ ಅರಮನೆಗಳೇ, ರಾಜ ಬೀದಿಗಳಲ್ಲಿ ಅಸಂಖ್ಯಾತ ಮೊತ್ತದ ಚಿನ್ನ, ವಜ್ರ ವೈಡೂರ್ಯಗಳನ್ನು ರಾಶಿ ಹಾಕಿಕೊಂಡು ವರ್ತಕರು ವ್ಯಾಪಾರ ಮಾಡುತ್ತಾರೆ. ನಿಜವಾಗಿಯೂ ಇದೊಂದು ಸ್ವರ್ಗ ಭೂಮಿ” ಎಂದಿದ್ದ!! ಎನ್ನುವ ವಿಷಯವನ್ನು ನಾವೆಲ್ಲ ಇತಿಹಾಸದಲ್ಲಿ ಓದಿಯೇ ಇರುತ್ತೇವೆ. ಈ ಎಲ್ಲ ವೈಭವದ ನಡುವೆ ಮಹಿಳಾ ಸಾಹಿತ್ಯಕ್ಕೆ ಅಷ್ಟೊಂದು ಮನ್ನಣೆ ಅವರೇ ಕೊಡಲಿಲ್ಲವೋ, ಮಹಿಳೆಯರೇ ತಮ್ಮ ಸುತ್ತಲಿನ ಪರಿಧಿಯನ್ನು ಬಿಟ್ಟು ಹೊರಗೆ ನುಸುಳಿ ಬರಲಿಲ್ಲವೋ ಗೊತ್ತಿಲ್ಲ. ಉಳಿದ ರಾಜ ಮಹಾರಾಜರ ಕಾಲದಲ್ಲೂ ಸಹ ಪುರುಷರ ಸಾಹಿತ್ಯದಷ್ಟು ಸ್ತ್ರೀ ಸಾಹಿತ್ಯ ಪ್ರಚಾರಕ್ಕೆ ಬರದೇ ಹೋಯಿತು. ಒಂದಿಷ್ಟು ಆಧುನಿಕ ಕನ್ನಡ ಸಾಹಿತ್ಯದ ಕಡೆ ಕಣ್ಣಾಡಿಸಿ ನೋಡಿದರೆ ಕಥೆ, ಕವಿತೆ, ನಾಟಕ, ಕಾದಂಬರಿ, ಪ್ರಬಂಧ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲಿಯೂ ಇಂದು ಮಹಿಳೆ ಪರಿಣಿತಳಾಗಿದ್ದಾಳೆ.
ನನಗಂತೂ ದ್ವಿತೀಯ ಪಿಯುಸಿ ಓದುವಾಗ ಶ್ರೀಮತಿ ನೇಮಿಚಂದ್ರರು ಬರೆದ "ಆಯ್ಕೆ ಇದೆ ನಮ್ಮ ಕೈಯಲ್ಲಿ" ಎನ್ನುವ ಅನುಭವ ಕಥನವಂತೂ ನಾ ಓದಿದಾಗ ನನ್ನ ಮನಸನ್ನೇ ಸೂರೆ ಮಾಡಿತ್ತು. ನಿರಾಸೆಯ ಮಡಿಲಿಗೆ ಬೀಳದೇ ಎಚ್ಚರಿಕೆಯ ಎಲ್ಲೆಯಲ್ಲಿ ಬದುಕನ್ನು ಬದಲಿಸಿಕೊಳ್ಳುವ, ಸಾಧಿಸುವ ತಾಳ್ಮೆ, ಸಹನೆಗಳ ಅಗತ್ಯವನ್ನು ತುಂಬಾ ಮನಮುಟ್ಟುವಂತೆ ಅಲ್ಲಿ ಬರೆದಿದ್ದಾರೆ. ಹೀಗೆ ಮಹಿಳಾ ಸಾಹಿತ್ಯವನ್ನು ಕಟ್ಟಿ ಇಲ್ಲಿಯವರೆಗೆ ತಂದು ನಿಲ್ಲಿಸಿದ ಕೀರ್ತಿ ನಮ್ಮ ಸಾರ ಅಬೂಬಕ್ಕರ, ಮಾಲತಿ ಪಟ್ಟಣಶೆಟ್ಟಿ, ನೇಮಿಚಂದ್ರ, ಸುಧಾಮೂರ್ತಿ, ಟಿ. ಸುನಂದಮ್ಮ, ಲಲಿತಾ ಸಿದ್ಧಬಸವಯ್ಯ, ಸುಕನ್ಯಾ ಮಾರುತಿ, ಹೀಗೆ ಹೆಸರುಗಳ ಪಟ್ಟಿ ಒಂದರ ನಂತರ ಒಂದರಂತೆ ಬೆಳೆಯುತ್ತಲೇ ಹೋಗುತ್ತದೆ.
ದ. ರಾ. ಬೇಂದ್ರೆಯವರು ತಮ್ಮ ಭಾವಗೀತೆಯಾದ "ಹಕ್ಕಿ ಹಾರುತಿದೆ ನೋಡಿದಿರಾ" ಇದರಲ್ಲಿ ಕಾಲ ಪಕ್ಷಿಯ ಹೊಡೆತಕ್ಕೆ ಮಾನವ ಪ್ರಪಂಚದಲ್ಲಿ ಅನೇಕಾನೇಕ ಬದಲಾವಣೆ ಆಗುತ್ತಲೇ ಇರುತ್ತದೆ, ಇಂದು ಇದ್ದಂತೆ ಮುಂದೆ ಎಂದಿಗೂ ಇರಲಾರದು ಎನ್ನುವ ಮಾತಿನಂತೆ ಕಾಲಘಟ್ಟಗಳು ಬದಲಾದ ಹಾಗೆ ಮಹಿಳಾ ಸಾಹಿತ್ಯ ಲೋಕ ಕೂಡ ತುಂಬಾ ಮುಂದುವರಿದಿದೆ. ಪ್ರವಾಸ, ಕೃಷಿ, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಕೌಟುಂಬಿಕ ಹೀಗೆ ಎಲ್ಲವನ್ನೂ ಒಳಗೊಂಡ ಸಾಹಿತ್ಯವನ್ನು ರಚಿಸುವಷ್ಟು ಪ್ರಬಲವಾಗಿದ್ದಾಳೆ. ಹೀಗಿರುವಾಗ ಅವಳಿಗೆ ಅಧ್ಯಕ್ಷೀಯ ಗದ್ದುಗೆ ಸಿಗಲೇ ಬೇಕು. "ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು" ಇನ್ನೂ ಕಸಾಪನ ಅಧ್ಯಕ್ಷತೆಯ ಸ್ಥಾನದಲ್ಲಿ ಕೂರಲು ಆಕೆಗೆ ಅರ್ಹತೆ ಇಲ್ಲವೇನು?? ಅಥವಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನವೆಂಬ ತೊರೆಗೆ ಸ್ತ್ರೀ ಮತ್ತು ಪುರುಷರೆಂಬ ಪ್ರತ್ಯೇಕ ಧಾರೆಗಳ ಹರಿವೇನಾದರು ಇದೆಯೇನು? ಇಲ್ಲಿಯವರೆಗೂ ಕೂಡ ಪರಿಷತ್ತಿನ ಚುನಾವಣೆಗೆ ಸಕಲಕಲಾವಲ್ಲಭರಾದವರೇ ನಿಲ್ಲುತ್ತಿದ್ದಾರೆಯೇ ವಿನಹಃ ಪ್ರಾಮಾಣಿಕರಾದ ಎಷ್ಟೋ ಪ್ರತಿಭಾನ್ವಿತ ಸಾಹಿತಿಗಳು, ಬರಹಗಾರರು ಇದ್ದರೂ ಸಹ ಅವರ್ಯಾರೂ ಅತ್ತ ಕಡೆ ತಲೆಯೆತ್ತಿಯೂ ನೋಡುತ್ತಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯುವುದರ ಬದಲಿಗೆ ಅಧ್ಯಕ್ಷ ಪದವಿಯ ಜೊತೆಗೆ ರಾಜಕಾರಣವೂ ಸಹ ಅಲ್ಲಿ ತಾಂಡವಾಡುತ್ತಿದೆ. ಬಹುಶಃ ಮಹಿಳೆಯರೇ ಅಧ್ಯಕ್ಷರಾಗಿದ್ದರೆ ಇವರ ಚಹರೆಯೆಲ್ಲ ಬದಲಾಗಿ ಹೊಸ ಬದಲಾವಣೆ ಖಂಡಿತ ಆಗೇ ಆಗುತ್ತಿತ್ತು, ಇದೆಲ್ಲ ಕಾದು ನೋಡಬೇಕಾಗಿದೆ. ಇಷ್ಟು ವರ್ಷ ಪುರುಷರೇ ಚುನಾವಣೆಗೆ ನಿಂತಿದ್ದಾರೆ ಇದು ಸರಿಯಲ್ಲ ಪ್ರತಿ ಮೂರು ಅಥವಾ ಐದು ವರ್ಷಕ್ಕೆ ಒಮ್ಮೆಯಾದರೂ ಸ್ತ್ರೀಯರಿಗೆ ಸ್ಥಾನ ಕೂಡಲೇ ಬೇಕು ಹಾಗೆಯೇ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಅವಧಿ ಕೂಡ ಐದು ವರ್ಷ ಆಗಲೇ ಬಾರದು ಕೇವಲ ಮೂರು ವರ್ಷಗಳ ಅವಧಿಗೆ ಸೀಮಿತವಾಗಿರಬೇಕು. ಕುವೆಂಪುರವರು ಹೇಳುವಂತೆ "ನಿಲೆ ಕೊಳಚೆ,ಹರಿಯೇ ಪಾವನದ ಗಂಗೆ" ಈ ಅಧ್ಯಕ್ಷರ ಚುನಾವಣಾ ಅವಧಿ ಕೂಡ ಹಾಗೆಯೇ ಐದು ವರ್ಷಗಳ ಅವಧಿಯಾಗಿ ನಿಂತರೆ ಕೊಳಚೆಗೆ ಸಮಾನ ಅದಕ್ಕಾಗಿ ಮೂರು ವರ್ಷದ ಅವಧಿಯಾಗಿ ಹರಿದು ಪಾವನದ ಗಂಗೆಗೆ ಸಮವಾಗಲಿ. ಹಾಗೆಯೇ ಅಧ್ಯಕ್ಷ ಪದವಿಯ ಆಯ್ಕೆಯಲ್ಲಿ ಮಹಿಳೆಯರಿಗೂ ಮೀಸಲಾತಿ ಸೌಲಭ್ಯ ಸಿಗುವಂತಾಗಿ ಇನ್ನೂ ಹೆಚ್ಚಿನ ಉತ್ತೇಜನ ಅವರಿಗೆ ದೊರಕುವ ಮೂಲಕ ಸಾಹಿತ್ಯ ಲೋಕ ಅನೇಕಾನೇಕ ಮಹಿಳಾ ಸಾಹಿತ್ಯ ರತ್ನದ ಮಣಿಗಳನ್ನು ಪಡೆದು ಸಾಹಿತ್ಯ ಕ್ಷೇತ್ರ ಬಾನೆತ್ತರಕ್ಕೆ ಬೆಳೆಯಲಿ ಎನ್ನುವುದು ನನ್ನದೊಂದು ಆಶಯ.
"ಕನ್ನಡವೇ ಸತ್ಯ ಕನ್ನಡವೇ ನಿತ್ಯ"
ಪೂಜಾ ನಾರಾಯಣ ನಾಯಕ
Comments