ಮಹಾಭಾರತ

Updated: Aug 14, 2020

ಹೆಣಗಳ ಮುಂದೆ ನಿಂತು

ಗೋಳಿಡುವ ಸುಯೋಧನನ ನೆರಳು

ಕಾಡುತಿದೆ ಜಗವ ಕಪ್ಪೆಯ ಮೇಲಿನ ಸಪ್ಪದ ಛಾಯೆಯಂತೆ

ಮೈವೆತ್ತಿತಲ್ಲ ವಿಧಿಯೇ ನುಂಗುವ ಅವತಾರವಾಗಿ

ಸಾಲದೆಂದು ದುಶ್ಯಾಸನನ ರೂಪ ತಾಳಿ

ಮರುಳು ಪಾಂಡವರೆಲ್ಲರೆಂದು ಬಗೆದು


ಭುವನವನಾಕ್ರಮಿಸಿ ತಿಂದು ಜಗಿದು

ಲಸಿಕೆ ಹೊರಡುವ ಸೂಜಿ ಮೊನೆಯೂ

ತನ್ನದೆಂದು ಬಿಡದೆ ಮುನಿದು

ಅಟ್ಟಹಾಸಗೈದೆ ಶಾಸನಗಳ ಕೊಂದು

ಕವಡೆ ಮೇಲಿನ ಚುಕ್ಕೆ ಸಂಖ್ಯೆ

ಹೆಣೆದ ವಿಷದ ವ್ಯೂಹ ಚಿಂತೆ

ಪಗಡೆಯಾಟದ ದ್ಯೂತದೊಳಗೆ

ಬಿಕರಿಗಿದೆ ಪ್ರಾಣ, ಆತ್ಮ ಜೋಳಿಗೆ

ಅಮರ ಪ್ರೇಮ ಭವದ ಮೋಹ

ನುಚ್ಚು ನೂರು ವ್ಯಾಕರಣ ನೇಹ

ದಂದಶೂಕನಂತೆ ದ್ರೌಪದಿಯ ಸೆರಗು

ಹರಿದು ನುಂಗುತಿದೆ ಜಗದ ಸೊಬಗು

ಕಂಗೆಟ್ಟ ಮುಡಿಯ ಕೇಶದ ಬಲೆ

ವಿಸ್ಮಯ ಹೆಣೆದು ಪಡೆದ ಜೀವ ಕಲೆ

ಎಂದು ಬರುವ ಭೀಮ ನೊಂದು

ಕಾಯಬೇಕು ಎಲ್ಲಿಯವರೆಗೆ ಬೆಂದು

ಭೇದಿಸಲು ಹೊರಟ ಚಕ್ರವ್ಯೂಹ

ಸುಳಿಗೆ ಒಳಸುಳಿಯ ದ್ರೋಹ

ಬಗೆದು ಅಭಿಮನ್ಯುಗಳ ಆಹುತಿ ಪಡೆದು

ಕಾಲಾಗ್ನಿರುದ್ರನಂತೆ ಮೆರೆದು

ಮಹಿಪತಿಗಳ ಮೀರಿ ತುಳಿದು

ಮರುಕಳಿಸಿರಲ್ಲ ಚರಿತೆ ಯುಗಬರಹ ತೊಳೆದು

-00-




ಶ್ರೀ ಚಂದ್ರಶೇಖರ ಹೆಗಡೆಯವರು ಮೂಲತಃ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದವರಾಗಿದ್ದು ಅಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಕಾವ್ಯ, ಪ್ರಬಂಧ, ಕತೆ ಹಾಗೂ ವಿಮರ್ಶೆ ಹೀಗೆ ಸಾಹಿತ್ಯದ ವಿವಿಧ ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ "ಬರಹವೆಂಬ ನಿತ್ಯ ಧ್ಯಾನ" ಎಂಬ ಸಂಪಾದನಾ ಕೃತಿ ಹಾಗೂ "ಭೌತವಾದ" ಎಂಬ ವಿಮರ್ಶಾ ಗ್ರಂಥಗಳನ್ನು ರಚಿಸಿರುವ ಇವರ ೩೦ ಕ್ಕೂ ಹೆಚ್ಚು ಕಾವ್ಯ, ಕತೆ, ಸಂಶೋಧನಾ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕನ್ನಡದ ಪ್ರಮುಖ ಬ್ಲಾಗಿಸ್ಟ್ ಆಗಿರುವ ಶ್ರೀಯುತರು cbhegade.blogspot.in ಎಂಬ ವಿಳಾಸದ ಬ್ಲಾಗಿನಲ್ಲಿ 2017 ರಿಂದ ಕ್ರಿಯಾಶೀಲರಾಗಿದ್ದಾರೆ.- ಸಂಪಾದಕ





24 views0 comments