ಜಲಪಾತದಂತೆ ಸುರಿಯುವ
ಐದರ ನಸುಕಿನ ಮಳೆಗೆ
ಮೊಗಸಾಲೆಯಲಿ ಮತ್ತು ಹಿತ್ತಿಲಲಿ ಇಟ್ಟ ಪಿಪಾಯಿ ಬಿಂದಿಗೆಗಳು
ಜಲಪಾತದಂತೆ ಸುರಿಸಿಕೊಂಡು ತುಂಬಿಸಿಕೊಳ್ಳುತ್ತಿದ್ದಾಗ,
ಹಿಂದಿನ ಯಾವುದೋ ಮನೆಯ ತಾರಸಿಯ ಕೊಳಾಯಿಯಿಂದ ಸುರಿಯುತ್ತಿದ್ದ
ಇದೇ ನೀರು,
ಹಿತ್ತಿಲಲ್ಲಿ ಇನ್ನು ಬೇರೆಯದೇ ಥರದ
ಶಬ್ದ ಮಾಡಿ ಸುರಿಯುತ್ತಿತ್ತು
ಎರಡೂ ಕಡೆಯು ತಾಳಬದ್ಧವಾಗಿ,
ಆ ಸುರಿಯುವಿಕೆಯು
ಜಾವಕ್ಕೆ ಜೊಂಪು ಹತ್ತಿಸಲು ಹಾಡಿದ ಜೋಗುಳದಂತಿತ್ತು,
ಹಿಮ್ಮೇಳದಲ್ಲಿ
ಒಮ್ಮೆ
ತಾರಸ್ಥಾಯಿಯಲ್ಲಿ
ಆಕಾಶದಿಂದ ಬಕೆಟ್ಟು ಮಗುಚಿದಂತೆ,
ಒಮ್ಮೆ
ಮಂದ್ರದಲ್ಲೆಂಬಂತೆ
ಹನಿ ಹನಿಯಾಗಿ,
ಒಮ್ಮೊಮ್ಮೆ ಮಧ್ಯಮ ಸ್ಥಾಯಿಗೆ ತಪ್ಪಿಸದಂತೆ ಒಪ್ಪವಾಗಿ
ಅಲ್ಲೆ ಮಳೆನದಿಗೆ
ಶಬ್ದತೀರ ಸೃಜಿಸಿತ್ತು.
ಮಳೆಬಿಟ್ಟ ಸೂಚನೆಯ ನಿಶ್ಯಬ್ದಕ್ಕೆ ಹೊರಬಂದ ಚಿಟ್ಟೆಗಳು
ಸುಶ್ರಾವ್ಯವಾಗಿ ಶಬ್ದಮಾಡುತ್ತಿದ್ದವು,
ಸೂರ್ಯ ಹುಟ್ಟುವ
ಒಂದೂ ಸೂಚನೆಯಿರಲಿಲ್ಲ.
ನಿಜವಾದ ವರ್ಷ ಋತು
ಶುರುವಾಗಿ ಇನ್ನಷ್ಟೆ ವಾರವಾಯಿತು
ಎಂದು ತಿಳಿತಿಳಿಸುತ್ತ
ಹೊರಟೇಹೋದ ಹಾಗೆ
ಮಳೆ ಸದ್ಯದ ಮುಂಗಾರಿಗೆ
ಹೆಚ್ಚು ಸುರಿಯಲು ಅಣಿಮಾಡಿಕೊಳ್ಳಲು..
- ಲಕ್ಷ್ಮಿ ಎಚ್, ದಾವಣಗೆರೆ.
ಲಕ್ಷ್ಮಿ ಎಚ್. ಕವಯತ್ರಿಯಾಗಿ ಭರವಸೆ ಮೂಡಿಸುತ್ತಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿರುವ ಇವರು ದಾವಣಗೆರೆಯವರು. ಇವರು ಕುವೆಂಪುರವರ ಸಾಹಿತ್ಯದ ಓದಿನ ಬಗ್ಗೆ ಹೆಚ್ಚು ಒಲವುಳ್ಳವರಾಗಿದ್ದು,ಫೋಟೋಗ್ರಫಿ, ಚಿತ್ರಕಲೆ, ಲಹರಿ ಲೇಖನಗಳನ್ನು ಬರೆಯುವುದು ಇವರ ಹವ್ಯಾಸವಾಗಿದೆ.ಅವರ ಕವನ ನಿಮ್ಮ ಓದಿಗಾಗಿ. ಸಂಪಾದಕ.
ಧನ್ಯವಾದಗಳು ಸರ್.
ಮಳೆಯ ಹೊಯ್ಯುವಿಕೆ ಮುದಗೊಂಡಿತು