- ಶ್ರೀಪಾದ ಹೆಗಡೆ , ಸಾಲಕೊಡ
ಗೊಜ್ಜು ಎಂಬದು ಭಾವ ಮತ್ತು ಅರ್ಥಗಳ ಸಂಯೋಜನೆಯ ಒಂದು ಆದ್ಭುತ ಪದ. ಗೊಜ್ಜು ಎಂಬ ಪದಾರ್ಥ ಹುಟ್ಟುವದು ಹುಳಿ, ಉಪ್ಪು, ಖಾರ ಜೊತೆಗೆ ಸಿಹಿ ಈ ಎಲ್ಲ ರಸಗಳ ಅದ್ಭುತ ಸಂಗಮದಿಂದ. ಕೇವಲ ಈ ಎಲ್ಲ ರಸಗಳ ಕೂಡಿದಷ್ಟಕ್ಕೇ ‘ಗೊಜ್ಜು’ ಹುಟ್ಟಲಾರದು. ಆ ಎಲ್ಲ ರಸಗಳು ಒಂದೊಕ್ಕೊಂದು ಸೇರಿ ಸಮರಸವಾದಾಗ ಗೊಜ್ಜು ಅವತರಿಸುತ್ತದೆ. ಸಮರಸವೇ ಜೀವನ –ಎಂಬ ಹಾಗೆ ಸಮರಸದಿಂದ ಗೊಜ್ಜೆಂಬ ಅದ್ಭುತ ವ್ಯಂಜನ ಸಿದ್ಧವಾಗುತ್ತದೆನ್ನಬಹುದು. ಈ ಸಮರಸದ ಕ್ರಿಯೆ ಗೊಜ್ಜು ಬೀಸುವವನ/ಳ ತಾಳ್ಮೆ, ಹಾಗೂ ಶೃದ್ಧೆಯ ಗುಣಮಟ್ಟದ ಮೇಲೆ ನಿರ್ಭರವಾಗುತ್ತದೆ. ಬೀಸುತ್ತಾ ಬೀಸುತ್ತಾ ಅತ್ಯಂತ ನುಣುಪಾಗಿ ಅದಕ್ಕೆ ಹಾಕಿರುವ ಎಲ್ಲ ವಸ್ತುಗಳು ಪರಸ್ಪರ ಮಿಳಿತವಾದಾಗಲೇ ಗೊಜ್ಜಿನ ರುಚಿ ಮುಪ್ಪುರಿಗೊಳ್ಳುತ್ತದೆ. ಅದಕ್ಕಾಗಿಯೇ ಇಂದು ಯಾರಾದರೂ ಹೇಳಿದ್ದನ್ನೇ ಹೇಳಿದರೆ “ಗೊಜ್ಜು ಬೀಸುತ್ತಾನೆ’ ಎಂಬ ಪದಪ್ರಯೋಗ ರೂಢಿಯಲ್ಲಿ ಬಂದಿದೆ. ಬೀಸುವವನ/ಳ ಗಂಟೆಗಟ್ಟಲೆಯ ಶೃದ್ಧಾತ್ಮಕ ಶ್ರಮದ ಫಲವಾಗಿ ‘ಗೊಜ್ಜು’ ಎಂಬ ರುಚಿಕಟ್ಟಾದ ಪದಾರ್ಥವೊಂದು ನಿಮ್ಮ ಬಾಳೆಯ ತುದಿಯಲ್ಲಿ ವಿಜ್ರಂಭಿಸುತ್ತದೆ. ನಿಮ್ಮ ಬೆರಳ ತುದಿಯನ್ನು ಅದರಲ್ಲಿ ಅದ್ದಿ ಅದನ್ನು ನೀವು ಬಾಯಿಯಲ್ಲಿ ಇಟ್ಟಾಗ ನಿಮ್ಮ ನಾಲಿಗೆ ರವಾನಿಸುವ ಸಂವೇದನೆಯು ಅದ್ಭುತ ಹಾಗೂ ಅವರ್ಣನೀಯ.
ಆದರೆ ಈಗ ನಾನು ಹೇಳಹೊರಟಿರುವದು ಗೊಜ್ಜಿನ ಬಗ್ಗೆ ಅಲ್ಲ – ಗೊಜ್ಜಿನ ಪ್ರಭೇಧಗಳಲ್ಲೊಂದಾದ ಮಳ್ಗೊಜ್ಜಿನ ಬಗ್ಗೆ. ಈ ‘ಮಳ್ಗೊಜ್ಜು’ ಎಂಬ ಅದ್ಭುತ ಮಾಯಾ ಪದಾರ್ಥ ನನ್ನ ಮಾನ ರಕ್ಷಣೆ ಮಾಡಿದ ಪರಿಯನ್ನು ನಾನು ನಿಮ್ಮ ಮುಂದೆ ವಿವರಿಸಲೇಬೇಕು.
ಅದು ನಾನು ಕಾಳಿ ಜಲವಿದ್ಯುತ್ ಯೋಜನಾ ಪ್ರದೇಶವಾದ ಅಂಬಿಕಾನಗರದಲ್ಲಿ ಕೆಲಸ ಮಾಡುತ್ತಿದ್ದ ಕಾಲ. ದಂಡಕಾರಣ್ಯದ ಮಧ್ಯೆ ಸೃಷ್ಟಿಸಿದ ಈ ನಗರವೊಂದು ವಿಶ್ವಾಮಿತ್ರ ಸೃಷ್ಟಿ. ಇಂತಹ ನಗರಗಳಲ್ಲಿ ಉದ್ಯೋಗಿಗಳ ಕನಿಷ್ಠ ಅವಶ್ಯಕತೆಯನ್ನು ಪೂರೈಸಲು ಅವಶ್ಯವಾದ ಮಾರ್ಕೇಟ್ ವ್ಯವಸ್ಥೆ ಮಾತ್ರ ಇರುತ್ತದೆ. ಯೋಜನೆಯ ಕಾಮಗಾರಿಗಳು ಅಭಿವೃದ್ದಿಯಲ್ಲಿದ್ದಾಗ ಇಲ್ಲಿ ಸಾಕಷ್ಟು ಅಂಗಡಿಗಳು ತಲೆ ಎತ್ತಿರುತ್ತವೆ. ಆದರೆ ಯೋಜನೆಯ ಕಾಮಗಾರಿಗಳು ಮುಕ್ತಾಯಗೊಂಡು ನಿರ್ವಹಣೆಯ ಹೊತ್ತಿನಲ್ಲಿ ಉದ್ಯೋಗಿಗಳ ಸಂಖ್ಯೆ ಕ್ಷೀಣಿಸುತ್ತಾ ಹೋದಂತೆ ಅಂಗಡಿಗಳ ಸಂಖ್ಯೆಯೂ ಕರಗುತ್ತಾ ಹೋಗುತ್ತದೆ. ಈ ಘಟನೆಯು ನಡೆಯುವ ಹೊತ್ತಿಗೆ ಅಂಬಿಕಾನಗರದಲ್ಲಿ ಎರಡು ಕಿರಾಣಿ ಅಂಗಡಿಗಳು; ಒಂದು ತರಕಾರಿ ಅಂಗಡಿ: ಒಂದೆರಡು ಸ್ಟೇಶನರಿ ಅಂಗಡಿಗಳು ಮಾತ್ರ ಜೀವಹಿಡಿದು ನಿಂತಿದ್ದವು. ಉದ್ಯೋಗಿಗಳು ಜರೂರಿನ ಹೊತ್ತಿನಲ್ಲಿ ಅವುಗಳ ಮೇಲೆಯೇ ಅವಲಂಬಿತರಾಗಬೇಕಾಗಿತ್ತು. ಇಂತಹ ಹೊತ್ತಿನಲ್ಲಿ ವಾರಕ್ಕೆ ಎರಡು ಬಾರಿ ಮಾತ್ರ ಬರುವ ತರಕಾರಿಯನ್ನು ಖರೀದಿಸಿ ತಂದು ತಮ್ಮ ಮನೆಗಳಲ್ಲಿರುವ ಶೀತಕಪಾಟದಲ್ಲಿ ಸಂರಕ್ಷಿಸಿಕೊಳ್ಳುತ್ತಿದ್ದರು. ಒಮ್ಮೆ ಅಂಬಿಕಾನಗರದಲ್ಲಿ ತರಕಾರಿ ಸಿಗದಿದ್ದರೆÀ ಬಸ್ಸ್ಸಿನಲ್ಲಿ ಜೋತಾಡಿಕೊಂಡು ಹಾಗೋ ಹೀಗೋ ಎಂದು 17 ಕಿಲೋ ಮೀಟರ್ ದೂರದ ದಾಂಡೇಲಿಗೆ ಹೋಗಿ ಸಾಮಾನುಗಳನ್ನು ತರುತ್ತಿದ್ದರು. ಸ್ವಂತವಾಹನವಿದ್ದವರ ಹೆಂಡಂದಿರು ತಮ್ಮ ಗಂಡಸರ ಬೆನ್ನು ಬಿದ್ದು ಅವರಿಗೆ ಆ ದಿನದ ಕ್ಲಬ್ಬು ತಪ್ಪಿಸಿಯಾದರೂ ಮನೆಯಿಂದ ವಾಹನವನ್ನು ತೆಗೆಸಿ ದಾಂಡೇಲಿಗೆ ಹೊರಡಿಸಿಕೊಂಡು ಹೋಗಿ ತರಕಾರಿ ತರುತ್ತಿದ್ದರು.
ಹೀಗಿರುತ್ತಲಾಗಿ ಒಂದು ಶನಿವಾರ ನಾನು ದೇವಸ್ಥಾನದ ಮೀಟಿಂಗ್ ಎಂದು ಮನೆಯಿಂದ ಹೊರಡಲು ಸಿದ್ಧನಾದಾಗ ನನ್ನ ಹೆಂಡತಿ ನನ್ನನ್ನು ತಡೆದು, “ನೋಡಿ ಇವತ್ತು ಪೇಟೆಗೆ ತರಕಾರಿ ಬರುತ್ತೆ; ನನಗೆ ಸ್ವಲ್ಪ ಮೈ ಹುಷಾರಿಲ್ಲ; ನೀವೇ ಹೋಗಿ ಅ ಮಲಬಾರಿ ಅಂಗಡಿಯಿಂದ ತರಕಾರಿ ತಗೊಂಡು ಬನ್ನಿ” ಎಂದು ಹೇಳಿ ಒಂದು ಸಣ್ಣ ತರಕಾರಿ ಲಿಸ್ಟನ್ನು ಕೈಯಲ್ಲಿಟ್ಟಳು. ಅದನ್ನು ಹಿಡಿದುಕೊಂಡವನೇ, “ಆಯಿತು, ನೀನೇನೂ ಚಿಂತೆ ಮಾಡಬೇಡಾ. ಆರಾಮ ಮಲಕೋ; ನಾನು ಬರುವಾಗ ತರ್ತೀನಿ” ಎಂದು ಹೇಳಿ ಹೆಂಡತಿಯು ಕೊಟ್ಟ ಲಿಸ್ಟನ್ನು ಕಿಸೆಯಲ್ಲಿ ತುರುಕಿ, ವರಾಂಡದಲ್ಲಿದ್ದ ಚಪ್ಪಲಿಯನ್ನು ಕಾಲಿಗೆ ತೂರಿಸಿ ಮೀಟಿಂಗಿಗೆ ತಡವಾಯಿತೆಂದು ಗಡಬಡಿಸಿ ಮನೆಯಿಂದ ಹೊರಬಿದ್ದೆ.
ನಾನು ಮೀಟಿಂಗಿನ ಸ್ಥಳ ತಲುಪುವಷ್ಟರಲ್ಲಿ ಸದಸ್ಯರು ಸೇರಿದ್ದರು. ಮೀಟಿಂಗ್ ಎಂದ ಮೇಲೆ ಕೇಳಬೇಕೆ? ಅದು ಪ್ರಾರಂಭವಾಗುವದಕ್ಕೆ ಮಾತ್ರ ಸಮಯ ನಿಗದೀಕರಿಸುತ್ತಾರೆ, ಆದರೆ ಮುಗಿಯುದಕ್ಕಲ್ಲ. ಮೀಟಿಂಗ್‍ನ ಎಜೆಂಡಾದ ಜೊತೆಗೆ ಊರಿನ ಎಜೆಂಡಾವೂ ಸೇರಿಕೊಂಡು ಸಭೆ ಮುಗಿಯುವ ಹೊತ್ತಿಗೆ ರಾತ್ರಿ 10.30 ಆಗಿತ್ತು. ಇನ್ನೇನು ಮನೆಗೆ ಹೊರಡಬೇಕೆನ್ನುವ ಹೊತ್ತಿಗೆ ಹೆಂಡತಿಯು ನೀಡಿದ ತರಕಾರಿ ಲಿಸ್ಟ್ ನೆನಪಾಯಿತು. ಗಡಬಡಿಸುತ್ತಾ ಸ್ವಲ್ಪ ದೂರದಲ್ಲಿದ್ದ ಮಲಬಾರಿಯ ತರಕಾರಿ ಅಂಗಡಿಗೆ ಹೋದಾಗ ರಾತ್ರಿ 11.00 ಗಂಟೆಯ ಸಮಯ. ಅಂಗಡಿಯವ ಗಿರಾಕಿ ಇಲ್ಲವೆಂದು ಬಾಗಿಲು ಹಾಕುವ ವ್ಯವಸ್ಥೆ ನಡೆಸುತ್ತಿದ್ದ. ನಾನು ಬರುತ್ತಿದ್ದನ್ನು ನೋಡಿ,” ಏನು ಶಾರ್, ಇಷ್ಟು ತಡ ?” ಎಂದು ತನ್ನ ಮಲಬಾರಿ ಕನ್ನಡದಲ್ಲಿ ಕೇಳಿದ. ನಾನು ಕಿಸೆಯಿಂದ ಚೀಟಿ ತೆಗೆದು ಒಮ್ಮೆ ಅದನ್ನು ಓದಿದವ, ತದನಂತರ ತರಕಾರಿಯತ್ತ ಕಣ್ಣು ಹಾಯಿಸಿದಾಗ ದಿಗಿಲಾಯಿತು. ಬುಟ್ಟಿಗಳಲ್ಲಿ ಗಿರಾಕಿಗಳು ತಿರಸ್ಕರಿಸಿದ ಹುಳುಕು ಬದನೆಕಾಯಿ, ಸುಕ್ಕುಹಿಡಿದ ಅಜ್ಜನ ಚರ್ಮದಂತಿರುವ ಆಲೂಗಡ್ಡೆ ಇವುಗಳನ್ನು ಬಿಟ್ಟರೆ ಬೇರೆ ಯಾವುದೇ ತರಕಾರಿ ಇರಲಿಲ್ಲ. “ ಏನಯ್ಯ, ತರಕಾರಿ ತಂದಿಲ್ಲವೇನಯ್ಯಾ” ಎಂದು ನಾನು ಕೇಳಿದಾಗ , ಆತ. “ ಚೊಲ್ಪ,ಚೊಲ್ಪ ತಂದಿದ್ದೆ. ಎಲ್ಲಾ ಖಾಲಿ ಆಯಿತು. ಇಷ್ಟೇ ಉಳಿದಿದ್ದು.ಶಾರ್, ” ಎಂದು ನುಡಿದ. ಈ ಕೆಟ್ಟ ತರಕಾರಿಯನ್ನು ಮನೆಗೆ ಒಯ್ದರೆ ಹೆಂಡತಿ ಅದರ ಜೊತೆಗೆ ನನ್ನನ್ನೂ ಸೇರಿಸಿ ಹೊರಗೆ ಹಾಕುತ್ತಾಳೆಂದು ನನಗೆ ಖಾತ್ರಿಯಾಯಿತು. “ತರಕಾರಿ ಬೇಡ” ಎಂದು ಮನೆಯತ್ತ ಹೊರಟೆ. ಈಗ ಹೆಂಡತಿಗೆ ಏನು ಹೇಳುವದು ? ಮೀಟಿಂಗ್ ಲೇಟಾಯಿತು ಎಂದು ವಾಸ್ತವಾಂಶ ಹೇಳಲೇ? ಧಾರವಾಡದಲ್ಲಿ ಸ್ಟ್ರೈಕ್ ಇದ್ದುದರಿಂದ ತರಕಾರಿ ಬಂದಿಲ್ಲವೆಂದು ಸುಳ್ಳು ಹೇಳಲೇ ? ಮನೆಯ ಹತ್ತಿರ ಬರುವವರೆಗೆ ನನ್ನ ತಲೆಯಲ್ಲಿ ಜಿಜ್ಞಾಸೆಯು ನಡೆಯುತ್ತಿತ್ತು. ಇನ್ನು ಕಾಲಾವಕಾಶವಿಲ್ಲವೆಂದು ಅರಿತು ಸತ್ಯದ ತಲೆಯ ಮೇಲೆ ಹೊಡೆದಂತೆ ಎರಡನೆಯ ಕಾರಣವನ್ನೇ ಹೇಳಿದೆ. ಜೊತೆಗೆ ಒಂದು ಆಶ್ವಾಸನೆಯನ್ನು ಕೊಟ್ಟೆ, “ನಾಳೆ ಬೆಳಿಗ್ಗೆ ದಾಂಡೇಲಿಗೆ ಹೋಗಿ ನಿನಗೆ ತರಕಾರಿ ವ್ಯವಸ್ಥೆ ಮಾಡಿಯೆ ತೀರುತ್ತೇನೆ” ಎಂದು ರಾಜಕಾರಣಿಯ ವರಸೆಯಲ್ಲಿ ನುಡಿದೆ. ಹೆಂಡತಿ ಏನೂ ಹೇಳಲಿಲ್ಲ; ಅವಳು ನನ್ನ ಮಾತು ನಂಬಿದಳೆಂಬುದರಲ್ಲಿ ನನಗಂತೂ ವಿಶ್ವಾಸ ಮೂಡಲಿಲ್ಲ. ಯಾಕೆಂದರೆ ಅವಳು ಮೌನವಾಗಿದ್ದರೂ ಮನೆಯ ಪಾತ್ರೆಗಳು ಮಾತ್ರ ಮಾತನಾಡತೊಡಗಿದ್ದವು. ಒಟ್ಟಾರೆ ಮನೆಯಲ್ಲಿ ಗೋಳಿಬಾರು ನಡೆದ ಮಾರನೆ ದಿನದ ಪರಿಸ್ಥಿತಿಯು ನಿರ್ಮಾಣವಾಗಿ ವಾತಾವರಣವು ಬೂದಿಮುಚ್ಚಿದ ಕೆಂಡದಂತಿತ್ತು.
ಮರುದಿನ ಅಂದರೆ ರವಿವಾರವೂ ಸಹ ಮನೆಯಲ್ಲಿ ಬಿಗಿಯ ವಾತಾವರಣವೇ ಮುಂದುವರಿದಿತ್ತು. ನಾನು ಬೆಳಿಗ್ಗೆ ಎದ್ದು ಸ್ನಾನ ಮಾಡಿ ಯಥಾಪ್ರಕಾರ ದೇವರಿಗೆ ಒಂದು ಸೆಲ್ಯೂಟ್ ಹೊಡೆದು ಹೆಂಡತಿಯು ಟೇಬಲ್ ಮೇಲೆ ಮಾಡಿಟ್ಟ ಉಪ್ಪಿಟ್ಟನ್ನು ತಿಂದೆ. ಹಾಗೆಯೇ ಚಹಾ ಕುಡಿದು ಬಟ್ಟೆ ತೊಟ್ಟವ, “ ನಾನು ದಾಂಡೇಲಿಗೆ ತರಕಾರಿ ತರಲಿಕ್ಕೆ ಹೊರಟೆ” ಎಂದು ಅಡಿಗೆ ಮನೆಯಲ್ಲಿದ್ದ ನನ್ನವಳಿಗೆ ಕೇಳುವ ಹಾಗೆ ಜೋರಾಗೆ ಕೂಗಿ ಹೇಳಿದೆ. ಆದರೆ ನಾನು ನಿರೀಕ್ಷಿಸಿದಂತೆ ಉತ್ತರ ಬರಲಿಲ್ಲ. ವಾತಾವರಣ ಇನ್ನೂ ತಿಳಿಯಾಗಿಲ್ಲವೆಂಬುದು ಖಾತ್ರಿಯಾಯಿತು. ಮನೆಯಿಂದ ಹೊರ ಬೀಳುವ ಹೊತ್ತಿಗೆ ನೋಡುತ್ತೇನೆ - ಗೇಟಿನಲ್ಲಿ ಅಪರೂಪದ ಅತಿಥಿ ಪ್ರತ್ಯಕ್ಷನಾಗಿದ್ದ.! ನಮ್ಮ ಕುಟುಂಬಕ್ಕೆ ಅತಿ ಆತ್ಮೀಯನಾಗಿದ್ದ ಈ ಅಪರೂಪದ ಅತಿಥಿ ಬಯಲು ಸೀಮೆಯವನಾಗಿದ್ದು ಏಕಾ ಏಕಿ ಯಾವುದೇ ಸುಳಿವು ನೀಡದೇ ಬಂದಿದ್ದು ಆಶ್ಚರ್ಯದ ಜೊತೆಗೆ ಸಂತೋಷವನ್ನು ಉಂಟುಮಾಡಿತು. ಅದರ ಬೆನ್ನಲ್ಲೇ ದಿಗಿಲೂ ಉಂಟಾಯಿತು. ಯಾಕೆಂದರೆ ಮನೆಯ ಸಧ್ಯದ ಪರಿಸ್ಥಿತಿಯಲ್ಲಿ ಈತನ ಆಗಮನ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಬಹುದೇನೋ ಎಂಬ ಅನುಮಾನ ಸುರುವಾಯಿತು. ಆದರೆ ಅಪರೂಪಕ್ಕೆ ಮನೆಗೆ ಬಂದ ಜೊತೆಗೆ ನಮ್ಮ ಕುಟುಂಬಕ್ಕೆ ಆತ್ಮೀಯನಾದ ವ್ಯಕ್ತಿಯನ್ನು - ಹೋಗಿ ಹೋಗಿ ಇವತ್ತು ಯಾಕೆ ಬಂದೆ , ನಮ್ಮ ಮನೆಗೆ ಬರಲು ನಿನಗೆ ಬೇರೆ ದಿನವೇ ಸಿಗಲಿಲ್ಲವೇ– ಎಂದು ಕೇಳುವದು ಶಿಷ್ಟಾಚಾರವಲ್ಲವಲ್ಲ! ಆದರೂ ಸಾವರಿಸಿಕೊಂಡು ದೇಶಾವರಿ ನಗೆ ನಗುತ್ತಾ. “ ಅರೇ! ಬಾರೋ ದೋಸ್ತಾ, ಏನು ಬಾಳ ದಿವಸದ ನಂತರ ಈ ಬಡವನ ಮನಿಗೆ ದಾಳಿ ಇಟ್ಟೀಯಲ್ಲ್ಲಾ” ಎಂದು ಪೆದ್ದು ಪೆದ್ದಾಗಿ ನಗುತ್ತಾ ಹೆಂಡತಿಗೆ ಅವನ ಆಗಮನ ಗೊತ್ತಾಗಲಿಯೆಂದು ದೊಡ್ಡ ಧ್ವನಿಯಲ್ಲೆ ಮಾತನಾಡಿದೆ. “ ಹೀಗೆ ಸ್ವಲ್ಪ ಕೆಲಸ ಇತ್ತು; ಹಾಗೆ ನಿನ್ನ ಮತ್ತು ವೈನಿನ ಮಾತಾಡಿಸಿಕೊಂಡು ಹೋಗೋಣ ಅಂತ ಬಂದೆ . ಹಾಂ! ಮತ್ತೆ ವೈನಿ ಎಲ್ಲಿ “ ಎಂದು ಕೇಳಿದ. ನಾನು ಸ್ವಲ್ಪ ಧೈರ್ಯಮಾಡಿ “ ನೋಡು ಯಾರ ಬಂದಿದ್ದಾರೆಂದು” ಎಂದು ಅವಳಿಗೆ ಕೂಗಿ ಹೇಳಿದೆ. ಹೆಂಗಸರದು ಯಾವಾಗಲೂ ಸೂಕ್ಷ್ಮ ಮತಿತ್ವ. ಅಡಿಗೆ ಮನೆಯಲ್ಲಿದ್ದರೂ ಜಗುಲಿಯ ಮೆಲಿನ ಎಲ್ಲಾ ವ್ಯವಹಾರವನ್ನು ಅವರು ಗಮನಿಸದೆ ಇರುವದಿಲ್ಲ. ಬಹುಷಃ ಅವಳಿಗೆ ಈ ಅಪರೂಪದ ಅತಿಥಿಯ ಆಗಮನ ಅಡಿಗೆ ಮನೆಯಲ್ಲಿದ್ದೆ ಗೊತ್ತಾಗಿತ್ತು. ಅವಳು ಜಗುಲಿಗೆ ಬರುತ್ತಿದ್ದಂತೆ ಈತನೇ ಮಾತನಾಡಿಸಿದ,” ಏನ್ ವೈನಿ ಆರಾಮ ಇದ್ದೀರಲ್ಲಾ” ಎಂದು ಕೇಳಿದಾಗ ಆಕೆ ನನ್ನ ಮುಖ ಒಮ್ಮೆ ನೋಡಿ ನಂತರ ಅದಕ್ಕೆ ಉತ್ತರಿಸದೆ ,” ನಿಮ್ಮ ಮನಿಯವರು ಹೇಗೆ ಇದ್ದಾರೆ ?” ಎಂದು ನನ್ನ ಮಿತ್ರನಿಗೆ ಮರು ಪ್ರಶ್ನೆ ಎಸೆದಳು. ಅವಳು ಕಣ್ಣೋಟದಲ್ಲಿ ಅಡಗಿದ್ದ ಅಂತಾರಾರ್ಥ ನನಗೆ ಅರಿವಾದರೂ ಏನೂ ತಿಳಿಯದವನಂತೆ ಸುಮ್ಮನೆ ನಕ್ಕುಬಿಟ್ಟೆ. ಹಾಗೆಯೇ, “ ನೋಡು ನೀನು ಸ್ನಾನ ಮಾಡಿ, ತಿಂಡಿ ಮಾಡು” ಎಂದು ಅವನನ್ನು ಸ್ನಾನಕ್ಕೆ ಕಳುಹಿಸಿ, ನಾನು ತರಕಾರಿ ತರಲು ಚೀಲ ಹಿಡಿದವನೇ ಮಲಬಾರಿ ಅಂಗಡಿಯತ್ತ ಓಡಿದೆ.
ಮಲಬಾರಿ ಅಂಗಡಿಯ ಹತ್ತಿರ ಬಂದಾಗ ಬಾಗಿಲು ಏನೋ ತೆಗೆದಿತ್ತು. ಆದರೆ ನಿನ್ನೆ ನಾನು ಹುಳುಕು- ಮುಳುಕು- ಎಂದು ಮುಂತಾಗಿ ತಿರಸ್ಕರಿಸಿ ಬಿಟ್ಟು ಹೋದ ಆಲೂಗಡ್ಡೆ ಹಾಗೂ ಬದನೆ ಕಾಯಿಗಳು ಹಾಗೆಯೇ ಬುಟ್ಟಿಯಲ್ಲಿಯೇ ವಿರಾಜಮಾನವಾಗಿದ್ದು ಅವು ನನ್ನನ್ನು ನೋಡಿ ಮುಸು ಮುಸು ನಗುತ್ತಿರುವಂತೆ ಕಂಡವು. ಆದರೆ ಏನೂ ಮಾಡುವದು ಹೇಳಿ ಅನಿವಾರ್ಯತೆಯಲ್ಲಿ ಸಿಕ್ಕಿದ ನನಗೆ ಬೇರೆ ಮಾರ್ಗ ಎಲ್ಲಿದೆ? ತಿರಸ್ಕರಿಸಿದ ಆ ಹಾಳು-ಮೂಳುಗಳಲ್ಲಿ ಇದ್ದುದರಲ್ಲಿಯೆ ಸ್ವಲ್ಪ ಒಳ್ಳೆಯದನ್ನು ಆರಿಸಿ ಖರೀದಿ ಮಾಡಿಕೊಂಡು ಮನೆಗೆ ತರುವ ಹೊತ್ತಿಗೆ ನನ್ನ ಮಿತ್ರನ ಸ್ನಾನ ಮುಗಿದಿತ್ತು. ಹೆಂಡತಿ ತನ್ನ ಪಾಲಿಗೆಂದು ಇಟ್ಟುಕೊಂಡಿದ್ದ ಉಪ್ಪಿಟ್ಟನ್ನೇ ಬಿಸಿ ಮಾಡಿ ಅವನಿಗೆ ಬಡಿಸಿದಳು. ತಿಂಡಿ ಮುಗಿಸಿದ ಆತ ಹೊರಗೆ ಹೋಗಿ ಅಡ್ಡಾಡಿ ಬರೋಣವೆಂದು ಹೇಳಿದ್ದಕ್ಕೆ ನಾನು ಅಯಿತೆಂದು ಹೇಳಿ ಇಬ್ಬರೂ ಮನೆ ಬಿಟ್ಟೆವು.
ನಾವು ತಿರುಗಿ ಮನೆಗೆ ಬರುವ ಹೊತ್ತಿಗೆ ಸಮಯ ಒಂದೂವರೆಯಾಗಿತ್ತು. ಕೈಕಾಲು ಮುಖ ತೊಳೆದು ಊಟದ ಮೇಜಿಗೆ ಬಂದಾಗ ನನ್ನ ಕಣ್ಣನ್ನೇ ನಾನು ನಂಬದಾದೆ. ಮೇಜಿನ ಮೇಲೆ ಮಾಯಾಬಜಾರ್ ಸಿನೇಮಾದಲ್ಲಿಯಂತೆ ವಿವಿಧ ಭಕ್ಷಗಳು ನಮ್ಮ ಆಗಮನವನ್ನು ಕಾಯುತ್ತಿದ್ದವು. ಆಲುಗಡ್ಡೆ ಟೊಮೆಟೊ ಸಾಂಬಾರು, ಬದನೆಕಾಯಿಯ ಪಲ್ಯ, ಯಾವುದೋ ಗೊಜ್ಜು, ತೊಂಬಳಿ, ಹಪ್ಪಳ-ಸಂಡಿಗೆ ಜೊತೆಗೆ ಜಾಮೂನು ಇವೆಲ್ಲಾ ಒಟ್ಟಾಗಿ ನಮ್ಮ ಸೇವೆಗಾಗಿ ಕಾದು ಕುಳಿತಿದ್ದವು. ಇದನ್ನೆಲ್ಲ ನೋಡಿದ ನನ್ನಲ್ಲಿ ಆಶ್ಚರ್ಯ ಹಾಗೂ ಸಂತೋಷ ಎಲ್ಲವೂ ಒತ್ತೊಟ್ಟಿಗೆ ಉದ್ಭವಿಸಿ ನಾನು ಭಾವತುಂದಿಲನಾಗಿ ಮಾತು ಹೊರಡದೇ ಮೂಕನಾದೆ. ಊಟದ ತುಂಬೆಲ್ಲಾ ನನ್ನ ಮಿತ್ರನೇ ಮಾತನಾಡುತ್ತಿದ್ದ. ನಾನು ಸುಮ್ಮನೆ ‘ಹೌದು; ಅಲ್ಲಾ’ ಎಂದು ತಲೆ ಅಡಿಸುತ್ತಿದ್ದೆ. ಸುಧೀರ್ಘವಾಗಿ ನಡೆದ ಈ ಭೋಜನದ ತುಂಬೆಲ್ಲಾ ನನ್ನ ಮಿತ್ರ ನನ್ನ ಹೆಂಡತಿಯ ಕೈಯಿಂದ ಮಾಡಲ್ಪಟ್ಟ ವ್ಯಂಜನಗಳನ್ನೆಲ್ಲಾ ಹೊಗಳಿದ್ದೇ ಹೊಗಳಿದ್ದು. ಅದರಲ್ಲೂ ಬಾಳೆಯ ತುದಿಯಲ್ಲಿ ಹಾಕಿದ ಗೊಜ್ಜನ್ನು “ಚೆಟ್ನಿ ಬಾಳ ಮಸ್ತಾಗದರಿ ” ಎಂದು ಮೂರ್ನಾಲ್ಕು ಬಾರಿ ಹಾಕಿಸಿಕೊಂಡು ಊಟ ಮಾಡಿದ. ಅದಲ್ಲದೆ ಊಟ ಮುಗಿಸಿ ಕೈ ತೊಳೆಯುವಾಗ “ ವೈನಿ ನೀವು ಮಾಡಿದ್ದ ಚಟ್ನಿ ಬಾಳ ಭೇಷ ಇತ್ರಿ. ನಾನು ಊರಿಗೆ ಹೋದ ಮ್ಯಾಲೆ ನಮ್ಮ ಮನೆಯವರ ತಾಬಾ ಪೋನು ಮಾಡ್ಸ್ತೀನ್ರಿ. ಅದಕ್ಕೆ ಏನೇನು ಮಸಾಲೆ ಹಾಕಿರ ಅಂತ ವಸಿ ಅವಳಿಗೂ ಹೇಳ್ರಿ ಮತ್ತೆ”. ಎಂದು ಆತ ಉದ್ಘೋಷಿಸಿದಾಗಲಂತೂ ನನ್ನ ಹೆಂಡತಿಯ ಮುಖ ಅರಳಿದ ಗುಲಾಬಿಯಂತೆ ನಳನಳಿಸತೊಡಗಿತ್ತು. ದೇವಿಪಾರಾಯಣಕ್ಕೆ ಅದಾವ ದೇವಿ ಪ್ರಸನ್ನವಾಗದೇ ಇರಲು ಸಾಧ್ಯ ಹೇಳಿ? ಆದರೆ ರುಚಿ ರುಚಿಯಾಗಿದ್ದ ಅ ಗೊಜ್ಜನ್ನು ನಾನೂ ಸಹ ಹಾಕಿಸಿಕೊಂಡು ಬಾಯಿಚಪ್ಪರಿಸಿದರೂ ಅದು ಯಾವುದರಿಂದ ಮಾಡಿದ್ದು ಎಂಬುದರ ಪತ್ತೆ ಮಾತ್ರ ನನಗೆ ಕೊನೆಗೂ ಹತ್ತಲೇ ಇಲ್ಲ.
ಅಂದು ಸಂಜೆಯೇ ನನ್ನ ಮಿತ್ರ ತನಗೆ ಕೆಲಸ ಇದೆಯೆಂದು ಹೇಳಿ ಊರಿಗೆ ಹೋದ. ಆದರೆ ನನ್ನ ಮಿತ್ರನ ಅನಿರೀಕ್ಷಿತ ಆಗಮನ ಮಾತ್ರ ನಮ್ಮ ಮನೆಯಲ್ಲಿ ನೆಲೆಸಿದ್ದ ಬಿಗಿ ವಾತಾವರಣವನ್ನು ತಿಳಿಗೊಳಿಸಿದ್ದಷ್ಟೇ ಅಲ್ಲ ಉಲ್ಲಾಸದ ತಂಗಾಳಿ ಇಡೀ ಮನೆಯನ್ನೇ ಆವರಿಸಿಕೊಂಡಿತ್ತು. ಕೆಲವು ಬಾರಿ ಮೋಡ ಮುಸುಕಿದ ವಾತಾವರಣ ಇದ್ದಕಿದ್ದಂತೆ ಮಾಯವಾಗಿ ಸುಂದರ ಬೆಚ್ಚನೆಯ ಬಿಸಿಲು ಮೂಡಿದಂತೆ ಇಡೀ ಮನೆಯ ವಾತಾವರಣವೇ ಬದಲಾಗಿತ್ತು.
ಆದರೆ ನನ್ನ ಕುತೂಹಲ ಮಾತ್ರ ತಣಿದಿರಲಿಲ್ಲ - ನಾನು ಆ ಮಲಬಾರಿ ಅಂಗಡಿಯಿಂದ ತಂದದ್ದು ಆ ಹುಳುಕು-ಮುಳುಕು ಬದನೆಕಾಯಿ ಹಾಗೂ ಆಲುಗಡ್ಡೆ. ಆದರೆ ಈ ಗೊಜ್ಜು ಯಾವುದರಿಂದ ನಿರ್ಮಾಣವಾಯಿತು? ಕುತೂಹಲ ಹತ್ತಿಕ್ಕಿಕೊಳ್ಳಲಾಗದೆ ಅಂದು ರಾತ್ರಿ ಹೆಂಡತಿಯನ್ನು, “ಅಲ್ದೆ ಮಾರಾಯ್ತಿ, ನನ್ನ ಫ್ರೆಂಡ್ ಅಂತೂ ಬಸ್ಸು ಹತ್ತುವ ವರೆಗೂ ನಿನ್ನ ಆ ಗೊಜ್ಜನ್ನು ಹೊಗಳಿದ್ದೇ ಹೊಗಳಿದ್ದು. ಅದು ಎಂತಹ ಗೊಜ್ಜು ?” ಎಂದು ಎಳೆಯ ಮಗುವಿನಂತೆ ಕೇಳಿದೆ.
ನನ್ನ ಹೆಂಡತಿ ಖೊಳ್ಳನೆ ನಗತೊಡಗಿದಳೇ ವಿನಃ ಪ್ರಶ್ನೆಗೆ ಉತ್ತರಿಸಲಿಲ್ಲ. ಒಂದೆರಡು ನಿಮಿಷ ನಕ್ಕು ಸುಮ್ಮನಾದ ಮೇಲೆ ತಾನೇ ವಿವರಿಸಿದಳು.
ನಾನು ಹಾಗೂ ನನ್ನ ಮಿತ್ರ ಇಬ್ಬರೂ ಮನೆಯಿಂದ ಹೊರಬಿದ್ದ ಮೇಲೆ ಅವಳಿಗೆ ಚಿಂತೆಯಾಯಿತಂತೆ – ಏನು ಅಡಿಗೆ ಮಾಡಲಿ ಈ ಕೆಟ್ಟ ತರಕಾರಿಯಿಂದ – ಎಂದು. ಆಗ ಅವಳಿಗೆ ಹೊಳೆದದ್ದು ಕಳೆದ ವಾರ ಫ್ರೀಜ್‍ನಲ್ಲಿ ಇಟ್ಟ ಸಮತೆ ಕಾಯಿಯ ಸಿಪ್ಪೆ. ಅದನ್ನೇ ಬಳಸಿ ಒಂದು ಗೊಜ್ಜು ಮಾಡಿದರಾಯಿತೆಂದು ಅಂದುಕೊಂಡು ಸೂಕ್ತ ಸಾಂಬಾರ ಸಾಮಗ್ರಿಗಳನ್ನು ಹಾಕಿ “ಮಳ್ಗೊಜ್ಜು” ಮಾಡಿದಳಂತೆ. ಹಿಂದೆ ಕರಾವಳಿಯ ಹೆಣ್ಣುಮಕ್ಕಳು ಮನೆಯಲ್ಲಿ ಯಾವುದೇ ತರಕಾರಿ ಇಲ್ಲದಿದ್ದಾಗ ಸಮತೆಕಾಯಿ, ಮೊಗೆಕಾಯಿ, ಹೀರೆಕಾಯಿ ಮುಂತಾದ ತರಕಾರಿಗಳ ಸಿಪ್ಪೆಯನ್ನು ಕೆತ್ತಿದಾಗ ಅವುಗಳನ್ನು ಎಸೆಯದೇ ಹಾಗೆಯೆ ಇಟ್ಟುಕೊಂಡು ಮರುದಿನ ಅದರಿಂದ ಗೊಜ್ಜನ್ನು ಮಾಡಿ ಬಡಿಸುತ್ತಿದ್ದರಂತೆ. ಎಸೆಯುವ ಈ ಸಿಪ್ಪೆಗಳಿಂದ ಗೊಜ್ಜು ಮಾಡಿದ್ದೇವೆಂದರೆ ಮನೆಯ ಗಂಡಸರು ಊಟ ಮಾಡುವದಿಲ್ಲವೆಂದು ತಿಳಿದ ಜಾಣ ಹೆಂಗಸರು “ ಅದೆಲ್ಲ ನಿಮಗೆಂತಕ್ಕೆ? ಬಾಯಿಗೆ ರುಚಿ ಆದರೆ ಆತಪಾ. ನಿಮಗೆ ಹೆಸರು ಬೇಕೆಂದ್ರೆ ಅದನ್ನು ಮಳ್ಗೊಜ್ಜು ಹೇಳಿ ಕರಕೊಳಿ” ಎಂದು ಹೊಸ ನಾಮಕರಣ ಮಾಡಿ ಬಡಿಸುತ್ತಿದ್ದರಂತೆ. ರುಚಿ ರುಚಿಯಾದ ಮಳ್ಗೊಜ್ಜಿನ ಸವಿಯನ್ನು ಸವಿದ ಪೆದ್ದ ಗಂಡಸರು ತಮ್ಮ ಹೆಂಡಂದಿರು ಮಾಡುವ ಜಾಣ ಮೋಸಕ್ಕೆ ಸುಲಭವಾಗಿ ಬಲಿಯಾಗುತ್ತಿದ್ದರೆಂದು ನಮ್ಮ ಹಿರಿಯರೊಬ್ಬರು ಹಿಂದೊಮ್ಮೆ ಹೇಳಿದ ಮಾತು ಸ್ಮರಣೆಗೆ ಬಂತು.
ಹೆಂಡತಿಯ ಈ ಮಾತು ಕೇಳಿದ ಮೇಲೆ ನಗು ತಡೆಯಲಾಗದೇ ನಾನೂ ನಕ್ಕೆ. ಅದರ ಬೆನ್ನಲ್ಲೇ ಅವಳು ತನ್ನ ಬುದ್ಧಿವಂತಿಕೆಯಿಂದ ಮಾಡಿದ ಮೋಸದ ಅರಿವಾಗದೆ ಇರಲಿಲ್ಲ.
ಆದರೆ ಈ ಬಾರಿ ಹೆಂಡತಿಯ ಮೇಲೆ ನನಗೆ ಎಳ್ಳಷ್ಟೂ ಸಿಟ್ಟು ಬರಲಿಲ್ಲ. ಅದರ ಬದಲು ನನ್ನ ಮಿತ್ರನ ಎದುರು ಮಳ್ಗೊಜ್ಜೆಂಬ ಮಾಯೆಯಿಂದ ಮಾನ ಉಳಿಸಿದ ಹಳ್ಳಿಯ ಹೆಣ್ಣಿನ ಈ ಚಾಣಾಕ್ಷತನದ ಬಗ್ಗೆ ಅಭಿಮಾನ ಮೂಡಿತು. ನನ್ನ ಹೆಂಡತಿಯಂತಹ ಅದೆಷ್ಟೋ ಹೆಂಗಳೆಯರು ತಮ್ಮ ಬೇಜವಾಬ್ದಾರಿ ಗಂಡಸರಿಂದ ಮನೆಯ ಮಾನ ಉಳಿಸುತ್ತಿರಬಹುದೆಲ್ಲಾ ಎಂದನಿಸಿತು. ಅದೇ ಸಂದರ್ಭದಲ್ಲಿ ‘ಸ್ತ್ರೀ ಎಂದರೆ ಅಷ್ಟೇ ಸಾಕೆ?’ ಎಂಬ ಕವಿವಾಣಿ ನೆನಪಾಗಿ ಮನಸ್ಸು ಭಾವಪೂರಣಗೊಂಡಿತು.
🤣🤣🤣
- ಶ್ರೀಪಾದ ಹೆಗಡೆ, ಸಾಲಕೋಡ
ಮಳ್ಗೊಜ್ಜಿನ ಮಹಿಮೆ ರಸವತ್ತಾಗಿದೆ