top of page

ಮಲ್ಲಿಗೆ ಹುಡುಗ

ಬೇಡ ಬೇಡ ಬೇಡವೆ ಬೇಡ ಎಷ್ಟ ಹೇಳಿದ್ರೂ ದಂಡ ಕೇಳೋದಿಲ್ಲ ಮೊಂಡ ನಿಂತೇ ಬಿಡ್ತಾನ ಬಾಗಲಲ್ಲಿ ಉದ್ದಂಡ ಒಂದ ಮೊಳಸಾಕು ಅಂದ್ರೆ ಇರ್ಲಿಬಿಡ್ರಿ ಇನ್ನೊಂದು ಮೊಳ ಬಿಡಿ ಮಲ್ಲಿಗೆ ಅಂದ್ರೆ ಹಾಲಿನ ಥರಾ ಚಿಲ್ರೆ ಇಲ್ಲವೆ, ಆತು ಬಿಡಿ ಅಂದೇ ಬಿಡುವ, ಒಳ್ಳೇ ಗಿರಾಕಿ ಅನಿಸುವುದು ಒಮ್ಮೊಮ್ಮೆ  ಕಳಿಸಿಬಿಡೋಣವೆ ತದಕಿ ಮೂರನೆ ಮನಿ ಅಜ್ಜಿ ಅಂದ್ರೆ ಎಣ್ಣೆ ಸೀಗೆಕಾಯಿ ಕೊಟ್ಟಹೋಗೋ ಒಂದ್ಗೇಣಂತ ಕರದೂ ಕರದೂ ಸುಸ್ತಾದ್ರೂ ಇವನು ಹೋಗೋದ ಕಡೆಗೇ ಕೊಡೋದ ಅವಳಿಗೆ ಉಳದದ್ದ  ಕಟ್ಟಕಡೆಗೆ ಮಲ್ಲಿಗೆ ಹುಡುಗಾ ತರಲೆ ಹುಡುಗಾ ಹೋಗ್ತಾನೆಲ್ಲೆಲ್ಲಿಗೆ ಎಲ್ಲಿಲ್ಲದ ಸುದ್ದಿ ಎಲ್ಲಾ ಅವನ ಬಾಯೊಳಗೆ ಪೇಪರ್ ಬರೊದಕ್ಕಿಂತ ಮೊದಲೇ ಬಿಸಿ ಬಿಸಿ ಸುದ್ದಿ ಬಾಗಲಲ್ಲೆ ನಮ್ಮ ಓಣಿಗೆಲ್ಲಾ ಇವನೆ ರಾಜಾ, ಮಹಾರಾಜಾ ಯಾರಮನೆ ಆದ್ರೂ ಅಲ್ಲಿ ಇರಬೇಕ ಇವಂದೆ ಮಲ್ಲಿಗೆ ಬೇರೆ ಯಾರ ಬಂದ್ರೂ ಆಗ್ಲೆ ಜಾಗಾ ಕೀಳಬೇಕ ಮೆಲ್ಲಗೆ

ಶಾಲೆಗೀಲೆ ಏನೂ ಇಲ್ಲಾ ಅಂದ್ರೆ ಉತ್ರಾ ಬರಿ ನಗುವೆ ಕಳಿಸೋರ ಯಾರು, ಹೋಗ್ತೇನಂದ್ರೂ ಏನ್ ಮಾಡಬೇಕು ಅವನು ಲೆಕ್ದಲ್ಲಿ ಮಾತ್ರ ಭಾರಿ ಚುರುಕು ಸರಕ್‍ನೆ ಹೇಳ್ತಾನ ಇಷ್ಟೆ ಅಂತ ತಲೆ ಒಳಗೆ ಹೋಗೋದ್ರೊಳಗೆ

ಮಲ್ಲಿಗೆ ಹುಡುಗಾ ಎಲ್ಲಿಗೆ ಹೋದ ಬರಲೇ ಇಲ್ಲಾ ಒಂದಿವಸಾ ಬೆಳಗೂ ಆಯ್ತು, ಬಿಸಿಲೂ ಏರ್ತು ಸುಳಿವೇ ಇಲ್ಲ ಎಲ್ಲೂ ಬೇಡಾ ಹೋಗೋ ಅನ್ನೋರೆಲ್ಲಾ ಕಂಡರೆ ಸಿಡಿಸಿಡಿ ಹಾಯೋರೆಲ್ಲ ಧಡ್ಡನೆ ಬಾಗಲಾ ಹಾಕೋರೆಲ್ಲಾ ಕಾಯ್ದ್ರು ಕಾಯ್ದ್ರು, ಯಾಕ ಬರಲಿಲ್ಲ, ಮಲ್ಲಿಗೆ ಹೂವು ಯಾಕ ತರಲಿಲ್ಲಾ ಇದ್ದೇ ಇತ್ತು ಗುಮಾನಿ ನನಗೆ ಒಂದಿನಾ ಇವನು ಕೈಕೊಡ್ತಾನೆ ಅಂತೇನೇನೋ ಒಟಗುಟ್ತು ಅಜ್ಜಿ ಹಾಗಂತಂದ್ರು ಚುರುಚುರು ಬಿಸಿಲಲಿ ಕಾಯ್ದೆ ಕಾಯ್ತು ಕಾಲ ಚಾಚಿ ಹುಡುಗಾ ಮಾತ್ರ ಬರಲೆ ಇಲ್ಲ ಆಮ್ಮಾ ಅಂತೂ ಕೇಳೋದ ಬೇಡ ಎಲ್ಲಿದ್ದಾನೋ ತಿಳೀಲೂ ಇಲ್ಲಾ ಟಕ್ ಅಂತಾ ಸಪ್ಪಳ ಆದ್ರೂ ಮಲ್ಲಿಗೆ ಹೂವಿನ ಹುಡುಗನ ಮನಸು ಬಾಗಿಲ ತೆಗೆದು ನೋಡ್ತಾ ಇದ್ಲು ಮಲ್ಲಿಗೆ ಹೂವಿನ ಹಾಗೇನಾ ? ಪ್ರತಿ ಸಲಾನೂ ಮೋಸಹೋದ್ಲು ಯಾರೋ ಏನೋ ಅಂದದ್ದಕ್ಕೆ  ಕಡೆಗೂ ಬಗ್ಗಿ ದೇವರ ಮುಂದೆ ಮುದುರಿಕೊಂಡು ಮರೆಯಾಗ್ಬಿಟ್ನಾ ? ಕಣ್ ಮುಚ್ಚಿ ಬೇಡಿಕೊಂಡಿದ್ಲು ಎಲ್ಲಿಗೆ ಹೋಯ್ತೋ ಅಯ್ಯೊ ದೇವ್ರೆ ಮಲ್ಲಿಗೆ ಹೂಗಳು ಬಳ್ಳಿಯಗುಂಟ ಬರದೆ ಇರ್ಲಿ ತೊಂದರೆ ದಿನವೂ ದಿನವೂ ಅರಳುವವು ಕಾಯಪ್ಪಾ ಅದು ಮಹಾ ತರಲೆ ಬೆಳಗಾದೊಡನೆ ಮನೆ ಬಾಗಿಲಿಗೆ ಮರಳಿ ಬರಲಿ ಮನೆಗೆ ಬಾರದೆ ಇರುವವೆ, ಬಂದ್ವು ತುಪ್ಪದ ದೀಪಾ ಹಚ್ಚಿ ಇಟ್ಲು ಘಮ್ ಅನ್ನೋ ಕಂಪಿನ ಜೊತೆಗೆ ಮುಡಿಸಲು ಮಲ್ಲಿಗೆ ಇಲ್ದೆ ಆ ಹುಡುಗನ ನೆನಪೂ ತಂದ್ವು

-ಆನಂದ ಪಾಟೀಲ

28 views0 comments

Comments


bottom of page