ಬರಿದೇ ಬದುಕಿಗೆ ಬತ್ತದೊಲುಮೆಯ ಒರತೆ ನೀ
ಕೊರತೆ ಇನ್ನೆಲ್ಲಿಹುದು ಸಖೀ,
ಒಂಟಿ ಬದುಕಿಗೆ ಜಂಟಿ ಪ್ರೀತಿ ಬೆಸೆದಿಹೆ ನೀ
ಮರೆತೆನೆಂದರೇನಹುದು ಸಖೀ,
ಹಾದಿ ಬದಿಯ ಜೀವಕೆ ಹೂವ ಹಾಸಿಗೆ ಹಾಸಿ,
ನೋವ ಸೋಸಿ ದುಃಖ ಒರೆಸಿ
ನಗುತ ನಲಿಸಿದೆ ಸಖೀ,
ಜಗದ ಜಂಜಡವ ನಗುವ ನೊಗದಲಿ ಇರಿಸಿ
ಹಗುರ ಬದುಕಿನ ಬಂಡಿಗೆ ನನಗೆ ಹೆಗಲಾಗು ನೀ
ಬದುಕು ಭಾರವಿನ್ನೆಲ್ಲಿಹುದು ಸಖೀ,
ಜಗದ ಕಣ್ಣುಗಳು ಬಗೆ ಬಗೆದು ನೋಡಿ
ಹಗೆಯ ಹತಿಯಾರದಲಿ ಹರಣ ಮಾಡಿದರೂನು
ಮನದ ಮಲ್ಲಿಗೆ ತೋಟದೀ ಮಲ್ಲಿಗೆ ನಿನಗಿದೋ ಮಲ್ಲೆ
ಬಂದು ಮಲ್ಲಿಗೆ ಮುಡಿಯೇ ಸಖೀ,
ನಿನ್ನ ನಗುವೇ ನನ್ನ ನಗುವು ನಗುವಲ್ಲೇ ನಮ್ಮ ಗೆಲುವು
ಒಲವ ತುಂಬಿದ ಚೆಲುವ ಸಖೀ
ನೀ ನನ್ನೊಂದಿಗಿರೆ ಜಗವನ್ನೇ ಗೆಲುವೆನು...
ಸಿದ್ದರಾಮ ತಳವಾರ
댓글