
ನಿಶ್ಚಿಂತ, ನಿರಾಳ, ಸ್ನಿಗ್ಧ, ಮುಗ್ಧ
ಮಗುವಿನಂಥ ಮುದ್ದು ಬೆಕ್ಕಿನ
ಸವಿನಿದ್ದೆಯ ಮಂಪರಿನ ತುಂಬಾ
ಸಿಹಿ ನೆತ್ತರು ಹಸಿಮಾಂಸ ಚಪ್ಪರಿಸಿ
ಮೆದ್ದಂತೆ,ತಾಜಾ ರುಚಿಕಟ್ಟಾದ
ಹೊಸ ಮೂಳೆ ಸುಖವಾಗಿ
ಕಡಿದಂತೆ ಮನದ
ತುಂಬ ಕಣ್ತುಂಬ
ಹಗಲುಗನಸು ಕಾಲ
ಮೆತ್ತನೆಯ ಫಂಜಿನೊಳಗವಿತ
ಹರಿತವಾದ ಉಗುರು ಕ್ರೌರ್ಯ
ಮುದ್ದು,ಮುದ್ದಾದ ಸಂಭಾವಿತ
ದೇಹದೊಳಗೊಂದು ವ್ಯಾಘ್ರ

ಮಾನವದೇಹದೊಳಗೊಬ್ಬ ದಾನವ
ಸಾಕ಼ರನೊಳಗೊಬ್ಬ ರಾಕ಼ಸ
ಕಣ್ಮನ ತಣಿಸುವ ತಂಪಿನಾಳದಲ್ಲಿ ಕೊತ, ಕೊತ ಕುದಿಯುತ್ತ
ತೆಳುಪದರ ಹುಡುಕುವ ಲಾವಾ,
ಮೇಲ್ನೋಟಕ್ಕಷ್ಟೇ...
ಶಾಂತಿ, ಸಹನೆ, ಧರ್ಮ, ನೀತಿ,
ಬುದ್ಧ, ಗಾಂಧಿ, ಏಸು, ಪೈಗಂಬರ್
ರಾಮರಾಜ್ಯದ ಚರಿತ್ರೆ ಓದಲಷ್ಟೆ
ನೋಡಲಷ್ಟೇ ಸುಂದರ,ಮುದ್ದು
ಮುದ್ದಾದ ಪಾಪ..ದ ಬೆಕ್ಕು
ನಿದ್ದೆಯ ತುಂಬಾ ಬೇಟೆಯದ್ದೇ
ಕನಸು...!!!
