top of page

ಮರೆಯಲಾಗದ ಮಹಾನುಭಾವರು

ಛಂದಶ್ಶಾಸ್ತ್ರದ ಮಹಾಮೇರು

ಪ್ರ. ಗೋ. ಕುಲಕರ್ಣಿ

*******

ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಅವರು ಛಂದಸ್ಸು, ವ್ಯಾಕರಣ, ಕನ್ನಡ ಭಾಷೆ, ಖಗೋಲ ವಿಜ್ಞಾನ ಮೊದಲಾದ ವಿಷಯಗಳಲ್ಲಿ ದೊಡ್ಡ ದೊಡ್ಡ ಪದವೀಧರರು, ವಿದ್ವಾಂಸರು ಎಂದು ಖ್ಯಾತಿವೆತ್ತವರಿಗಿಂತ ಹೆಚ್ಚಿನ ಅಧ್ಯಯನ, ಸಂಶೋಧನೆಗಳ ಕೆಲಸ ಮಾಡಿದವರು. ಆದರೆ ಅವರಿಗೆ ಸಿಗಬೇಕಾದ ಮನ್ನಣೆ, ಗೌರವ ಸಿಗಲೇಇಲ್ಲ. ಆದರೂ ನಿರ್ಲಿಪ್ತರಾಗಿ ಅವರು ಕನ್ನಡಕ್ಕೆ ಅಮೂಲ್ಯ ಕೃತಿಕೊಡುಗೆಗಳನ್ನು ನೀಡಿದರು.

ಪ್ರಹ್ಲಾದ ಗೋವಿಂದ ಕುಲಕರ್ಣಿ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಭಾಗೋಜಿಕೊಪ್ಪ ಎಂಬ ಸಣ್ಣ ಗ್ರಾಮದಲ್ಲಿ ೧೯೦೨ ಜುಲೈ ೧೭ ರಂದು ಜನಿಸಿದರು. ಮನೆಯಲ್ಲಿ ಬಡತನ ಎಷ್ಟಿತ್ತೆಂದರೆ ಶಿಕ್ಷಕನಾಗಬೇಕೆಂಬ ಆಸೆ ಈಡೇರಿಸಿಕೊಳ್ಳಲು ಧಾರವಾಡಕ್ಕೆ ಹೋಗಿ ಶಿಕ್ಷಕ ತರಬೇತಿ ಪಡೆಯುವದೂ ಸಾಧ್ಯವಾಗದೆ ಕೆಲ ಕಾಲ ಮನೆಯಲ್ಲೇ ಕನ್ನಡ ಕಾವ್ಯ ಭಾಷಾಗ್ರಂಥಗಳ ಅಭ್ಯಾಸ ನಡೆಸಿದರು. ಕೊನೆಗೆ ಹೇಗೋ ಕಷ್ಟ ಪಟ್ಟು ೧೯೧೯ ರಲ್ಲಿ ಧಾರವಾಡಕ್ಕೆ ಹೋಗಿ ತರಬೇತಿ ಪಡೆದು ಶಿಕ್ಷಕರಾಗುವ ತಮ್ಮ ಹಟ ಈಡೇರಿಸಿಕೊಂಡರು.ಅಥಣಿ ಬಳಿಯ ಹಳ್ಯಾಳ ಎಂಬಲ್ಲಿ ಕೆಲ ವರ್ಷ ಶಿಕ್ಷರಾಗಿದ್ದಾಗ ಜಾನಪದ ಹಾಡುಗಳನ್ನು ಸಂಗ್ರಹಿಸಿ ಅವು ಬೆಳೆದು ಬಂದ ಬಗೆಯನ್ನು ಸಂಶೋಧಿಸಿ ಕನ್ನಡ ಛಂದಸ್ಸಿನ ಒಂದು ಸ್ಥೂಲ ಪ್ರಬಂಧ ಬರೆದರು. ಅದು ಆಗಿನ ಪ್ರಸಿದ್ಧ ಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಅದೇ ಪತ್ರಿಕೆಯಲ್ಲಿ ಅವರು ಬರೆದ " ರನ್ನ ಕವಿಯ ಕಾಲ" ದ ಕುರಿತಾದ ಲೇಖನವನ್ನು ಬೇರೊಬ್ಬ ಲೇಖಕರು ಕೃತಿಚೌರ್ಯ ಮಾಡಿ ತಮ್ಮ ಹೆಸರಲ್ಲಿ ಪುಸ್ತಕ ಪ್ರಕಟಿಸಿಕೊಂಡರು.

ಇಂತಹ ಅನ್ಯಾಯ ಅವರಿಗೆ ಹಲವು ಸಲ ಆಯಿತು. ೧೯೩೬ ರಲ್ಲಿ ಸಾಹಿತ್ಯ ಪರಿಷತ್ತಿಗೆ ಚರ್ಚೆಗಾಗಿ ಕಳಿಸಿದ " ಕನ್ನಡ ಅಕ್ಷರಗಳಲ್ಲಿ ಆಗಬೇಕಾದ ಬದಲಾವಣೆಗಳು " ಎಂಬ ಪ್ರಬಂಧವನ್ನು ಚರ್ಚಾಸಮಿತಿ ಅಧ್ಯಕ್ಷರೇ ತಮ್ಮದನ್ನಾಗಿಸಿಕೊಂಡರು. ಕನ್ನಡ ಛಂದಸ್ಸಿನ ಬಗ್ಗೆ ಬರೆದ ಪ್ರಬಂಧವನ್ನು ಕನ್ನಡದ ಇನ್ನೊಬ್ಬ ಆಚಾರ್ಯ ಪುರುಷರು ತಮ್ಮದೇ ಸಂಶೋಧನೆಯೆಂದು ಕನ್ನಡ ಕೈಪಿಡಿಯಲ್ಕಿ ಪ್ರಕಟಿಸಿದರು. ( ೧೯೩೯ ರಲ್ಲಿ ಬೆಳಗಾವಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಆ ವಿದ್ವಾಂಸರನ್ನು ಪ್ರ. ಗೋ. ಬೆವರಿಳಿಸಿದರು). ಇದರಿಂದ ಬೇಸತ್ತ ಪ್ರಗೋ ಎರಡು ದಶಕ ಸಂಶೋಧನೆಯನ್ನೇ ನಿಲ್ಲಿಸಿದರು.

ಮುಂದೆ ೨/೩/೪ ನೇ ವರ್ಗಗಳಿಗೆ ಬೇಕಾದಂತಹ ಪುಸ್ತಕಗಳನ್ನು ಬರೆದು" ಶಿಕ್ಷಕ ಮಿತ್ರ" ಎಂಬ ಪತ್ರಿಕೆಯನ್ನು ಬೇರೊಬ್ಬರ ಹೆಸರಿನಲ್ಲಿ ಪ್ರಕಟಿಸತೊಡಗಿದರು. ಆಲೂರ ವೆಂಕಟರಾಯರ ಜಯಕರ್ನಾಟಕಕ್ಕೆ ಲೇಖನಗಳನ್ನು ಬರೆದರು. ಮರಾಠಿಯ ಪ್ರಬಂಧ ಮಾಲಾ ಶಾಸ್ತ್ರೀಯ ಮರಾಠಿ ವ್ಯಾಕರಣ ಕನ್ನಡಕ್ಕೆ ತಂದರು. ಕರ್ನಾಟಕ ಛಂದ: ಶಾಸ್ತ್ರ, ಕರ್ನಾಟಕ ಭಾಷಾಶಾಸ್ತ್ರ, ಭಾರತೀಯ ಛಂದ:ಶಾಸ್ತ್ರ, , ಕನ್ನಡ ಭಾಷೆಯ ಚರಿತ್ರ, ಭಾರತೀಯ ವರ್ಣಮಾಲೆಯ ಬೆಳವಣಿಗೆ, ಕನ್ನಡ ವಾಕ್ಯರಚನೆ, ಮೊದಲಾದವು ಅವರ ಮಹತ್ತರ ಕೊಡುಗೆಗಳಾಗಿವೆ. ಕೇಶಿರಾಜನ ಶಬ್ದಮಣಿದರ್ಪಣ, ನಾಗವರ್ಮನ ಶಬ್ದಸ್ಮೃತಿ, ಭಟ್ಟಾಕಳಂಕನ ಶಬ್ದಾನುಶಾಸನ ಮೊದಲಾದವುಗಳ ಪರಿಷ್ಕೃತ ಸಂಪಾದನೆ ಮೊದಲಾದವುಗಳಲ್ಲದೆ ಮಕ್ಕಳಿಗಾಗಿ ಕಿಟ್ಟು ಬೆಟ್ಟ ಹತ್ತಿದ, ರಾಜಾ ಹರಪಾಲ, ಪೌರಾಣಿಕ ಕತೆಗಳು, ಅಲ್ಲದೆ ವಿವಿಧ ಜನಾಂಗಗಳು ಮತ್ತು ಸಾಮಾನ್ಯ ಜ್ಞಾನ, ಭೂಗೋಳ ಪರಿಚಯ ಇತ್ಯಾದಿ ಕೃತಿಗಳನ್ನು ಬರೆದರು. ಮುಂಬೈ ಇಲಾಖೆಯ ಪ್ರಾಥಮಿಕ ಶಕ್ಷಕರ ಸಂಘದ ಉಪಾಧ್ಯಕ್ಷರಾಗಿ, ಕರ್ನಾಟಕ ವಿಭಾಗದ ಅಧ್ಯಕ್ಷರಾಗಿ ಶಿಕ್ಷಕರ ಹಿತಕ್ಕೆ ಶ್ರಮಿಸಿದರು.

ಅವರ ವಿದ್ವತ್ತಿಗೆ, ಅವರ ಕನ್ನಡ ಭಾಷಾ ಸೇವೆಗೆ ತಕ್ಕ ಮನ್ನಣೆ ಪ್ರಚಾರ ದೊರಕಲಿಲ್ಲವಾದರೂ ಪ್ರ. ಗೋ. ಅವರು ಯಾವುದಕ್ಕೂ ನಿರಾಶರಾಗದೆ ತಮ್ಮಿಂದಾದ ಸೇವೆ ಸಲ್ಲಿಸಿ ೧೯೮೬ ರಲ್ಲಿ ನಿಧನರಾದರು.


- ಎಲ್. ಎಸ್. ಶಾಸ್ತ್ರಿ




7 views0 comments

Comments


©Alochane.com 

bottom of page