top of page

ಮರೆಯಲಾಗದ ಮಹಾನುಭಾವರು-೫


***********

ರೆ. ಉತ್ತಂಗಿ ಚೆನ್ನಪ್ಪನವರು

*********

ನಾನು ಉತ್ತಂಗಿ ಚೆನ್ನಪ್ಪನವರನ್ನು ನೋಡಿದ್ದು ಅರ್ವತ್ತರ ದಶಕದ ಆರಂಭದಲ್ಲಿ. ಆಗ ನಾನು ಧಾರವಾಡದ ಜೆ. ಎಸ್. ಎಸ್. ಕಾಲೇಜಿಗೆ ಸೇರಿದ್ದೆ. ಸಾಧನಕೇರಿಯಲ್ಲಿ ಬೇಂದ್ರೆಯವರ ಮನೆ ಹಿಂಭಾಗದಲ್ಲಿ ವಾಸವಾಗಿದ್ದ ನಾನು ದಿನಾಲು ಬೆಳಿಗ್ಗೆ ಆರಕ್ಕೆ ಅಲ್ಲಿಂದ ನಡೆದುಕೊಂಡು ಆರು ಕಿ. ಮೀ. ದೂರದ ವಿದ್ಯಾಗಿರಿಗೆ ಬರಬೇಕಿತ್ತು. ಬರುವಾಗ ದಾರಿಯಲ್ಲಿ ಲಕ್ಷ್ಮೀ ಟಾಕೀಸ್ ಎದುರು ಕನೋಜ ಟೀ ಕ್ಲಬ್ ಎಂಬ ಚಿಕ್ಕ ಹೊಟೆಲಿನಲ್ಲಿ ಚಹಾ ಕುಡಿದು ಮುಂದೆ ಹೋಗುವದು ಪದ್ಧತಿ. ಆ ಹೊಟೆಲ್ ಮಾಲಕರು ಅಂಕೋಲೆ ಕಡೆಯ‌ ನಾಯಕ ಎನ್ನುವವರು. ( ಈಗ ಆ ಹೊಟೆಲ್ಲು ಮತ್ತು ಟಾಕೀಸು ಎರಡೂ‌ಇಲ್ಲ) . ನಾಯಕರು ನನಗೆ ತಮ್ಮ ಹೊಟೆಲಿನ ಒಂದು ಮೂಲೆಯಲ್ಲಿ ಕುಳಿತು ಚಹಾ ಕುಡಿಯುತ್ತಿದ್ದ ಓರ್ವ ವಯೋವೃದ್ಧರನ್ನು ತೋರಿಸಿ ಅವರ್ಯಾರು ಗೊತ್ತಿದೆಯಾ ಅಂತ ಕೇಳಿದರು. ಪರಿಚಯಿಸಿಕೊಟ್ಟರು. ಅದು ನನ್ನ ಭಾಗ್ಯ!

ಅವರೇ ಮಾನ್ಯ ರೆ. ಉತ್ತಂಗಿ ಚೆನ್ನಪ್ಪನವರು. ಅವರ ಮನೆಯೂ‌ ಅಲ್ಲೇ ಟಾಕೀಸಿನ ಹತ್ತಿರ ಇತ್ತು. ಹಳೆಯ ಹಂಚಿನ ಮನೆ. ಸಾಹಿತ್ಯಾಭ್ಯಾಸಿಯಾದ ನನಗೆ ಅವರ ಬಗ್ಗೆ ಕೇಳಿ ಓದಿ‌ ಗೊತ್ತಿತ್ತು. ನಂತರ ಅವರ ಮನೆಗೂ‌ ಹೋಗಿ‌ ಕಾಲಿಗೆರಗಿ ಅವರ ಆಶೀರ್ವಾದ ಪಡೆದೆ.

*

ಚೆನ್ನಪ್ಪನವರು ಹುಟ್ಟಿದ್ದು ಧಾರವಾಡದಲ್ಲೇ ಆದರೂ ಅವರ ಮೂಲ ಊರು ಉತ್ತಂಗಿ. ಮೂಲತಃ ಅವರದು ವೀರಶೈವ ಮನೆತನ. ಬಡ ಕೃಷಿ ಕುಟುಂಬ. ಬ್ರಿಟಿಶರ ಕಾಲದಲ್ಲಿ ಕ್ರೈಸ್ತ ಮಿಶನರಿಗಳು ಅವರನ್ನು ಮತಾಂತರಗೊಳಿಸಿದರು. ಹಾಗೆ ಮತಾಂತರಗೊಂಡ ದಾನಿಯೇಲಪ್ಪ ಮತ್ತು ಸುಭದ್ರವ್ವ ದಂಪತಿಗಳ ಮಗನೇ ಈ ಚೆನ್ನಪ್ಪ. ೧೮೮೧ ರ ಅಕ್ಟೋಬರ್ ೨೮ ರಂದು ಹುಟ್ಟಿದರು. ಮಂಗಳೂರಿನ ಕ್ರೈಸ್ತ ದೈವ ಜ್ಞಾನ ಶಾಲೆಯಲ್ಲಿ ತರಬೇತಿ ಪಡೆದ ಚೆನ್ನಪ್ಪನವರು ೧೯೦೮ ರಲ್ಲಿ ಬಾಸೆಲ್ ಮಿಶನ್ ಸಂಸ್ಥೆಯಲ್ಲಿ ಧರ್ಮೋಪದೇಶಕರಾಗಿ‌ನೇಮಕಗೊಂಡರು. ಉತ್ತರ ಕರ್ನಾಟಕದ ಹಲವೆಡೆ ಸೇವೆ ಸಲ್ಲಿಸಿ ೧೯೪೨ ರಲ್ಲಿ ನಿವೃತ್ತರಾದರು.

ಬದಲಾದ ಮನೆತನದ ಧರ್ಮವನ್ನು ಅವರು ಅನುಸರಿಸಿದರಾದರೂ ಚೆನ್ನಪ್ಪನವರಿಗೆ ತಮ್ಮ ಹಿಂದೂ ಧರ್ಮ , ವೀರಶೈವ ಧರ್ಮ ಸಾಹಿತ್ಯಗಳಲ್ಲೇ ಹೆಚ್ಚಿನ ಆಸಕ್ತಿಯಿತ್ತು. ಅವರು ಆಳವಾಗಿ ಅಭ್ಯಸಿಸಿದ್ದು ವಚನ ಸಾಹಿತ್ಯ ಮತ್ತು ಸರ್ವಜ್ಞನ ಸಾಹಿತ್ಯವನ್ನು. ಅವರ ಹೆಚ್ಚಿನ ಕೃತಿಗಳು ಆ ವಿಷಯಕ್ಕೇ ಸಂಬಂಧಿಸಿವೆ. ವಚನ ಪಿತಾಮಹ ಫ. ಗು. ಹಳಕಟ್ಟಿ ಅವರು ಹೇಗೆ ವಚನ ಸಾಹಿತ್ಯವನ್ನು ಸಂಗ್ರಹಿಸಿ ಪರಿಷ್ಕರಿಸಿ ಉಳಿಸಿದರೋ ಹಾಗೆ ಉತ್ತಂಗಿಯವರು ಸರ್ವಜ್ಞನ ತ್ರಿಪದಿಗಳನ್ನು ಸಂಗ್ರಹಿಸಿ ಪ್ರಕಟಿಸುವ ಬಹಳ ಮಹತ್ವದ ಕೆಲಸವನ್ನು ಮಾಡಿದರು. ಅದು ಅವರು ಕನ್ನಡಕ್ಕೆ ನೀಡಿದ ಬಹಳ ದೊಡ್ಡ ಕೊಡುಗೆ. ೧೯೨೪ ರಲ್ಲಿ ಅವರು " ಸರ್ವಜ್ಞನ ವಚನಗಳು " ಎಂಬ ಪುಸ್ತಕ ಹೊರತಂದರು.

ಅದರೊಂದಿಗೆ ಅವರು ಬರೆದ ಇತರ ಕೃತಿಗಳಲ್ಲಿ " ಬನಾರಸಕ್ಕೆ ಬೆತ್ಲೆಹೇಮಿನ ವಿನಂತಿ ( ೧೯೨೧) ಹಿಂದೂ ಸಮಾಜ ಹಿತಚಿಂತಕ (೧೯೨೧) , ಬಸವೇಶ್ವರನೂ ಅಸ್ಪೃಶ್ಯರ ಉದ್ದಾರವೂ (೧೯೩೩), ಅನುಭವ ಮಂಟಪದ ಐತಿಹಾಸಿಕೆ (೧೯೫೧), ಸಿದ್ಧರಾಮ ಸಾಹಿತ್ಯ ಸಂಗೃಹ (೧೯೫೩), ಆದಯ್ಯನ ವಚನಗಳು (೧೯೫೭) , ಮೃತ್ಯುಂಜಯ (೧೯೬೩), ಲಿಂಗಾಯತ ಧರ್ಮ ಹಾಗೂ‌ ಕ್ರೈಸ್ತ ಧರ್ಮ ( ೧೯೬೯) ಇತ್ಯಾದಿಗಳನ್ನು ಹೆಸರಿಸಬಹುದು.

ಉತ್ತಂಗಿ ಚೆನ್ನಪ್ಪನವರಲ್ಲಿ ಯಾವ ಸಂಕುಚಿತ ಧಾರ್ಮಿಕ ಮನೋಭಾವವೂ ಇರಲಿಲ್ಲ. ಅವರು ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣುವ , ಗೌರವಿಸುವ ವಿಶಾಲ ಮನೋಭಾವ ಹೊಂದಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ನಾಡುನುಡಿ ಸಂಸ್ಕೃತಿಗಳ ಅಭಿಮಾನಿಯಾಗಿ, ಅಧ್ಯಯನಶೀಲರಾಗಿ ಕನ್ನಡ ಸಾಹಿತ್ಯಕ್ಕೆ ಅಪೂರ್ವ ಸೇವೆ ಸಲ್ಲಿಸಿದರು. ೧೯೪೯ ರಲ್ಲಿ ಕಲಬುರ್ಗಿಯಲ್ಲಿ ನಡೆದ ೩೨ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿ ಅವರ ಈ ಸೇವೆಯನ್ನು ಮನ್ನಿಸಲಾಯಿತು.

ಕನ್ನಡ ಬೆಳೆದದ್ದು ಉಳಿದದ್ದು‌ ಇಂತಹ ಮಹನೀಯರಿಂದಲೆ. ಅವರು ಎಂದೂ ಮರೆಯಲಾಗದ , ಮರೆಯಬಾರದ ವ್ಯಕ್ತಿ.

- ಎಲ್. ಎಸ್. ಶಾಸ್ತ್ರಿ

6 views0 comments

Comments


bottom of page