" ಇದೊಂದು ಭಾರತದ ಬಂಗಾರದ ಪುಸ್ತಕ. ಕನ್ನಡ ಇರುವವರೆಗೂ ಈ ಪುಸ್ತಕ ಇರುತ್ತದೆ"
ಖ್ಯಾತ ಸಂಶೋಧಕ , ವಿದ್ವಾಂಸ, ಸಾಹಿತಿ ಎಂ. ಗೋವಿಂದ ಪೈ ಅವರಿಂದ ಈ ಪ್ರಶಂಸೆ ಪಡೆದ ಪುಸ್ತಕ ಪ್ರೊ. ಎ. ಆರ್. ಕೃಷ್ಣಶಾಸ್ತ್ರಿಯವರು ಬರೆದ " ವಚನ ಭಾರತ ".
ಡಾ. ಹಾ. ಮಾ. ನಾ. ಅವರು ಎ. ಆರ್ ಕೃ. ಅವರನ್ನು " ಕನ್ನಡದ ಸೇನಾನಿ " ಎಂದು ಕರೆದರು. ಆಧುನಿಕ ಕನ್ನಡ ಸಾಹಿತ್ಯದ ನವೋದಯ ಕಾಲದಲ್ಲಿ ಕನ್ನಡ ಭಾಷೆ ಸಾಹಿತ್ಯಗಳನ್ನು ಸದೃಢವಾಗಿ ಕಟ್ಟಿ ಬೆಳೆಸಿ ಉಳಿಸಿದ ಆದ್ಯ ಮಹನೀಯರಲ್ಲಿ ಅಂಬಳೆ ರಾಮಕೃಷ್ಣ ಕೃಷ್ಣಶಾಸ್ತ್ರಿಯವರು ಪ್ರಮುಖರು. ತೀನಂಶ್ರೀ, ಕುವೆಂಪು, ರಾಜರತ್ನಂ, ಎಂವಿ.ಸೀ. ಮೊದಲಾದ ಘನ ಶಿಷ್ಯರನ್ನು ಕನ್ನಡಕ್ಕೆ ಕೊಟ್ಟ ಕೃಷ್ಣಶಾಸ್ತ್ರಿಗಳ ವಚನ ಭಾರತ ಗ್ರಂಥವನ್ನು ಓದಿ ಮೆಚ್ಚದ ಕನ್ನಡಿಗರೇ ವಿರಳ. ಇಂದಿಗೂ ಅದು ಆಸಕ್ತ ಓದುಗರ ಮನೆಯಲ್ಲಿ ನಿತ್ಯಪಠಣದ ಗ್ರಂಥ.
ಕೃಷ್ಣಶಾಸ್ತ್ರಿಗಳು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಅಂಬಳೆಯಲ್ಲಿ ೧೮೯೦, ಫೆಬ್ರವರಿ ೧೨ ರಂದು. ತಂದೆ ವ್ಯಾಕರಣ ಪಂಡಿತರು. ಮೈಸೂರು ಸಂಸ್ಕೃತ ಶಾಲೆಯ ಪ್ರಾಚಾರ್ಯರು. ತಾಯಿ ಶಂಕರಮ್ಮ. ಸಾಯಿನ್ಸ್ ಕಲಿಯಬೇಕೆಂದಿದ್ದರೂ ಆರ್ಥಿಕ ತೊಂದರೆಯಿಂದ ಕಷ್ಟ ಪಟ್ಟು ಬಿ. ಎ. ಪಾಸಾಗಿ ಮೈಸೂರು ಅಠಾರಾ ಕಚೇರಿಯಲ್ಲಿ ಕಾರಕೂನರಾಗಿ ಕೆಲಸ ಆರಂಭಿಸಿ ನಂತರ ಓರಿಯಂಟಲ್ ಲೈಬ್ರರಿಯಲ್ಲಿ ಟ್ಯೂಟರ್ / ರೀಸರ್ಚರ್ ಆಗಿ, ಮದ್ರಾಸ್ ವಿವಿ. ಎಂಎ. ಮಾಡಿ ಮೈಸೂರು ವಿವಿ.ಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಕನ್ನಡ , ಇಂಗ್ಲಿಷ್, ಸಂಸ್ಕೃತ, ಪಾಲಿ, ಬಂಗಾಲಿ, ಹಿಂದಿ, ಜರ್ಮನ್ ಮೊದಲಾದ ಭಾಷೆಗಳನ್ನು ಬಲ್ಲವರಾಗಿದ್ದ ಶಾಸ್ತ್ರಿಗಳು ಸಂಸ್ಕೃತ ಮೂಲ ಮಹಾಭಾರತ ಓದಲು ಸಾಧ್ಯವಿಲ್ಲದವರಿಗಾಗಿ " ವಚನ ಭಾರತ" ಮತ್ತು " ನಿರ್ಮಲ ಭಾರತ" ಎಂಬ ಹೆಸರಲ್ಲಿ ಸರಳ ಕನ್ನಡದಲ್ಲಿ ಇಡೀ ಭಾರತಕಥೆಯನ್ನು ಸಾರವತ್ತಾಗಿ ಹಿಡಿದಿಟ್ಟರು. ಕಾಳಿದಾಸ, ಭಾಸ, ಭವಭೂತಿಯರ ನಾಟಕಗಳನ್ನು ಕನ್ನಡಕ್ಕೆ ತಂದರು. ಕಥಾಸರಿತ್ಸಾಗರದ ಕಥೆಗಳನ್ನು ಕನ್ನಡಕ್ಕೆ ನೀಡಿದರು. ಅವರು ಬರೆದ ಬಂಕಿಮಚಂದ್ರರ ಜೀವನ ಚರಿತ್ರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. ಭಾಸ, ಸರ್ವಜ್ಞ, ಪರಮಹಂಸ ಮೊದಲಾದವರ ಜೀವನ ಚರಿತ್ರೆ ಬರೆದರು. ಅಲಂಕಾರ ಶಾಸ್ತ್ರದ ಬಗ್ಗೆ ಗ್ರಂಥ ರಚಿಸಿದರು. ಪ್ರಬುದ್ಧ ಕರ್ನಾಟಕ ಪತ್ರಿಕೆಯನ್ನು ಪ್ರಾರಂಭಿಸಿ ಅದರ ಸಂಪಾದಕರಾಗಿ ಕೆಲಸ ಮಾಡಿದರು. ಮೈಸೂರು ವಿವಿ. ಅವರಿಗೆ ಡಿ. ಲಿಟ್. ಗೌರವ ನೀಡಿತು. ಸೆಂಟ್ರಲ್ ಕಾಲೇಜಿನಲ್ಲಿ ಪ್ರಪ್ರಥಮವಾಗಿ ಕರ್ನಾಟಕ ಸಂಘ ಸ್ಥಾಪಿಸಿದರು. ನಂತರ ಉಳಿದೆಡೆ ಅದನ್ನು ಅನುಸರಿಸಿದರು.
ಹೀಗೆ ೭೮ ವರ್ಷಗಳ ತಮ್ಮ ಜೀವನಾವಧಿಯಲ್ಲಿ ಕನ್ನಡಕ್ಕಾಗಿ ಅಪಾರ ಮತ್ತು ಅಪೂರ್ವ ಸೇವೆ ಸಲ್ಲಿಸಿದ ಕೃಷ್ಣ ಶಾಸ್ತ್ರಿಗಳು ಕನ್ನಡವನ್ನು ಗಟ್ಟಿಗೊಳಿಸಿ ೧೯೬೮ ರ ಫೆಬ್ರವರಿ ೧ ರಂದು ನಿಧನರಾದರು.
- ಎಲ್. ಎಸ್. ಶಾಸ್ತ್ರಿ
ಎ.ಆರ್.ಕೃ.
Nice article