ನಿಷ್ಕಾಮ ಕರ್ಮಯೋಗಿ,
ಮಲ್ಲಾಡಿಹಳ್ಳಿಯ " ತಿರುಕ"
********
ನಿಸ್ವಾರ್ಥ, ನಿಸ್ಪ್ರಹ ಮನೋಭಾವದ ಸೇವೆಗೆ ಇನ್ನೊಂದು ಹೆಸರೇ "ಮಲ್ಲಾಡಿಹಳ್ಳಿಯ ತಿರುಕ" ಉರ್ಫ್ ರಾಘವೇಂದ್ರಸ್ವಾಮಿಗಳು. ಅವರಿಗೆ ಹೋಲಿಸಬಹುದಾದ ಇನ್ನೊಬ್ಬರನ್ನು ಗುರುತಿಸುವದು ಕಷ್ಟ. ಅವರ ಬದುಕೇ ಒಂದು ಅದ್ಭುತ ಗಾಥೆ. ಮಕ್ಕಳಿಗಾಗಿ ಅವರು ಜೋಳಿಗೆ ಹಾಕಿಕೊಂಡು ಮನೆ ಮನೆ , ಹಳ್ಳಿ ಹಳ್ಳಿ ತಿರುಗಿದರು. " ತಿರುಕ" ಅನಿಸಿಕೊಂಡರು. ಸಹಸ್ರಾರು ಮಕ್ಕಳಿಗೆ ಈ ತಿರುಕನೇ ಬದುಕು ಕೊಟ್ಟ.
ತಿರುಕ ಕಾವ್ಯನಾಮದ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು ಮೂಲತಃ ಕೇರಳದ ನಂಬೂದರಿ ಕುಟುಂಬದವರು. ೧೮೯೧ ರ ಮಾರ್ಚ್ ೧೮ ರಂದು ಅನಂತ ಪದ್ಮನಾಭ ನಂಬೂದ್ರಿ- ಪದ್ಮಾಂಬಾಳ್ ದಂಪತಿಗಳ ಮಗನಾಗಿ ಜನಿಸಿದ ಕುಮಾರಸ್ವಾಮಿ ಎಂಬ ಹೆಸರಿನ ಮಗು ಬಾಲ್ಯವನ್ನೆಲ್ಲ ( ೧೪ ವರ್ಷಗಳ ತನಕ) ಕಳೆದದ್ದು ರೋಗಿಯಾಗಿಯೇ. ಒಂದು ರೀತಿ ನಿಶ್ಚೇತನ ಸ್ಥಿತಿಯಲ್ಲಿದ್ದ ಅ ಮಗುವನ್ನು ತಂದೆತಾಯಿ ಹೊತ್ತು ನಡೆದುಕೊಂಡೇ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಗೆಂದು ಕರೆತರುವಾಗ ಬಾರಕೂರು ಎಂಬಲ್ಲಿ ತಮ್ಮ ಪರಿಚಯದವರೊಬ್ಬರಲ್ಲಿ ಉಳಿದುಕೊಳ್ಳುತ್ತಾರೆ. ಅಲ್ಲಿ ಮಂತ್ರಾಲಯದ ಯತಿಗಳು ಆ ಮಗುವನ್ನು ಕಂಡು ರಾಘವೇಂದ್ರ ಎಂಬ ಹೆಸರಿಟ್ಟು ಆಶೀರ್ವದಿಸುತ್ತಾರೆ. ಅಲ್ಲಿಯೇ ತಾಯಿ ತೀರಿಕೊಳ್ಳುತ್ತಾಳೆ. ತಂದೆ ಮಗುವನ್ನು ನರಸಿಂಹ- ಪುತ್ಥಳಿಬಾಯಿ ದಂಪತಿಗಳಿಗೆ ಒಪ್ಪಿಸಿ ಹಿಮಾಲಯಕ್ಕೆ ಹೋಗುತ್ತಾರೆ. ಮಗು ಅಲ್ಲಿಯೇ ಬೆಳೆಯುತ್ತ ಪವಾಡ ಸದೃಶವಾಗಿ ಚೇತರಿಸಿಕೊಂಡಿತು.
ಕ್ರಮೇಣ ರಾಘವೇಂದ್ರರು ಯೋಗ, ವ್ಯಾಯಾಮ, ಆಯುರ್ವೇದ, ಸಿಧ್ಧವಿದ್ಯೆ, ಅಸ್ತಿಸಂಧಾನ ಕಲೆ, ಶಬ್ದವೇಧಿ ವಿದ್ಯೆ, ಯುನಾನಿ ಮೊದಲಾದವುಗಳನ್ನು ಕಲಿತು ಅವುಗಳಲ್ಲಿ ಪರಿಣಿತರಾದರು. ಮುಂದೆ ಲೋಕಸಂಚಾರಿಯಾದ ಅವರು ನಾಡಿನ ಮೂಲೆ ಮೂಲೆ ತಿರುಗಿ ಅಸಹಾಯಕರಿಗೆ , ಬಡವರಿಗೆ ನೆರವಾಗುತ್ತ, ಹಳ್ಳಿಗಳಲ್ಲಿ ಯೋಗ, ಆರೋಗ್ಯ ತರಬೇತಿ , ನೈರ್ಮಲ್ಯ ಮೊದಲಾದವುಗಳಲ್ಲಿ ಮಾರ್ಗದರ್ಶನ ಮಾಡುತ್ತ ಕೊನೆಗೆ ೧೯೪೩ ರಲ್ಲಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯಲ್ಲಿ ನೆಲೆಯೂರಿ ಅನಾಥ ಸೇವಾಶ್ರಮ ಸ್ಥಾಪಿಸಿ ಸೇವಾಜೀವಿಗಳಾಗಿ ಶತಾಯುಷಿಗಳಾಗಿ ೧೦೬ ವರ್ಷ ಬದುಕಿದರು.
ರಾಘವೇಂದ್ರಸ್ವಾಮಿಗಳು ಎಂದೂ ಕಾವಿ ತೊಡಲಿಲ್ಲ. ಅವರದು ಯಾವತ್ತೂ ಬಿಳಿ ಖಾದಿ ಚಡ್ಡಿ, ಅರ್ಧ ತೋಳಿನ ಅಂಗಿ. ಸರಳ ಸಾದಾ ಜೀವನ ಶೈಲಿ. ತಾವು ಸ್ಥಾಪಿಸಿದ ಸಂಸ್ಥೆಗಳಲ್ಲಿರುವವರಿಗಾಗಿ ತಾವೇ ಜೋಳಿಗೆ ಹಾಕಿ ಹಣ ಸಂಗ್ರಹಿಸಿದರು. ಮುದ್ರಣಾಲಯ,, ಪುಸ್ತಕಗಳ ಮಾರಾಟದಿಂದ ಹಣ ಒಟ್ಟು ಮಾಡಿದರು. ಅಚ್ಚರಿಯಾದರೂ ನಿಜ ಎಂಬಂತೆ ಭಾರತ ಸರಕಾರ ಪದ್ಮಶ್ರೀ ಪದ್ಮಭೂಷಣ ಪ್ರಶಸ್ತಿಗಳನ್ನು ಕೊಡಲು ಬಂದಾಗ ನನಗೆ ಅವೆಲ್ಲ ಬೇಡ, ಹಣದ ಕೊರತೆ ಇದೆ ಕೊಡಿ ಎಂದರು. ಕುವೆಂಪು ವಿವಿ ಗೌರವ ಡಾಕ್ಟರೇಟ್ ಕೊಡಲು ಬಂದಾಗಲೂ ಹಾಗೇ ಹೇಳಿದರು. ಅವರಿಗೆ ಸ್ವಂತದ ಚಿಂತೆಯಿರಲಿಲ್ಲ. ಅಲ್ಲಿ ಕಲಿಯುವ ಬಡ ಮಕ್ಕಳ ಬಗ್ಗೆ ಯೋಚನೆಯಿತ್ತು.
ತಿರುಕ ಕಾವ್ಯನಾಮದಿಂದ ಅವರು ಸಾಕಷ್ಟು ಪುಸ್ತಕಗಳನ್ನು ಬರೆದರು. ೪ ಕಾವ್ಯ, ೯ ಕಾದಂಬರಿ, ೧೨ ನಾಟಕ, ೭ ಏಕಾಂಕ, ೫ ವ್ಯಾಯಾಮವಿಷಯ, ೩ ಕಥಾಸಂಗ್ರಹ, ೪ ಆಯುರ್ವೇದ ಗ್ರಂಥ, ೧ ವಚನ ಸಾಹಿತ್ಯ, ೨ ಗೀತರೂಪಕ, ೪ ಯೋಗ ಗ್ರಂಥ, ಮತ್ತಿತರ ಹಾಗೂ ಜೋಳಿಗೆ ಪವಾಡ ಎಂಬ ಆತ್ಮಕಥನ ಇತ್ಯಾದಿ. ಅವನ್ನೆಲ್ಲ ಹೊತ್ತು ಮಾರಾಟ ಮಾಡಿ ಬಂದ ಹಣವನ್ನು ಆಶ್ರಮಕ್ಕಾಗಿ ಬಳಸಿದರು. ಪ್ರೌಢಶಾಲೆ, ದೈಹಿಕ ಶಿಕ್ಷಣ ಕಾಲೇಜು, ವಸತಿಗೃಹ, ಬನಶಂಕರಿ ಮಂದಿರ, ಆಯುರ್ವೇದ ಕಾಲೇಜು ಮೊದಲಾದವುಗಳನ್ನು ಆರಂಭಿಸಿದರು. ಇಂದು ಅಲ್ಲಿ ಮೂರು ಸಾವಿರ ಮಕ್ಕಳಿಗೆ ಉಚಿತ ವಸತಿ ಶಿಕ್ಷಣ ದೊರಕುತ್ತಿದೆ. ಒಂದು ಅಂದಾಜಿನಂತೆ ಅವರು ೪೦ ಲಕ್ಷ ಜನರಿಗೆ ಉಚಿತ ತಪಾಸಣೆ ಮಾಡಿದ್ದಾರೆ.
೧೯೯೬ ಅಗಸ್ಟ್ ೩೧ ರಂದು ರಾಘವೇಂದ್ರ ಸ್ವಾಮಿಗಳು ಕಣ್ಮರೆಯಾದರು. ಆದರೆ ಅದೊಂದು ಅಪೂರ್ವ ಬದುಕು ನಡೆಸಿದ ಅವರು ಅಜರಾಮರರೆನಿಸಿದ್ದಾರೆ .
- ಎಲ್. ಎಸ್. ಶಾಸ್ತ್ರಿ

Comments