ಕನ್ನಡದಲ್ಲಿ ಹಾಸ್ಯಕ್ಕಾಗಿಯೇ ಮೀಸಲಾದ ಪತ್ರಿಕೆಗಳು ಹೊರಬಂದಿದ್ದು ಕಡಿಮೆ. ಶ್ರೀ ಜಿ. ನಾರಾಯಣರ " ವಿನೋದ" ಪತ್ರಿಕೆ ಮತ್ತು ರಾಶಿಯವರ ಕೊರವಂಜಿ ಆ ಕೊರತೆಯನ್ನು ಬಹುಮಟ್ಟಿಗೆ ತುಂಬಿದ ಎರಡು ಪ್ರಮುಖ ಹಾಸ್ಯ ಮಾಸಿಕಗಳು. ವೃತ್ತಿಯಿಂದ ವೈದ್ಯರಾದ ರಾ. ಶಿವರಾಂ ಅವರು ಇಂಗ್ಲಿಷ್ ಹಾಸ್ಯಪತ್ರಿಕೆ " ಪಂಚ್ " ನಿಂದ ಪ್ರೇರಿತರಾಗಿ ೧೯೪೨ ರಲ್ಲಿ " ಕೊರವಂಜಿ" ಮಾಸಪತ್ರಿಕೆ ಆರಂಭಿಸಿ ೨೫ ವರ್ಷಗಳಕಾಲ ನಡೆಸಿದರು. ಟಿ. ಪಿ. ಕೈಲಾಸಂ, ನಾ. ಕಸ್ತೂರಿ ಅವರ ಪ್ರಭಾವ ರಾಶಿಯವರ ಮೇಲಿತ್ತು. ಸ್ವಭಾವತಃ ಹಾಸ್ಯಪ್ರವೃತ್ತಿಯವರಾಗಿದ್ದ ರಾಶಿ ಕನ್ನಡಿಗರಿಗೆ ಉಚ್ಚ ಮಟ್ಟದ ನಗೆಬರೆಹಗಳನ್ನು ನೀಡಿದರಲ್ಲದೆ ಅನೇಕ ಹಾಸ್ಯ ಬರೆಹಗಾರರನ್ನೂ ಸೃಷ್ಟಿಸಿದರು. ಕನ್ನಡಿಗರಿಗೆ ನಗಲು ಕಲಿಸಿದರು. ೧೯೦೫ ನವೆಂಬರ್ ೧೦ ರಂದು ಜನಿಸಿದ ರಾ. ಶಿ. ಯವರು ಬೆಂಗಳೂರಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕಾರಣರೆನಿಸಿದರು. ಕಿರ್ಲೋಸ್ಕರ ಕಂಪನಿ, ಎಂ. ಐ. ಟಿ. ಎಲ್ ಕಂಪನಿಗಳ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದರು. ೧೯೭೬ ರಲ್ಲಿ ಜ್ಞಾನ ವಿಜ್ಞಾನ ಪರಿಷತ್ತು ಸ್ಥಾಪಿಸಿದರು. ಅರೋಗ್ಯಕ್ಕೆ ಸಂಬಂಧಿಸಿಯೂ ಮನೋನಂದನ, ಮನಮಂಥನ, ಆನಂದ ಮೊದಲಾದ ಕೃತಿಗಳನ್ನು ರಚಿಸಿದರು.ಅವರ ಮನಮಂಥನಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂದಿದೆ. ಪಂಪಾಪತಿಯ ಕೃಪೆ ಎಂಬ ಕಾದಂಬರಿ, ಸಾಕ್ಷಿ ಸಂಕಲಿಕೆ ಎಂಬ ಕವನ ಸಂಕಲನ, ಕೊರವಂಜಿಯ ಪಡುವಣ ಯಾತ್ರೆ ಎಂಬ ಪ್ರವಾಸಕಥನ, ನಗುಸರಸಿ ಅಪ್ಸರೆಯರು ಎಂಬ ಕಥಾಸಂಕಲನ, ಅಲ್ಲದೇ ತುಟಿ ಮೀರಿದುದು, ಕೊರವಂಜಿ ಕಂಡ ನಗುಸಮಾಜ, ನಗು ದರ್ಬಾರಿಗಳು ಮೊದಲಾದ ಹಾಸ್ಯಕೃತಿಗಳನ್ನು ನೀಡಿದರು. ತಮ್ಮನ್ನು ತಾವೇ ವಿಡಂಬಿಸಿಕೊಳ್ಳುತ್ತಿದ್ದ ಅವರು ಸಾವಿನ ಸಂದರ್ಭದಲ್ಲೂ ಹಾಸ್ಯಪ್ರವೃತ್ತಿ ಬಿಡಲಿಲ್ಲ. ತಮ್ಮದು ಗೋರಿಲ್ಲಾ ಮೂತಿ ಎಂದೂ, ತಮ್ಮ ಹುಬ್ಬು ಕಂಬಳಿಹುಳ ಎಂದೂ ಹೇಳಿಕೊಳ್ಳುತ್ತಿದ್ದ ಅವರು ತಮ್ಮ ಪತ್ನಿ ನಾಗಮ್ಮನವರು ಇದ್ದ ಮನೆಯನ್ನೇ ನಾಗಾಲ್ಯಾಂಡ್ ಎಂದು ಕರೆಯುತ್ತಿದ್ದರು. ಸಾವಿನಂಚಿನಲ್ಲಿದ್ದಾಗ ಯಾರೋ ಅವರ ಸಂದರ್ಶನ ಮಾಡಿ ಫೋಟೋ ಕೇಳಿದಾಗ " ಒಂದರಡು ದಿನ ತಡೀರಿ, ಎಲ್ಲಾ ಪತ್ರಿಕೇಲಿ ಬರ್ತದೆ" ಅಂದರಂತೆ. ೪೦ ರಿಂದ ೭೦ ರ ದಶಕದತನಕ ಅವರ ಕೊರವಂಜಿ ಪತ್ರಿಕೆ ನಾಡಿನಾದ್ಯಂತ ಪ್ರಸಾರ ಪಡೆದು ಅತ್ಯಂತ ಜನಪ್ರಿಯವಾಗಿತ್ತು. ಅನೇಕ ಹೊಸ ಹಾಸ್ಯ ಬರೆಹಗಾರರು, ವ್ಯಂಗ್ಯಚಿತ್ರಕಾರರು ಅದರ ಮೂಲಕ ಬೆಳಕಿಗೆ ಬಂದರು. ದೇಶದ ಪ್ರಖ್ಯಾತ ಕಾರ್ಟೂನಿಸ್ಟ್ ಆರ್. ಕೆ. ಲಕ್ಷ್ಮಣ ಅವರಿಗೆ ಪ್ರಾರಂಭದಲ್ಲಿ ಅವಕಾಶ ಮತ್ತು ಪ್ರೋತ್ಸಾಹ ನೀಡಿದವರು ರಾಶಿಯವರು. ರಾಶಿಯವರು ೧೯೮೪ ರ ಜನೆವರಿ ೧೩ ರಂದು ನಿಧನ ಹೊಂದಿದರು. ರಾಶಿಯವರ ಪುತ್ರ ಶಿವಕುಮಾರ ಅವರು ಈಗ " ಅಪರಂಜಿ" ಎಂಬ ಹೆಸರಿನಲ್ಲಿ ಹಾಸ್ಯಪತ್ರಿಕೆ ನಡೆಸುತ್ತಿದ್ದಾರೆ.
- ಎಲ್. ಎಸ್. ಶಾಸ್ತ್ರಿ
Comments