top of page

ಮರೆಯಲಾಗದ ಮಹಾನುಭಾವರು -೧೪೧***********************************ಮಹಾ ಮೇಧಾವಿ " ತೀನಂಶ್ರೀ "***************


ಕನ್ನಡದ " ಶ್ರೀತ್ರಯ"ರಲ್ಲಿ ಒಬ್ಬರಾದ ತೀರ್ಥಪುರ ನಂಜುಂಡಯ್ಯನವರ ಮಗ ಶ್ರೀಕಂಠಯ್ಯನವರು ಹೊಸಗನ್ನಡ ಸಾಹಿತ್ಯಕ್ಕೆ ಶ್ರೀಕಾರ ಹಾಕಿದ ಮಹಾ ಮೇಧಾವಿಗಳಲ್ಲೊಬ್ಬರು. ಅವರು ಕನ್ನಡಕ್ಕೆ ಕೊಟ್ಟ ಕೊಡುಗೆ ಬಹಳ ದೊಡ್ಡದು. ಘನ ವಿದ್ವಾಂಸರು, ವಾಗ್ಮಿಗಳು, ಆದರ್ಶ ಪ್ರಾಧ್ಯಾಪಕರು. ಕನ್ನಡ ಭಾಷೆ, ಸಾಹಿತ್ಯಗಳನ್ನು ಗಟ್ಟಿಗೊಳಿಸಿದ ಅವರು ತುಮಕೂರು ಜಿಲ್ಲೆಯ ತೀರ್ಥಪುರದಲ್ಲಿ ೧೯೦೬ ರ ನವೆಂಬರ್ ೨೬ ರಂದು ಜನಿಸಿದರು. ಆರು ಚಿನ್ನದ ಪದಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಯೆನಿಸಿದ್ದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮೊದಲ ಕನ್ನಡ ಪ್ರಾಧ್ಯಾಪಕರು, ಮೈಸೂರು ವಿ‌ ವಿ. ಕನ್ನಡ ವಿಭಾಗದ ಮುಖ್ಯಸ್ಥರು, ಕಲಾನಿಕಾಯದ ಡೀನ್, ಮೊದಲಾದ ಹುದ್ದೆಗಳನ್ನು ನಿರ್ವಹಿಸುವ ಮೊದಲು ಕಂದಾಯ ಇಲಾಖೆಯಲ್ಲಿ ಪ್ರೊಬೇಷನರಿಯಾಗಿ ದಾವಣಗೆರೆ, ಕೋಲಾರ ಧಾರವಾಡ, ಮೈಸೂರು ಬೆಂಗಳೂರು ಮೊದಲಾದೆಡೆ ಕಾರ್ಯ ನಿರ್ವಹಿಸಿದರು. ಮೈಸೂರು ಸಂವಿಧಾನ ಪರಿಷತ್ತಿನ ಭಾಷಾಂತರಕಾರರಾಗಿ, ಕಾಲೇಜು ಸೂಪರಿಂಟೆಂಡೆಂಟ್ ಆಗಿಯೂ ಅನುಭವ ಪಡೆದವರು. ನವೋದಯ ಸಾಹಿತ್ಯದ ಆಚಾರ್ಯಪುರುಷರಲ್ಲೊಬ್ಬರೆನಿಸಿದ ತೀನಂಶ್ರೀ ಅವರ " ಕಾವ್ಯಮೀಮಾಂಸೆ" ಕನ್ನಡದಲ್ಲೊಂದು ಅನನ್ಯ ಗ್ರಂಥವಾಗಿ ಕಾವ್ಯಾಭ್ಯಾಸಿಗಳಿಗೆ ಮಾರ್ಗದರ್ಶಕವಾಗಿದೆ. ಸಾಹಿತ್ಯ ವಿಮರ್ಶೆ, ನಿಘಂಟು ಛಂದಶ್ಶಾಸ್ತ್ರ, ಕಾವ್ಯ ಅನುವಾದ, ಗ್ರಂಥ ಸಂಪಾದನೆ, ಭಾಷಾವಿಜ್ಞಾನ, ಪ್ರಬಂಧ ಮೊದಲಾದ ಕ್ಷೇತ್ರಗಳಲ್ಲಿ ಅವರು ಮಾಡಿದ ಕೃಷಿ ಅದ್ಭುತವಾದದ್ದು. ಒಲುಮೆ ಎಂಬ ಮೊದಲ ಕವನ ಸಂಕಲನದೊಂದಿಗೆ ಸಾಹಿತ್ಯಲೋಕಕ್ಕೆ ಕಾಲಿಟ್ಟ ಅವರು ಐವತ್ತಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿದರು. ೧೯೪೦ ರಲ್ಲಿ ಜರುಗಿದ ರಾಷ್ಟ್ರೀಯ ಭಾಷಾವಿಜ್ಞಾನಿಗಳ ಸಭೆಯಲ್ಲಿ ಭಾಗವಹಿಸಿದ್ದ ತೀನಂಶ್ರೀ ಸೂಚಿಸಿದ " ರಾಷ್ಟ್ರಪತಿ" ಎಂಬ ಶಬ್ದ ಮಾನ್ಯತೆ ಪಡೆದದ್ದು ವಿಶೇಷ. ಪ್ರಾಚ್ಯ ಸಮ್ಮೇಳನದ ದ್ರಾವಿಡ ಸಂಸ್ಕೃತಿ ಗೋಷ್ಠಿಯ ಅಧ್ಯಕ್ಷತೆ ೪೩ ನೇ ಸಾಹಿತ್ಯ ಸಮ್ಮೇಳನದ ಭಾಷಾ ಬಾಂಧವ್ಯ ಗೋಷ್ಠಿಯ ಅಧ್ಯಕ್ಷತೆ ಗೌರವ ಅವರದಾಗಿತ್ತು. ಮೈಸೂರು ಮಾನಸ ಗಂಗೋತ್ರಿಗೆ ಭದ್ರ ತಳಹದಿ ಹಾಕಿಕೊಟ್ಟರು. ಕನ್ನಡದ ಹಿರಿಯ ವಿದ್ವತ್ಪರಂಪರೆಯಲ್ಲ ಪ್ರಮುಖ ಸ್ಥಾನ ಪಡೆದಿದ್ದ ಅವರು ೧೯೬೬ ರ ಸೆಪ್ಟೆಂಬರ್ ೭ ರಂದು ನಿದನ ಹೊಂದಿದರು‌. - ಎಲ್. ಎಸ್. ಶಾಸ್ತ್ರಿ









22 views0 comments

Comments


bottom of page