top of page

ಮರೆಯಲಾಗದ ಮಹಾನುಭಾವರು -೧೩೦

************

ನಿಗೂಢ ವ್ಯಕ್ತಿತ್ವದ ಮೇಧಾವಿ ಬರೆಹಗಾರ


" ಸಂಸ" ( ವೆಂಕಟಾದ್ರಿ ಅಯ್ಯರ್)

***********

ಕನ್ನಡ ಸಾಹಿತ್ಯಲೋಕದಲ್ಲಿ " ಸಂಸ" ಎಂದೇ ಪರಿಚಿತರಿರುವ ಮೇಧಾವಿ ಬರೆಹಗಾರ ಎ. ಎನ್‌. ಸ್ವಾಮಿ / ವೆಂಕಟಾದ್ರಿ ಅಯ್ಯರ್ ಅವರ ಬದುಕು ಮಾತ್ರ ತುಂಬ ನಿಗೂಢವಾದದ್ದು. ಅದೊಂದು ಪತ್ತೇದಾರಿ ಕಾದಂಬರಿ ಇದ್ದಹಾಗೆಯೇ ಇತ್ತು. ಪಿ. ಲಂಕೇಶ್ ಅವರು ಸಂಸರ ಬದುಕನ್ನು ಆಧರಿಸಿ "ಪೋಲೀಸರಿದ್ದಾರೆ , ಎಚ್ಚರಿಕೆ!" ಎಂಬ ಏಕಾಂಕವೊಂದನ್ನು ಬರೆದಿದ್ದಾರೆ. ಅಚ್ಚರಿಯೆಂಬಂತೆ ಹೊನ್ನಾವರದಲ್ಲಿ ರಂಗಕರ್ಮಿ/ ಪತ್ರಕರ್ತ ಶ್ರೀ ಜಿ. ಯು. ಭಟ್ಟರ ನಿರ್ದೇಶನದಲ್ಲಿ ಆ ನಾಟಕ ಪ್ರದರ್ಶಿಸಲ್ಪಟ್ಟಾಗ ಸಂಸರ ಪಾತ್ರವನ್ನು ನಾನೇ ವಹಿಸಿದ್ದೆ. ಪಾತ್ರ ಹೇಗಾಯಿತೋ ಗೊತ್ತಿಲ್ಲ, ಆದರೆ ಆ ನಾಟಕವನ್ನು ಮಾತ್ರ ಮರೆತಿಲ್ಲ.

ಕನ್ನಡದಲ್ಲಿ ಚಾರಿತ್ರಿಕ ನಾಟಕಗಳ ಪಿತಾಮಹ ಎಂದೇ ಹೆಸರಾಗಿರುವ ಸಂಸರು ಒಟ್ಟು ೨೩ ನಾಟಕಗಳನ್ನು ಬರೆದಿದ್ದಾರೆ. ಅವರು ಹುಟ್ಟಿದ್ದು ೧೮೯೮ ರ ಜನೆವರಿ ೧೩ ರಂದು ಯಳಂದೂರು ತಾಲೂಕಿನ ಅಗರ ಎಂಬಲ್ಲಿ. ತಂದೆ ನರಸಿಂಹ ಪಂಡಿತರು. ಮ್ಯಾಟ್ರಿಕ್ ಪರೀಕ್ಷೆಯಲ್ಲಿ ನಪಾಸಾದ ಸಂಸರು ಮುಂದೆ ಕಲಿಯಲಿಲ್ಲ. ಶಿಕ್ಷಕರಾಗಿ, ರೇಲ್ವೆ ಗುಮಾಸ್ತರಾಗಿ , ಭದ್ರಾವತಿ ಕಬ್ಬಿಣ ಕಾರ್ಖಾನೆ ಕೆಲಸಗಾರರಾಗಿ ಕೆಲಸ ಮಾಡುತ್ತಲೇ ಸಾಹಿತ್ಯ ರಚನೆಗೆ ತೊಡಗಿದರು.

ಅವರಿಗೆ " ಸಂಸ" ಎಂಬ ಕಾವ್ಯನಾಮ ಬಂದಿದ್ದೂ ವಿಚಿತ್ರ ರೀತಿಯಲ್ಲಿ. ತಮ್ಮ ಮೊದಲ ನಾಟಕವನ್ನು ಬರೆದು " ಕಂಸ" ಎಂಬ ಹೆಸರಲ್ಲಿ ಪತ್ರಿಕೆಗೆ ಕಳಿಸಿದ್ದರು. ಆದರೆ ಅದು "ಸಂಸ" ಎಂದು ಪ್ರಕಟವಾಯಿತು. ಮುಂದೆ ಅದೇ ಶಬ್ದ ಮುಂದುವರಿಸಿದರು. ಅವರ " ವಿಗಡ ವಿಕ್ರಮರಾಯ" ನಾಟಕ ಮೈಸೂರಿನ ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟವಾಯಿತು. ನಂತರ ಸುಗುಣ ಗಂಭೀರ, ವಿಜಯನಾರಸಿಂಹ, ಬಿರುದೆಂತೆಂಬರ ಗಂಡ, ಬೆಟ್ಟದ ಅರಸು, ಮೊದಲಾದ ೨೩ ನಾಟಕ ರಚಿಸಿದರಾದರೂ ಅವುಗಳಲ್ಲಿ ಲಭ್ಯವಿದ್ದುದು ಆರು ಮಾತ್ರ. ಕೆಲವನ್ನು ಸ್ವತಃ ಸಂಸರೇ ತಮ್ಮ ಕೈಯಾರೆ ನಾಶ ಮಾಡಿದ್ದಾರೆನ್ನಲಾಗಿದೆ. ಈಶ ಪ್ರಕೋಪನ, ಶ್ರೀಮಂತೋದ್ಯಾನ ವರ್ಣನಂ ಎಂಬ ಚಂಪೂ ಕಾವ್ಯ , ನರಕ ದುರ್ಯೋಧನೀಯಮ್ ಮೊದಲಾದ ಕಾವ್ಯಗಳನ್ನು, ಒಂದು ಕನ್ನಡ ಮತ್ತೊಂದು ಇಂಗ್ಲಿಷ ಕಾದಂಬರಿ ಬರೆದರು.

ಈ ಮಧ್ಯೆ ಒಮ್ಮೆ ಏಕೋ ದೇಶವನ್ನೇ ಬಿಟ್ಟು ಇಪ್ಪತ್ತು ವರ್ಷಗಳ ಕಾಲ ಫಿಜಿ ದ್ವೀಪ, ಟಿಬೇಟ್, ಅಫಘಾನಿಸ್ತಾನ, ಬರ್ಮಾ, ಬಲೂಚಿಸ್ತಾನ, ದಕ್ಷಿಣ ಆಫ್ರಿಕಾ ಮೊದಲಾದ ದೇಶಗಳಲ್ಲಿ ಸಂಚರಿಸಿ ಮರಳಿ ಮೈಸೂರಿಗೆ ಬಂದರು. ಆದರೆ ಅಷ್ಟರಲ್ಲಾಗಲೆ ಅವರು ಒಂದು ತರಹದ ಭಯದ ಭ್ರಮೆಯ ಕಾಯಿಲೆಗೆ ಒಳಗಾಗಿದ್ದರು. ( persecution mania). ವಿಚಿತ್ರ ಸಂಶಯ ಅವರನ್ನಾವರಿಸಿತ್ತು. ತಮ್ಮನ್ನು ಪೋಲೀಸರು ಹುಡುಕುತ್ತಿದ್ದಾರೆ, ತಮ್ಮನ್ನು ಬಂಧಿಸಿಕೊಂಡು ಹೋಗುತ್ತಾರೆ ಎಂಬೆಲ್ಲ ಭಾವನೆ ಅವರಲ್ಲಿ ತುಂಬಿಕೊಂಡಿತ್ತು. ಅದರಿಂದ ಕೆಲ ವರ್ಷ ನರಳಿದ ಅವರು ಕೊನೆಗೊಂದು ದಿನ ಮೈಸೂರಿನ ಸದ್ವಿದ್ಯಾ ಪಾಠಶಾಲೆಯ ಒಂದು ಕೊಠಡಿಯಲ್ಲಿ ನೇಣು ಹಾಕಿಕೊಂಡು ಜೀವ ಬಿಟ್ಟರು. ಶವ ಕೊಳೆತು ವಾಸನೆ ಹಬ್ಬಿದಾಗಲೇ ಗೊತ್ತಾಗಿದ್ದು ಅವರು ಸತ್ತಿದ್ದು. ಆಗ ಅವರಿಗೆ ೪೧ ವರ್ಷ. ( ೧೪-೨-೧೯೩೯). ಅವರ ಆ ಭಯಕ್ಕೆ ಕಾರಣವೇನೆಂಬುದು ಮಾತ್ರ ಯಾರಿಗೂ ತಿಳಿದಿಲ್ಲ. ಹಿಂದೆಯೂ ಅವರು ೨೨ ಮತ್ತು ೩೭ ನೇ ವಯಸ್ಸಿನಲ್ಲಿ ಎರಡು ಸಲ ಆತ್ಮಹತ್ಯೆಯ ವಿಫಲ ಯತ್ನ ಮಾಡಿದ್ದರಂತೆ.

ಪಂ. ಕರಿಬಸಪ್ಪ ಶಾಸ್ತ್ರಿಗಳಂತಹ ವಿದ್ವಾಂಸರಲ್ಲಿ ಪಳಗಿದ್ದ ಸಂಸರು ಒಬ್ಬ ಮಹಾ ಮೇಧಾವಿಯಾಗಿದ್ದರೂ ದುರ್ದೈವದಿಂದ ಅವರನ್ನು ವಿಚಿತ್ರ ಕಾಯಿಲೆ ಕಾಡಿದ್ದರಿಂದ ಅವರಿಂದ ಬರಬಹುದಾಗಿದ್ದ ಅಮೂಲ್ಯ ಕೃತಿಗಳು ಸಿಗದಂತಾದವು. ಆದರೂ ಬರೆದಷ್ಟರಿಂದಲೇ ಸಂಸರು ಕನ್ನಡ ಸಾಹಿತ್ಯದಲ್ಲಿ ಅಜರಾಮರರಾಗಿದ್ದಾರೆ‌‌.


‌- ಎಲ್. ಎಸ್. ಶಾಸ್ತ್ರಿ

15 views0 comments
bottom of page