೫೦-೬೦ ದಶಕದಲ್ಲಿ ಕನ್ನಡ ಪುಸ್ತಕಗಳನ್ನು ಓದಲು ಆರಂಭಿಸಿದವರೆಲ್ಲ ಮೊದಲು ಓದಿದ್ದು ಬಹುತೇಕ ಎನ್. ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳನ್ನೆ. ನಂತರ ಅನಕೃ, ಪುರಾಣಿಕ, ತರಾಸು ಮೊದಲಾದವರದು. ನರಸಿಂಹಯ್ಯನವರ "ಪತ್ತೇದಾರ ಪುರುಷೋತ್ತಮ" ಆಗಿನ ಯುವ ಪೀಳಿಗೆಯವರ ನೆಚ್ಚಿನ ಹೀರೋ. ಅವರ ಕಾದಂಬರಿಗಳನ್ನು ಓದುವ ಹುಚ್ಚು ಎಷ್ಟಿತ್ತೆಂದರೆ ಶಾಲೆಯಲ್ಲಿ ಕ್ಲಾಸು ನಡೆಯುತ್ತಿದ್ದಾಗಲೇ ಪಠ್ಯಪುಸ್ತಕದ ನಡುವೆ ಪತ್ತೇದಾರಿ ಕಾದಂಬರಿಗಳನ್ನು ಇಟ್ಟು , ಕೆಲವೊಮ್ಮೆ ಶಿಕ್ಷಕರ ಕೈಯಲ್ಲಿ ಸಿಕ್ಕುಬಿದ್ದು ಫಜೀತಿಯಾಗುವದೂ ಇತ್ತು. ಅಷ್ಟೊಂದು ಆಸಕ್ತಿ ಕೆರಳಿಸಿದ ಕೃತಿಗಳು ಅವು. ಓದಿದ್ದು ಕೇವಲ ನಾಲ್ಕನೇ ಇಯತ್ತೆ. ಬರೆದದ್ದು ೫೦೦ ಕ್ಕೂ ಹೆಚ್ಚು ಕಾದಂಬರಿಗಳು. ಸುಮಾರು ೩೫೦ ಪತ್ತೇದಾರಿ. ಉಳಿದದ್ದು ಸಾಮಾಜಿಕ, ಐತಿಹಾಸಿಕ. ಅವರ ಪತ್ತೇದಾರ ಪುರುಷೋತ್ತಮ ಕನ್ನಡದ ಶೆರ್ಲಾಕ್ ಹೋಮ್ಸ್ ಆಗಿಬಿಟ್ಟಿದ್ದ. ನಂತರ ಪತ್ತೇದಾರ ಮಧುಸೂದನ , ಅರಿಂಜಯ, ಗಾಳಿರಾಯ ಮೊದಲಾದವರೂ ಬಂದರು. ದಟ್ಟ ಬಡತನ. ನಾಲ್ಕನೇ ಇಯತ್ತೆ ಪಾಸಾಗಿ ಕೆಲಸ ಹುಡುಕಬೇಕಾಯ್ತು. ಕಾಫಿ ತೋಟದ ಕೂಲಿ, ಕ್ಲೀನರ್, ಕಂಡಕ್ಟರ್, ನಂತರ ಪ್ರಿಂಟಿಂಗ್ ಪ್ರೆಸ್ ನಲ್ಲಿ ಮೊಳೆ ಜೋಡಿಸೋ ಕೆಲಸ ಮಾಡುತ್ತ, ಸ್ವಂತ ವಾಚನಾಲಯವೊಂದನ್ನು ನಡೆಸುತ್ತಲೇ ಬರೆಯಲು ಆರಂಭಿಸಿದ ನರಸಿಂಹಯ್ಯ ಕೆಲ ಕಾಲದಲ್ಲೇ ಭಾರೀ ಜನಪ್ರಿಯರಾದರು. ಅವರ ಕಾದಂಬರಿಗಳೂ ಬಿಸಿ ದೋಸೆಯಂತೆ ಮಾರಾಟವಾದವು. ಆದರೆ ಲಾಭ ಮಾತ್ರ ಪ್ರಕಾಶಕರಿಗೆ. ಲೇಖಕ ಬಡವನಾಗಿಯೇ ಉಳಿದ. ಎನ್. ಎನ್. ಪರಿಸ್ಥಿತಿಯೇನೂ ಸುಧಾರಿಸಲಿಲ್ಲ. ಬೆಂಗಳೂರಿನಲ್ಲಿ ೧೯೨೫ ರ ಸೆಪ್ಟೆಂಬರ್ ೧೮ ರಂದು ಜನಿಸಿದ ನರಸಿಂಹಯ್ಯ ಆಗಿನ ಪ್ರಸಿದ್ಧ ಪತ್ತೇದಾರಿ ಕಾದಂಬರಿಕಾರರಾದ ಎಂ. ರಾಮಮೂರ್ತಿ ಅವರಿಂದ ಪ್ರಭಾವಿತರಾಗಿ ತಾವೂ ಬರೆಯಲಾರಂಭಿಸಿದರು. ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಲೇ ಒಂದರಮೇಲೊಂದು ಕಾದಂಬರಿ ಬರೆದರು. ಪಂಜರದ ಪಿಶಾಚಿ, ಮಂತ್ರದ ಗಿಣಿ, ಮೋಹಿನಿ ವಿಲಾಸ, ಸ್ಮಶಾನ ಬೈರಾಗಿ, ಬೆನ್ನು ಹತ್ತಿದ ಭೂಪ, ಪ್ರಚಂಡ ಚೋರ, ಗಿಣಿ ಕಚ್ಚಿದ ಹಣ್ಣು, ಮುಸುಕು ತೆಗೆಯೇ ಮಾಯಾಂಗನೆ ಮೊದಲಾದ ಅವರ ಕೃತಿಗಳು ಎಲ್ಲವೂ ಅನೇಕ ಮುದ್ರಣಗಳನ್ನು ಕಂಡಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅಕಾಡೆಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನದ ಸನ್ಮಾನ ಮೊದಲಾದ ಗೌರವಗಳನ್ನು ಪಡೆದ ಅವರು ೨೦೧೧ ಡಿಸೆಂಬರ್ ೨೫ ರಂದು ನಿಧನ ಹೊಂದಿದರು. ನಮಗೆಲ್ಲ ಓದುವ ರುಚಿ ಹತ್ತಿಸಿದ ಅವರನ್ನು ನಾವೆಂದೂ ಮರೆಯಲಾಗದು. - ಎಲ್. ಎಸ್. ಶಾಸ್ತ್ರಿ