top of page

ಮರೆಯಲಾಗದ ಮಹಾನುಭಾವರು

ಕನ್ನಡ ಚಿತ್ರರಂಗ ಕಂಡ ಮಹಾ ಜೀನಿಯಸ್

ಜಿ. ವಿ. ಅಯ್ಯರ್

*************

ಕನ್ನಡವಷ್ಟೇ ಏಕೆ, ಭಾರತೀಯ ಚಲನಚಿತ್ರ ಕಂಡ ಅಪರೂಪದ ಮಹಾ ಪ್ರತಿಭೆ ಜಿ. ವಿ. ಅಯ್ಯರ್. ಇಂದಿನ ಪೀಳಿಗೆಗೆ ಅವರ ಕುರಿತು ಹೆಚ್ಚು ಮಾಹಿತಿ ಇರಲಿಕ್ಕಿಲ್ಲ. ಆದರೆ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಶತಮಾನಗಳ ಕಾಲ ಹಾಗೇ ಉಳಿದುಕೊಳ್ಳುವಂತಹದು.

ಗಣಪತಿ ವೆಂಕಟರಮಣ ಅಯ್ಯರ್ ಹುಟ್ಟಿದ್ದು ೧೯೧೭ ಸೆ. ೩ ರಂದು ನಂಜನಗೂಡಿನಲ್ಲಿ. ಬಾಲ್ಯದಿಂದಲೇ ಕಲೆಯ ಹುಚ್ಚು. ಬಡತನ. ಹೆಚ್ಚು ಕಲಿಯಲು ಆಗಲಿಲ್ಲ. ಆದರೆ ಒಳಗೆ ಅಡಗಿದ್ದ ಪ್ರತಿಭೆ ಹೇಗೋ ಎಲ್ಲೋ ಹೊರಗೆ ಬಂದು ಮಿಂಚುತ್ತದೆ. ಹಾಗೆ ಅಯ್ಯರ್ ತಮ್ಮ ಬದುಕನ್ನು ಹುಡುಕಿಕೊಂಡು ಎಲ್ಲೆಲ್ಲೋ ಅಲೆದರು. ಏನೇನೋ ಕೆಲಸ ಮಾಡಿದರು. ಗುಬ್ಬಿ ನಾಟಕ ಕಂಪನಿಯಲ್ಲಿ ಪರಿಚಾರಿಕೆ ಮಾಡಿದರು. ಅವಕಾಶ ಹುಡುಕಿ ಪುಣೆಗೆ ಹೋಗಿ ಅಲ್ಲಿ ಹೊಟೆಲ್ ನಲ್ಲಿ ಕೆಲಸ ಮಾಡಿದರು. ತಿರುಗಿ ಕರ್ನಾಟಕಕ್ಕೆ ಬಂದು ನಾಟಕ ಕಂಪನಿ ಸೇರಿದರು. ಅದೃಷ್ಟವಶಾತ್ ಚಿತ್ರ ರಂಗದಲ್ಲೂ ಅವಕಾಶ ಒದಗಿಬಂತು. ಹಿರಿಯ ನಟಿ ನಿರ್ಮಾಪಕಿ ಎಂ. ವಿ. ರಾಜಮ್ಮ ಅವರ ರಾಧಾರಮಣ ಚಿತ್ರದಲ್ಲಿ ಪಾತ್ರ ಗಿಟ್ಟಿಸಿಕೊಂಡರು. ಅಲ್ಲಿಂದ ಅವರು ಈಚೆ ತಿರುಗಿ ನೋಡಲಿಲ್ಲ. ಹಾಸ್ಯನಟ ಟಿ. ಎನ್. ಬಾಲಕೃಷ್ಣ ಸಹ ಅದೇ ಚಿತ್ರದಿಂದ ಬಂದವರು.

೧೯೫೪ ರಲ್ಲಿ ಎಚ್. ಎಲ್. ಎನ್. ಸಿಂಹ ಅವರು ಬೇಡರ ಕಣ್ಣಪ್ಪ ಸಿನಿಮಾ ನಿರ್ಮಿಸುವಾಗ ರಾಜಕುಮಾರ ಜೊತೆ ನರಸಿಂಹರಾಜು, ಬಾಲಕೃಷ್ಣ ಮತ್ತು ಜಿ. ವಿ. ಅಯ್ಯರ್ ಸಹ ಆ ಸಿನಿಮಾದಲ್ಲಿ ಅವಕಾಶ ಪಡೆದರು. ಬೇಡರ ಕಣ್ಣಪ್ಪ ಆ ಕಾಲದ ಸೂಪರ್ ಹಿಟ್ ಚಿತ್ರವಾಯಿತು. ಮುಂದೆ ಈ ನಾಲ್ವರೂ ಮದ್ರಾಸಿನಲ್ಲಿ ನೆಲೆಸಿದರು. ಕನ್ನಡ ಸಿನಿಮಾರಂಗದ ಬೇಡಿಕೆಯ ನಟರಾದರು. ಸೋದರಿ, ಮಹಾಕವಿ ಕಾಳಿದಾಸ, ಹರಿಭಕ್ತ, ಹೇಮಾವತಿ, ವಾಲ್ಮೀಕಿ, ದಶಾವತಾರ, ಎಮ್ಮೆ ತಮ್ಮಣ್ಣ, ಹೀಗೆ ಸಾಲುಸಾಲಾಗಿ ಸಿನಿಮಾಗಳು ತೆರೆ ಕಂಡವು. ಅಯ್ಯರ್ ಹಾಸ್ಯ ಮತ್ತು ವಿಲನ್ ನಟರಾಗಿ ಅಭಿನಯಿಸಿದ್ದೇ ಜಾಸ್ತಿ.

ಆದರೆ ಅಯ್ಯರ್ ಪ್ರತಿಭೆ ಅಷ್ಟಕ್ಕೆ ಸೀಮಿತವಾಗಿರಲಿಲ್ಲ. ಅವರು ೧೯೫೫ ರಲ್ಲಿ ಸೋದರಿ ಚಿತ್ರಕ್ಕೆ ಸಂಭಾಷಣೆ ಹಾಡು ಬರೆದು ತಮ್ಮ ಪ್ರತಿಭೆಯ ಇನ್ನೊಂದು ಮುಖ ಪ್ರದರ್ಶಿಸಿದರು. ಮುಂದೆ ಅನೇಕ ಸಿನಿಮಾಗಳಿಗೆ ತಮ್ಮ ಸಾಹಿತ್ಯ ಒದಗಿಸಿದರು. ಅವರ ಹಲವು ಚಿತ್ರ ಗೀತೆಗಳು ಈಗಲೂ ಜನರ ಬಾಯಲ್ಲಿವೆ. ಉದಾ: ಜಲಲ ಜಲಲ ಜಲ ಧಾರೆ ( ವಾಲ್ಮೀಕಿ), ವೈದೇಹಿ ಏನಾದಳೊ (ದಶಾವತಾರ), ಕರುನಾಡ ಕಣ್ಮಣಿಯೆ ( ರಣಧೀರ ಕಂಠೀರವ), ನಂಬಿದೆ ನಿನ್ನ ನಾದದೇವತೆಯೆ ( ಸಂಧ್ಯಾರಾಗ- ಭೀಮಸೇನ ಜೋಶಿ ಹಾಡಿದ್ದು), ಕನ್ನಡದಾ ಮಕ್ಕಳೆಲ್ಲಾ ಒಂದಾಗಿ ಬನ್ನಿ( ಕಣ್ತೆರೆದು ನೋಡು), ಗಾಳಿಗೋಪುರ ನಿರಾಶಾ ಜೀವನ( ಗಾಳಿಗೋಪುರ), ಕನ್ನಡದ ಕುಲದೇವಿ ( ಪೋಸ್ಟ್ ಮಾಸ್ಟರ್) , ಬಾ ತಾಯೆ ಭಾರತಿಯೆ( ತಾಯಿಕರುಳು) ಮೊದಲಾದ ಹಾಡುಗಳನ್ನು ಬರೆದವರು ಜಿ. ವಿ. ಅಯ್ಯರ್.

ಅಯ್ಯರ್ ಬಿ. ವಿ. ಕಾರಂತರ " ಸತ್ತವರ ನೆರಳು" ವಿನಂತಹ ನಾಟಕಗಳಲ್ಲೂ ಅಭಿನಯಿಸಿದರು.

ಆದರೆ ಅಯ್ಯರ್ ಅವರ ಅದ್ಭುತ ಪ್ರತಿಭೆಗೆ ಸಾಕ್ಷಿಯಾದದ್ದು ಅವರು ನಿರ್ದೇಶಿಸಿ ನಿರ್ಮಿಸಿದ ಹಲವು ಸಿನಿಮಾಗಳು.

೧೯೭೨ ರಲ್ಲಿ ಜಿವಿ ಅಯ್ಯರ್ ಭೈರಪ್ಪನವರ " ವಂಶವೃಕ್ಷ " ಕಾದಂಬರಿಯನ್ನು ಡಾ. ಕಾರ್ನಾಡ ಮತ್ತು ಬಿ‌. ವಿ. ಕಾರಂತರ ಜಂಟಿ ನಿರ್ದೇಶನದಲ್ಲಿ ನಿರ್ಮಿಸಿದರು. ಅದು ಸಂಸ್ಕಾರದಂತಹ ಹೊಸ ಅಲೆಯ ಕಲಾತ್ಮಕ ಚಿತ್ರಗಳಿಗೆ ಬಲ ಕೊಟ್ಟಿತು. ಹಲವು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆಯಿತು. ಇದರಲ್ಲಿ ವಿಷ್ಣುವರ್ಧನ ಅಭಿನಯಿಸಿದರು.

೧೯೭೫ ರಲ್ಲಿ ತರಾಸು ಅವರ ಸಂಗೀತ ಪ್ರಧಾನ ಕಾದಂಬರಿ ಹಂಸಗೀತೆ ನಿರ್ದೇಶಿಸಿದರು. ಅನಂತನಾಗ ನಾಯಕ. ಅದೂ ಬಹಳ ಪ್ರಸಿದ್ಧವಾಯಿತು.

ಅಯ್ಯರ್ ಅವರ ಮಹಾಸಾಧನೆ " ಆದಿ ಶಂಕರಾಚಾರ್ಯ" ಸಂಸ್ಕೃತ ಸಿನಿಮಾ. ಅದು ರಾಷ್ಟ್ರೀಯ ಸ್ವರ್ಣಕಮಲ ಸಹಿತ ಹಲವು ಪ್ರಶಸ್ತಿ ಪಡೆಯಿತು. ಅಷ್ಟೇ ಅಲ್ಲ, ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರು ಆ ಸಿನಿಮಾವನ್ನು ಆಯ್ಕೆ ಮಾಡುವಾಗ " ಇದಕ್ಕೆ ಸ್ವರ್ಣ ಪದಕ ಕ್ಕಿಂತ ಹೆಚ್ಚಿನದೇನಾದರೂ ಇದ್ದರೆ ಅದನ್ನೇ ಕೊಡುತ್ತಿದ್ದೆ " ಎಂದಿದ್ದರಂತೆ. ಅದು ಜಾಗತಿಕ ಪ್ರಸಿದ್ಧಿಯನ್ನೂ ಪಡೆಯಿತು. ಜರ್ಮನ್ ವಿದ್ವಾಂಸರೊಬ್ಬರು ಆ ಚಿತ್ರ ವಿಶ್ಲೇಷಣೆಯ ಗ್ರಂಥವನ್ನೇ ಬರೆದರು.

ಮುಂದೆ ಅಯ್ಯರ್ ಕನ್ನಡದಲ್ಲಿ " ಮಧ್ವಾಚಾರ್ಯ" ಮತ್ತು ತಮಿಳಿನಲ್ಲಿ " ರಾಮಾನುಜಾಚಾರ್ಯ" ಸಿನಿಮಾ ನಿರ್ಮಿಸಿದರು. ೧೯೯೩ ರಲ್ಲಿ ಅವರು " ಭಗವದ್ಗೀತೆ " ಯನ್ನಾಧರಿಸಿದ ಚಿತ್ರ ನಿರ್ಮಿಸಿದರು. ಅದೂ ಹಲವು ಪ್ರಶಸ್ತಿಗಳನ್ನು ಪಡೆಯಿತು. .

ಅಯ್ಯರ್ ಕೆಲವು ದೂರದರ್ಶನ ಧಾರಾವಾಹಿಗಳನ್ನೂ ನಿರ್ಮಿಸಿದರು. ನಾಟ್ಯರಾಣಿ ಶಾಂತಲಾ, ವಿವೇಕಾನಂದ, ಶ್ರೀ ಕೃಷ್ಣಲೀಲಾ, ಮೊದಲಾದವು. ರಾಮಾಯಣದ ಕುರಿತು ಒಂದು ಚಿತ್ರ ಧಾರಾವಾಹಿ ನಿರ್ಮಿಸಲು ರಾವಣನ ಪಾತ್ರಕ್ಕೆ ಸಂಜಯ ದತ್ತನನ್ನು ಕೇಳಲು ಅಯ್ಯರ್ ಮುಂಬಯಿಗೆ ಹೋಗಿದ್ದರಂತೆ. ಆದರೆ ಅಲ್ಲಿಯೇ ಅವರು ಕೊನೆಯುಸಿರೆಳೆದರು. (೨೦೦೩ ಡಿಸೆಂಬರ್ ೨೧).

ನಿಜಜೀವನದಲ್ಲಿ ಅಯ್ಯರ್ ಒಬ್ಬ ಸಂತನಂತಿದ್ದರು. ಬರಿಗಾಲಲ್ಲೇ ನಡೆಯುತ್ತಿದ್ದರು. ಆಡಂಬರವಿಲ್ಲದ ಸರಳ ಜೀವನ. ಮಹಾ ಜೀನಿಯಸ್ ಅಯ್ಯರ್ ಭಾರತೀಯ ಸಿನಿಮಾ ರಂಗದಲ್ಲಿ ಅಪರೂಪದ ಪ್ರತಿಭೆ!

- ಎಲ್. ಎಸ್. ಶಾಸ್ತ್ರಿ
38 views0 comments

Comments


bottom of page