top of page

ಮರೆಯಲಾಗದ ಮಹನೀಯರು- ೧೭೬

ಕನ್ನಡ ಪತ್ರಿಕಾರಂಗಕ್ಕೆ ಭದ್ರ ತಳಹದಿ ಹಾಕಿದ

ತಿರುಮಲೆ ತಾತಾಚಾರ್ಯ ಶರ್ಮಾ


ತಿ. ತಾ. ಶರ್ಮಾ

ತಿರುಮಲೆ ತಾತಾಚಾರ್ಯ ಶರ್ಮಾ ಎಂದರೆ ಕನ್ನಡ ಪತ್ರಿಕೋದ್ಯಮದ ತಾತನೆ. ಧೀಮಂತ ಪತ್ರಕರ್ತರಾಗಿದ್ದ ಅವರು ಒಬ್ಬ ಆದರ್ಶ ಪತ್ರಿಕಾಕರ್ತ ಹೇಗಿರಬೇಕೆಂಬುದನ್ನು ತಮ್ಮ ಬದುಕಿನಿಂದಲೇ ತೋರಿಸಿಕೊಟ್ಟರು.

‌ ಅದು ಆಧುನಿಕ ಕನ್ನಡ ಪತ್ರಿಕಾರಂಗದ ಆದಿಕಾಲ. ಶರ್ಮ ಅವರು ಜನಿಸಿದ್ದು ೧೮೯೭ ರ ಎಪ್ರಿಲ್ ೨೭ ರಂದು ಚಿಕ್ಕಬಳ್ಳಾಪುರದಲ್ಲಿ ಶ್ರೀನಿವಾಸ - ಜಾನಕಿಯವರ ಪುತ್ರನಾಗಿ. ಮೊದಲ ಹೆಸರು ಲಕ್ಷ್ಮೀಕುಮಾರ. ಸಂಸ್ಕೃತ, ತೆಲುಗು ತಮಿಳು ಭಾಷೆಗಳಲ್ಲೂ ಪರಿಣತಿ. ಪತ್ರಿಕೆ ಕಲೆ ಸಾಹಿತ್ಯ ಕ್ಷೇತ್ರಗಳಲ್ಲಿ ಅಗಾಧ ಕೆಲಸ ಮಾಡಿದ ಅವರು ಎಂ. ವಿಶ್ವೇಶ್ವರಯ್ಯನವರ ಭಾಷಣದಿಂದ ಪ್ರಭಾವಿತರಾಗಿ ಕನ್ನಡದ ಕೈಂಕರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡರು. ವಂದೇಮಾತರಂ ಚಳವಳಿಯಲ್ಲಿ ಭಾಗವಹಿಸಿದರು. ನಂತರ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದರು.

೧೯೧೩ ರಲ್ಲಿ ಅವರು ತಿರುಮಲೆ ರಾಜಮ್ಮನವರನ್ನು ವಿವಾಹವಾದರು. ಅವರು " ಭಾರತಿ" ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದರು. ಶರ್ಮರಿಗೆ ನಾಟಕಗಳಲ್ಲೂ ಆಸಕ್ತಿಯಿತ್ತು. ಪೂರ್ವಮುಖಿ ಸಾಂಸ್ಕೃತಿಕ ತಂಡ ಕಟ್ಟಿ ನಾಟಕಗಳನ್ನಾಡಿದರು. 1918 ರಲ್ಲಿ ವರದಾಚಾರ್ಯರ ನಾಟಕ ಕಂಪನಿ ಸೇರಿದರು. ತೆಲುಗು ನಾಟಕಗಳನ್ನು ಕನ್ನಡಕ್ಕೆ ತಂದರು. ಶ್ರೀರಂಗಪಟ್ಟಣ ಪತನ, ಟಿಪ್ಪುಸುಲ್ತಾನ, ಮೊದಲಾದ ನಾಟಕಗಳನ್ನು ಬರೆದರು. ಟಿ. ಪಿ. ಕೈಲಾಸಂ, ಟಿ. ರಾಘವಾಚಾರ್ಯರಂಥವರ ಒಡನಾಟವಿತ್ತು. ಬಿಎಂಶ್ರೀ, ಪ್ರೊ. ಎನ್. ಎಸ್. ಸುಬ್ಬರಾವ್, ಸಿ. ಆರ್. ರೆಡ್ಡಿ ಮೊದಲಾದವರ ಮಾರ್ಗದರ್ಶನ ಪಡೆದರು.

೧೯೨೦ ರಲ್ಲಿ ಕೇಂದ್ರ ಶಾಸನ ಇಲಾಖೆಯಲ್ಲಿ ತೆಲುಗು ಕನ್ನಡ ರೀಡರ್ ಕೆಲಸಕ್ಕೆ ಸೇರಿ ಶಾಸನಶಾಸ್ತ್ರದಲ್ಲಿ ಪರಿಣಿತರಾದರು. " ಶಿಲಾ ಶಾಸನಗಳಲ್ಲಿ ಕಂಡುಬಂದ ಕನ್ನಡ ಕವಿಗಳು" ಎಂಬ ಪುಸ್ತಕ ಬರೆದರು.

ಕೆಲಕಾಲ ಶರ್ಮಾ ದಂಪತಿಗಳು ಸಾಬರಮತಿಯ ಗಾಂಧಿ ಆಶ್ರಮದಲ್ಲಿಯೂ ಇದ್ದರು. ಮದರಾಸಿನಲ್ಲಿದ್ದಾಗ ಪಂಜೆ ಮಂಗೇಶರಾಯರು, ಎಂ. ಗೋವಿಂದ ಪೈ, ಬೆನಗಲ್ ರಾಮರಾವ್ ಅವರ ಸಂಪರ್ಕ ಬಂತು. ಗ್ರಾಮನಾಮಗಳ ಅಧ್ಯಯನ ನಡೆಸಿದರು. ಬೆಂಗಳೂರಿನಲ್ಲಿ ದೇಶೀಯ ಶಾಲೆ ಶಿಕ್ಷಕರಾಗಿ ಕೆಲಸ ಮಾಡಿದರು. ಅನಕೃ, ದ. ಕೃ. ಭಾರದ್ವಾಜ ನಿಟ್ಟೂರು ಶ್ರೀನಿವಾಸರಾಯರು ಮೊದಲಾದವರೊಡನೆ ತುಂಟರ ಗುಂಪು ಕಟ್ಟಿ ಚಟುವಟಿಕೆ ನಡೆಸಿದರು. ೧೯೨೪ ರಲ್ಲಿ ಬೆಳಗಾವಿಯಲ್ಲಿ ಗಾಂಧಿಯವರ ಅಧ್ಯಕ್ಷತೆಯ ಮಹಾಧಿವೇಶನ ನಡೆದಾಗ ಹೊರತಂದ ಕರ್ನಾಟಕ ಕೈಪಿಡಿಯಲ್ಲಿ ಇತಿಹಾಸ ಭಾಗವನ್ನು ಬರೆದವರು ತಿ. ತಾ. ಶರ್ಮರೆ. ಅವರ ಮಡದಿ ರಾಜಮ್ಮನವರ ಸಂಗೀತ ಕಚೇರಿಯೂ ಅಲ್ಲಿ ನಡೆಯಿತು.

ತಿ. ತಾ. ಶರ್ಮರ ಪತ್ರಿಕಾ ಜೀವನ ಆರಂಭವಾದದ್ದು ೧೯೨೫ ರಲ್ಲಿ. ಮೈಸೂರು ಕ್ರಾನಿಕಲ್ ಪತ್ರಿಕೆಯನ್ನು " ವಿಶ್ವ ಕರ್ನಾಟಕ " ಎಂದು ಬದಲಿಸಿ ೧೯೩೪ ರಲ್ಲಿ ಅದನ್ನು ದಿನಪತ್ರಿಕೆಯಾಗಿಸಿ ೨೧ ವರ್ಷಗಳ ಕಾಲ ಪ್ರಕಟಿಸಿದ ಅವರು ಕನ್ನಡ ಪತ್ರಿಕಾರಂಗದಲ್ಲಿ ಹೊಸ ಆಯಾಮವನ್ನೇ ನಿರ್ಮಿಸಿದರು. ಅವರ ಲೇಖನಿ ಅತ್ಯಂತ ಪ್ರಖರ ಸ್ವರೂಪದ್ದಾಗಿತ್ತು. ಅವರು ವಾರಪತ್ರಿಕೆ ನಡೆಸುವಾಗ ಅದನ್ನು ಇಂಗ್ಲಿಷಿನ "War " ಪತ್ರಿಕೆ ಎಂದೇ ಬಣ್ಣಿಸಲಾಗುತ್ತಿತ್ತು. ಬ್ರಿಟಿಷ ಆಳರಸರ ವಿರುದ್ಧದ ತೀಕ್ಷ್ಣ ಬರೆಹಗಳಿಂದಾಗಿ ಅವರು ಬಂಧನಕ್ಕೊಳಗಾಗಿ ಜೈಲುವಾಸವನ್ನೂ ಅನುಭವಿಸಿದರು. ಪ್ರಕಟನೆಯ ಮೇಲೆ ನಿರ್ಬಂಧ ವಿಧಿಸಲಾಯಿತು. ಅದನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು. ಅವರ " ಬಡ ಬೋರೇಗೌಡ" ಅಂಕಣ ಬಹಳ ಜನಪ್ರಿಯವಾಗಿತ್ತು. ಸ್ವಲ್ಪ ಕಾಲ ಅನಾರೋಗ್ಯಕ್ಕೀಡಾದಾಗ ಸಿದ್ಧವನಹಳ್ಳಿ ಕೃಷ್ಣಶರ್ಮರು ಪತ್ರಿಕೆಯ ಜವಾಬ್ದಾರಿ ಹೊತ್ತಿದ್ದರು. ೧೯೪೬ ರತನಕವೂ ಈ ಪತ್ರಿಕೆ ನಡೆಸಿದರು.

೧೯೪೭ ರಿಂದ ೪೯ ರತನಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಕಾಸರಗೋಡಿನಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಇವರದಾಗಿತ್ತು. ೧೯೬೯-೭೩ ರಲ್ಲಿ ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿದ್ದರು. ೪೪-೪೫ ರಲ್ಲಿ ಬೆಂಗಳೂರು ನಗರಸಭೆ ಸದಸ್ಯರಾಗಿದ್ದರು.

೪೦ ಕ್ಕೂ ಹೆಚ್ಚು ಕೃತಿಗಳನ್ನು ಶರ್ಮಾ ರಚಿಸಿದರು. ಕನ್ನಡ ಗದ್ಯದ ಕತೆ, ಚಾರಿತ್ರಿಕ ದಾಖಲೆಗಳು, ವಿಚಾರ ಕರ್ನಾಟಕ, ಪ್ರಗತಿಶೀಲ ಸಾಹಿತ್ಯ, ಪ್ರೇಮಫಲ, ಹೂಬುಟ್ಟಿ, ವಿಕ್ರಾಂತ ಭಾರತ, , ಜೀವನ ಚರಿತ್ರೆಗಳು ಇತ್ಯಾದಿ.

ಓರ್ವ ನಿರ್ಭೀತ, ಸ್ವತಂತ್ರ ಮನೋವೃತ್ತಿಯ ಪತ್ರಕರ್ತರಾಗಿ ಆಳುವವರ ವಿರುದ್ಧ ಲೇಖನಿಯನ್ನು ಕತ್ತಿಯಂತೆ ಬಳಸಿದ ತಿ. ತಾ. ಶರ್ಮಾ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸರ್ವೋಚ್ಚ ಮಾದರಿಯೆನಿಸಿದ್ದಾರೆ. ಅವರು ೧೯೭೩ ಅಕ್ಟೋಬರ್ ೨೦ ರಂದು ನಿಧನ ಹೊಂದಿದರು.

‌- ಎಲ್. ಎಸ್. ಶಾಸ್ತ್ರಿ
13 views0 comments
bottom of page