ಸುಡು ಸುಡುವ ಬೋಳು ಬಯಲು
ಹಸಿರ ಹೆಸರಿಲ್ಲದ ಬೆಂಗಾಡು
ಪಾಪದ ಮನಕ್ಕೆ ತಾಪದ ಭಯ
ಗಂಟಲೊಳಗೆ ಆರದ ದಾಹ
ಒಡಲ ಝಳಕ್ಕೆ ಕೊಡೆ ಹಿಡಿವರಾರು..?
ಎಲ್ಲೋ ಒಂದೆಡೆ ಜೀವರಸದ ಸೆಲೆ
ಧಾವಿಸಿದೆ..ಮೊಗೆ-ಮೊಗೆದೆ
ಭ್ರಮೆಯೇ..?ಕನಸೇ..?ಮೈ ಕೊಡವಿದೆ
ವಾಸ್ತವವೇ.. ಜೀವರಸವೆಲ್ಲಿ..?
ಬಯಕೆಯ ಬಲೂನು ಒಡೆದ ಸದ್ದು.
ಅದೋ ಬೆಂಗಾಡಿನೊಳಗೊಂದು ಭರವಸೆಯ ಸೆಲೆ..
ಹೊನಲ ಹುಳುವಿಗೆ ಹುಲ್ಲು ಸಿಕ್ಕಂತೆ
ನಡೆವೆ ಓಯಸಿಸ್ ನಡೆಗೆ
ಹಸಿರಿರದ ಮನಕ್ಕೆ ಉಸಿರ ತುಂಬಿ ಪಸರಿಸುವೆ.
ಅರೆ.. ಮಾಯವಾಯಿತೆಲ್ಲಿ..?
ಇದು ಬಿಸಿಲ್ಗುದುರೆಯೇನು?...
ಕನಸಿನೋಟದ ಕಾಲು ಕಳಕ್ಕೆಂದಿತು.
ಬದುಕೆಂದರೆ ಬರೀ ಹುಡುಕಾಟವೇ..?
ಒಲುಮೆಯ ಓಯಸಿಸ್ ಗಾಗಿ
ಬ್ರಮೆಯ ಕುದುರೆಯೇರಿ
ಓಡುತ್ತೇನೆ...ಹುಡುಕುತ್ತೇನೆ..
ಮರಳುಗಾಡಿನ ಬೋಳು ಬದುಕಲ್ಲಿ
-
ರವಿ ಎ ನಾಯ್ಕ
ಮಂಜಗುಣಿ, ತಾ: ಅಂಕೋಲಾ
ರವಿ ನಾಯಕ ಇವರು ಅಂಕೋಲಾದ ಮಂಜುಗುಣಿಯವರು . ಶಿಕ್ಷಣ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಇವರು ಬಾಲ್ಯದಿಂದಲೂ ಸಾಹಿತ್ಯಾಸಕ್ತರು . ಅವರ ಹಲವಾರು ಕವನಗಳು ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಅವರ ಈ ಕವನ ತಮ್ಮ ಓದಿಗಾಗಿ -ಸಂಪಾದಕ
ಧನ್ಯವಾದಗಳು
ರವಿ ನಿನ್ನ ಈ ಕವನ ತುಂಬಾ ಚೆನ್ನಾಗಿದೆ, ನಿನ್ನ ಎಲ್ಲಾ ಕವನಗಳನ್ನು ಒಟ್ಟಿಗೆ ಸೇರಿಸಿ ಒಂದು ಕವನಸಂಕಲನ ಪ್ರಕಟಿಸು,ನಮ್ಮ ರವಿ ನಮ್ಮ ಹೆಮ್ಮೆ,
ಧನ್ಯವಾದಗಳು ಸರ್
ಚೆನ್ನಾಗಿದೆ ರವಿ ಅವರೇ