top of page

ಮರುಕಳಿಸಿದ ಅವಿಸ್ಮರಣೀಯ ನೆನಪುದಿ. 28.6.20ರ ರವಿವಾರದ “ಕರಾವಳಿ ಮುಂಜಾವು” ಸಂಚಿಕೆಯಲ್ಲಿ ಹಿರಿಯರಾದ ಶ್ರೀ ಅಮ್ಮೆಂಬಳ ಆನಂದರವರು ಬರೆದ “ನಭದಲ್ಲಿ ‘ಅಂಕೋಲಾ’ ನಕ್ಷತ್ರ?” ಎಂಬ ಲೇಖನ ಓದಿದಾಗ 40 ವರ್ಷಗಳ ಹಿಂದಿನ ನೆನಪುಗಳು ಬಿಚ್ಚಿಕೊಂಡವು.

ನಾವಾಗ ಚಿಕ್ಕವರಿದ್ದೆವು. ಅಂತಾರಾಷ್ಟ್ರೀಯ ವಿಜ್ಞಾನಿಗಳು ಜಿ.ಸಿ.ಕಾಲೇಜಿಗೆ ಗ್ರಹಣ ವೀಕ್ಷಣೆಗಾಗಿ ಬರುತ್ತಾರೆಂಬ ಸುದ್ದಿ ಅಂಕೋಲೆಯಲ್ಲಿ ಹರಡಿತ್ತು. ಪ್ರಾಚಾರ್ಯ ಶ್ರೀ. ಕೆ.ಜಿ. ನಾಯಕರ ಮಾರ್ಗದರ್ಶನದಂತೆ ವಿದೇಶದಿಂದ ಬರುವ ವಿಜ್ಞಾನಿಗಳಿಗೆ ಆತಿಥ್ಯದ ಸಿದ್ಧತೆಯಲ್ಲಿ ನನ್ನ ತಂದೆಯವರು ಹಾಗೂ ಟ್ರಸ್ಟಿನ ಈಗಿನ ಕಾರ್ಯದರ್ಶಿಗಳಾದ ಶ್ರೀ ಕೆ.ವಿ.ಶೆಟ್ಟಿ, ಪ್ರೊ. ಎಮ್.ಎಸ್.ಹಬ್ಬು, ಪ್ರೊ. ವಿ.ಏ.ಜೊಶಿ, ಪ್ರೊ. ಎಮ್.ಪಿ. ಭಟ್, ಪ್ರೊ. ಕೆ.ವಿ.ನಾಯಕ ಮೊದಲಾದ ಭೋದಕ ಭೋದಕೇತರ ಸಿಬ್ಬಂಧಿಗಳ ಸಂಪೂರ್ಣ ಸಹಕಾರದಿಂದ ಅತಿಥಿಗಳು ತೃಪ್ತರಾಗಿದ್ದರು. ಅದರಲ್ಲಿ ಶ್ರೀ ಅಮ್ಮೆಂಬಳ ಆನಂದರು ಒಬ್ಬರಾಗಿದ್ದರು. ಅವರು ಕನ್ನಡ ಪತ್ರಿಕೆಯ ವರದಿಗಾರರೂ ಹಾಗೂ ಅಂಕೋಲೆಯಿಂದ ಇಂಗ್ಲಿಷ್ ಪತ್ರಿಕೆಯ ಏಕೈಕ ವರದಿಗಾರರಾಗಿದ್ದರು. ಆ ವರುಷ ಕಾಲೇಜು ಬಿಡುಗಡೆ ಗೊಳಿಸಿದ “ದಾಸಾಳ” ವಾರ್ಷಿಕ ಸಂಚಿಕೆಯಲ್ಲಿ ಪ್ರಾಚಾರ್ಯ ಕೆ.ಜಿ.ನಾಯಕರು ಓದಿದ ವಾರ್ಷಿಕ ವರದಿಯ ಸಾರಾಂಶ ಇಂತಿದೆ


“ಈ ವರ್ಷ ಒಂದು ಅವಿಸ್ಮರಣೀಯ ಘಟನೆ ಖಗ್ರಾಸ ಸೂರ್ಯ ಗ್ರಹಣ ಜಗತ್ತಿನ ಎಲ್ಲಾ ಖಗೋಳ ಶಾಸ್ತ್ರಜ್ಞರ ಮತ್ತು ವಿಜ್ಞಾನಿಗಳ ಹಾಗೂ ಉಳಿದೆಲ್ಲರ ಗಮನವನ್ನು ಸೆಳೆದ ವಿಷಯವಾಯಿತು. ಈ ಸಂದರ್ಭದಲ್ಲಿ ಅಮೆರಿಕಾ ಕೋಲಂಬಿಯಾ ವಿಶ್ವ ವಿದ್ಯಾಲಯದ ಶ್ರೇಷ್ಠ ಖಗೋಳ ಶಾಸ್ತ್ರಜ್ಞರು ನಮ್ಮ ಕಾಲೇಜಿನ ಪ್ರದೇಶವನ್ನು ಆರಿಸಿಕೊಂಡು ಇಲ್ಲಿಗೆ ಬಂದು ಗೃಹಣ ನೋಡಿ ಅದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು ಕಾಲೇಜಿನ ಇತಹಾಸದಲ್ಲೇ ಒಂದು ಅವಿಸ್ಮರಣೀಯ ಘಟನೆ. ಇದೇ ಸಂದರ್ಭಲ್ಲಿ ಜಪಾನ್‍ನ ಒಂದು ಗೃಹಣ ವೀಕ್ಷಣಾ ತಂಡವು ನಮ್ಮಲ್ಲಿಯೇ ಕುರಿತಾದ ಒಂದು ಮಾಹಿತಿ ಸಂಗ್ರಹಿಸಿದ್ದು ಒಂದು ವಿಶೇಷ ಹೆಮ್ಮೆಯ ವಿಷಯ. ಜಪಾನದ ಈ ತಂಡದಲ್ಲಿ ಜಗತ್ಪ್ರಸಿದ್ಧ ಖಗೋಳ ಶಾಸ್ತ್ರಜ್ಞರು ಇದ್ದರು. ಅವರ ಹೆಸರು ಡಾ.ಎಸ್.ಮಿಯಾಮೋಟೊ. ಇವರು ಜಪಾನ್‍ನ ಸುಪ್ರಸಿದ್ಧ ಕ್ಯೋಟೋ ವಿಶ್ವ ವಿದ್ಯಾಲಯದಲ್ಲಿ ಖಗೋಳ ಶಾಸ್ತ್ರದ ಪ್ರಾಧ್ಯಾಪಕರಾಗಿ ಅಲ್ಲಿಯ ವೀಕ್ಷಣಾಲಯದಲ್ಲಿ ನಿರ್ದೇಶಕರಾಗಿ ಸೇವಾ ನಿವೃತ್ತರಾದ ನಂತರವೂ ಸಹ ಕ್ವಾಸಾನ್ ವೀಕ್ಷಣಾಲಯದ ನಿರ್ದೇಶಕರಾಗಿ ಕೆಲಸ ಮಾಡುತಿದ್ದಾರೆ. ಇವರು ಸೂರ್ಯ, ಚಂದ್ರ, ಮಂಗಳ ಇವುಗಳ ಕುರಿತಾಗಿ ಅಧ್ಯಯನ ಮಾಡಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ವಿಜ್ಞಾನಿ. ಅವರು ನಿಂತು ಗ್ರಹಣ ವೀಕ್ಷಿಸಿದ ಸ್ಥಳಕ್ಕೆ ಅವರ ಹೆಸರನ್ನು ಇಡುವುದಾಗಿ ಸೂಚಿಸಿದಾಗ ಅವರು ಅದನ್ನು ಮೆಚ್ಚಿಕೊಂಡು ಅದಕ್ಕೆ ಪ್ರತಿಯಾಗಿ ಮಂಗಳ ಲೋಕದ ಒಂದು ಕಣಿವೆಗೆ ಈ ಊರಿನ ಅಂದರೆ ಅಂಕೋಲೆಯ ಹೆಸರನ್ನು ತಾವು ಕೊಡಿಸುವುದಾಗಿ ಹೇಳಿದ್ದಾರೆ. ಅವರು ಅಂತಾರಾಷ್ಟ್ರೀಯ ಖಗೋಳ ಶಾಸ್ತ್ರದ ಸಂಘದ ನಾಮಕರಣ ಸಮೀತಿಯ ಸದಸ್ಯರು.


ಇದೇ ರೀತಿ ಕೋಲಂಬಿಯಾ ವಿಶ್ವ ವಿದ್ಯಾಲಯದ Lloyd Motz, Dr. Prender, , ಹಾಗೂ Dr. Astiegel ಈ ಮೂವರು ಶ್ರೇಷ್ಟ ಖಗೋಳ ವಿಜ್ಞಾನಿಗಳು. ಗ್ರಹಣ ವೀಕ್ಷಿಸಿದ ಸ್ಥಳಗಳನ್ನು ಅವರ ಹೆಸರಿನಲ್ಲಿಯೇ ಕರೆಯಬೇಕು ಎಂದು ವಿಚಾರ ಮಾಡಲಾಗಿದೆ. ಈ ಬಗ್ಗೆ ಅವರ ಸಮ್ಮತಿಯನ್ನು ಕೋರಲಾಗಿದೆ”


ನಡು ಮಧ್ಯಾಹ್ನವೇ ಅಂದು ನಡುರಾತ್ರಿಯಾಗಿತ್ತು. ಆಗ ಮಠಾಕೇರಿಯಲ್ಲಿದ್ದ ನಮ್ಮ ಮನೆಯ ಸುತ್ತ ಮುತ್ತಲಿನವರು ಗ್ರಹಣ ವೀಕ್ಷಣೆಗಾಗಿ ಗಾಜಿನ ಚೂರುಗಳನ್ನು ದೀಪದ ಮೇಲೆ ಹಿಡಿದು ಕರಿಯಾಗಿಸಿ ಗ್ರಹಣವನ್ನು ವಿಕ್ಷಿಸುವ ಸಿದ್ಧತೆಯಲ್ಲಿದ್ದರು. ಹಕ್ಕಿಗಳ ಚಿಲಿಪಿಲಿ, ದನ ಕರುಗಳ ಧ್ವನಿ ಇದ್ದಕ್ಕಿದ್ದಂತೇ ಕಡಿಮೆಯಾಗಿತ್ತು. ಗ್ರಹಣ ನೋಡಲು ನಮಗೂ ಕರೆದುಕೊಂಡು ಹೋಗಬಹುದು ಎಂಬ ಕುತೂಹಲದಿಂದಿದ್ದ ನಮ್ಮೆಲ್ಲರನ್ನು ನಮ್ಮ ತಂದೆ ತಾಯಿಗಳು ಚಿಕ್ಕ ಮಕ್ಕಳು ಗ್ರಹಣವನ್ನು ಬರಿಗಣ್ಣಿನಲ್ಲಿ ನೋಡಬಾರದು ಎಂದು ಹೇಳಿ ಕೋಣೆಯೊಳಗೆ ಕೂಡಿಹಾಕಿ ಬೀಗ ಹಾಕಿ ಗ್ರಹಣ ವೀಕ್ಷಿಸಲು ಜಿ.ಸಿ. ಕಾಲೇಜಿಗೆ ಹೋಗಿದ್ದರು. ನಾವು ಆ ಬಾಡಿಗೆ ಮನೆಯ ಹಂಚಿನ ನಡುವಿನಿಂದ ಗಾಜಿನಿಂದಲೇ ಒಬ್ಬರ ಮೇಲೆ ಒಬ್ಬರು ಹತ್ತಿಕೊಂಡು ಗ್ರಹಣ ನೋಡಿದೆವು. ಇದೊಂದು ಅವಿಸ್ಮರಣೀಯ ಘಟನೆ. ಇವೆಲ್ಲವನ್ನು ನೆನಪಿಸಿಕೊಟ್ಟ ಶ್ರೀ ಅಮ್ಮೆಂಬಾಳ ಆನಂದರಿಗೂ ಹಾಗು ಮುಂಜಾವಿಗೂ ಅಭಿನಂದನೆಗಳು.


-ಉಲ್ಲಾಸ ಹುದ್ದಾರ, ಅಂಕೋಲಾಉಲ್ಲಾಸ ಹುದ್ದಾರ ಕ್ರಿಯಾಶೀಲ ಚಟುವಟಿಕೆಗಳ ಹರಿಕಾರ.ಪಿ.ಎಂ.ಪದವಿ ಪೂರ್ವ ಕಾಲೇಜು ಅಂಕೋಲಾದಲ್ಲಿ ರಾಜ್ಯ ಶಾಸ್ತ್ರದ ಉಪನ್ಯಾಸಕರಾಗಿರುವ ಇವರು ಜಿಲ್ಲೆಯ ಪತ್ರಿಕೆಗಳಲ್ಲಿ ಲೇಖನ ಬರೆಯುತ್ತಾರೆ. ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಇವರು ಅಂಕೋಲೆಯ ಹೆಸರಾಂತ ಸಾಹಿತಿ ಶ್ಯಾಮ ಹುದ್ದಾರ ಅವರ ಕಿರಿಯ ಮಗ ಅವರ ಲೇಖನ ನಿಮ್ಮ ಓದಿಗಾಗಿ.ಸಂಪಾದಕ


27 views0 comments

Comments


bottom of page