top of page

ಮನದಿಂದ ಹೊರಹಾಕು ಸಂಶಯದ ಕೀಟ..!

ಕಬೀರ ಕಂಡಂತೆ ೭


ಸತ್ ಗುರು ಮಿಲಾ ತೋ ಕ್ಯಾ ಭಯಾ, ಜೋ ಮನ ಪಾಡಿ ಬೋಲ/

ಪಾಸ ಬಿನಂಠಾ ಕಪಡಾ, ಕ್ಯಾ ಕರೆ ಬಿಚಾರಿ ಚೋಲ//

ಪ್ರಪಂಚದಲ್ಲಿ ಯಾವುದೇ ಒಳ್ಳೆಯ ಅಥವಾ ಕೆಟ್ಟ ವಿಚಾರಗಳು, ನಮ್ಮ ಮಾನಸಿಕ ಸ್ಥಿತಿಯನ್ನು ಅವಲಂಬಿಸಿದೆ. ಯಾವುದೇ ಘಟನೆಯನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಮತ್ತು ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಬಹಳ ಮುಖ್ಯವಾದದ್ದು. ಬೇರೆಯವರು ನಮ್ಮನ್ನು ಹೊಗಳಿದಾಗ ಅಥವಾ ಆಪ್ತತೆಯನ್ನು ತೋರಿಸಿದಾಗ, ನಾವು ಪೂರ್ವಾಗ್ರಹ ಪೀಡಿತರಾಗದೇ, ಮನಸ್ಸಿನಲ್ಲಿ ಯಾವುದೇ ಸಂಶಯ ಇಲ್ಲದಿದ್ದಾಗ ಆ ಸಂಬಂಧ ಖಂಡಿತ ಮುಧುರವಾದೀತು. ಯಾವುದೇ ಕ್ರಿಯೆಗೆ ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಸಂಗತಿ ಪ್ರಾಧಾನ್ಯತೆ ಪಡೆಯುತ್ತದೆ. ಬದುಕನ್ನು ನೋಡುವ ನಮ್ಮ ದೃಷ್ಟಿಕೋನ ಸಕಾರಾತ್ಮಕ ವಾಗಿದ್ದರೆ, ಸೌಂದರ್ಯವೇ ನಮ್ಮೆದುರು ಅನಾವರಣ ಗೊಂಡೀತು! ಎಲ್ಲವನ್ನೂ ನಕಾರಾತ್ಮಕ ದೃಷ್ಟಿಕೋನದಿಂದ ನೋಡುತ್ತ, ಮನಸ್ಸಿನಲ್ಲಿ ಬರೀ ಸಂಶಯ, ಭ್ರಮೆಗಳನ್ನು ತುಂಬಿಕೊಂಡಿದ್ದರೆ, ಬದುಕು ನರಕವಾದೀತು. ಗುಲಾಬಿ ಗಿಡದಲ್ಲಿನ ಹೂವನ್ನು ನೋಡಿ ಸಂಭ್ರಮಿಸಬೇಕೇ ಹೊರತು ಅದರ ಮುಳ್ಳುಗಳ ಬಗ್ಗೆ ಚಿಂತಿಸಿದರೆ, ಸಂತೋಷ ಮರೀಚಿಕೆಯಾದೀತು.

ಇತರರ ನಡೆ, ನುಡಿಗಳನ್ನು ಸದಾ ಕಾಲ ಸಂದೇಹ ದಿಂದ ನೋಡಿದಾಗ, ಕೊನೆಗೆ ನಮ್ಮ ಪಾಲಿಗೆ ದಕ್ಕುವದು ಅಸಡ್ಡೆ, ದುಃಖಗಳೇ ಹೊರತು ಬೇರೇನೂ ಅಲ್ಲ. ಮನಸ್ಸಿನಲ್ಲಿ ಸಂಶಯದ ಭೂತ ಹೊಕ್ಕರೆ, ಕೆಟ್ಟ ವಿಚಾರಗಳೇ ಹೊಳೆಯುತ್ತವೆಯೇ ಹೊರತು ಬೇರೇನೂ ಅಲ್ಲ. ನಾವು ಬದುಕಿನಲ್ಲಿ ಎದುರಾಗುವ ಯಾವುದೇ ಪರಿಸ್ಥಿತಿಗೆ ಸ್ಥಿತಪ್ರಜ್ಞ ರಾಗಿದ್ದರೆ ಒಳ್ಳೆಯ ಪರಿಣಾಮ ಪಡೆಯಲು ಸಾಧ್ಯ. ನಾಳಿನ ಬಗ್ಗೆ ಅನಗತ್ಯ ಶಂಕೆ, ಭ್ರಮೆಗಳನ್ನು ತುಂಬಿಕೊಳ್ಳದೇ ಪರಿಸ್ಥಿತಿಯನ್ನು ಎದುರಿಸುವ ಆತ್ಮಬಲ ಬೆಳೆಸಿಕೊಂಡಾಗ ಬದುಕು ಹಸಿರಾದೀತು. ಶೃದ್ಧಾ, ಭಕ್ತಿಗಳಿದ್ದರೆ ಕೊರಡೂ ಕೊನರೀತು, ಕಲ್ಲು ದೇವರಾದೀತು..!


ಈ ಹಿನ್ನೆಲೆಯಲ್ಲಿ ಸಂತ ಕಬೀರರ ಮೇಲಿನ ದೋಹೆ ಹೆಚ್ಚು ಅರ್ಥಪೂರ್ಣ.

"ಭಗವಂತ ಎದುರಾದೊಡೇನು ಫಲ, ದ್ವಂದ್ವದಿಂದಿರೆ ಮನವು/

ಜೀರ್ಣವಸ್ತ್ರ ದೊರಕಿದೊಡೇನು ಫಲ, ಮುಚ್ಚಬಹುದೇ ತನುವ?//

ಭಕ್ತನ ಮನಸ್ಸಿನಲ್ಲಿ ಸಂಶಯ ಮನೆ ಮಾಡಿದರೆ, ಸಾಕ್ಷಾತ್ ಭಗವಂತ ಪ್ರತ್ಯಕ್ಷನಾದರೂ ಏನು ಪ್ರಯೋಜನ? ಎಂದು ಕಬೀರರು ಪ್ರಶ್ನಿಸುತ್ತಾರೆ. ಹರಿದ ವಸ್ತ್ರಗಳಿಂದ ಯಾವ ಪ್ರಯೋಜನವೂ ಇಲ್ಲ. ಹಾಗೆಯೇ ಮನಸ್ಸು ಅಚಲ ವಿಶ್ವಾಸದಿಂದ ಕೂಡಿದ್ದರೆ, ಜೀವನದಲ್ಲಿ ಉತ್ತಮ ಫಲ ಖಂಡಿತ ದೊರಕುತ್ತದೆ ಎಂಬುದು ಕಬೀರರ ಅಭಿಪ್ರಾಯ.

ನಕಾರಾತ್ಮಕ ವಿಚಾರಗಳು ಮನುಷ್ಯನ ಬುದ್ಧಿ- ಭಾವನೆಗಳನ್ನು ಕೆಡಿಸುತ್ತವೆ. ಎಲ್ಲಿಯವರೆಗೆ ಹಡಗು, ಸಮುದ್ರದ ನೀರನ್ನು ತನ್ನೊಳಗೆ ನುಗ್ಗಲು ಬಿಡುವದಿಲ್ಲವೋ ಅಲ್ಲಿಯವರೆಗೆ ಇಡೀ ಸಮುದ್ರದ ನೀರು ಹಡಗನ್ನು ಮುಳುಗಿಸಲು ಸಾಧ್ಯವಿಲ್ಲ..! ಇದೇ ರೀತಿ ನಕಾರಾತ್ಮಕ ಚಿಂತನೆ ಗಳನ್ನು ನಮ್ಮೊಳಗೆ ಪ್ರವೇಶಿಸಲು ಕೊಡದಿದ್ದರೆ ಭವ ಸಾಗರದ ಅಲೆಗಳು ಬದುಕ ದೋಣಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬುದು ಅಷ್ಟೇ ಸತ್ಯ!!

ಹರಕು ವಸ್ತ್ರವನುಟ್ಟರೆ ಮೈ ಮುಚ್ಚಬಹುದೆ?

ಮುರುಕು ಮನಸ್ಸು ವ್ಯಕ್ತಿತ್ವ ಕಟ್ಟಬಹುದೆ ?/

ಎರವಾದೀತು ಬದುಕು ದ್ವಂದ್ವ ನಡೆಯಿಂದ

ಹೊರಹಾಕು ಸಂಶಯ ಕೀಟ - ಶ್ರೀವೆಂಕಟ//


- ಶ್ರೀರಂಗ ಕಟ್ಟಿ ಯಲ್ಲಾಪುರ.

9 views1 comment

1 Comment


shivaleelahunasgi
shivaleelahunasgi
Oct 27, 2020

ಸಂಶಯದಿಂದ ಇರುವ ಮನಸ್ಸು ರೋಗಗ್ರಸ್ತ ವಾತಾವರಣಕ್ಕೆ ಮುನ್ನುಡಿ ಬರೆದಂತೆ.....ಸಂಶಯ ಬಿಡಬೇಕು...ಚೆನ್ನಾಗಿದೆ ಸರ್....

Like
bottom of page