ಸಂವತ್ಸರ ತರೆ ಸರಿಸುತ ಬಂದಿದೆ ಯುಗಾದಿ
ಯುಗ ಯುಗಗಳ ಹೊಸ ಪಲ್ಲವಿಯನು ಹಾಡಿ.
ಮಾರನ ಹೂ ಬಾಣದ ಜುಮ್ಮೆನ್ನುವ ಅಮಲು
ಪ್ರತಿ ಹೃದಯದ ಮೇಲೆರಗಿದೆ ಮೈಗಂಧದ ಘಮಲು.
ಎಲೆಯುದುರುವ ಕಾಡಲ್ಲಿ ಚಿಗುರಿನ ದನಿ ಹಾಡು
ಪ್ರತಿ ಗಿಡಗಳು ಹಸಿರುಟ್ಟಿವೆ ಹೂ ಬಟ್ಟೆಯ ನೋಡು.
ಹೂ ಹೂಗಳ ಕೇಸರದಲಿ ದುಂಬಿಯ ಹೂ ಮುತ್ತು
ಗಿಡ ಮರಗಳು ಅನುಭವಿಸಿವೆ ಪ್ರಣಯದ ನಶೆ ಮತ್ತು!
ಒಣ ಶಿಶಿರವು ಚೇತರಿಸದು ಹೂ ಚೈತ್ರದ ಹೊರತು
ವನಮಾಲಿಯ ಅಡಿ ಅಡಿಯಲು ಮಧು ಮಾಸದ ಗುರುತು.
ಪ್ರತಿ ಕಾಡಲು ಬರಿ ಬಯಲಲು ಹೂ ಹಣ್ಣಿನ ರಾಶಿ
ಹಕ್ಕಿಗಳುಲಿ ಇಂಪಲು ಸವಿ ಕಂಪನು ಸೂಸಿ.
ಯುಗಾದಿಯ ಈ ಪರಿಸರ ಸಂಭ್ರಮ ಸಿರಿ ಜಾತ್ರೆ
ಯುಗಾದಿಯ ಈ ನಾಳೆಯು ಹೊಸ ವಿಕಾಸದ ಯಾತ್ರೆ!
- ಫಾಲ್ಗುಣ ಗೌಡ ಅಚವೆ