top of page

ಮತ್ತೆ ಮುಂಗಾರು

ಚುರುಕುಗೊಂಡಿದೆ ಮತ್ತೆ ಮುಂಗಾರು

ತನ್ನ ವರ್ಷದ ಲೆಕ್ಕವನಿಟ್ಟು

ಜನರ ಭವಣೆ ನೀಗಲು

ಭುವಿಯ ದಾಹ ತಣಿಸಲು


ಆದರೆ ಕಳೆದ ಬಾರಿ ಮಳೆಗೂ

ಕೋವಿಡ್ ಗೂ ನಂಟು ಬೆಸೆದಿತ್ತೆ? ಢೌಟು

ಜೂನ್ ದಿಂದ ಸಪ್ಟೆಂಬರ್ ವರೆಗೆ

ನಿನ್ನದೆ ರಾಗ ತಾಳ ಲಯ

ಒಮ್ಮೊಮ್ಮೆ ಏರುಗತಿ ಉಗ್ರಗತಿ! ಮಗದೊಮ್ಮೆ ಮಂದ ಮಲಯ ಮಾರುತ ಗಾನ

ಜಡಿ ಹೊಡೆದ ಮಳೆ ನಿರುಮ್ಮಳಗೊಂಡಿದೆ

ಎನ್ನುವಾಗಲೇ ಮತ್ತೆ ನೆರೆ

ಕೊಚ್ಚಿಹೋದ ಜೀವ ಸೆಲೆ


ಕೊರೊನಾ ಕಾಟಕ್ಕೆ ಮುಚ್ಚಿದ

ಶಾಲೆ ಕಾಲೇಜುಗಳು ತೆರೆದರೆ

ಮಕ್ಕಳಿಗೆ ಶಾಲೆ ಆರಂಭ ನೆನಪಿಸಲು

ಜೊತೆಯಾಗಿ ಮುದ ನೀಡಲು

ಲೆಕ್ಕ ತಪ್ಪಿ ಬಂದ ನಿನ್ನ ಆಗಮನ


ವರ್ಷವಿಡೀ ವಾಯುಭಾರ ಕುಸಿತ

ತೌಕ್ತೆ ಯಾಸ್ ಹೀಗೆ ಒಂದಿಷ್ಟು ನೆಪ

ಒಂದೆಡೆ ಜೀವ ತಿಂದ ಕೊರೊನಾ ಕಾಟ

ಇನ್ನೊಂದೆಡೆ ಮತ್ತೆ ಮತ್ತೆ ನಿನ್ನ ವಿರಾಟ ರೂಪ

ನೆಲಕಚ್ಚಿದ ಬಡಪಾಯಿ ಜನ

ಮುಗಿಲೆಡೆಗೆ ಮೌನ ರೋಧನ


ಇಳೆಗೆ ಹಸುರುಡಿಸಲು

ಒಡಲಿನ ಕಿಚ್ಚು ತಣಿಸಲು

ಮತ್ತೆ ಬಂದಂತಿರುವ ಮುಗಿಲ ಮಳೆ ಬಿಲ್ಲೆ

ನಿನ್ನಿಂದಲೇ ತಣಿಯಲಿ

ಜಗದ ಸಕಲ ವ್ಯಾಧಿ

ಹೊಸ ಚಿಗುರಿಗೆ ನಾಂದಿ


ಸುವಿಧಾ ಹಡಿನಬಾಳ

33 views0 comments

Comments


bottom of page