top of page

ಮಣಿಪುರ

ಅಂದು

ತುಂಬಿದ ರಾಜಸಭೆಯಲ್ಲಿ

ಬೆತ್ತಲಾಗುವ ಭಯಕ್ಕೆ

ಅಗ್ನಿಪುತ್ರಿ

ಚೀತ್ಕರಿಸಿದಳು, ಪೂತ್ಕರಿಸಿದಳು

ಪತಿಗಳೋ!?

ಅವಳನ್ನು ಮಾರಿ

ಧರ್ಮಸ್ಥಿತಿಯ ಕೊಂಡು ತಲೆ ತಗ್ಗಿಸಿದ್ದರು,

ಕಣ್ಣಿಗೆ ಪೊರೆ ಕವಿದ

ಭೀಷ್ಮ ದ್ರೋಣಾದಿಗಳು ಮೌನವಾಗಿದ್ದರು. ಅಸಹಾಯಕ ಅಬಲೆಯ ಮೊರೆಗೆ

ಮಿಡಿದ ಕೃಷ್ಣ ಹೃದಯ

ಅಕ್ಷಯಾಂಬರ ನೀಡಿ ಮನುಕುಲದ

ಮಾನ ರಕ್ಷಿಸಿತ್ತು!

ತಾಯಿ ಚಿತ್ರಾಂಗದೆಯ ಶೀಲ ಶಂಕಿಸಿದ ಮೂರು ಲೋಕದ ಗಂಡನ

ಭಂಡತನಕ್ಕೆ

ಮಣಿಪುರದರಸ ಬಬ್ರುವಾಹನ ತಂದೆಯ ಶಿರವ ತರಿದು ಶಿಕ್ಷಿಸಿದ್ದ,

ಶೀಲದ ಮೌಲ್ಯ ಬೆಳಗಿದ್ದ.

ಧ್ಯಾನ ನಿರತ ಅಕ್ಕ

ಕೌಶಿಕನ ಕಾಮದಾಸೆಗೆ ಸಿಡಿದು ಕಪ್ಪಡವ ಕಳೆದು ತಾ ಬೆತ್ತಲಾಗಿ

ಅರಸನ ಮಾನ ಕಳೆದಳು,

ಸ್ತ್ರೀ ಕುಲದ ಘನತೆ ಉಳಿಸಿದಳು!

ಸಾವಿಲ್ಲದ ಕೇಡಿಲ್ಲದ ಮಲ್ಲಿಕಾರ್ಜುನನ ಸೇರಿ ಬಯಲಾದಳು.

ಆದರೆ ಮತ್ತೆ

ಇಂದಿಲ್ಲಿ ಬೆತ್ತಲಾಗಿಸಿ ಬೆನ್ನಟ್ಟಿದ್ದಾರೆ,ತೊಡೆತಟ್ಟಿದ್ದಾರೆ,

ಕೇಕೆ ಹಾಕಿ,

ಸಿಳ್ಳೆ ಹೊಡೆದು ಗಹಗಹಿಸಿದ್ದಾರೆ .

ಮಾನವತಿಯರು ಓಡುತ್ತಿದ್ದಾರೆ,

ಕೃಷ್ಣನಾಗಲಿ,ಬಬ್ರುವಾಹನನಾಗಲಿ,

ಅಕ್ಕನ ಧೈರ್ಯವಾಗಲಿ

ತಮ್ಮ ನೆರವಿಗೆ ಬರಬಹುದೆಂದು

ಆಕ್ರಂದಿ‌ಸುತ್ತಿದ್ದಾರೆ.

ಯಾರಿರುವರಿಲ್ಲಿ?

ಮಾನವೀಯತೆ ಸತ್ತ

ಮಾನವಂತರ ನಾಡಿನಲ್ಲಿ? ಮನುಷ್ಯರು

ಯಾವ್ಯಾವುದೋ ಮೆಗಾ ಫಿಕ್ಸೆಲ್ ಹೊಂದಿದ

ಮೊಬೈಲ್ ಕ್ಯಾಮರಾದಿಂದ

ಸೆಲ್ಫಿ ಕ್ಲಿಕ್ಕಿಸುವ ಮೋಜಿನಲ್ಲಿ ಮೈ ಮರೆತಿದ್ದಾರೆ.

ಬ್ರೌಸರ್‌ನಲ್ಲಿ ಇನ್ನೇನೋ ಹುಡುಕುತ್ತಿದ್ದಾರೆ.

ಅವರಿಗೆಲ್ಲಿ ಅರ್ಥವಾದೀತು ತಾಯಿ-ತಂಗಿಯರ,ಅಕ್ಕ- ಅಮ್ಮಂದಿರ

ಅಳಲು?

ಈಗ ಇಲ್ಲಾರೂ ರಕ್ಷಕರಿಲ್ಲ,

ಎಲ್ಲರೂ ರಾಕ್ಷಸರೇ!

ತಮ್ಮ ರಕ್ಷಣೆ ತಾವೇ ಮಾಡಿಕೊಳ್ಳಬೇಕು!

ಕಾರಣವಾಗದೇ ಕರಣವಾಗಬೇಕು!

ಶಸ್ತ್ರವಾಗಿ ತಿರುಗಿ ನಿಲ್ಲಬೇಕು.

ಜೊಲ್ಲು ಸುರಿಸಿ,ಬಾಯ್ಚಪ್ಪರಿಸಿ,

ಮೈ ಕೈ ಸವರುವ

ಕೀಚಕ ಸಂತಾನವನ್ನೆದುರಿಸಲು

ಅಗ್ನಿಕನ್ಯೆಯರಾಗಿ

ಸ್ತ್ರೀ ಬಲವ ತೋರಿಸಬೇಕು.

ಪುರುಷತ್ವವ

ಕಿತ್ತು ಕಳೆದು ಬಿಡಬೇಕು....


ಶ್ರೀಧರ ನಾಯಕ ಬೇಲೇಕೇರಿ ಅಂಕೋಲಾ


ಶ್ರೀಧರ ನಾಯಕ ನನ್ನ ಮನೋವೇಗಕ್ಕೆ ಸ್ಪಂದಿಸುತ್ತಿರುವ ನ್ನ ಪ್ರೀತಿಯ ವಿದ್ಯಾರ್ಥಿ ಮಿತ್ರರು. ಅವರೊಂದು ಶೀರ್ಷಿಕೆ ಮತ್ತು ಕವಿಯ ಹೆಸರಿಲ್ಲದ ಕವಿತೆ ಕಳಿಸಿದ್ದರು. ಅವರಿಗೆ ಮೆಸೆಜ ಮಾಡಿ ಅವರದೆ ಕವನ ಎಂದು ಖಾತ್ರಿ ಮಾಡಿಕೊಂಡೆ. ಸದಾಶಿವಗಡದ ಬಾಪೂಜಿ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಹಾಗು ವಿಭಾಗ ಮುಖ್ಯಸ್ಥರಾಗಿ ಈಗ ಸೇವಾ ನಿವೃತ್ತಿ ಹೊಂದಿದ್ದಾರೆ. ಅವರ ಪೋಟೊ ಒಂದನ್ನು ಕೇಳಿದೆ ಕಳಿಸಲೆ ಇಲ್ಲ. ಇದು ಕವನ ಆಗುವುದೊ ಇಲ್ಲವೊ ಎಂಬ ಸಂಕೋಚ ಅವರದು. ಅವರ ಮೊದಲ ಕವನ ಪ್ರಕಟಿಸಿದ ಹೆಮ್ಮೆ ನನ್ನದು. ಶ್ರೀಧರ ಹೀಗೆ ಸಂವೇದನಾಶೀಲ ಕವಿಯಾಗಿ ಬೆಳೆಯಲಿ. ಅವರ ಕವನ ಸಂಕಲನವೊಂದು ಬೆಳಕು ಕಾಣುವಂತಾಗಲಿ. ಮಣಿಪುರ ಅಂದು ಇಂದು ಎಂಬ ಆಶಯದ ಈ ಕವನ ನಿಮಗೆ ಮುಟ್ಟುತ್ತದೆ ಎಂಬ ಭರವಸೆ ನನ್ನದು.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ


62 views0 comments

コメント


bottom of page