top of page

ಮಡಿಯೆಂಬ ಮೈಲಿಗೆ

ಮೊನ್ನೆ ನನ್ನಾಕೆ ಜೊತೆ ದೇಗುಲಕೆ ಹೋಗಿದ್ದೆ

ಭಕ್ತಿ ಭಾವಗಳೋ ನನ್ನೊಳಗೂ ಉಂಟು..

ಕೈಮುಗಿದು ತಲೆ ಬಾಗಿ ವಂದಿಸಿ ಪ್ರದಕ್ಷಿಣೆ ಹಾಕಿ

ನೆಲಕೆ ಹಣೆಯೂರಿ ದೈವಕ್ಕೆ ಶರಣಾದೆ..

ಇಷ್ಟಾಗಿ ಮತ್ತೇನು ಯಾಚಿಸಿದೆ ಯಾಜಕನ ತೀರ್ಥ, ಪ್ರಸಾದಕ್ಕಾಗಿ..


ಮಡಿವಂತ ಅರ್ಚಕನವ ಸ್ಪರ್ಷಿಸದೆ ನನ್ನಂಗ

ತೂರಿದ ಹಸಾದವನು ಹಳಸಲಾಗಿ

ರಬ್ಬರ್ ಸ್ಟಾಂಪುಗಳ ಗತ್ತು ಹಾಗಿರಲಿ

ಬರಿ ಮನುಷ್ಯನ ಕಲಕದೇನು ಈ ಪಾಡಿಗಾಗಿ?


ಮನದ ತಿಳಿ ತೊಟ್ಟಿಯನು ಕಲಕಿದನುಭವವಾಗಿ ಹತ್ತು ಯೋಚನೆ ಹುಟ್ಟಿ

ಟಿಸಿಲೊಡೆದು ನೂರಾಗಿ ಹಲುಬತೊಡಗಿದೆ ನಾನು ಆತ್ಮಗತನಾಗಿ,ವಿಹ್ವಲಚಿತ್ತನಾಗಿ....

ರಾಮ ರಕ್ಷಾ ಸ್ತೋತ್ರದಲಿ 'ವಿಪ್ರ ಪ್ರಿಯಂ' ಎಂದು

ರಘುಕುಲೋತ್ತಮನನೇ ಲಘುವಾಗಿಸಿದಾಗಲೂ

ಪ್ರೀತಿಯಿಂದಲೇ ಒಪ್ಪಿ ಪಠಿಸಿದ್ದೆನಲ್ಲ..!!? ರಚಕನುತ್ಕಟ ಪ್ರೀತಿಯದೆಂದು ಧಾರಾಳಿಯಾಗಿ ಯೋಚಿಸಿದ್ದೆನಲ್ಲ..!!?


ವೇದಗಳಲೋ ತಿಳಿಮನವೇ ಮಡಿಯೆಂದಿದೆ,

ಇಲ್ಲೇಕೆ ಸೀಮಿತವದು ಜಾತಿ,ದೋವತಿಗೆ..!?

ಬರಿ ಮಂತ್ರ ಪಠಣೆಯದು ಕುಲವ ನಿರ್ಧರಿಸಿದರೆ

'ನಮಕ' 'ಚಮಕ'ಗಳ ಸ್ಮೃತಿಯಿದೆ ನನ್ನ ಮತಿಗೆ..!

'ಪುರುಷ ಸೂಕ್ತ'ವೂ ಕಂಠಸ್ಥ ಸುಲಭ ಗತಿಗೆ..!

ವೇದ ಮಂತ್ರಗಳೇನಸಾಧ್ಯವೇ ಕಲಿಯಬೇಕೆಂಬವರಿಗೆ? ಅಥವಾ

ಅನಿವಾರ್ಯವೇನವು ಭಗವತ್ ಪ್ರೀತಿಗೆ?


ಮತ್ತಾವ ಶ್ರೇಷ್ಠತೆ ನನಗಿಂತ ಮೇಲೆಂದು

ಗರ್ಭಗುಡಿಯೊಳಗೂ ನಿನ್ನ ಬರಗೊಟ್ಟಿದೆ

ಅದಾವ ಕೀಳ್ತನ ನನ್ನ ನಿನಗಿಂತ ಕೆಳಗೆಂದು

ಕೀಳಾಗಿ ಕಂಡು ಪಾತಳಕೆ ತಳ್ಳುತ್ತಿದೆ..?


ಹಲವು ಪುರಾಣಗಳ ಹಾಳು ಪುರಾಣಕ್ಕೆ ಮುನ್ನ ಹೀಗಿರಲಿಲ್ಲವಲ್ಲ..?

ಬಯಸಿದುದ್ಯೋಗವನು ಬಯಸಿದಂತೆ

ಬದಲಿಸಿ ಬದುಕುತ್ತಿದ್ದರಲ್ಲ..

ಕರ್ಮದಾಧಾರದಲಿ ವರ್ಗವಿದ್ದುದನೆ

ಕುಲದ ಹೆಸರಿಟ್ಟು ಕುಲಗೆಡಿಸಿದರದು

ಕುಲವೇ; ಅಂಥವರು ಕುಲೀನರೆ..?

ಮನು ಸ್ಮೃತಿಯೇ ಈ ಮನೋವಿಕೃತಿಯೆ?


ವೇದ ಕಾಲವೆ ಅಂದು ಕಂಪು ಸೂಸುತ್ತಿತ್ತು

ಹಲವು ಸಮತೆಗಳ ಹೂದೋಟದಂತೆ

ಮೈತ್ರಿ ಗಾರ್ಗೇಯಿಯರಲ್ಲಿ ಅರಳಿ

ತೊನೆವ ಕಮ್ಮನೆಯ ಕುಸುಮದಂತೆ


ತಿಳಿದು ಬದುಕುವ ಕಾಲ

ಇನ್ನಾದರು ಬರಲಿ

ಗುಣದ ನೆಲೆಯಲಿ ಕುಲವ

ತಳೆವಂಥದು....


ಬರಲಿ ಬದಲಾವಣೆಯಿನ್ನು

'ಮಡಿ'ಯ ಮೈಲಿಗೆಯನ್ನು ಸಮತೆಯೊರೆಗಲ್ಲಿಗೆ ತಿಕ್ಕಿ

ತೊಳೆವಂಥದು....

--ಸಂತೋಷಕುಮಾರ ಅತ್ತಿವೇರಿ

 
 
 

4 comentarios


ಮಡಿಯೇ ಮೈಲಿಗೆ ಆಗುವ ಪರಿ ದುರಂತ.

ತುಂಬಾ ಅರ್ಥಪೂರ್ಣ ಆಶಯ.

Me gusta
santoshattiveri
santoshattiveri
14 feb 2022
Contestando a

ಧನ್ಯವಾದಗಳು ಸರ್..

Me gusta

umesh neeralagi
umesh neeralagi
13 feb 2022

Nice

Me gusta
santoshattiveri
santoshattiveri
14 feb 2022
Contestando a

Thank u..

Me gusta

©Alochane.com 

bottom of page