
ಮಡಿಲೊಳಗೆ ಮಗುವಾಗಿ
ಅವತರಿಸಿ ಪ್ರೀತಿಸುವುದನ್ನು
ಕಲಿಸಿದ್ದಾಳೆ ಮಗಳು
ಹಾಲು ಕುಡಿಯಲು ಊಟ ಮಾಡಲು
ತಾಸೊಪ್ಪತ್ತು ಮಾಡಿ ಸಹನೆ
ಕಲಿಸಿದ್ದಾಳೆ ಮಗಳು
ಕೈಗೆಟುಕಿದ್ದನ್ನು ಎತ್ತಿಹಾಕಿ ಮುರಿದು
sorry ಎಂದು ಕ್ಷಮಿಸುವುದನ್ನು
ಕಲಿಸಿದ್ದಾಳೆ ಮಗಳು
ಆಕಾಶಕ್ಕೆ ಎಸೆದು ಅಂಗೈಯಲಿ
ಹಿಡಿವಾಗ ಕಿಲಕಿಲನೆ ನಕ್ಕು ನಂಬಿಕೆ
ಕಲಿಸಿದ್ದಾಳೆ ಮಗಳು
ಬೇಕೆಂದುದನು ಕೊಡದಿರುವಾಗ
ರಚ್ಚೆಹಿಡಿದ ಪಡೆದು ಸೋಲುವುದನ್ನು
ಕಲಿಸಿದ್ದಾಳೆ ಮಗಳು
ಮಳೆನೀರಲಿ ಮಿಂದು ಕೈಗೆದೊರೆತುದ
ತಂದು-ತಿಂದು ಸಹಜ ಬದುಕ
ಕಲಿಸಿದ್ದಾಳೆ ಮಗಳು
ಅಪ್ಪ-ಅಮ್ಮ ಇಬ್ಬರಲಿ ಯಾರು ಪ್ರೀತಿ
ಎಂದರೆ 'ಇಬ್ಬರೂ' ಎಂದು ಸಮಾನತೆ
ಕಲಿಸಿದ್ದಾಳೆ ಮಗಳು
ಲಘುವಾದರೆ ಮಾತ್ರ ಗುರುವಾಗಲು ಸಾಧ್ಯ
ಎಂಬುದನು ಮಗುವಾಗಿಯೇ
ಕಲಿಸಿದ್ದಾಳೆ ಮಗಳು.
=00=
