ಮಗಳ ನಲ್ನುಡಿ!
ಅಪ್ಪನದೇ ಪ್ರತಿರೂಪ
ಅಚ್ಚಿಟ್ಟ ಮೂರ್ತಿಯಂತೆ
ಶುದ್ಧ ಹಸುವಿನ ಬೆಣ್ಣೆಯಂತೆ
ಮೃದು ಮಧುರ ಆಲಾಪ
ಎಲ್ಲರಿಗೂ ಮಗ ಮೊದಲ ಆದ್ಯತೆ
ಇವರಿಗೆ ಮಗಳೆ ಶುದ್ಧ ಅಪರಂಜಿ
ಬೆಳೆದಳು ಬೆಳದಿಂಗಳ ಬಾಲೆ
ರಸವತ್ತಾದ ಕೆಂಪು ಹಣ್ಣಿನಂತೆ
ಹುಣ್ಣಿಮೆ ಚಂದ್ರನೂ ನಾಚಬೇಕು
ಇವಳ ಹಾಲ್ಬೆಳಕಿನ ಚೆಲುವಿಗೆ
ಹುಬ್ಬಿನ ಮಾಟವೇನು?
ಕೆಂಪಡರುವ ಕೆನ್ನೆ ಸುಳಿಯೇನು?
ಮನೆತುಂಬ ನಗುವ ಮಗಳ
ಮೃದು ಮಾತಿನ ಮೋಡಿಗೆ
ಅಪ್ಪ ಕರಗಿದ್ದ
ಕನಸಿನ ಅರಮನೆ ಕಟ್ಟಿದ್ದ
ದಂತದಾ ಬೊಂಬೆಗೊಂದು
ಅನುರೂಪ ವರವ ನೋಡಿ
ಮದುವೆ ಮಾಡಿ ಚೆಂದ ನೋಡಿ
ನಲಿವ ಗಳಿಗಾಗಿ ಕಾದು ಕೂತಿದ್ದ
ರೆಕ್ಕೆ ಬಲಿತ ಮುದ್ದು ಹಕ್ಕಿ
ಅಪ್ಪ ಕೊಟ್ಟ ಸಲಿಗೆ ನೆಚ್ಚಿ
ಮೇರೆ ಮೀರಿ ಬೆಳೆಯುತಿದ್ದಳು
ಅಪ್ಪನನ್ನು ಮಳ್ಳು ಮಾಡಿ ಮೆಚ್ಚಿಸಿದ್ದಳು
ವರನ ಹುಡುಕಿ ನಿಕ್ಕಿ ಮಾಡಿ
ಊರಿಗೆಲ್ಲ ಚಪ್ಪರ ಹಾಕಿ
ಸಡಗರದಲಿ ಮೈ ಮರೆತಿದ್ದ
ಕಾಲಿಗೆ ಚಕ್ರ ಕಟ್ಟಿ ಓಡಾಡುತಿದ್ದ
ಅಮ್ಮ ಮುಗ್ಧೆ ತುಸು ಪೆದ್ದು
ಅಪ್ಪ ಹೇಳಿದಂತೆ ನಕ್ಕು
ಮಗಳ ಅಂದ ಚೆಂದ ಕಂಡು
ಎಲ್ಲದಕ್ಕೂ ಅಕ್ಕು ಹೇಳಿ ನಗುತಲಿದ್ದಳು
ಮದುವೆಗಿನ್ನು ಎಂಟೆ ದಿನ
ಮಗಳ ನಡೆ ಏನೊ ಭಿನ್ನ
ರಾತ್ರಿ ಹಗಲು ಮೊಬೈಲ್ ಜೊತೆ
ಏನೊ ಸಂಚು ಎಲ್ಲ ಗುಟ್ಟು
ಎಂದಿನಂತೆ ಅಂದು ಮಗಳು
ಕೊನೆಯ ದಿನದ ಡ್ಯೂಟಿ ಎಂದು
ಕದ್ದು ಮುಚ್ಚಿ ತಿರುಗಿ ನೋಡಿ
ಲೆಕ್ಕ ಹಾಕಿ ಹೊಸಿಲು ದಾಟಿ ನಡೆದೆ ಬಿಟ್ಟಳು
ಅಪ್ಪ ತಂದ ಒಡವೆ ಚೆಂದ
ಅಮ್ಮ ನೋಡಿ ಅದರ ಅಂದ
ಬರುವ ಮಗಳ ದಾರಿ ಕಾದು
ಚಹಾಕಿಟ್ಟು ಗಂಟೆ ನೋಡಿ
ಬರಲಿಲ್ಲ ಮುದ್ದು ಮಗಳು
ಎದೆಯಲ್ಲಿ ಗಂಟೆ ನಗಾರಿ
ಸಿಡಿಲಿನಂತೆ ಬಂತು ಕರೆ
'ಮದುವೆ ಆಯ್ತು ಕಾಯಬೇಡಿ' ಮಗಳ ನಲ್ನುಡಿ!!
ಸುವಿಧಾ ಹಡಿನಬಾಳ
ಲೇಖಕಿ ಸುಧಾ ಭಂಡಾರಿಯವರು ಸುವಿಧಾ ಹಡಿನಬಾಳ ಎಂಬ ಕಾವ್ಯ ನಾಮದಿಂದ ಬರೆಯುತ್ತಾರೆ. ಅವರ "ಮಗಳ ನಲ್ನುಡಿ !" ಎಂಬ ಕವನ ನಿಮ್ಮ ಓದಿಗಾಗಿ. ಸಂಪಾದಕ

Comments